ಸೋಮವಾರ, ಜೂನ್ 14, 2021
22 °C

ಏನಾದ್ರೂ ಕೇಳ್ಬೋದು | ನನ್ನ ಪತ್ನಿ ಕನ್ಯೆಯಾಗಿದ್ದಳೇ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

ಏನಾದ್ರೂ ಕೇಳ್ಬೋದು​ – ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ.

* ನಾನು ಇತ್ತೀಚೆಗೆ ವಿವಾಹವಾಗಿದ್ದು ಮೊದಲ ಮಿಲನದಲ್ಲಿ ಪತ್ನಿಗೆ ರಕ್ತಸ್ರಾವವಾಗಲಿಲ್ಲ. ಅವಳ ವಯಸ್ಸು 28. ಅವಳು ತಪ್ಪುದಾರಿ ತುಳಿದಿಲ್ಲವೆಂದು ಹೇಳುತ್ತಾಳೆ. ರಕ್ತಸ್ರಾವವಾಗದಿರುವುದು ನನ್ನ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟಿಹಾಕಿದೆ. ಮೊದಲ ಬಾರಿಗೆ ಹೈಮನ್‌ ಹರಿದಾಗ ಎಲ್ಲರಿಗೂ ರಕ್ತಸ್ರಾವವಾಗುತ್ತದೆಯೇ? ಆಗದಿದ್ದರೆ ಕಾರಣವೇನು?

- ಹೆಸರು, ಊರು ತಿಳಿಸಿಲ್ಲ.

ಪ್ರಕೃತಿ ಸ್ತ್ರೀಯರಲ್ಲಿ ಕನ್ಯಾಪೊರೆಯನ್ನು (ಹೈಮನ್‌) ಏಕೆ ಸೃಷ್ಟಿಮಾಡಿದೆ ಎನ್ನುವುದಕ್ಕೆ ಖಚಿತ ಉತ್ತರವಿಲ್ಲ. ಋತುಮತಿಯಾಗದ ಹೆಣ್ಣುಮಗುವನ್ನು ಗಂಡಿನ ಆಕ್ರಮಣದಿಂದ ರಕ್ಷಿಸಲು ಅಥವಾ ಸೂಕ್ಷ್ಮವಾದ ಹೆಣ್ಣಿನ ಸಂತಾನೋತ್ಪತ್ತಿಯ ಅಂಗಾಂಗಗಳನ್ನು ರೋಗಾಣುಗಳಿಂದ ರಕ್ಷಿಸಲು ಸೃಷ್ಟಿಸಿರಬಹುದೇ? ಗೊತ್ತಿಲ್ಲ. ಆದರೆ ಪುರುಷಪ್ರಧಾನ ಸಮಾಜದಲ್ಲಿ ಕನ್ಯಾಪೊರೆಯನ್ನು ಹೆಣ್ಣಿನ ಕನ್ಯತ್ವದ ಪುರಾವೆಯಾಗಿ ನೋಡುವ ಚಿಂತನೆ ಶತಶತಮಾನಗಳಿಂದ ಎಲ್ಲಾ ಜನಾಂಗಗಳಲ್ಲಿ ಜಾರಿಯಲ್ಲಿದೆ. ಕನ್ಯಾಪೊರೆ ಮೊದಲ ಸಂಭೋಗಕ್ಕೆ ಮುನ್ನವೇ ಬೇರೆಬೇರೆ ದೈಹಿಕ ಚಟುವಟಿಕೆಗಳಿಂದ ಹರಿದುಹೋಗುವುದು ಸಾಧ್ಯ. ನಿಮ್ಮ ಪತ್ನಿಯ ಕನ್ಯಾಪೊರೆ ಹೇಗೆ ಹರಿದಿರಬಹುದು ಎನ್ನುವುದನ್ನು ಈಗ ತಿಳಿಯುವುದು ಸಾಧ್ಯವೇ ಇಲ್ಲ. ಮದುವೆಗೆ ಮೊದಲು ನೀವು ಹೆಣ್ಣಿನ ಸಂಪರ್ಕಮಾಡಿಲ್ಲ ಎಂದು ಸಿದ್ಧಪಡಿಸಲು ಕೇಳಿದರೆ ಅದು ಸಾಧ್ಯವೇ? ಹೀಗೆ ಅಸಾಧ್ಯವಾದುದಕ್ಕೆ ಪ್ರಯತ್ನಿಸಿದರೆ ಮಾನಸಿಕ ಹಿಂಸೆಯಲ್ಲದೆ ಮತ್ತೇನು ಸಿಗಬಹುದು? ಅನಗತ್ಯವಾಗಿ ಪತ್ನಿಯನ್ನು ಶಂಕಿಸುವುದರಿಂದ ಅವರಿಗೆ ಆಗುತ್ತಿರುವ ಮಾನಸಿಕ ನೋವು, ಹಿಂಸೆ, ಅವಮಾನಗಳು ಎಷ್ಟೆಂದು ಯೋಚಿಸಿದ್ದೀರಾ? ಇದರಿಂದ ನಿಮ್ಮ ಸಂಬಂಧದಲ್ಲಿ ಆತ್ಮೀಯತೆ ಮೂಡುವುದು ಹೇಗೆ ಸಾಧ್ಯ? ನಂಬಿಕೆ ಮತ್ತು ಗೌರವ ದೀರ್ಘಕಾಲದ ಸಂಬಂಧಕ್ಕೆ ಅಗತ್ಯವಿರುವ ಮೂಲಭೂತ ಅಂಶಗಳು. ನಿಮಗೆ ಸಾಧ್ಯವಿದ್ದರೆ ಅನುಮಾನಿಸಿರುವುದಕ್ಕಾಗಿ ಪತ್ನಿಯ ಕ್ಷಮೆ ಕೇಳಿ ಅವರನ್ನು ಗೌರವಿಸುವುದರ ಮೂಲಕ ಸಮರಸದ ದಾಂಪತ್ಯಕ್ಕೆ ಮೊದಲ ಹೆಜ್ಜೆ ಇಡಬಹುದು.

***

* ಮುಸ್ಲಿಂ ಯುವಕನಾದ ನಾನು ಹಿಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ 4ವರ್ಷವಾಯಿತು. ತುಂಬಾ ಸಂತೋಷದಿಂದ ಇದ್ದೇವೆ. ಯಾವುದೇ ಮದುವೆಯಲ್ಲಿ ನಂಬಿಕೆ ಮುಖ್ಯ. ಎಲ್ಲಿ ನಂಬಿಕೆ ಇರೋದಿಲ್ವೋ ಅಲ್ಲಿ ಪ್ರೀತಿ ಇರೋದಿಲ್ಲ ಅಲ್ಲವೇ?

- ಚಾಂದ್‌ ಬಾಷ, ಬಳ್ಳಾರಿ.

ನೀವೇನೂ ಪ್ರಶ್ನೆಯನ್ನು ಕೇಳದಿದ್ದರೂ ನಿಮ್ಮ ಅನುಭವವನ್ನು ಹೇಳಿಕೊಂಡಿದ್ದಕ್ಕಾಗಿ ಪತ್ರವನ್ನು ದಾಖಲಿಸಿದ್ದೇನೆ. ಸರಿಯಾಗಿ ಹೇಳಿದ್ದೀರಿ. ಪ್ರೀತಿಯ ಎರಡು ಅಡಿಪಾಯಗಳಲ್ಲಿ ಒಂದು ನಂಬಿಕೆ, ಮತ್ತೊಂದು ಪರಸ್ಪರ ಗೌರವ. ಇವೆರೆಡನ್ನೂ ಭದ್ರವಾಗಿಟ್ಟುಕೊಂಡರೆ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವುದು ಸುಲಭ. ನಿಮ್ಮಿಬ್ಬರ ಪ್ರೀತಿ ಸುತ್ತಲಿನವರಿಗೆ ಮಾದರಿಯಾಗಲಿ.

***

* ನನ್ನ 16 ವರ್ಷದ ಗೆಳತಿ ತನ್ನ ಅಣ್ಣ (ದೊಡ್ಡಮ್ಮನ ಮಗ)ನೊಂದಿಗೆ ಸಲುಗೆಯಿಂದ ವರ್ತಿಸುತ್ತಾಳೆ. ಅವನು ಕೂಡ ಮೈಮುಟ್ಟಿ ಮಾತನಾಡಿಸುತ್ತಾನೆ. ಇದು ಅವರ ಖಾಸಗೀ ವಿಷಯ ಎಂದು ಸುಮ್ಮನಿರಲಾಗುತ್ತಿಲ್ಲ. ಅವಳಿಗೆ ಏನೆಂದು ಎಚ್ಚರಿಸಲಿ?

- ಸ್ಮಿತಾ, ಬೆಂಗಳೂರು.

ಗೆಳತಿಯ ಬಗೆಗಿನ ನಿಮ್ಮ ಪ್ರೀತಿ, ಕಾಳಜಿ ಪ್ರಾಮಾಣಿಕವಾದದ್ದು. ಆತ್ಮೀಯ ಸ್ನೇಹ, ಸಂಬಂಧಗಳಲ್ಲಿಯೂ ಕೆಲವು ಗಡಿರೇಖೆಗಳಿರುತ್ತವೆ. ಮತ್ತೊಬ್ಬರ ಒಪ್ಪಿಗೆಯಿಲ್ಲದೆ ಅವುಗಳನ್ನು ದಾಟಲು ಪ್ರಯತ್ನಿಸಿದರೆ ಸಂಬಂಧಗಳು ಹದಗೆಡುತ್ತವೆ. ಕೆಲವು ವೈಯುಕ್ತಿಕ ವಿಚಾರಗಳಲ್ಲಿ ನಿಮ್ಮ ಅಭಿಪ್ರಾಯ ಹೇಳಲು ಅವಳ ಒಪ್ಪಿಗೆ ಇದೆಯೇ ಎಂದು ಸ್ನೇಹಿತೆಯನ್ನು ಮೊದಲು ಕೇಳಿ. ಒಪ್ಪಿದರೆ ಅವಳನ್ನು ದೂಷಿಸದೆ, ಸರಿತಪ್ಪುಗಳ ಉಪದೇಶ ಮಾಡದೆ ಅವಳ ವರ್ತನೆಯ ಬಗೆಗೆ ನಿಮಗಿರುವ ಆತಂಕಗಳ ಕುರಿತಾಗಿ ಒಮ್ಮೆ ಮಾತ್ರ ಹೇಳಿ ಮುಗಿಸಿಬಿಡಿ. ಯಾವುದೇ ಚರ್ಚೆ, ವಾದವಿವಾದಗಳಿಗೆ ಅವಕಾಶ ಕೊಡಬೇಡಿ. ಅವಳು ಸಿಟ್ಟಾದರೆ ನಿಮ್ಮನ್ನು ಸಮರ್ಥಿಸಿಕೊಳ್ಳದೆ ಕ್ಷಮೆ ಕೇಳುವ ಮೂಲಕ ಸ್ನೇಹವನ್ನು ಉಳಿಸಿಕೊಳ್ಳಬಹುದು.  

***

* 24 ವರ್ಷದ ಯುವತಿ. 5 ವರ್ಷಗಳಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಮನೆಯಲ್ಲಿ ಗೊತ್ತಿಲ್ಲ. ಕೆಳಜಾತಿಯವನಾದ ಕಾರಣ ಅವರು ವಿರೋಧಿಸುತ್ತಾರೆಯೇ? ಪ್ರೀತಿ ಗೆಲ್ಲಬೇಕಾದರೆ ನಾನೇನು ಮಾಡಬೇಕು. ನನಗೆ ಇಷ್ಟವಿಲ್ಲದ ಬಾಲ್ಯವಿವಾಹವಾಗಿದ್ದು ಅವನನ್ನು ಕೂಡಿಲ್ಲ. ಇದು ಮದುವೆಗೆ ಅಡ್ಡಿಯಾಗುತ್ತದೆಯೇ? ಕಾನೂನಿನ ಪ್ರಕಾರ ಏನು ಮಾಡಬೇಕು ತಿಳಿಸಿ.

- ಖುಷಿ, ಊರಿನ ಹೆಸರಿಲ್ಲ.

ಬಾಲ್ಯವಿವಾಹವನ್ನು ಕಾನೂನು ಮಾನ್ಯ ಮಾಡುವುದಿಲ್ಲ. ಇದರಿಂದ ನಿಮ್ಮ ಮುಂದಿನ ಮದುವೆಗೆ ಬರಬಹುದಾದ ಕಾನೂನಿನ ತೊಂದರೆಗಳ ಬಗೆಗೆ ತಿಳಿಯಲು ವಕೀಲರನ್ನು ಸಂಪರ್ಕಿಸಿ. ಕೆಳಜಾತಿಯ ಹುಡುಗನನ್ನು ಮದುವೆಯಾಗಲು ಮನೆಯವರು ಒಪ್ಪದೆ ಇರಬಹುದು. ಮೊದಲು ನಿಮ್ಮಿಬ್ಬರ ನಿರ್ಧಾರಗಳನ್ನು ಗಟ್ಟಿಮಾಡಿಕೊಳ್ಳಿ. ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿ. ನಂತರ ಮನೆಯವರೊಡನೆ ಚರ್ಚಿಸಿ. ಅವರು ಒಪ್ಪದಿದ್ದರೂ ನಿಮ್ಮ ದಾರಿಯಲ್ಲಿ ಮುಂದುವರೆಯುತ್ತಲೇ ಅವರೊಡನೆ ಸಂಬಂಧವನ್ನು ಸುಧಾರಿಸುವ ದಾರಿಗಳನ್ನು ಹುಡುಕಿ. ನಿಮ್ಮ ಪ್ರಾಮಾಣಿಕತೆ, ಸ್ಪಷ್ಟತೆ ಮತ್ತು ಸಹನೆ ನಿಮಗೆ ಸದಾ ಸಹಕಾರಿಯಾಗುತ್ತವೆ.

***

* 30 ವರ್ಷದ ಪುರುಷ. 10 ವರ್ಷಗಳಿಂದ ಹಸ್ತಮೈಥುನ ಮಾಡುತ್ತಿದ್ದೇನೆ. ಈಗ ಮದುವೆಯಾಗಲು ಮನಸ್ಸಿಲ್ಲ. ಇದಕ್ಕೆ ಕಾರಣ ಹಸ್ತಮೈಥುನವೇ? ಹಸ್ತಮೈಥುನ ಮಾಡುವಾಗ ವೀರ್ಯ ಹೊರಬರದಂತೆ ತಡೆಯುತ್ತೇನೆ. ಇದರಿಂದ ತೊಂದರೆಯಾಗುತ್ತದೆಯೇ? 6 ಗಂಟೆಯ ನಂತರ ತಲೆನೋವು ಬರುತ್ತದೆ. ಕಲಿತಿರೋ ಕೆಟ್ಟ ಚಟ ಬಿಡಲಾಗುತ್ತಿಲ್ಲ. ಸಹಾಯಮಾಡಿ.

- ಹೆಸರು, ಊರು ತಿಳಿಸಿಲ್ಲ.

ಹಸ್ತಮೈಥುನ ಕೆಟ್ಟ ಚಟ ಎನ್ನುವ ನಿಮ್ಮ ನಂಬಿಕೆಯಿಂದಲೇ ತೊಂದರೆಗಳು ಪ್ರಾರಂಭವಾಗುತ್ತವೆ. ಹಸ್ತಮೈಥುನ ಬಗೆಗೆ ಈ ಅಂಕಣದಲ್ಲಿ ಹಲವಾರು ಬಾರಿ ಉತ್ತರಿಸಲಾಗಿದೆ. ದಯವಿಟ್ಟು 30.01.2021ರ ಸಂಚಿಕೆಯಲ್ಲಿನ ಈ ಅಂಕಣವನ್ನು ಓದಿರಿ. ವೀರ್ಯವನ್ನು ಬಲವಂತವಾಗಿ ಹೊರಹೋಗದಂತೆ ತಡೆಯುವುದು ಅನಗತ್ಯ ಮತ್ತು ಅಪ್ರಾಕೃತಿಕ. ಸತ್ತ ವೀರ್ಯಾಣುಗಳನ್ನು ದೇಹದಲ್ಲಿ ಉಳಿಸಿಕೊಳ್ಳುವುದಾದರೂ ಏತಕ್ಕೆ? ತಪ್ಪು ತಿಳಿವಳಿಕೆಗಳಿಂದ ಮೂಡಿರುವ ಆತಂಕವೇ ನಿಮ್ಮ ತಲೆನೋವಿಗೆ ಕಾರಣ. ಮದುವೆಯಾಗಲು ಮನಸ್ಸಿಲ್ಲದಿರುವುದಕ್ಕೆ ನಿಮ್ಮೊಳಗಿರುವ ಹಿಂಜರಿಕೆ, ಕೀಳರಿಮೆಗಳು ಕಾರಣವಿರಬಹುದು. ಆತ್ಮೀಯ ಸಂಬಂಧವನ್ನು ಕಟ್ಟಿಕೊಳ್ಳಲು ಬೇಕಾದ ಮಾನಸಿಕ ಸಿದ್ಧತೆಯ ಅಗತ್ಯ ನಿಮಗಿರಬಹುದು. ತಜ್ಞ ದಾಂಪತ್ಯ ಚಿಕಿತ್ಸಕರನ್ನು ಸಂಪರ್ಕಿಸಿ ಉತ್ತರಗಳನ್ನು ಹುಡುಕಿಕೊಳ್ಳಿ.

***

* 21ರ ಯುವಕ. ಚಿಕ್ಕಚಿಕ್ಕ ಕೆಲಸಗಳನ್ನು ಪದೇಪದೇ ಮಾಡುತ್ತೇನೆ. ಉದಾಹರಣೆಗೆ ಮತ್ತೆಮತ್ತೆ ಉಗಿಯುವುದು. ಇದು ಹುಚ್ಚುತನವಲ್ಲವೇ? ಅಂತರ್ಜಾಲದಲ್ಲಿ ಹುಡುಕಿ ಇದನ್ನು ಒಸಿಡಿ ಎಂದು ತಿಳಿದುಕೊಂಡೆ. ಮನೆಯಲ್ಲಿ ಹೇಳಿಲ್ಲ. ಗೆಳೆಯರಿಗೆ ಹೇಳಿದ್ದೇನೆ. ಆದರೆ ಆಸೆ– ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದೇನೆ. ಸೃಜನಶೀಲ ಚಟುವಟಿಕೆಯಾದ ಕವಿತೆ ಬರೆಯುವುದು ಆತ್ಮಶಾಂತಿಯನ್ನು ನೀಡುತ್ತಿದೆ. ಸಹಾಯಮಾಡಿ.

- ಮಹಾದೇವ, ಊರಿನ ಹೆಸರಿಲ್ಲ.

ಒಸಿಡಿ ಒಂದು ಅಪಾಯಕಾರಿ ಮಾನಸಿಕ ಕಾಯಿಲೆ ಎನ್ನುವ ತಪ್ಪುಕಲ್ಪನೆಯಿಂದ ನೀವು ಹತಾಶರಾಗಿದ್ದೀರಿ. ಇದನ್ನು ಸರಳ ವಿಧಾನಗಳಿಂದ ಹಿಡಿತದಲ್ಲಿಡಬಹುದು. ಒಮ್ಮೆ ಉಗಿದ ಕೂಡಲೆ ಮತ್ತೆಮತ್ತೆ ಉಗಿಯಬೇಕು ಎನ್ನುವ ಮಾನಸಿಕ ಒತ್ತಡ ಮೂಡುತ್ತಿರುವುದನ್ನು ಗುರುತಿಸಿ. ತಕ್ಷಣ ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ಇಡೀ ದೇಹವನ್ನು ಗಮನಿಸಿ. ಬಿಗಿಯಾಗಿ ಹಿಡಿದಿರುವ ಅಂಗಾಂಗಗಳನ್ನು ಸಡಿಲಬಿಡಿ. ಒಂದೆರಡು ನಿಮಿಷಗಳಲ್ಲಿ ಮತ್ತೆ ಉಗಿಯಬೇಕೆನ್ನುವ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದೇ ಅಭ್ಯಾಸವನ್ನು ಎಲ್ಲಾ ವಿಚಾರಗಳಲ್ಲಿಯೂ ಮಾಡಿ. ತಕ್ಷಣ ಬದಲಾವಣೆ ನಿರೀಕ್ಷಿಸಬೇಡಿ, ನಿಧಾನವಾಗಿ ಇಂಪಲ್ಸ್‌ ಕಂಟ್ರೋಲ್‌ ಅನ್ನು ಕಲಿಯುತ್ತೀರಿ. ತಜ್ಞ ಮನೋಚಿಕಿತ್ಸಕರಿದ್ದರೆ ಸಹಾಯ ಪಡೆಯಿರಿ. ಕಾವ್ಯರಚನೆಯ ನಿಮ್ಮ ಹವ್ಯಾಸವನ್ನು ಮುಂದುವರೆಸಿ ಮತ್ತು ಬೆಳೆಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು