ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ತ ಕೆರಳಿಸುವ ಶರದ್ ಋತು

Last Updated 4 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮುಖ್ಯವಾಗಿ ಋತುಗಳು 6. ತಲಾ ಮೂರು ಋತುಗಳು ಉತ್ತರಾಯಣ ಕಾಲ ಹಾಗೂ ದಕ್ಷಿಣಾಯಣ ಕಾಲದಲ್ಲಿ ಬರುತ್ತವೆ. ದಕ್ಷಿಣಾಯಣದಲ್ಲಿ ವರ್ಷ ಋತುವಿನ ನಂತರ ಬರುವುದೇ ಶರದ್ ಋತು. ಈ ಋತುವಿಗೆ ಅನುಸಾರವಾಗಿ ಜೀವನ ಪದ್ಧತಿ ಇದ್ದರೆ ಹಿತಕರ.

ಶರದ್ ಋತುವಿನಲ್ಲಿ ವಾತಾವರಣ

ಹಿಂದೂ ತಿಂಗಳುಗಳನ್ನು ತೆಗೆದುಕೊಂಡರೆ ಅಶ್ವಯುಜ ಹಾಗೂ ಕಾರ್ತಿಕ ಮಾಸಗಳಲ್ಲಿ ಬರುವ ಕಾಲವೇ ಶರದ್ ಕಾಲ. (ಈ ವರ್ಷ ಸೆಪ್ಟೆಂಬರ್‌ 29ರಿಂದ ನವೆಂಬರ್‌ 25ರವರೆಗೆ). ‘ಶಂ ರಾತೀತಿ ಶರತ್’ ಅಂದರೆ ಹಿತವಾದ ತಂಗಾಳಿಯಿಂದ ಕೂಡಿದ ಖುಷಿ ಕೊಡುವ ಕಾಲ. ಸೂರ್ಯನ ಕಿರಣಗಳೊಂದಿಗೆ ನೀಲವರ್ಣದ ಶುಭ್ರವಾದ ಆಕಾಶ, ಸ್ವಲ್ಪ ಕೆಸರು ಹಾಗೂ ಒಣಗಿದ ಭೂಮಿ, ಸ್ಫಟಿಕದಂತೆ ಜಲವನ್ನು ಹೊಂದಿದ ಸರೋವರಗಳು, ತಿಳಿಯಾಗಿ ಹರಿಯುವ ನದಿ ತೊರೆಗಳು. ರಾತ್ರಿಯಲ್ಲಿ ಚಂದಿರನ ಬೆಳದಿಂಗಳ ಬೆಳಕು ಶೀತದ ಅನುಭವವನ್ನು ನೀಡುವುದು.

ದೇಹದ ಮೇಲೆ ಋತುವಿನ ಪರಿಣಾಮ

ಮಳೆಗಾಲದಲ್ಲಿನ ಆರ್ದ್ರತೆ, ಶೀತ, ವಾತಾದಿಗಳ ಸೇವನೆಯಿಂದ ದೇಹದಲ್ಲಿ ದ್ರವತ್ವ, ಆಮ್ಲತ್ವ ಹೆಚ್ಚಿರುತ್ತದೆ. ಪಿತ್ತ ದೋಷವೂ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿರುತ್ತದೆ. ಈ ಶರದ್ ಋತು ಬರುತ್ತಿದ್ದಂತೆ ಸೂರ್ಯನ ಕಿರಣಗಳು ಸ್ವಲ್ಪ ತೀಕ್ಷ್ಣವಾಗಿರುವುದರಿಂದ ಸಂಚಿತಗೊಂಡ ಪಿತ್ತವು ಕೆರಳುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿ ಉಷ್ಣತೆ, ಆಮ್ಲತೆ ಅಧಿಕಗೊಂಡು ರಕ್ತವು ದೋಷಪೂರಿತವಾಗಿ ಪಿತ್ತದಿಂದ ಉಂಟಾಗುವ ತೊಂದರೆಗಳು, ರಕ್ತದುಷ್ಟಿಯಿಂದ ಕಂಡುಬರುವ ರೋಗಗಳು ಕಾಣಿಸಿಕೊಳ್ಳುತ್ತವೆ.

ರಕ್ತದ ತೊಂದರೆಯಿಂದ ಕಂಡುಬರುವ ತೊಂದರೆಗಳು

ಜ್ವರ, ಚರ್ಮದಲ್ಲಿ ನವೆ ಅಥವಾ ತುರಿಕೆ, ಗಂಧೆ, ಸರ್ಪಸುತ್ತು, ಕುರ, ಹುಳಿತೇಗು, ವಾಂತಿ, ತಲೆನೋವು, ಕಣ್ಣಿನ ತೊಂದರೆ, ಹಸ್ತಪಾದಗಳಲ್ಲಿ ಉರಿ ಕಂಡುಬರುವವು.ಋತುವಿಗನುಸಾರ ಅಗತ್ಯವಿರುವ ಆಹಾರ-ವಿಹಾರಗಳನ್ನು ಅನುಸರಿಸಿದರೆ ಶರೀರಕ್ಕೆ ಹಾನಿಯಾಗದೇ, ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಹಿತಕರ ಆಹಾರ

ಒಂದು ವರ್ಷ ಹಳೆಯದಾದ ಧಾನ್ಯಗಳು ಹಿತಕರ. ಅಕ್ಕಿ, ಗೋಧಿ, ಜವೆಗೋಧಿ, ಜೋಳ, ರಾಗಿ ಆಯಾ ಪ್ರದೇಶದಲ್ಲಿ ಯಾವ ಧಾನ್ಯ ರೂಢಿಯಲ್ಲಿರುವುದೋ ಅದಕ್ಕೆ ತಕ್ಕಂತೆ ಅಕ್ಕಿ ರವೆ, ಜೋಳದ ನುಚ್ಚು ಹಾಗೂ ಹಿಟ್ಟಿನ ರೂಪದಲ್ಲಿ ಬಳಸಬಹುದು. ಇದನ್ನೇ ಉಪಯೋಗಿಸಿ ಕಡಬು, ಹಿಟ್ಟಿನ ಲಾಡು, ಹೋಳಿಗೆ ಮಾಡಿ ನವರಾತ್ರಿ ಉತ್ಸವವನ್ನು ಆಚರಿಸಬಹುದು. ದ್ವಿದಳ ಧಾನ್ಯಗಳಾದ ಹೆಸರುಬೇಳೆ, ತೊಗರಿಬೇಳೆ, ಚನ್ನಂಗಿ ಬೇಳೆ, ಮೆಂತ್ಯೆ ಹಿತಕರ. ಇವುಗಳಿಂದ ಮಾಡಿದ ಹೆಸರುಬೇಳೆ ಸಾರು, ಪಾಯಸ, ಕಟ್ಟಿನ ಸಾರು, ಸಾಂಬಾರು ಹಿತಕರ.

ತರಕಾರಿಗಳು

ಹರಿವೆ, ಮೆಂತ್ಯೆ ಸೊಪ್ಪು, ಬಾಳೆ ಹೂವು, ಬಾಳೆದಿಂಡು, ಬಾಳೆಗೆಡ್ಡೆ, ಹಾಲುಗುಂಬಳ, ಬೂದುಗುಂಬಳ, ಸಿಹಿಗುಂಬಳ, ಪಡುವಲಕಾಯಿ, ಮೊಗೆಕಾಯಿ, ಹಾಗಲಕಾಯಿ, ಕಮಲದದಂಟು-ಗೆಡ್ಡೆ ಹಿತಕರ. ಇವುಗಳನ್ನು ಬಳಸಿ ಪಲ್ಯ, ರಾಯತ, ತಂಬುಳಿ, ಕಾಯಿರಸ, ಗೊಜ್ಜು, ಪಾಯಸ ಮಾಡಿ ಸೇವಿಸಿದರೆ ಒಳ್ಳೆಯದು. ತೆಂಗಿನಕಾಯಿ, ಎಳನೀರು, ತೆಂಗಿನತುರಿಯಿಂದ ತಯಾರಿಸಿದ ಪದಾರ್ಥಗಳ ಸೇವನೆ ಈ ಕಾಲದಲ್ಲಿ ಪಿತ್ತವನ್ನು ಹಾಗೂ ರಕ್ತದೋಷವನ್ನು ಶಮನ ಮಾಡುವುದು. ಹಾಲು, ಬೆಣ್ಣೆ, ತುಪ್ಪದಿಂದ ತಯಾರಿಸಿದ ಪಾಯಸ, ಹಲ್ವ, ತುಪ್ಪ ಅಥವಾ ಬೆಣ್ಣೆಯಲ್ಲಿ ಕರಿದ ಪದಾರ್ಥಗಳು ಹಿತಕರ. ಆದರೆ ಎಣ್ಣೆಯಲ್ಲಿ ಕರಿದ ತಿಂಡಿ-ತಿನಿಸುಗಳು ಪಿತ್ತವನ್ನು ಕೆರಳಿಸುವವು.

ಅಹಿತಕರ ಆಹಾರ

ಸಿಪ್ಪೆ ಸಹಿತವಾದ ಕಾಳುಗಳು, ಮೊಳಕೆಕಾಳು, ಅಲಸಂದೆ, ಉದ್ದು, ಅವರೆ, ಹುರುಳಿ, ಬಟಾಣಿ, ಸೋಯಾಬಿನ್ ಇತ್ಯಾದಿ ಪಿತ್ತವನ್ನು ಹೆಚ್ಚಿಸಿ, ರಕ್ತವನ್ನು ಕೆಡಿಸುತ್ತವೆ. ಹಾಗಾಗಿ ಇವುಗಳ ಬಳಕೆ ಸತತವಾಗಿ ಬೇಡ. ಹಸಿ ಅಥವಾ ಬೇಯಿಸಿದ ಮೊಳಕೆಕಾಳುಗಳು, ಹಸಿಬೇಳೆಗಳ ಉಸಳಿ, ಕೋಸಂಬರಿ ನಿತ್ಯ ಸೇವಿಸಿದರೆ ತೊಂದರೆಯಾಗುವುದು. ಈರುಳ್ಳಿ, ಬೆಳ್ಳುಳ್ಳಿ ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುವುದರಿಂದ ಈ ಋತುವಿನಲ್ಲಿ ಇವುಗಳ ನಿತ್ಯ ಉಪಯೋಗ ಒಳ್ಳೆಯದಲ್ಲ. ಮೊಸರು, ಹುಳಿಮಜ್ಜಿಗೆಯನ್ನು ಸೇವಿಸುವುದು ನೇರವಾಗಿ ರಕ್ತವನ್ನು ಹಾಳು ಮಾಡುತ್ತವೆ. ಇದಲ್ಲದೆ ಪನೀರ್, ಗಿಣ್ಣು ಇವುಗಳನ್ನು ಬಳಸದೇ ಇದ್ದರೆ ಒಳ್ಳೆಯದು.

ಯಾವಾಗಲೂ ಮಾಂಸಾಹಾರದೊಂದಿಗೆ ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು. ಮಾಂಸಾಹಾರವನ್ನು ತಯಾರಿಸುವಾಗ ಸೇರಿಸುವ ಮಾಸಾಲೆ ವಸ್ತುಗಳನ್ನು ಮಿತವಾಗಿ ಬಳಸಬೇಕು.

ಋತುವಿನಲ್ಲಿ ಆಚರಿಸಬೇಕಾದ ವಿಹಾರ

ಬಿಸಿಲಿನ ತಾಪವನ್ನು ನೀಗಿಸಲು ಶ್ರೀಗಂಧ, ಲಾವಂಚ, ಪಚ್ಚಕರ್ಪೂರ ಇವುಗಳ ಲೇಪವನ್ನು ದೇಹಕ್ಕೆ ಮಾಡಿಕೊಳ್ಳಬಹುದು. ಮುತ್ತಿನಹಾರವನ್ನು ಧರಿಸುವುದು, ಈ ಋತುವಿನಲ್ಲಿ ಅರಳುವ ಹೂವುಗಳ ಮಾಲೆಗಳನ್ನು ಧರಿಸುವುದರಿಂದ ಪಿತ್ತದೋಷ ಕೆರಳುವುದಿಲ್ಲ. ಹಗಲು ಅಥವಾ ಮಧ್ಯಾಹ್ನದ ನಿದ್ರೆ ಮಾಡುವುದು ಒಳಿತಲ್ಲ. ಇದರಿಂದ ಅಜೀರ್ಣ, ತಲೆಭಾರ, ಹುಳಿತೇಗು, ಎದೆಯುರಿ ಇತ್ಯಾದಿ ಪಿತ್ತಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳುತ್ತವೆ, ಈ ಋತುವಿನಲ್ಲಿ ಎಲ್ಲವೂ ನಿರ್ಮಲವಾಗಿರುವುದರಿಂದ ಕೆರೆ, ಕೊಳ, ಸರೋವರದಲ್ಲಿ ಶುದ್ಧವಾದ ನೀರು ಇರುವುದರಿಂದ ಸ್ವಚ್ಛಂದವಾಗಿ ಈಜಾಡಬಹದು. ರಾತ್ರಿಯಾಗುತ್ತಿದ್ದಂತೆ ಬೆಳದಿಂಗಳ ಕಿರಣಕ್ಕೆ ಮೈವೊಡ್ಡಬೇಕು.

ಈ ಋತುವಿಗನುಸಾರ ಪಿತ್ತ ದೋಷದಿಂದುಂಟಾಗುವ ತೊಂದರೆಗಳಿಗೆ ಪಿತ್ತವನ್ನು ಶಮನ ಮಾಡುವಂತಹ ಆಹಾರವನ್ನು ಸೇವಿಸಬೇಕು. ದೋಷಿತ ರಕ್ತವನ್ನು ನಿವಾರಣೆ ಮಾಡಲು ಶೋಧನ ಚಿಕಿತ್ಸೆಯಾಗಿ ರಕ್ತಮೋಕ್ಷಣ ಹಾಗೂ ವಿರೇಚನ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು.ಶರದ್ ಋತುವಿಗೆ ಅನುಸಾರ ಹಿತ-ಮಿತವಾದ ಆಹಾರ-ವಿಹಾರಗಳನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಶರದ್ ಋತು ಶರೀರಕ್ಕೆ ಹಿತವನ್ನು ಉಂಟುಮಾಡುವುದು.

(ಲೇಖಕಿ, ಯಲ್ಲಾಪುರದಲ್ಲಿ ಆಯುರ್ವೇದ ವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT