ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಿಣಿಯರಲ್ಲಾಗುವ ಬದಲಾವಣೆಯಿಂದ ಸೋಂಕಿನ ಪರಿಣಾಮ ತೀವ್ರ

ಕೊರೊನಾ ಒಂದಿಷ್ಟು ತಿಳಿಯೋಣ
Last Updated 25 ನವೆಂಬರ್ 2020, 21:02 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನ ಮೊದಲನೇ ಅಲೆಯ ಉಬ್ಬರ ಇಳಿಯುತ್ತಿದ್ದು, ಎರಡನೆಯ ಅಲೆಯ ಭೀತಿಯಿದ್ದರೂ ಕೆಲವರು ಮುಂಜಾಗ್ರತಾ ಕ್ರಮಗಳನ್ನು ಕಡೆಗಣಿಸುತ್ತಿರುವುದು ಆತಂಕಕ್ಕೀಡು ಮಾಡುತ್ತಿದೆ. ಗರ್ಭಿಣಿಯರೂ ಕೂಡ ಇದಕ್ಕೆ ಹೊರತಾಗಿಲ್ಲ. ಗರ್ಭಧಾರಣೆಯ ಸ್ಥಿತಿಯೊಂದೇ ಕೋವಿಡ್–19 ಸೋಂಕಿನ ಪ್ರಮಾಣ ಹೆಚ್ಚಿಸುವುದಿಲ್ಲವಾದರೂ ಗರ್ಭಿಣಿಯರಲ್ಲಾಗುವ ಹಲವು ಬದಲಾವಣೆಗಳು ಸೋಂಕು ಹಾಗೂ ಅದರ ಪರಿಣಾಮವನ್ನು ತೀವ್ರತರವಾಗಿ ಅನುಭವಿಸುವ ಹಾಗೆ ಮಾಡಬಹುದು ಎನ್ನುತ್ತಾರೆ ಭದ್ರಾವತಿಯ ನಯನ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ವೀಣಾ ಎಸ್‌. ಭಟ್‌.

ಎರಡನೆಯ ಹಾಗೂ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಮಗು ಬೆಳೆಯುತ್ತಾ ಹೋದ ಹಾಗೆ ಗರ್ಭಕೋಶ ಹಿಗ್ಗಿ ಹೊಟ್ಟೆ ಮುಂದಕ್ಕೆ ಬರುತ್ತಾ ಎದೆಯಗೂಡು ಹಿಗ್ಗುವ ಸಾಮರ್ಥ್ಯ ಶೇ 20– 30ರ ವರೆಗೂ ಕಡಿಮೆಯಾಗುತ್ತದೆ. ಜೊತೆಗೆ ಅವರ ಸ್ವಾಶಕೋಶದ ಕ್ರಿಯಾತ್ಮಕ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗಿ ಉಸಿರುಕಟ್ಟಿದ ಅನುಭವವಾಗಬಹುದು. ಈ ಬದಲಾವಣೆ ಸರಿಪಡಿಸಲು ಉಸಿರಾಟದ ಗತಿ ಸ್ವಲ್ಪ ವೇಗವಾಗಿ ಉಸಿರಾಡುವ ಗಾಳಿಯನ್ನು ವೇಗವಾಗಿ ಎಳೆದುಕೊಳ್ಳುವ ಸಂಭವ ಬೇರೆಯವರಿಗಿಂತ ಹೆಚ್ಚಾಗುತ್ತದೆ. ಅಷ್ಟೇ ಅಲ್ಲಾ ಎಲ್ಲಾ ಗರ್ಭಿಣಿಯರಲ್ಲೂ ಅನಿವಾರ್ಯ ಹಾಗೂ ಅವಶ್ಯಕವಾಗಿ ಹೆಚ್ಚಾಗುವ ಪ್ರೊಜೆಸ್ಟಿರಾನ್ ಹಾರ್ಮೋನ್‌ನಿಂದ ಮೂಗಿನ ಲೋಳೆಪೊರೆಯಲ್ಲಿ ಉಂಟಾಗುವ ಬದಲಾವಣೆಯು ವೈರಸ್ ಮೂಗಿನಲ್ಲಿ ಅಂಟಿಕೊಂಡಿರುವ ಹಾಗೆ ಮಾಡುತ್ತದೆ.

ಇದರೊಂದಿಗೆ ಗರ್ಭಿಣಿಯಲ್ಲಿ ಚಯಾಪಚಯ ಕ್ರಿಯೆ ಹಾಗೂ ಆಮ್ಲಜನಕ ಬಳಕೆ ಎರಡೂ ಹೆಚ್ಚುತ್ತದೆ. ಹೀಗಾಗಿ ಒಂದು ವೇಳೆ ಕೊರೊನಾ ಸೋಂಕು ಉಂಟಾದರೆ ಗರ್ಭಿಣಿಯರಲ್ಲಾಗುವ ವಾತಾಯನ-ಸೇಚನ ವ್ಯವಸ್ಥೆಯಲ್ಲಿನ ಅಸಾಮರಸ್ಯವು ಆಮ್ಲಜನಕ ರಹಿತ ಉಸಿರಾಟದ ವೈಫಲ್ಯದಿಂದ ದುರ್ಬಲವಾಗುವ ಸಂಭವನೀಯತೆಯನ್ನು ಜನಸಾಮಾನ್ಯರಿಗಿಂತ ಹೆಚ್ಚಿಸುತ್ತದೆ.

ಗರ್ಭಧಾರಣೆಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯಲ್ಲೂ ಬಹಳ ಬದಲಾವಣೆ ಉಂಟಾಗಿ ಸೋಂಕಾದಾಗ ಅದು ತೀವ್ರತರವಾಗಿ ಉರಿಯೂತ ಪ್ರಕ್ರಿಯೆಯನ್ನುಂಟು ಮಾಡುತ್ತದೆ. ಮಗುವಿನ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನಗಳು ಹೊರಬರಬೇಕಿದೆಯಾದರೂ ಪ್ರತಿ ಗರ್ಭಿಣಿಯರು ನೆನಪಿಡಬೇಕಾದ ಮುಖ್ಯ ವಿಷಯವೇನೆಂದರೆ ತಮ್ಮ ತಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಂಡು ಪ್ರತಿರಕ್ಷಣಾ ಕಾರ್ಯ ಸಮನ್ವಯತೆ ಸಾಧಿಸುವುದು ಎನ್ನುತ್ತಾರೆ ಡಾ. ವೀಣಾ ಭಟ್‌.

ಮಾಮೂಲಾಗಿ ಶರ್ಕರ– ಪಿಷ್ಠ, ಪ್ರೊಟೀನ್ ಹಾಗೂ ಕೊಬ್ಬಿನಾಂಶಗಳುಳ್ಳ ಸಮತೋಲನ ಆಹಾರದ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಗರ್ಭಧಾರಣೆಯಲ್ಲಿ ಸೂಕ್ಷ್ಮ ಪೋಷಕಾಂಶಗಳ (ಮೈಕ್ರೋನ್ಯೂಟ್ರಿಯಂಟ್ಸ್‌ – ವಿಟಮಿನ್ ಎ,ಸಿ,ಡಿ,ಇ, ಝಿಂಕ್, ಸೆಲೆನಿಯಂ, ಕಬ್ಬಿಣಾಂಶ ಇತ್ಯಾದಿ ಆಹಾರಗಳು) ಜೊತೆಗೆ ಪ್ರಕೃತಿದತ್ತವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು (ಇಮ್ಯೂನೋಮಾಡುಲರ‍್ಸ್) ಅಳವಡಿಸಿಕೊಳ್ಳಬೇಕು ಎಂದು ಹಲವು ಅಧ್ಯಯನಗಳು ಹೇಳುತ್ತವೆ. ಮುಖ್ಯವಾಗಿ ಇವುಗಳಲ್ಲಿ ಅರಿಸಿನ, ಬ್ರಾಹ್ಮಿ ಮತ್ತು ಸಿಟ್ರಸ್ ಹಣ್ಣುಗಳು ಮಹತ್ವದ ಪಾತ್ರವಹಿಸುತ್ತವೆ.

ಅರಿಸಿನದಲ್ಲಿರುವ ಆಲ್ಫಾಟರ್ಮೆರೋನ್ ಹಾಗೂ ಎಆರ್‌ಟರ್ಮೆರೋನ್ ಅಂಶಗಳು ಉರಿಯೂತದ ಕಾರ್ಯವಿಧಾನಗಳ ಮೇಲೆ ಬದಲಾವಣೆಯನ್ನುಂಟು ಮಾಡುತ್ತದೆ. ಸಿಟ್ರಸ್ ಗುಂಪಿನ ಕಿತ್ತಳೆ, ನಿಂಬೆ, ಕಂಚಿಕಾಯಿ, ಮಾದಲಫಲ ಇತ್ಯಾದಿ ಹಣ್ಣುಗಳಲ್ಲಿ ಇರುವ ಸಸ್ಯರಾಸಾಯನಿಕಗಳಾದ ಕುಮಾರೆನ್, ಸೊರಾಲಿನ್, ಕೆರೊಟಿನಾಯ್ಡ್ ಹಾಗೂ ಫ್ಲೇವೋನಾಯ್ಡ್ ಅಂಶಗಳು ಹಲವು ವೈರಸ್, ಫಂಗಸ್‌ ಮತ್ತು ಕೆಲವು ಬ್ಯಾಕ್ಟೀರಿಯಾಗಳ ವಿರುದ್ಧ ಕಾರ್ಯನಿರ್ವಹಿಸಿ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಬ್ರಾಹ್ಮಿ (ಒಂದೆಲಗಾ)ಯಲ್ಲಿರುವ ಬ್ಯಾಕೋಸೈಡ್ ಹಾಗೂ ಬ್ಯಾಕೋಪೋಸೈಡ್ ಇನ್ನಿತರ ಅಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯೂನೋಗ್ಲೋಬುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಎಂದು ಅವರು ವಿವರಿಸುತ್ತಾರೆ.

ಗರ್ಭಿಣಿಯರು ಇದರ ಜೊತೆಗೆ ದಿನಾ 20 ನಿಮಿಷ ಸೂರ್ಯನ ಬೆಳಕಿಗೆ ಮೈ ಒಡ್ಡಿದರೆ ಸಿಗುವ ವಿಟಮಿನ್ ಡಿ ಹೀರಿಕೊಂಡು, ದೈಹಿಕ ಚಟುವಟಿಕೆಯನ್ನು ನಿಯಮಿತವಾಗಿ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT