ಭಾನುವಾರ, ಆಗಸ್ಟ್ 14, 2022
23 °C

ಕೊರೊನಾ ಒಂದಿಷ್ಟು ತಿಳಿಯೋಣ: ಸ್ಥೂಲಕಾಯದ ಮಕ್ಕಳಿಗೆ ಅಪಾಯ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಸೋಂಕಿನ ಅಪಾಯ ಶೇ 8.5ರಷ್ಟು. ವಯಸ್ಕರಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಇದಲ್ಲದೆ ಮಕ್ಕಳಲ್ಲಿ ಸೋಂಕು ಸೌಮ್ಯವಾಗಿರುತ್ತದೆ ಅಥವಾ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.

ಆದರೆ ಕೆಲವು ಸಲ ಅಪರೂಪಕ್ಕೆ ಅಥವಾ ಈಗಾಗಲೇ ಮಧುಮೇಹ, ಆಸ್ತಮಾ, ದೀರ್ಘಕಾಲದ ಉಸಿರಾಟದ ತೊಂದರೆ  ಸಮಸ್ಯೆಗಳು ಅಥವಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ ಸೋಂಕಿನ ಅಪಾಯ ಹೆಚ್ಚು ಎನ್ನುತ್ತಾರೆ ಬೆಂಗಳೂರಿನ ಮಕ್ಕಳ ತಜ್ಞ ಡಾ. ಎಂ.ಡಿ.ಸೂರ್ಯಕಾಂತ.

ಇವುಗಳಿಗಿಂತ ಕಳವಳಕಾರಿ ಸಂಗತಿ ಎಂದರೆ ಸ್ಥೂಲಕಾಯದಿಂದ ಮಕ್ಕಳಲ್ಲಿ ಕೊರೊನಾ ಹೆಚ್ಚುತ್ತಿರುವುದು. ನ್ಯೂಯಾರ್ಕ್ ನಗರದ ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕು ತಗಲಿದ 50 ಮಕ್ಕಳಲ್ಲಿ ಶೇ 22ರಷ್ಟು ಮಕ್ಕಳು ಅತಿಯಾದ ತೂಕ ಹೊಂದಿದ್ದರು. ವೆಂಟಿಲೇಟರ್ ಚಿಕಿತ್ಸೆಯಲ್ಲಿದ್ದ ಒಂಬತ್ತು ಮಕ್ಕಳಲ್ಲಿ, ಆರು ಮಕ್ಕಳಿಗೆ ಬೊಜ್ಜು ಇರುವುದು ಕಂಡು ಬಂದಿದೆ.

ಈಗಾಗಲೇ ಮಕ್ಕಳ ಬೊಜ್ಜಿನ ಭಾರ ಆತಂಕಕಾರಿಯಾಗಿದ್ದು, ಬೊಜ್ಜಿನಲ್ಲಿ ಭಾರತದ ಮಕ್ಕಳು ವಿಶ್ವದಲ್ಲಿಯೇ ಎರಡನೇ ಸ್ಥಾನ ತಲುಪುವ ಅಪಾಯದಲ್ಲಿದ್ದಾರೆ. ಕೊರೊನಾ ಲಾಕ್‌ಡೌನ್ ಮತ್ತು ಶಾಲೆಗೆ ರಜೆಯಿರುವುದರಿಂದ ಆಟ– ಪಾಠ, ದೈಹಿಕ ಶಿಕ್ಷಣ ತರಗತಿಗಳಿಲ್ಲ. ಮಕ್ಕಳು ಮನೆಯಲ್ಲಿ ಬಂಧಿಯಂತಾಗಿದ್ದು ಅತಿಯಾದ ನಿದ್ದೆ, 5–6 ಗಂಟೆ ಟಿವಿ/ ಮೊಬೈಲ್ ವೀಕ್ಷಣೆ, ಅನಾವಶ್ಯಕ ಮತ್ತು ಜಂಕ್ ಆಹಾರ ಸೇವಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಬೊಜ್ಜಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಡಾ. ಸೂರ್ಯಕಾಂತ.

ಮಕ್ಕಳ ತೂಕದ ಬಗ್ಗೆ ಹೆತ್ತವರ ನಿಗಾ ಅವಶ್ಯ. ತೂಕ ಮಾಪಕ- ಬಿ.ಎಂ.ಐ. (ಬಾಡಿ ಮಾಸ್ ಇಂಡೆಕ್ಸ್) ಗಮನಿಸಿ. ಹೆಚ್ಚು ತೂಕ ಎಂಬ ಸಂಶಯ ಬಂದರೆ ಮಗುವಿನ ಆರೋಗ್ಯ ತಪಾಸಣೆ ಮಾಡಿಸಿ.

* ಮಕ್ಕಳು ನಿತ್ಯ ಸರಾಸರಿ ಒಂದು ಗಂಟೆ ಸ್ಕಿಪಿಂಗ್, ಸ್ಕೇಟಿಂಗ್, ನೃತ್ಯ, ಯೋಗ, ಏರೋಬಿಕ್ಸ್‌ಗಳಂತಹ ಒಳಾಂಗಣ ವ್ಯಾಯಾಮ ಮಾಡಲಿ.

* ಲಿಫ್ಟ್ ಬದಲಾಗಿ ಮೆಟ್ಟಿಲು ಬಳಸಲಿ. ಟಿವಿ/ ಕಂಪೂಟರ್/ ವಿಡಿಯೋ ಬಳಕೆ ಎರಡು ಗಂಟೆ ಮೀರದಿರಲಿ.

* ಹೆತ್ತವರು ವ್ಯಾಯಾಮ ಆರಂಭಿಸಿ ಮಕ್ಕಳಿಗೆ ಮಾದರಿಯಾಗಲಿ.

* ತಟ್ಟೆಯಲ್ಲಿ ಬಡಿಸಿದ ಎಲ್ಲವನ್ನೂ ತಿನ್ನು ಎಂಬ ಒತ್ತಾಯ ಬೇಡ.

* ಶಾಲೆ ಪುನರಾರಂಭಿಸಿದಾಗ ಬೊಜ್ಜು ಇರುವ ಮಕ್ಕಳನ್ನು ಶಾಲೆಗೆ ಕಳಿಸುವ ಮುಂಚೆ ವೈದ್ಯರ ಸಲಹೆ ಪಡೆಯಿರಿ.

* ಫ್ಲೂ ವಾಕ್ಸಿನ್, ಎಂ.ಎಂ.ಆರ್, ಬಿ.ಸಿ.ಜಿ. ಲಸಿಕೆ ಕೊಡಿಸಿ. ಒಂದು ಮೂಲದ ಪ್ರಕಾರ ಈ ಲಸಿಕೆಗಳಿಂದ ಕೊರೊನಾ ತಡೆ ಸಾಧ್ಯ.

* ಕೊರೊನಾ ಲಸಿಕೆ ಕೊಡಿಸುವಾಗ ಬೊಜ್ಜಿರುವ ಮಕ್ಕಳಿಗೆ ಆದ್ಯತೆ ನೀಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು