ಶನಿವಾರ, ಜುಲೈ 24, 2021
26 °C

ಭಾವನಾತ್ಮಕ ಬುದ್ದಿವಂತಿಕೆಯ ಅವಶ್ಯಕತೆ

ಡಾ. ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ಭಾವನೆ ಎಂಬುದು ಅಂತರಾಳದ ಅಲೆ. ಅಂತರಂಗವನ್ನು ಬಿಂಬಿಸುವ ವರ್ತನೆಗಳು. ನಮ್ಮನ್ನು ನಾವು ಅರ್ಥಮಾಡಿಕೊಳ್ಳಬಲ್ಲ, ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಲ್ಲ, ಜೀವನದಲ್ಲಿ ಎದುರಾಗುವ ನೋವು ನಲಿವುಗಳನ್ನು ನಿಭಾಯಿಸಬಲ್ಲ, ಕಷ್ಟಗಳನ್ನು ಎದುರಿಸಬಲ್ಲ, ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸಬಲ್ಲ, ಚತುರತೆಯನ್ನು ಭಾವನಾತ್ಮಕ ಬುದ್ದಿವಂತಿಕೆ ಎನ್ನಬಹುದಾಗಿದೆ. 

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದ, ಯಶಸ್ಸನ್ನು ಕಂಡ ಸಮಾಜಕ್ಕೆ ಮಾದರಿಯಾಗಬಹುದಾದಂತಹ ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು ಆರೋಗ್ಯಕರ ಸಮಾಜಕ್ಕೆ ಹಾನಿಯುಂಟುಮಾಡುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಬೌದ್ಧಿಕ ಬುದ್ದಿವಂತಿಕೆಯನ್ನು ಮೀರಿದ ಭಾವನಾತ್ಮಕ ಬುದ್ದಿವಂತಿಕೆಯ ಕೊರತೆ. ನಮ್ಮ ಶಿಕ್ಷಣ ವ್ಯವಸ್ಥೆ ಸಾಮಾಜಿಕ ವ್ಯವಸ್ಥೆಗಳು ಬೌದ್ಧಿಕ ಬುದ್ಧಿವಂತಿಕೆಯ ಬೆಳವಣಿಗೆಗೆ ಕೊಡುವಷ್ಟು ಪ್ರಾಧಾನ್ಯತೆಯನ್ನು ವ್ಯಕ್ತಿಯ ಭಾವನಾತ್ಮಕ ಬುದ್ಧಿವಂತಿಕೆ ಹಾಗೂ ಸರ್ವತೋನ್ಮುಕ ಬೆಳವಣಿಗೆಗೆ ಕೊಡುವಂತಾಗಬೇಕು ಎಂಬುದನ್ನು ಮನಗೊಳ್ಳಬೇಕಾದ ಪರಿಸ್ಥಿತಿಯು ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ.

ಭಾವನಾತ್ಮಕ ಬುದ್ಧಿವಂತಿಕೆಯ ಅವಶ್ಯಕತೆಗಳೇನು ?

* ಜೀವನದ ಯಶಸ್ಸಿಗೆ ಶಿಕ್ಷಣ, ಸಂಪಾದನೆ, ಅಧಿಕಾರ, ವೈಯಕ್ತಿಕ ಸಂಬಂಧಗಳ ನಿರ್ವಹಣೆ, ನಮ್ಮ ನಡವಳಿಕೆ, ಭಾವನೆಗಳ ಹತೋಟಿ, ಸಂವಹನ ಶಕ್ತಿ, ಅನುಭೂತಿ, ಅಂತಃಕರಣ ಇವೆಲ್ಲವೂ ಅಪಾರವಾದ ಪ್ರಭಾವವನ್ನು ಬೀರಬಲ್ಲದಾಗಿದೆ.

* ಶೈಕ್ಷಣಿಕ ಉನ್ನತಿಯೊಂದಿಗೆ ಭಾವನಾತ್ಮಕ ಬುದ್ಧಿವಂತಿಕೆಯು ಜೀವನದಲ್ಲಿ ಎದುರಿಸಬಹುದಾದಂತಹ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅತ್ಯಂತ ಅವಶ್ಯಕವಾದ ಅಂಶ.

* ಭಾವನಾತ್ಮಕ ಬುದ್ಧಿವಂತಿಕೆಯು ತಮ್ಮಲ್ಲಿ ಉದ್ಭವವಾಗುವ ಹಠಾತ್ ನಡವಳಿಕೆಗಳನ್ನು, ಭಾವನೆಗಳನ್ನು ಆರೋಗ್ಯಕರವಾದ ರೀತಿಯಲ್ಲಿ ನಿಭಾಯಿಸುವ ಹಾಗೂ ಸಾಂದರ್ಭೀಕ ಬದಲಾವಣೆಗಳನ್ನು ತರುವಂತಹ ಅಂಶವಾಗಿರುತ್ತದೆ.

* ಭಾವನಾತ್ಮಕ ಬುದ್ಧಿವಂತಿಕೆಯು ನಿಮ್ಮ ಭಾವನೆಗಳ ಸ್ವಯಂ ಅರಿವು ಮೂಡಿಸುವ ಆಲೋಚನೆಗಳನ್ನು ತರುವಂತಹ ಅಂಶವಾಗಿದ್ದು ನಿಮ್ಮ ಶಕ್ತಿ ಹಾಗೂ ದೌರ್ಬಲ್ಯದ ಅರಿವು ಮೂಡಿಸುತ್ತದೆ.

* ಭಾವನಾತ್ಮಕ ಬುದ್ಧಿವಂತಿಕೆಯು ಸಾಮಾಜಿಕ ಅರಿವನ್ನು ಮೂಡಿಸುವುದಲ್ಲದೆ ಸಮಾಜದೊಂದಿಗೆ ಆರಾಮದಾಯಕವಾಗಿ ಬೆರೆಯುವ, ಸುತ್ತಮುತ್ತಲಿನ ವಾತಾವರಣದ ಅವಶ್ಯಕತೆಯ ಅರಿವನ್ನು ಮೂಡಿಸುತ್ತದೆ.

* ಭಾವನಾತ್ಮಕ ಬುದ್ಧಿವಂತಿಕೆಯು ಸಂವಹನ ಶಕ್ತಿ, ಅನ್ಯರೊಂದಿಗೆ ಸಂಬಂಧಗಳನ್ನು ನಿಭಾಯಿಸುವ ಬೇರೆಯವರ ಮೇಲೆ ಪ್ರಭಾವ ಬೀರುವ, ತಂಡಗಳಲ್ಲಿ ಕೆಲಸಮಾಡುವ ಶಕ್ತಿಯನ್ನು ವೃದ್ಧಿಸುತ್ತದೆ.

* ಭಾವನಾತ್ಮಕ ಬುದ್ಧಿವಂತಿಕೆಯು ಅಂತರಾಳದ ಕಲಹಗಳು, ನಿರ್ಧಾರಗಳು, ಖಿನ್ನತೆ, ದುಗುಡಗಳು, ಆತಂಕಗಳು, ಅಭದ್ರತೆಯನ್ನು ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ. 

ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯ ಪ್ರಭಾವಗಳು

* ನಾವು ಕೆಲಸ ಮಾಡುವ ಸ್ಥಳಗಳಲ್ಲಿನ ಸಾಮಾಜಿಕ ಸಂಕೀರ್ಣತೆಗಳನ್ನು ನಿಭಾಯಿಸುವಲ್ಲಿ ಬೇರೆಯವರನ್ನು ಪ್ರೇರೇಪಿಸುವಲ್ಲಿ ವೃತ್ತಿ ಜೀವನದ ಯಶಸ್ಸು, ಕಾರ್ಯಕ್ಷಮತೆ ಮುಂತಾದವುಗಳನ್ನು ಪಡೆಯುವಲ್ಲಿ ಕುಂಟಿತವಾಗಬಹುದು.

* ಅಂತರಾಳದ ಭಾವನೆಗಳನ್ನು ನಿಭಾಯಿಸುವಲ್ಲಿ ವಿಫಲರಾದರೆ ಒತ್ತಡಗಳನ್ನು ನಿಭಾಯಿಸುವಲ್ಲಿ ವಿಫಲರಾದಂತೆ ಇದರಿಂದ ಅನೇಕ ದೈಹಿಕ ಸಮಸ್ಯೆಗಳು ಎದುರಾಗಬಹುದು.

* ಭಾವನಾತ್ಮಕ ಬುದ್ಧಿವಂತಿಕೆಯ ಕೊರತೆಯಿಂದ ಮಾನಸಿಕ ಆರೋಗ್ಯದಲ್ಲಿ ಏರುಪೇರು, ಖಿನ್ನತೆ, ಬಲವಾದ ಸಂಬಂಧಗಳ ನಿರ್ವಹಣೆಯಲ್ಲಿ ಕೊರತೆ, ಒಂಟಿತನದ ಭಾವ ಕಾಡಬಹುದು.

* ಬೇರೆಯವರ ಭಾವನೆಗಳಿಗೆ ಬೆಲೆ ಕೊಡುವ ಪ್ರವೃತ್ತಿ ಹಾಗೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಏರುಪೇರಾಗಬಹುದು.

* ಸಮಾಜದಲ್ಲಿನ ಸಮಾನಮನಸ್ಕರನ್ನು ಗುರುತಿಸುವ, ಸ್ನೇಹಿತರನ್ನು ಪಡೆಯುವ ಕಲೆಯಲ್ಲಿ ವಿಫಲರಾಗಬಹುದು.

ಭಾವನಾತ್ಮಕ ಬುದ್ಧಿವಂತಿಕೆಯನ್ನು ವೃದ್ಧಿಪಡಿಸಿಕೊಳ್ಳಲು ಮಾಡಬಹುದಾದದ್ದೇನು ?

* ನಮ್ಮನ್ನು ಹಾಗೂ ನಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದನ್ನು ಕಲಿಯಬೇಕು.

* ಆಂತರಿಕ ಒತ್ತಡಗಳನ್ನು ನಾವು ಯೋಚಿಸುವ ದೃಷ್ಠಿಕೋನವನ್ನು ಬದಲಾಯಿಸುವುದರಿಂದ ನಿಭಾಯಿಸಬಹುದು.

* ಆಂತರಿಕ ಭಾವನೆಗಳು ನಮ್ಮ ಬಾಲ್ಯ, ನಮ್ಮ ಅನುಭವಗಳು, ನಮ್ಮ ಪಾಲನೆ, ನಮ್ಮ ಬಾಲ್ಯದ ಭಾವನೆಗಳಿಗೆ ಸಿಕ್ಕ ಬೆಲೆ, ಬಾಲ್ಯದಲ್ಲಿ ಅನುಭವಿಸಿದಂತಹ ಕೋಪ, ದುಃಖ, ಸಂತೋಷ, ಅನಿಶ್ಚಿತತೆಯ ಮೇಲೆ ಆಧಾರವಾಗಿರುವುದರಿಂದ ಹಿಂದಿನ ಜೀವನದ ಸನ್ನಿವೇಶಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವುದು ಮುಖ್ಯ.

* ಜೀವನದಲ್ಲಿ ಬರುವ ಸನ್ನಿವೇಶಗಳನ್ನು ಎದುರಿಸುವಾಗ ಸಾವಧಾನತೆ, ಅನುಭೂತಿ, ಸಕಾರಾತ್ಮಕ ಆಲೋಚನೆಗಳ ಅವಶ್ಯಕತೆಯಿರುತ್ತದೆ.

* ಪೋಷಕರು ಮಕ್ಕಳ ಬೆಳವಣಿಗೆಗೆ ಹಾಗೂ ಯಶಸ್ವಿ ಜೀವನಕ್ಕೆ ಶಿಕ್ಷಣದೊಂದಿಗೆ ಭಾವನಾತ್ಮಕ ಪಾಲನೆಯ ಅವಶ್ಯಕತೆಯನ್ನು ಅರಿಯಬೇಕು.

* ಸಾಮಾಜಿಕ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಭಾವನಾತ್ಮಕ ಅಂಶಕ್ಕೆ ಒತ್ತು ನೀಡುವಂತಿರಬೇಕು.

* ಪೋಷಕರಾದ ನಾವು ಎಳೆಯ ಮನಸ್ಸುಗಳ ಶೈಕ್ಷಣಿಕ ಪ್ರಾಧಾನ್ಯತೆಯ ಜೊತೆಗೆ ಭಾವನೆಗಳನ್ನು ನಿಭಾಯಿಸುವ ಬುದ್ಧಿವಂತಿಕೆಗೆ ಹೆಚ್ಚು ಒತ್ತು ನೀಡುವುದರಿಂದ ಆರೋಗ್ಯಕರ ಸಮಾಜದ ಜೊತೆಗೆ ಯಶಸ್ವಿ ಜೀವನಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

ಲೇಖಕಿ: ಹಿರಿಯ ದಂತ ಆರೋಗ್ಯ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು