ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ–ಕುಶಲ | ಕೋಪ, ಪ್ರೀತಿಗಳ ಸೆಳೆತ

Published 4 ಜೂನ್ 2024, 0:30 IST
Last Updated 4 ಜೂನ್ 2024, 0:30 IST
ಅಕ್ಷರ ಗಾತ್ರ

ನಾವೆಲ್ಲರೂ ಪ್ರೀತಿಗೆ, ಬಾಂಧವ್ಯಕ್ಕೆ ಹಂಬಲಿಸುವವರೇ; ಪ್ರೀತಿಯಿಲ್ಲದೆ ಬದುಕಿನಲ್ಲೇನೂ ಸ್ವಾರಸ್ಯವೇ ಇಲ್ಲ. ನಮ್ಮೆಲ್ಲಾ ಕ್ರಿಯೆಗಳೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರೀತಿಯನ್ನು ಪಡೆಯುವುದು ಅಥವಾ ಪ್ರೀತಿಯನ್ನು ಕೊಡುವುದು ಎನ್ನುವುದರ ಸುತ್ತಲೇ ನಡೆಯುತ್ತಿರುತ್ತದೆ. ಪ್ರೀತಿಯೆನ್ನುವ ಮಿಂಚು, ಸೆಳೆತ, ಮಾಂತ್ರಿಕತೆ, ಸಾರ್ಥಕತೆ ನಮ್ಮ ಕಣ್ಮುಂದೆ ಸುಳಿಯದಿದ್ದರೆ ನಾವು ಜೀವಂತಶವದಂತೆ ಬದುಕನ್ನು ಸಾಗಿಸುತ್ತೇವೆ. ಪ್ರೀತಿಯೆನ್ನುವುದನ್ನು ಅಭಿವ್ಯಕ್ತಿಸಲು ಕಲಿಯುವುದಕ್ಕೆ, ಅದರ ಜಟಿಲತೆಯನ್ನು, ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಒಂದಿಡೀ ಜನ್ಮವೇ ಸಾಲದೇನೋ!

ನಮಗೆ ಉಸಿರಿನಷ್ಟು ಅವಶ್ಯಕವಾದ ಪ್ರೀತಿಯನ್ನು ಕೊಡುವುದೂ, ಪಡೆಯುವುದೂ ಸುಲಭವಲ್ಲ. ‘ನನ್ನನ್ನು ಯಾರು ಪ್ರೀತಿಸುತ್ತಾರೆ?’ ‘ಯಾರೂ ಇಲ್ಲ’ ಎನ್ನುವ ಭಾವದಲ್ಲಿ ಮುಳುಗಿರುವವರನ್ನು ನಾವೆಷ್ಟೇ ಪ್ರೀತಿಸಿದರೂ ಅವರು ಅದನ್ನು ಕಾಣದೇ ಹೋಗಬಹುದು; ಹಾಗೆಯೇ ‘ನಿನ್ನನ್ನು ಪ್ರೀತಿಸುವುದು ಕಷ್ಟ, you are unlovable’ ಎನ್ನುವ ಸಂದೇಶವನ್ನೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಒಬ್ಬರಿಗೊಬ್ಬರು ರವಾನಿಸುತ್ತಲೇ ಇರುತ್ತೇವೆ ಕೂಡ.

ಪ್ರೀತಿಯೆನ್ನುವುದು ಮನುಷ್ಯ ಬದುಕಿನ ಮೂಲ ಸಂಘರ್ಷ; ಪ್ರೀತಿಯಿಲ್ಲದ ಸ್ಥಿತಿಯನ್ನು ಗ್ರಹಿಸಿ ಅದನ್ನು ಒಪ್ಪಲಾರದೇ ಅದಕ್ಕೆ ಪ್ರತಿಕ್ರಿಯಾತ್ಮಕವಾಗಿ ತಿರುಗಿ ಬೀಳುವುದೇ ಕೋಪ ಎನಿಸಿಕೊಳ್ಳುತ್ತದೆ. ಪ್ರೀತಿಗೂ ಕೋಪಕ್ಕೂ ಒಂದು ಬಗೆಯ ವಿಲೋಮ ಸಂಬಂಧವಿದೆ (Inverse relationship). ಹಾಗಾಗಿ ಕೋಪಕ್ಕೆ ಪ್ರೀತಿಯೇ ಅತ್ಯುತ್ತಮ ಸಮಾಧಾನ ಎಂದರೆ ತಪ್ಪಾಗಲಾರದು. ಪ್ರೀತಿಗೆ ನಾನಾ ರೀತಿಗಳು, ಹತ್ತಾರು ಬಣ್ಣಗಳು, ನೂರಾರು ರೂಪಗಳು; ನಮ್ಮ ಭಾವನಾತ್ಮಕ ಅವಶ್ಯಕತೆಗಳೆಲ್ಲವೂ ಪ್ರೀತಿಯ ಹಲವಾರು ಮುಖಗಳೇ ಹೌದು. ಯಾವುವು ನಮ್ಮ ಭಾವನಾತ್ಮಕ ಅವಶ್ಯಕತೆಗಳು?

ಸಹಾನುಭೂತಿ, ಭದ್ರತೆಯ ಭಾವ, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಇರುವ ಸುರಕ್ಷಿತ ನೆಲೆ, ಯಾವುದೇ ಶರತ್ತುಗಳಿರದೆ ನಮ್ಮನ್ನು ಸ್ವೀಕರಿಸುವ ಆತ್ಮೀಯರು, ನಮ್ಮತನವನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲ ಅದನ್ನು ಸಂಭ್ರಮಿಸುವ, ನಮ್ಮ ಕುಂದುಕೊರತೆಗಳನ್ನು ಕಂಡರೂ ನಮ್ಮಿಂದ ದೂರ ಸರಿಯದವರ ಸಾಂಗತ್ಯ - ಹೀಗೆ ಭಾವನಾತ್ಮಕ ಅವಶ್ಯಕತೆಗಳು ಹಲವಾರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಭಾವನೆಗಳು ಪ್ರಶ್ನಾತೀತ. ‘ನಿನಗೇಕೆ ಭಯವಾಗಬೇಕು? ನಿನಗೇಕೆ ದುಃಖವಾಗಬೇಕು?’ ನೀನು ಯಾಕೆ ಹಾಗಿರುವುದು, ಹೀಗಿರುವುದು? ಎಂದು ಟೀಕೆ ಮಾಡುವಂತೆ ಪ್ರಶ್ನಿಸುವುದು ನಮ್ಮ ಭಾವನಾತ್ಮಕ ಅಸ್ಥಿತ್ವಕ್ಕೇ ಕೊಡಲಿಪೆಟ್ಟು ನೀಡಿದಂತಿರುತ್ತದೆ; ಅದನ್ನು ಯಾರೂ ಸಹಿಸರು. ಕ್ರಿಯೆಗಳನ್ನು ವಿಮರ್ಶಿಸಬಹುದು, ಅನುಭೂತಿಗಳನ್ನು, ಭಾವನೆಗಳನ್ನಲ್ಲ. ಹೀಗೆ ನಮ್ಮ ಭಾವನಾಪ್ರಪಂಚಕ್ಕೆ ಸದಾ ಕಡಿವಾಣ ಹಾಕುವವರ ನಡುವಿನಲ್ಲಿದ್ದಾಗ ಕೋಪ ನಮ್ಮಲ್ಲಿ ತುಂಬಿ ತುಳುಕುತ್ತಿರುತ್ತದೆ. ನಮ್ಮ ಭಾವನೆಗಳನ್ನು, ಅನುಭೂತಿಗಳನ್ನು ಯಾವ ಪ್ರಶ್ನೆಗಳೂ ಇಲ್ಲದೆ ಸ್ವೀಕರಿಸಿ ಅದಕ್ಕೆ ಸಹಾನುಭೂತಿಯಿಂದ ಸ್ಪಂದಿಸುವುದೇ ಪ್ರೀತಿಯ ಮುಖ್ಯ ಅಭಿವ್ಯಕ್ತಿ ಎಂದು ಹೇಳಬಹುದೇನೋ. ಪ್ರೀತಿಯ ಈ ಮುಖ ಕಾಣದೇ ಹೋದಾಗ ಸಿಟ್ಟು, ಹತಾಶೆ, ಆಕ್ರೋಶ ನಮ್ಮಲ್ಲಿ ಕುದಿಯುತ್ತಿರುತ್ತದೆ. ‘ಪ್ರೀತಿ ಬೇಕು ಕೊಡು’ ಎಂದು ನೇರವಾಗಿ ಕೇಳುವುದಕ್ಕೆ ಯಾರಿಗೂ ಸಾಧ್ಯವಿಲ್ಲ, ಹಾಗೆ ಅದು ಕೇಳಿ ಪಡೆಯುವಂಥದ್ದೂ ಅಲ್ಲ, ಪ್ರೀತಿ ಎನ್ನುವುದು ‘ಕೊಡು-ತೆಗೆದುಕೋ’ ಎನ್ನುವ ಮಾತಿಗೆ ಅಷ್ಟು ಸುಲಭಕ್ಕೆ ದಕ್ಕದು. ಕೋಪವೂ ಪ್ರೀತಿಗಾಗಿ ಸಲ್ಲಿಸುವ ಅಹವಾಲು ಎಂಬುದನ್ನು ಬುದ್ಧಿಪೂರ್ವಕವಾಗಿಯಷ್ಟೇ ಅಲ್ಲದೆ ಹೃದಯದಿಂದ ಕಾಣುವಂತಾದರೆ ನಮ್ಮ ಸುತ್ತಲಿನ ಅದೆಷ್ಟೋ ಜನರು ಹಿಡಿಪ್ರೀತಿಗಾಗಿ ಹೇಗೆಲ್ಲಾ ಮೊರೆಯಿಡುತ್ತಿದ್ದಾರೆ ಎನ್ನುವುದನ್ನು ಕಾಣುತ್ತೇವೆ; ಕಂಡು ಅದರಿಂದ ಆರ್ದ್ರಗೊಳ್ಳುತ್ತೇವೆ.

ಇಲ್ಲಿಯವರೆಗೂ ಪ್ರೀತಿಯಿಲ್ಲದ ಸ್ಥಿತಿ ಹೇಗೆ ಕೋಪವನ್ನು ಹುಟ್ಟಿಸುತ್ತದೆ ಎಂದು ನೋಡಿದೆವು, ಈಗ ಸದಾ ಎಲ್ಲದಕ್ಕೂ ಕೋಪಗೊಳ್ಳುವವರು ಹೇಗೆ ಪ್ರೀತಿಸುವವರನ್ನು ದೂರ ತಳ್ಳುತ್ತಾರೆ, ಹೇಗೆ ತಮ್ಮವರ ಭಾವನಾತ್ಮಕ ಅವಶ್ಯಕತೆಗಳನ್ನು ನಿರ್ಲಕ್ಷಿಸುತ್ತಾರೆ ಎನ್ನುವುದನ್ನು ನೋಡೋಣ.

ಸದಾ ಕೋಪಗೊಳ್ಳುವವರು ತಮ್ಮ ಬುದ್ಧಿಯನ್ನು, ಆಲೋಚಿಸುವ ಶಕ್ತಿಯನ್ನು ತುಂಬಾ ಸೀಮಿತಗೊಳಿಸಿಕೊಂಡಿರುತ್ತಾರೆ. ಕೋಪವೆನ್ನುವುದನ್ನು ಒಂದು ಭೂಪ್ರದೇಶದಂತೆ ವರ್ಣಿಸುವುದಾದರೆ, ತೀರಾ ಇಕ್ಕಟ್ಟಿನ, ವಿಶಾಲವಾದ ಕಿಟಕಿ ಬಾಗಿಲುಗಳಿಲ್ಲದ ಒಂದು ಆವರಣದ ಸಣ್ಣ ಕಿಂಡಿಯಿಂದ ಹೊರಪ್ರಪಂಚವನ್ನು ನೋಡಿ ಕಂಡಿದ್ದನ್ನೇ ಅದಿರುವುದಕ್ಕಿಂತಾ ದೊಡ್ಡದು ಮಾಡಿ ಅಬ್ಬರಿಸುವುದು. ನಾವು ಭಯಗ್ರಸ್ತರು ಮತ್ತು ಅಭದ್ರತೆಯಿಂದ ನರಳುವವರೂ ಆಗಿರುತ್ತೇವೆ.

ಮನುಷ್ಯರಾದ ನಾವ್ಯಾರೂ ನಮ್ಮ ಕಷ್ಟಗಳನ್ನೆಲ್ಲಾ ಒಬ್ಬಂಟಿಯಾಗೇ ಸಹಿಸಲಾರೆವು; ಸಹಿಸಬೇಕಾದ್ದಿಲ್ಲ ಕೂಡ. ಆತ್ಮೀಯರ ನೆರವು ಸಮಾಧಾನ ನಮಗೆ ಸಹಜವಾಗೇ ಸಿಗಬೇಕಾದ್ದು; ಅದು ನಮ್ಮ ಹಕ್ಕು ಎಂದರೂ ಅತಿಶಯೋಕ್ತಿಯಲ್ಲ. ಎಲ್ಲದಕ್ಕೂ ಕೋಪದಿಂದಲೇ ಪ್ರತಿಕ್ರಿಯಿಸುವವರಿಂದ ನಮಗೆ ಇಂತಹ ಸಮಾಧಾನ ದೊರೆಯಲಾರದು. ಉದಾಹರಣೆಗೆ, ತಾನು ಪ್ರೀತಿಸಿದವನು ಎಲ್ಲಿ ತನ್ನಿಂದ ದೂರವಾಗುತ್ತಾನೋ ಎಂದು ಆತಂಕ ಪಡುವ ಅವಳು ತನ್ನ ಭಯವನ್ನು ತೋಡಿಕೊಂಡಾಗ ‘ನಿನ್ನ ಭಯ ಸದಾ ಇದ್ದಿದ್ದೇ’, ‘ನಿನ್ನನ್ನು ಸಮಾಧಾನಿಸಲು ನನ್ನಿಂದ ಸಾಧ್ಯವಿಲ್ಲ’, ‘ನಿನಗೇಕೆ ಇಷ್ಟೊಂದು ಅನುಮಾನವೋ; – ಎಂದೆಲ್ಲಾ ಕೂಗಾಡಿ ದೂರ ಸರಿಯುವ ಅವನು - ಇಂಥ ಸಂದರ್ಭಗಳನ್ನು ನಾವೆಲ್ಲಾ ಕಂಡಿರುತ್ತೇವೆ ಅಥವಾ ಅನುಭವಿಸಿರುತ್ತೇವೆ. ಹಾಗೆ ಪ್ರೀತಿಗೆ ಹಂಬಲಿಸುತ್ತಾ ಬಾಂಧವ್ಯದ ಬಗ್ಗೆ ಆತಂಕ ಹೊಂದಿರುವವರು ಮತ್ತು ಬಾಂಧವ್ಯಕ್ಕೆ ಕೋಪದಿಂದ ಪ್ರತಿಕ್ರಿಯಿಸುತ್ತಾ ಪ್ರೀತಿಯನ್ನು ನಿರಾಕರಿಸುವವರು ಅದು ಹೇಗೋ ಸದಾ ಒಟ್ಟಾಗುವುದೂ ಬದುಕಿನ ಬಲುದೊಡ್ಡ ಸೋಜಿಗವೂ ಹೌದು ಮತ್ತು ಪ್ರೀತಿ ಅದೆಷ್ಟು ದುರ್ಲಭ ಎನ್ನುವುದರ ಸೂಚಕವೂ ಹೌದು.

ಕೋಪಗೊಂಡವರೊಡನೆ ಸಂವಹನ ಕಷ್ಟವೆನ್ನುವುದೇ ಕೋಪದ ಮುಖ್ಯ ಸಮಸ್ಯೆಯಲ್ಲ. ಕೋಪಿಷ್ಠರು ಜೊತೆಗಿರುವವರ ಆಂತರ್ಯವನ್ನು ಕಾಣಲಾರರು; ಕೋಪ ಅವರನ್ನು ಹಾಗೆ ಬಂಧಿಸಿಟ್ಟಿರುತ್ತದೆ. ಕೋಪಗೊಂಡಾಗ ನಾವು ಎಲ್ಲವನ್ನೂ ‘ಅಪಾಯಕಾರಿ’ / ‘threat’ ಎಂದೇ ಎಣಿಸುವೆವು; ಎಲ್ಲರನ್ನೂ ಅಪಾರ್ಥಮಾಡಿಕೊಳ್ಳುವೆವು. ಯಾವುದೋ ಯುದ್ಧದಲ್ಲಿ ಹೋರಾಡುವವರಂತೆ ಎಲ್ಲರ ಮೇಲೆರಗಲು ತೊಡಗುವೆವು. ಕಾಡುಪ್ರಾಣಿಯೊಂದು ಶತ್ರುವಿನೊಡನೆ ಸೆಣೆಸಾಡುವಂತೆ ಆಡುವ ನಾವು, ನಮ್ಮಿಂದ ಪ್ರೀತಿಯನ್ನು ಅಪೇಕ್ಷಿಸುವವರಿಗೆ ಏನು ತಾನೇ ಕೊಡಲು ಸಾಧ್ಯ?

ಕೋಪ ಮನುಷ್ಯನಿಗೆ ಮಾಡುವ ದೊಡ್ಡ ಸಹಾಯವೇ ಅದು; ಅಪಾಯವನ್ನು ಗ್ರಹಿಸಿ ಹೋರಾಡುವ ಕಿಚ್ಚು ತುಂಬಿಸುವುದು. ಆದರೆ ಅಪಾಯವಿಲ್ಲದ ಕಡೆಯೂ ಅಪಾಯವನ್ನು ಗ್ರಹಿಸಿದಾಗಲೇ ಸಮಸ್ಯೆ ಉದ್ಭವವಾಗುವುದು. ಕೋಪಿಸಿಕೊಳ್ಳುವವರು ಹೀಗೆ ಎಲ್ಲರನ್ನೂ ತಮ್ಮ ಶತ್ರುವೆಂಬಂತೆ ನೋಡುವುದೇ ಅವರಿಗೆ ಆತ್ಮೀಯರಾಗಲು ಬಯಸುವವರಿಗೆ ಇರುವ ದೊಡ್ಡ ತೊಡಕು.

ಆದರೆ ಕೋಪ ಯಾವಾಗಲೂ ಅನರ್ಥಕಾರಿಯಲ್ಲ. ಕೋಪಗೊಂಡು ಹೋರಾಡುವುದನ್ನೇ ಬದುಕಿನ ರೀತಿಯಾಗಿಸಿಕೊಂಡವರಿಗೆ ಕೋಪವನ್ನು ಸಮಯೋಚಿತವಾಗಿ ಬಳಸಲು ಬರುವುದಿಲ್ಲ. ಬೇರೆ ಎಲ್ಲಾ ಸಮಯದಲ್ಲೂ ಶಾಂತವಾಗಿರುವವರಿಗಷ್ಟೇ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಕೋಪಗೊಳ್ಳುವುದು ಸಾಧ್ಯ. ‘ಎಲ್ಲರೂ ನನ್ನ ಅಸ್ತಿತ್ವಕ್ಕೇ ಮಾರಕ’ ಎಂಬಂತಾಡುವವರ ಕೋಪಕ್ಕೂ ಅನ್ಯಾಯವನ್ನೆದುರಿಸಲು ಕೋಪವನ್ನು ಇಂಧನವನ್ನಾಗಿಸುವವರ ಕೋಪಕ್ಕೂ ವ್ಯತ್ಯಾಸವಿದೆ. ಕೋಪದ ಕಣ್ಣುಗಳಿಂದಲೇ ಸದಾ ಬದುಕನ್ನು ನೋಡುವವರು ಆರ್ಭಟಿಸುವುದಕ್ಕೇ ತಮ್ಮ ಶಕ್ತಿಯನ್ನೆಲ್ಲಾ ವ್ಯಯಿಸುತ್ತಾರೆ. ಕೋಪವನ್ನು ರಚನಾತ್ಮಕವಾಗಿ ಬಳಸುವವರು ನಿಷ್ಕ್ರಿಯತೆಯನ್ನೋಡಿಸಿ ಕಾರ್ಯತತ್ಪರರಾಗಲು ಕೋಪವನ್ನು ದಾರಿದೀಪದಂತೆ ಬಳಸುತ್ತಾರೆ.

ಕೋಪವೆನ್ನುವುದು ಹೀಗೆ ನಮ್ಮ ಮೂಲಭೂತ ಬಿಕ್ಕಟ್ಟಾದ ಪ್ರೀತಿಗೆ ಸಂಬಂಧಿಸಿರುವುದರಿಂದಲೇ ‘ಕೋಪವನ್ನು ನಿಯಂತ್ರಿಸುವುದು ಹೇಗೆ’ ಎನ್ನುವಂತಹ ಸಲಹೆಗಳಿಂದ ದೀರ್ಘಕಾಲಿಕ ಪ್ರಯೋಜನವಾಗದು. ಬಾಂಧವ್ಯದ ಭಾವನಾತ್ಮಕ ಅವಶ್ಯಕತೆಗಳ ಬಗೆಗೆ ನಮ್ಮ ನಿಲುವುಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸುವುದರಿಂದ ಮಾತ್ರ ನಮ್ಮ ಕೋಪದ ನಿಜವಾದ ಸ್ವರೂಪವನ್ನು ಅರಿಯಬಲ್ಲೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT