ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಭಾರತದ ತಾಖತ್ತು

Last Updated 2 ಮೇ 2020, 19:30 IST
ಅಕ್ಷರ ಗಾತ್ರ

ನಗರಗಳನ್ನು ಕಂಗೆಡಿಸಿರುವ ಕೊರೊನಾ ಹಳ್ಳಿಗಳತ್ತ ಮುಖ ಮಾಡದಂತೆ ನೋಡಿಕೊಳ್ಳಬೇಕಿದೆ. ಹಾಗೆಯೇ ಈಗ ಹಳ್ಳಿಗಳಿಗೆ ದಾಳಿ ಇಟ್ಟಿರುವ ನಗರದ ಜನರು, ಗ್ರಾಮಭಾರತದಲ್ಲಿ ನೆಲೆ ನಿಂತಿರುವ ಸರಳ ಜೀವನದ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ.

‘ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಕಂಪನಗಳಿಂದ ಇಡೀ ಜಗತ್ತು ವಾಸಿಯಾಗಲಾರದ ವ್ರಣದಿಂದ ನಿರಂತರವಾಗಿ ನರಳುವ ರೋಗಿಯಂತೆ ಜೀವಿಸುತ್ತಿರುತ್ತದೆ ..’ ಎಂದು ಸ್ವಾತಂತ್ರ್ಯಪೂರ್ವದಲ್ಲೇ ಮಹಾತ್ಮ ಗಾಂಧೀಜಿ ಹೇಳಿದ ಮಾತು ಇಂದು ನೆನಪಾಗುತ್ತಿದೆ. ದೈತ್ಯಾಕಾರವಾಗಿ ಬೆಳೆದು ನಿಂತ ಔದ್ಯೋಗೀಕರಣ ಮತ್ತು ನಗರೀಕರಣ ಸಾವಿರಾರು ಅನಗತ್ಯ ಸರಕುಗಳ ಉತ್ಪಾದನೆಗೆ ಎಡೆ ಮಾಡಿಕೊಟ್ಟಿದೆ. ತನ್ಮೂಲಕ ಮನುಷ್ಯನನ್ನು ಲಾಭಕೋರತನ, ಸ್ವಾರ್ಥ, ಅಪಾರ ಸಂಪತ್ತಿನ ಶೇಖರಣೆ, ದುರಾಸೆ, ಅನಗತ್ಯ ಕೊಳ್ಳುಬಾಕತನ ಮುಂತಾದ ಅಮಾನವೀಯ ವಿದ್ಯಮಾನಗಳ ಮಡಿಲಿಗೆ ದಬ್ಬಿಬಿಟ್ಟಿವೆ. ನಿಯಂತ್ರಣವಿಲ್ಲದ ಅಂತರರಾಷ್ಟ್ರೀಯ ಮಾರುಕಟ್ಟೆಗಳು ಇಂಥ ಅನಿಷ್ಠಗಳನ್ನು ಇನ್ನಿಲ್ಲದಂತೆ ಪೋಷಿಸಿವೆ.

ಪ್ರಸ್ತುತ ಕೊರೊನಾ ಎಂಬ ವೈರಸ್ ಈ ಜಾಗತಿಕ ಮಾರುಕಟ್ಟೆಯ ಶಿಶು. ಎರಡು ಜಾಗತಿಕ ಯುದ್ದಗಳಿಗಿಂತಲೂ ಅತಿ ಭೀಕರವಾದ ಸಂಕಷ್ಟಗಳನ್ನು ಇಡೀ ಜಗತ್ತಿಗೆ ಈ ವೈರಸ್ ಇಂದು ತಂದೊಡ್ಡಿದೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮುಂತಾದ ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳು ಕೊರೊನಾ ಎಂಬ ವಿಷಾಣುವಿಗೆ ತತ್ತರಿಸಿ ಹೋಗಿವೆ. ಜಗತ್ತಿನ ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಸಾಂಸ್ಕೃತಿಕ ವ್ಯವಸ್ಥೆಗಳನ್ನು ಕಣ್ಣಿಗೂ ಕಾಣದ ಈ ವೈರಸ್ ನುಚ್ಚು ನೂರು ಮಾಡತೊಡಗಿದೆ. ಮತ್ತಷ್ಟು ಭೀಕರ ಅನಾಹುತಗಳ ಮುನ್ಸೂಚನೆಗಳನ್ನೂ ನೀಡಿದೆ.

ಭಾರತದಲ್ಲೂ ಕೊರೊನಾ ತನ್ನ ವಿರಾಟ್ ರೂಪವನ್ನು ತೋರಿಸುತ್ತಿದೆ. ಸರ್ಕಾರ ಕೊರೊನಾ ನಿಯಂತ್ರಿಸುವ ಸಲುವಾಗಿ ಮಾರ್ಚ್ ಇಪ್ಪತ್ತನಾಲ್ಕನೆಯ ತಾರೀಕು ಲಾಕ್ ಡೌನ್ ಅನೌನ್ಸ್ ಮಾಡಿದ ದಿನ ಬೆಂಗಳೂರು ಸೇರಿ ದೇಶದ ಮೆಟ್ರೋ ನಗರಗಳಲ್ಲಿನ ಜನ ಅಂಗಡಿಗಳಿಗೆ ದಾಳಿಯಿಟ್ಟು ಹುಚ್ಚ ಹಿಡಿದವರಂತೆ ದುಪ್ಪಟ್ಟು ಸರಕು ಸರಂಜಾಮುಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಅಸಹ್ಯ ಹುಟ್ಟಿಸುವಂತಿದ್ದವು. ಆದರೆ ಅದೇ ಸಮಯದಲ್ಲಿ ಇಡೀ ಭಾರತದ ಗ್ರಾಮೀಣ ಜಗತ್ತು ಏನೂ ನಡೆದೇ ಇಲ್ಲವೆಂಬಂತೆ ಸಹಜವಾಗಿಯೇ ಉಸಿರಾಡಿಕೊಂಡಿತ್ತು. ಅದೇ ಭಾರತದ ಗ್ರಾಮೀಣ ಜಗತ್ತಿಗೆ ಇರುವ ತಾಖತ್ತು.ವಿಜ್ಞಾನ, ಸಂಶೋಧನೆಗಳು ಇನ್ನೂ ಬೆಳಕು ಕಾಣದ ಕಾಲದಲ್ಲಿ ವಕ್ಕರಿಸುತ್ತಿದ್ದ ಪ್ಲೇಗ್, ಕಾಲರಾ, ಮಲೇರಿಯಾ ಮುಂತಾದ ಭಯಾನಕ ಪಿಡುಗುಗಳ ವಿರುದ್ಧ ಗ್ರಾಮ ಭಾರತ ಎದೆಯೊಡ್ಡಿ ಸಣೆಸಾಡಿ ಗೆದ್ದ ನೂರಾರು ಉದಾರಣೆಗಳು ಈ ನೆಲದಲ್ಲಿ ಇನ್ನೂ ಉಸಿರಾಡಿಕೊಂಡಿವೆ. ಗ್ರಾಮ ಭಾರತದಲ್ಲಿ ನೆಲೆಯೂರಿ ಗಟ್ಟಿಯಾಗಿ ಬೇರು ಬಿಟ್ಟುಕೊಂಡಿದ್ದ ಮುಗ್ಧತೆ, ಪ್ರೀತಿ, ವಿಶ್ವಾಸ, ನಿಸ್ವಾರ್ಥ ಭಾವ, ಸಹಕಾರ, ಸಹಬಾಳ್ವೆ ಮುಂತಾದ ಮಾನವೀಯ ಗುಣಗಳಿಗೆ ಎಂಥ ಸಂಕಷ್ಟಗಳನ್ನಾದರೂ ಎದುರಿಸುವ ತಾಖತ್ತು ಇತ್ತು.

ನನಗೀಗ ಅರವತ್ತೆರಡು ವರ್ಷ. ನನಗೆ ಪ್ಲೇಗ್ ಕಾಯಿಲೆ ನೋಡಿದ ನೆನಪೇನೂ ಇಲ್ಲ. ಆದರೆ ನಮ್ಮಜ್ಜಿ ಪ್ಲೇಗ್ ಬಗ್ಗೆ ಹೇಳುತ್ತಿದ್ದ ವಿಷಯ ಈಗಲೂ ಚೆನ್ನಾಗಿ ನೆನಪಿದೆ. ಊರಿನಲ್ಲಿ ಇಲಿಗಳು ಸಾಯತೊಡಗಿದವೆಂದರೆ ಅದು ಪ್ಲೇಗ್ ಕಾಯಿಲೆಯ ಲಕ್ಷಣವೆಂದು ಅರಿತ ಊರಿನ ಎಲ್ಲಾ ಜನ ಒಗ್ಗಟ್ಟಾಗಿ ಆಹಾರ ಧಾನ್ಯ ಮತ್ತು ದನಕರುಗಳೊಂದಿಗೆ ಊರು ಬಿಟ್ಟು ಮೈಲಿ ದೂರದಲ್ಲಿ ಕ್ಯಾಂಪ್ ಹಾಕಿಕೊಂಡು ಒಬ್ಬರ ಕಷ್ಟಗಳಲ್ಲಿ ಇನ್ನೊಬ್ಬರು ಭಾಗಿಯಾಗುತ್ತಾ ಕಾಲ ಕಳೆಯುತ್ತಿದ್ದರಂತೆ. ಅಂಥ ಶಿಸ್ತು ಇವೊತ್ತು ಬಹುಪಾಲು ಶಿಕ್ಷಿತರೇ ನೆಲೆಸಿರುವ ನಗರ ಪ್ರದೇಶಗಳಲ್ಲಿ ಕಿಂಚಿತ್ತೂ ಕಂಡು ಬರುತ್ತಿಲ್ಲವೆಂಬುದು ನಾಗರಿತೆಯ ಅತ್ಯಂತ ದೊಡ್ಡ ವ್ಯಂಗ್ಯವೇ ಸರಿ.

ಸೌಹಾರ್ದದ ನೆನಪುಗಳು

ಹಳ್ಳಿಯಲ್ಲಿ ಹುಟ್ಟಿ ಬೆಳೆದು ವೃತ್ತಿ ಕಾರಣವಾಗಿ ನಗರಗಳಲ್ಲಿ ನೆಲೆಗೊಂಡಿರುವ ನನ್ನಂಥ ಲಕ್ಷಾಂತರ ಮಂದಿಗೆ ಹಳ್ಳಿಗಾಡಿನ ಬದುಕಿನ ನೆನಪುಗಳು ಇಂದಿಗೂ ವಿಸ್ಮಯವೇ ಅನಿಸುವುದು ಇಂಥ ಸಂದರ್ಭಗಳಲ್ಲಿಯೇ. ಭಿನ್ನ ಭಿನ್ನ ಜಾತಿ, ಸಮುದಾಯಗಳು ಅಸಮಾನತೆ ಮತ್ತು ಸಂಘರ್ಷಗಳ ನಡುವೆಯೂ ಸಾವಿರಾರು ವರ್ಷಗಳ ಕಾಲ ಹಳ್ಳಿಗಳಲ್ಲಿ ಸಹಜೀವನ ನಡೆಸಿವೆ. ಹಳ್ಳಿಯಲ್ಲಿ ಯಾರಿಗಾದರೂ ಹುಷಾರು ಇಲ್ಲದಿದ್ದರೆ ಇಡೀ ಕೇರಿಯವರೆಲ್ಲ ಬಂದು ವಿಚಾರಿಸಿಕೊಳ್ಳುತ್ತಿದ್ದರು. ಊರಿನಲ್ಲಿ ಯಾರಿಗೇ ಚೇಳು ಕಚ್ಚಿದರೂ, ಕಜ್ಜಿ ಬಂದರೂ, ತಲೆ ನೋವು ಬಂದರೂ ನಮ್ಮೂರಿನ ತಳವಾರ ಓಬಮ್ಮ ಔಷಧಿ ಕೊಡುತ್ತಿದ್ದಳು.

ಊರಿನ ಯಾರಾದರೂ ಬ್ಯಾಲ್ಯ ಇಲ್ಲವೇ ಮಧುಗಿರಿ ಆಸ್ಪತ್ರೆಗೆ ಹೋಗಬೇಕೆಂದರೆ ನಮ್ಮಪ್ಪ ಮತ್ತು ಕೊಂಡಪ್ಪ ಗಾಡಿ ಎತ್ತುಗಳೊಂದಿಗೆ ಎಷ್ಟೊತ್ತಿನಲ್ಲಾದರೂ ರೆಡಿಯಾಗುತ್ತಿದ್ದರು. ನಮ್ಮೂರಿನ ಗಯ್ಯಾಳಿ ತಿಮ್ಮಕ್ಕಜ್ಜಿ ಜಾತಿಮತ ಭೇದವಿಲ್ಲದೆ ನಾಲ್ಕೈದು ದಶಕಗಳ ಕಾಲ ನಮ್ಮೂರಿನಲ್ಲಿ ನೂರಾರು ಹೆರಿಗೆಗಳನ್ನು ಯಾವ ಪ್ರಸೂತಿ ತಜ್ಞರಿಗೂ ಕಡಿಮೆಯಿಲ್ಲದಂತೆ ಮಾಡಿಸಿದ್ದಳು– ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ. ಮರಾಠಿಗರ ರಾಣೆಮ್ಮಜ್ಜಿ ಮತ್ತು ಮಾದಿಗರ ಪಂದಿಕದ್ರಪ್ಪ ಮಕ್ಕಳ ಡಾಕ್ಟರುಗಳಾಗಿ ಕೆಲಸ ಮಾಡುತ್ತಿದ್ದರು. ಇನ್ನು, ಮುಳ್ಳು ತೆಗೆಯುವ, ಕಣ್ಣಿಗೆ ಬಿದ್ದ ಕಲ್ಲು ತೆಗೆಯುವ ವಿದ್ಯೆ ಕಲಿತವರು ಕೇರಿಗೊಬ್ಬರಾದರೂ ಎಲ್ಲಾ ಕಾಲದಲ್ಲೂ ಇರುತ್ತಿದ್ದರು. ಯಾರ ಮನೆಯಲ್ಲಾದರೂ ಸಾವು ಸಂಭವಿಸಿದರೆ ಊರಿಗೆ ಊರೇ ನೆರೆದು ಸಂತೈಸುತ್ತಿತ್ತು. ಬಡವರ ಮನೆಯ ಮದುವೆಗಳಿಗೆ ಇದ್ದವರು ತಮ್ಮ ತಮ್ಮ ಕೈ ಎಟುಕುವಷ್ಟು ನೆರವು ನೀಡುತ್ತಿದ್ದರು. ಇಂದಿಗೂ ಹಳ್ಳಿಗಳಲ್ಲಿ ಸಾವು ಸಂಭವಿಸಿದರೆ ಸಾವಿನ ಮನೆಯವರಿಗೆ ಮತ್ತವರ ಬಂಧುಬಳಗದವರಿಗೆ ಪಕ್ಕದ ಮನೆಯವರೋ, ಎದುರು ಮನೆಯವರೋ ಊಟೋಪಚಾರಗಳನ್ನು ನೋಡಿಕೊಳ್ಳುತ್ತಾರೆ.

ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ರಾಂಪುರದ ಲಾಳದ ಸಾಬಿ ಬಂದು ಊರಿನಲ್ಲಿ ಒಂದು ವಾರ ಕಾಲ ಟೆಂಕಿ ಹಾಕಿ ಊರಿನ ಎಲ್ಲಾ ಎತ್ತುಗಳಿಗೂ ಲಾಳ ಕಟ್ಟಿಯೇ ಹೋಗುತ್ತಿದ್ದದ್ದು. ಯಾರು ಎಷ್ಟು ಕೊಟ್ಟರೂ ಮುನಿಸಿಕೊಳ್ಳದೆ ಇಸಿದುಕೊಂಡು ಹೋಗುತ್ತಿದ್ದ ಲಾಳ ಸಾಬಿ. ಬ್ಯಾಲ್ಯದ ಪುಟ್ಟಯ್ಯ ತನ್ನ ಕರ್ತವ್ಯವೋ ಎಂಬಂತೆ ತಿಂಗಳಿಗೊಮ್ಮೆ ಬಂದು ಕ್ಷೌರ ಮಾಡಿ ಹೋಗುತ್ತಿದ್ದ. ಉಗಾದಿ ಹಬ್ಬದಲ್ಲಿ ಆಲೆ ಮನೆ ಇಡುತ್ತಿದ್ದವರು ಇಲ್ಲದವರಿಗೆ ಬೆಲ್ಲ ಕೊಟ್ಟರೆ, ತೆಂಗಿನ ಮರ ಇದ್ದವರು ಇಲ್ಲದವರಿಗೆ ತೆಂಗಿನಕಾಯಿ ಕೊಡುತ್ತಿದ್ದರು. ವರ್ಷಕ್ಕೊಮ್ಮೆ ಬರುತ್ತಿದ್ದ ಉಗಾದಿ ಹಬ್ಬದ ದಿನ ಊರಿನಲ್ಲಿ ಯಾರೂ ಒಬ್ಬಟ್ಟು ಮಾಡದೆ ಇರಬಾರದೆಂದು ಊರಿನ ಮುಖಂಡರು ಆಸ್ಥೆ ವಹಿಸುತ್ತಿದ್ದರು. ಸಂಕಷ್ಟಗಳ ಸಮಯಗಳಲ್ಲಿ ದ್ವೇಷಗಳನ್ನು ಮರೆಯುವ ಶಕ್ತಿಯನ್ನು ಭಾರತದ ಹಳ್ಳಿಗಾಡಿನ ಮಣ್ಣು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಜಾಗತೀಕರಣ ಮತ್ತು ನಗರೀಕರಣದ ಪ್ರಭಾವದಿಂದಾಗಿ ಭಾರತದ ಹಳ್ಳಿಗಾಡಿನ ಇಂಥ ಉದಾತ್ತ ಗುಣಗಳು ಈಗ ಸವಕಲಾಗತೊಡಗಿವೆ.

ಗ್ರಾಮ ಭಾರತಕ್ಕಿರುವ ಪ್ರಚಂಡ ಶಕ್ತಿಯೆಂದರೆ ಎಂಥಾ ಆರ್ಥಿಕ ಕ್ಷೋಭೆಯನ್ನಾದರೂ ಎದುರಿಸುವ ಜಾಯಮಾನ. ಮುಂದುವರಿದ ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕ ಕ್ಷೋಭೆಗೆ ತರಗೆಲೆಗಳಂತೆ ತಲ್ಲಣಿಸಿ ಹೋಗುತ್ತವೆ. ಅಷ್ಟೇಕೆ ಭಾರತದ ನಗರವಾಸಿಗಳೂ ಕೂಡ ಆರ್ಥಿಕ ಸಂಕಷ್ಟಗಳನ್ನು ತಡೆದುಕೊಳ್ಳಲಾಗದೆ ಕಂಗೆಟ್ಟು ಹೋಗುತ್ತಾರೆ. ಆದರೆ ಹಳ್ಳಿಗಾಡು ತನ್ನ ಸರಳ ಸಹಜ ಬದುಕಿನಿಂದಾಗಿ ಇಂಥಾ ಸಂಕಷ್ಟಗಳಿಗೆ ಪ್ರತಿರೋಧವನ್ನೊಡ್ಡುವ ಬಲವನ್ನು ಪಡೆದುಕೊಂಡಿದೆ. ಹಳ್ಳಿಗಾಡಿನ ಹೆಣ್ಣು ಮಕ್ಕಳು ಎಷ್ಟೋ ಬರಗಾಲಗಳನ್ನು ಧೃತಿಗೆಡದ ಎದುರಿಸಿರುವುದನ್ನು ನಾನು ಕಣ್ಣಾರೆ ಕಂಡವನಾಗಿದ್ದೇನೆ. ಹಳ್ಳಿಗಾಡಿನ ಜನ ಕಷ್ಟಗಳಿಂದಾಗಿ ಖಿನ್ನತೆಗೊಳಗಾಗುವುದು ತುಂಬಾ ಅಪರೂಪ.

ಮಾರ್ಚ್ ತಿಂಗಳ 24 ಮತ್ತು 25ನೇ ತಾರೀಕುಗಳಂದು ಬೆಂಗಳೂರಿನಿಂದ ಲಕ್ಷಾಂತರ ಜನ ಸಿಕ್ಕಿದ ವಾಹನಗಳನ್ನು ಹಿಡಿದು ತಮ್ಮ ತಮ್ಮ ಸ್ವಂತದ ಹಳ್ಳಿಗಳಿಗೆ ಹೋಗುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಇದು ಇಡೀ ಭಾರತದ ಎಲ್ಲಾ ಭಾಗಗಳಲ್ಲೂ ಕಂಡು ಬಂದಿತ್ತು. ದೆಹಲಿಯ ಆನಂದ ವಿಹಾರ ಬಸ್ ನಿಲ್ದಾಣದಲ್ಲಿ ತಮ್ಮತಮ್ಮ ಊರುಗಳಿಗೆ ತೆರಳಲು ಆತಂಕ ಮತ್ತು ಭಯಗಳಿಂದ ನಿಂತಿದ್ದ ಐವತ್ತು ಸಾವಿರಕ್ಕೂ ಹೆಚ್ಚಿನ ವಲಸೆ ಕಾರ್ಮಿಕರು ಭಾರತದ ವಿಭಜನೆಯ ದೃಶ್ಯಗಳನ್ನು ನೆನಪಿಸುವಂತಿದ್ದರು. ಆ ಕ್ಷಣದಲ್ಲಿ ಮಹಾತ್ಮ ಗಾಂಧೀಜಿಯವರ 'Go back to villages' ಎಂಬ ಮಾತು ನೆನಪಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ, ಸ್ವಾತಂತ್ರ್ಯ ಬಂದ ನಂತರ ನಮ್ಮವೇ ಸರ್ಕಾರಗಳು ಗ್ರಾಮೀಣ ಭಾರತವನ್ನು ಎಲ್ಲಾ ವಿಧದಲ್ಲೂ ನಿರ್ಲಕ್ಷಿಸಿ ಬಿಟ್ಟವು. ಇತ್ತೀಚೆಗಂತೂ ಹಳ್ಳಿಗಳನ್ನು ರಾಜಕಾರಣಿಗಳು ಬರೀ ವೋಟ್‌ಬ್ಯಾಂಕ್‌ ಮಾಡಿಟ್ಟಿದ್ದಾರೆ. ಹಳ್ಳಿಗಾಡಿನ ಲಕ್ಷಾಂತರ ಕುಟುಂಬಗಳು ತಮ್ಮ ಬದುಕನ್ನು ಅರಸುತ್ತಾ ನಗರಗಳ ಕಡೆ ವಲಸೆ ಹೋಗುತ್ತಿರುವುದು ಒಂದು ನಿರಂತರ ಪ್ರಕ್ರಿಯೆಯಾಗಿ ರೂಪುಗೊಂಡಿದೆ.

ಕೊರೊನಾ ಭಯ ಇಂದು ಬಹಳವಾಗಿ ಆವರಿಸಿರುವುದು ನಗರಗಳನ್ನು ಮಾತ್ರವೆಂಬುದು ಗಮನಿಸಬೇಕಾದ ಸಂಗತಿ. ಈಗ ಹಳ್ಳಿಗಳು ಜನಸಂಖ್ಯೆಯಿಂದ ತುಂಬಿ ತುಳುಕಾಡುತ್ತಿವೆ. ಕೊರೊನಾ ಸೋಂಕಿತರ ಸಂಖ್ಯೆ ಹಳ್ಳಿಗಳಲ್ಲಿ ಇಲ್ಲವೆಂದೇ ಹೇಳಬಹುದು. ರೈತರು ಮತ್ತು ಕೂಲಿ ಕಾರ್ಮಿಕರು ಧೃತಿಗೆಡದೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಗಳು ಸಕಾಲದಲ್ಲಿ ಹಳ್ಳಿಗರ ಸಹಾಯಕ್ಕೆ ನಿಲ್ಲುವುದು ಕರ್ತವ್ಯವೂ, ಧರ್ಮವೂ ಆಗಿದೆ. ಒಂದು ಎಚ್ಚರಿಕೆಯ ಮತ್ತು ಅಪಾಯದ ವಿಷಯವೆಂದರೆ ನಗರ, ಪಟ್ಟಣಗಳಿಂದ ಜೀವ ಭಯದಿಂದ ಹಳ್ಳಿಗಳಿಗೆ ಹಿಂತಿರುಗಿರುವ ಯಾವುದಾದರೂ ವ್ಯಕ್ತಿಗೆ ಕೊರೊನಾ ವೈರಸ್ ತಗುಲಿದ್ದರೆ ಅದು ಇಡೀ ಹಳ್ಳಿಯನ್ನೇ ಆವರಿಸುವುದು.

ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು ಈ ವೈರಸ್ಸನ್ನು ನಿಯಂತ್ರಿಸಬಲ್ಲ ಏಕೈಕ ಅತ್ಯುತ್ತಮ ಸಾಧನವೆಂಬುದು ಜಗತ್ತಿನ ಎಲ್ಲ ಕಡೆ ಸಾಬೀತಾಗಿದೆ. ಕೊರೊನಾದ ಈ ಕಷ್ಟಕಾಲದಲ್ಲಿ ಈ ಅಂತರ ಉಳಿಸಿಕೊಂಡೇ, ಹಳ್ಳಿಗಳಲ್ಲಿ ಹಿಂದೆ ಉಸಿರಾಡುತ್ತಿದ್ದ ಪ್ರೀತಿ, ವಿಶ್ವಾಸ, ಸಹಕಾರ, ಸಹಬಾಳ್ವೆ ಮುಂತಾದ ಮಾನವೀಯ ಗುಣಗಳನ್ನು ಮತ್ತೆ ನೀರೆರೆದು ಚಿಗುರಿಸಬೇಕಾಗಿದೆ. ಮಾನವೀಯತೆಯ ಗರ್ಭಪಾತಗಳನ್ನು ತಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT