ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ: ಅಮೃತ ಸದೃಶ ಎಳನೀರು

Published 13 ಮೇ 2024, 22:40 IST
Last Updated 13 ಮೇ 2024, 22:40 IST
ಅಕ್ಷರ ಗಾತ್ರ

ದೇಹದ ಕಾವನ್ನು ತಣಿಸಿ ಬಾಯಾರಿಕೆಯನ್ನು ಇಂಗಿಸಬಲ್ಲ ಅತ್ಯಂತ ಉತ್ತಮ ಪೇಯವೆಂದರೆ ಅದು ಎಳನೀರು. ಇದರಲ್ಲಿ ದೊರಕುವ ವಿಟಮಿನ್, ಖನಿಜಾಂಶ, ಪೋಷಕಾಂಶ ಮತ್ತು ಸೋಡಿಯಂ, ಪೊಟಾಷಿಯಂ ಮುಂತಾದ ಲವಣಗಳಿಂದಾಗಿ, ಎಳನೀರು ಅಮೃತಸದೃಶ ಎಂಬ ಅನ್ವರ್ಥನಾಮವನ್ನು ಪಡೆದಿದೆ. ಬೇಸಿಗೆಯಲ್ಲಿ ಬಾಯಾರಿದಾಗ, ದೇಹ ಬಳಲಿದಾಗ, ದೇಹದಲ್ಲಿ ನೀರಿನಂಶ ಕಳೆದುಹೋಗಿ ನಿರ್ಜಲೀಕರಣವಾದಾಗ, ಜ್ವರ ಬಂದಾಗ, ವಾಂತಿ–ಭೇದಿಯಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಅತಿ ಉತ್ತಮ ನೈಸರ್ಗಿಕ ಪೇಯ ಒಂದಿದ್ದರೆ, ಅದು ಎಳನೀರು. ಸಾಮಾನ್ಯವಾಗಿ ಯುವಜನರು ಕೃತಕ ತಂಪು ಪಾನೀಯಗಳನ್ನು ಬಳಸುವುದು ಹೆಚ್ಚು. ಆದರೆ ಕೃತಕ ಪೇಯಗಳಲ್ಲಿ ರಾಸಾಯನಿಕಗಳು ಇರುವುದರಿಂದ ಅವನ್ನು ಕ್ಯಾನ್ಸರ್‌ ಕಾರಕ ಎಂದೂ ಅಂದಾಜಿಸಲಾಗಿದೆ.

ಲಾಭಗಳು:

1. ಎಳನೀರು ನೈಸರ್ಗಿಕವಾಗಿ ದೊರಕುವ ಅತಿ ಉತ್ತಮ ಪೇಯ; ದೇಹ ನಿರ್ಜಲೀಕರಣದಿಂದ ಬಳಲಿದಾಗ, ಯಾವುದೇ ರಾಸಾಯನಿಕಗಳಲ್ಲಿದ ಎಳನೀರು ಅತಿ ಉತ್ತಮ ಪೇಯವಾಗಿದೆ. ಬಹಳ ಬೇಗನೆ ದೇಹವನ್ನು ಪುನರ್ಜಲೀಕರಣ ಮಾಡಿ, ದೇಹವನ್ನು ಬಳಲದಂತೆ ಮಾಡುತ್ತದೆ.

2. ಹೊಟ್ಟೆಯಲ್ಲಿ ಉರಿ, ಹುಣ್ಣು ಅಥವಾ ಅಜೀರ್ಣ ಅಥವಾ ಇನ್ನಾವುದೇ ಸಮಸ್ಯೆ ಇದ್ದಲ್ಲಿ ನೀರಿನ ಅಥವಾ ಇನ್ನಾವುದೇ ಪೇಯಗಳ ಬದಲು ಎಳನೀರಿನ ಸೇವನೆ ಅತಿ ಉತ್ತಮ. ಬಳಲಿದ ಕರುಳಿನ ಒಳಭಾಗಕ್ಕೆ ಗಾಯ ವಾಸಿಯಾಗಲು ಎಳನೀರು ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ. ದೇಹಕ್ಕೆ ಅಗತ್ಯವಿರುವ ಲವಣ, ವಿಟಮಿನ್ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

3. ಬೆಸಗೆಯಲ್ಲಿ ವಿಪರೀತ ಬೆವರುವಿಕೆಯಿಂದ ದೇಹದಿಂದ ಲವಣಗಳು ಕಳೆದುಹೋಗುತ್ತದೆ. ಆಗ ವ್ಯಕ್ತಿ ಅಂಥ ಬಳಲಿ ಬೆಂಡಾಗುತ್ತಾನೆ. ಅಂಥ ಸಮಯದಲ್ಲಿ ಎಳನೀರನ್ನು ಸೇವಿಸಿದಲ್ಲಿ, ಕಳೆದುಹೋಗಿರುವ ಲವಣಗಳು ಮತ್ತು ವಿಟಮಿನ್‍ಗಳು ದೇಹಕ್ಕೆ ದೊರಕಿ ಹೊಸ ಹೊಮ್ಮಸ್ಸು ಮತ್ತು ಹುರುಪು ದೇಹಕ್ಕೆ ಬರುತ್ತದೆ.

4. ಮಲಬದ್ಧತೆಯ ಸಮಸ್ಯೆ ಇರುವವರಲ್ಲಿ ಎಳನೀರು ಬಹಳ ಉತ್ತಮ ಪೇಯ. ಮಲಬದ್ಧತೆ ಉಂಟಾದಾಗ, ಕರುಳಿನಲ್ಲಿ ಶೇಖರಣೆಯಾದ ಮಲದಿಂದ ದೇಹಕ್ಕೆ ತೊಂದರೆ ಆಗಬಹುದು. ಎಳನೀರಿನಲ್ಲಿರುವ ಕರಗಿರುವ ನಾರಿನಂಶ ಕರುಳಿನ ಚಲನೆಯನ್ನು ಪ್ರಚೋದಿಸಿ ಮಲವನ್ನು ಹೊರಹಾಕುವಂತೆ ಪ್ರಚೋದಿಸುತ್ತದೆ. ನಿಯಮಿತವಾಗಿ, ನಿರಂತರವಾಗಿ ಎಳನೀರಿನ ಸೇವನೆಯಿಂದ ಕರುಳಿನ ಚಲನೆ ಸರಾಗವಾಗಿ ಜೀರ್ಣಾಂಗ ಸಂಬಂಧಿ ಸಮಸ್ಯೆಗಳು ಪರಿಹಾರವಾಗುತ್ತವೆ.

5. ಎಳನೀರಿನಲ್ಲಿ ‘ಆರ್ಜಿನೈನ್’ ಎಂಬ ರಾಸಾಯನಿಕ ಇರುತ್ತದೆ. ಇದು ದೇಹದ ಎಲ್ಲಾ ಆಂತರಿಕ ಅಂಗಾಂಗಗಳ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ, ಆರೋಗ್ಯವನ್ನು ವೃದ್ಧಿಸುವಂತೆ ಮಾಡುತ್ತದೆ.

6. ಎಳನೀರಿನಲ್ಲಿ ಅತಿ ಹೆಚ್ಚು ಪೊಟಾಷಿಯಂ ಇರುವ ಕಾರಣ ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ಮಾಡುತ್ತದೆ. ಈ ಪೊಟಾಷಿಯಂ ದೇಹದಿಂದ ಹೆಚ್ಚು ಮೂತ್ರ ಹೋಗುವಂತೆ ಮಾಡಿ ಕಿಡ್ನಿಯಲ್ಲಿ ಕಲ್ಲು ಬೆಳೆಯದಂತೆ ತಡೆಯುತ್ತದೆ.

7. ಎಳನೀರಿನಲ್ಲಿ ಕೊಬ್ಬಿನಾಂಶ ಇರುವುದೇ ಇಲ್ಲ; ಮತ್ತು ಅತಿ ಕಡಿಮೆ ಕ್ಯಾಲರಿ ಇರುತ್ತದೆ. ನೀರಿನ ಬದಲು ಎಳನೀರನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗಿ, ದೇಹದ ತೂಕ ಕಳೆಯಲು ಕಾರಣವಾಗುತ್ತದೆ. ಹೆಚ್ಚು ಸೋಡಿಯಂ ಇರುವ ಆಹಾರವನ್ನು ಸೇವಿಸಿ, ದೇಹದಲ್ಲಿ ಹೆಚ್ಚು ನೀರು ಶೇಖರಣೆಯಾದಾಗ, ಎಳನೀರನ್ನು ಸೇವಿಸಿದಲ್ಲಿ ಈ ಹೆಚ್ಚಾದ ನೀರು ಮೂತ್ರದ ಮುಖಾಂತರ ಹೊರ ಹಾಕಲ್ಪಡುತ್ತದೆ. ಆ ಮೂಲಕ ದೇಹದ ತೂಕ ನಿಯಂತ್ರಣಕ್ಕೆ ಒಳಪಡುತ್ತದೆ.

8. ಎಳನೀರು ನೈಸರ್ಗಿಕ ಪೇಯ. ಸಣ್ಣ ಮಕ್ಕಳಲ್ಲಿಯೂ ಬಳಸಬಹುದು. ಅವರಿಗೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತದೆ.

9. ಎಳನೀರು ಒಂದು ಉತ್ತಮ ಪೇಯವಾಗಿದ್ದು, ದೇಹದಲ್ಲಿನ ವಿಷಕಾರಕ ವಸ್ತುಗಳನ್ನು ಹೊರಹಾಕುತ್ತದೆ. ರಕ್ತವನ್ನು ಪರಿಶುದ್ಧವಾಗಿಸುತ್ತದೆ. ಅದೇ ರೀತಿ ಕರುಳಿನಲ್ಲಿ ಶೇಖರಣೆಯಾದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ.

10. ಉರಿಯೂತವನ್ನು ನಿಯಂತ್ರಿಸುವಲ್ಲಿ ಎಳನೀರು ಅತ್ಯಂತ ಉತ್ತಮ ಪೇಯ. ದೇಹದ ಯಾವುದೇ ಭಾಗದಲ್ಲಿ ಉರಿಯೂತವಾಗಿದ್ದರೆ ಎಳನೀರು ಸೇವನೆಯಿಂದ ಗಾಯ ಬೇಗನೆ ಗುಣವಾಗುತ್ತದೆ. ಆಂತರಿಕವಾಗಿ ಉಂಟಾದ ಗಾಯಗಳನ್ನು ಶಮನಿಸಲೂ ಎಳನೀರು ಬಹಳ ಉಪಯುಕ್ತ.

ಕೊನೆಮಾತು:
ಎಳನೀರಿನಲ್ಲಿ ಶೇ 94ರಷ್ಟು ನೀರು ಇರುತ್ತದೆ. ಅತಿ ಕನಿಷ್ಠ ಪ್ರಮಾಣದಲ್ಲಿ ಕೊಬ್ಬಿನಾಂಶ ಇರುತ್ತದೆ. ಒಂದು ಕಪ್ ಅಂದರೆ 240 ಮಿ.ಲೀ. ಎಳನೀರಿನಲ್ಲಿ ಸುಮಾರು 60 ಕ್ಯಾಲರಿ ಮಾತ್ರ ಇರುತ್ತದೆ. ಇದರ ಜೊತೆಗೆ 15 ಗ್ರಾಂನಷ್ಟು ಶರ್ಕರಪಿಷ್ಟ, 5 ಗ್ರಾಂನಷ್ಟು ಸಕ್ಕರೆ ಇರುತ್ತದೆ. ಇದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಮ್ಯಾಗ್ನೀಷಿಯಂ, ಪೊಟಾಷಿಯಂ, ಕ್ಯಾಲ್ಸಿಯಂ ಮತ್ತು ರಂಜಕ ಕೂಡ ಇರುತ್ತದೆ. ಆ್ಯಂಟಿ ಆಕ್ಸಿಡೆಂಟ್‍ಗಳು ಸಾಕಷ್ಟು ಇರುವ ಕಾರಣ ಎಳನೀರು ಅತ್ಯಂತ ಉಪಯುಕ್ತ ಪೇಯ. ಮಧುಮೇಹಿಗಳಲ್ಲಿ ಎಳನೀರು ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಕರಿಸುತ್ತದೆ ಎಂದು ತಿಳಿದುಬಂದಿದೆ. ಎಳನೀರಿನಲ್ಲಿರುವ ಪೊಟಾಷಿಯಂ ಕೂಡ ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯಸಂಬಂಧಿ ರೋಗಗಳು ಬರದಂತೆ ತಡೆಯುತ್ತದೆ. ಅತಿಯಾದ ದೈಹಿಕ ಕಸರತ್ತು, ವ್ಯಾಯಾಮ ಅಥವಾ ಇನ್ಯಾವುದೇ ದೈಹಿಕ ಪರಿಶ್ರಮ ಇರುವ ಕೆಲಸ ಮಾಡಿದ ಬಳಿಕ ಜೀವಕೋಶಗಳನ್ನು ಉತ್ತೇಜಿಸಲು ಮತ್ತು ಬಳಲಿದ ದೇಹಕ್ಕೆ ಶಕ್ತಿ ತುಂಬಲು ನೈಸರ್ಗಿಕವಾಗಿ ದೊರಕುವ ಶಕ್ತಿವರ್ಧಕ ಪೇಯ ಎಂದರೆ ಎಳನೀರು. ಈ ಕಾರಣದಿಂದಲೇ ಕೃತಕ ರಾಸಾಯನಿಕಯುಕ್ತ ಪೇಯಗಳನ್ನು ವರ್ಜಿಸಿ, ಎಳನೀರನ್ನು ದಿನನಿತ್ಯ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT