ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆನ್ನುನೋವೆ? ವಿಟಮಿನ್ ‘ಡಿ’ ಕೊರತೆ ಇರಬಹುದು

Published : 20 ಸೆಪ್ಟೆಂಬರ್ 2021, 21:00 IST
ಫಾಲೋ ಮಾಡಿ
Comments

ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಎಲ್ಲ ಕೆಲಸಗಳನ್ನೂ ಮನೆಯಿಂದಲೇ ಮಾಡುವುದು ಸುಲಭಸಾಧ್ಯವಾಗಿದೆ. ಮೊದಲಿನಂತೆ ಅಗತ್ಯ ಸಾಮಾನು-ಸರಂಜಾಮುಗಳನ್ನು ತರಲು ಅಂಗಡಿಗಳಿಗೇ ಹೋಗಬೇಕೆಂದೇನಿಲ್ಲ, ಮನೆಯಿಂದಲೇ ಆನ್‍ಲೈನ್‍ನಲ್ಲಿ ಆದೇಶ ಮಾಡಿದರೆ ಸರಿ, ವಸ್ತುಗಳು ಮನೆಯನ್ನು ತಲುಪುತ್ತವೆ. ವಿದ್ಯುಚ್ಛಕ್ತಿ, ದೂರವಾಣಿ ಮೊದಲಾದುವುಗಳ ಹಣ ಪಾವತಿಸುವುದೂ ಮನೆಯಿಂದಲೇ ಸಾಧ್ಯವಾಗಿದೆ. ಹಣವನ್ನು ತರಲು ಬ್ಯಾಂಕಿಗೇ ಹೋಗಬೇಕಾಗಿಲ್ಲ; ಮೊಬೈಲ್‍ನಲ್ಲಿ ಲಭ್ಯವಿರುವ ವಿವಿಧ ಆ್ಯಪ್‍ಗಳ ಮೂಲಕ ಹಣಕಾಸಿನ ವ್ಯವಹಾರವೂ ಮನೆಯಿಂದ ಹೊರಗೆ ಕಾಲಿಡದೆಯೇ ಸಲೀಸಾಗಿದೆ. ಹಿಂದಿನ ದಿನಗಳಂತೆ ಸಿನಿಮಾ ನೋಡಲೂ ಥಿಯೇಟರ್‌ಗಳತ್ತ ಹೆಜ್ಜೆ ಹಾಕಬೇಕಾಗಿಲ್ಲ. ಮನೆಯಲ್ಲಿಯೇ ಅಂತರ್ಜಾಲದ ನೆರವಿನಿಂದ ಮೊಬೈಲ್, ಟ್ಯಾಬ್ ಅಥವಾ ಟಿವಿಯಲ್ಲಿ ನಾವು ಇಷ್ಟ ಪಡುವ ಸಿನಿಮಾ ನೋಡುವ ಖುಷಿಯಲ್ಲಿ ನಾವಿದ್ದೇವೆ. ಇದೀಗ ಕೋವಿಡ್‍ನಿಂದಾಗಿ ಬಹುತೇಕ ಎಲ್ಲಾ ಕ್ಷೇತ್ರದವರೂ ಆಫೀಸ್‌ ಕೆಲಸಗಳನ್ನು ಮನೆಯಿಂದಲೇ ಮಾಡಲು ಶುರು ಮಾಡಿ ವರ್ಷಗಳೇ ಕಳೆದಿವೆ. ಶಾಲಾಕಾಲೇಜುಗಳೂ ಸುಮಾರು ಒಂದೂವರೆ ವರ್ಷಗಳ ಕಾಲ ಆನ್‍ಲೈನ್‍ನ ಮೂಲಕ ಮನೆಯಲ್ಲಿಯೇ ನಡೆದಿದೆ. ಒಟ್ಟಾರೆ, ಬರುಬರುತ್ತಾ ವ್ಯಕ್ತಿ ಮನೆಯಿಂದ ಹೊರ ಹೋಗುವುದು ಮತ್ತು ಸೂರ್ಯನ ಬಿಸಿಲಿಗೆ ದೇಹವನ್ನು ಒಡ್ಡುವುದು ಕಡಿಮೆಯಾಗುತ್ತಿದೆ. ಇನ್ನು ಕೆಲವರಂತೂ ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸನ್‍ಸ್ಕ್ರೀನ್ ಔಷಧಗಳನ್ನು ಮುಖ-ಕೈ-ಕಾಲುಗಳಿಗೆ ಲೇಪಿಸಿಕೊಂಡೇ ಹೊರಗೆ ಕಾಲಿಡುತ್ತಾರೆ. ಇದೆಲ್ಲದರ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ‘ಡಿ’ ಜೀವಸತ್ವದ ಕೊರತೆಯು ಜನಸಾಮಾನ್ಯರನ್ನು ಹೆಚ್ಚು ಹೆಚ್ಚು ಬಾಧಿಸುತ್ತಿದೆ.

ವಿಟಮಿನ್ ಅಥವಾ ಜೀವಸತ್ವಗಳು ಶರೀರದ ವಿವಿಧ ಚಯಾಪಚಯ ಕ್ರಿಯೆಗಳಿಗೆ ಅತ್ಯಗತ್ಯ. ತರಕಾರಿ, ಹಣ್ಣು, ಬೇಳೆಕಾಳುಗಳ ಸೇವನೆಯಿಂದ ದೇಹಕ್ಕೆ ಇತರ ಜೀವಸತ್ವಗಳು ದೊರಕುತ್ತವೆ. ಆದರೆ, ಡಿ ಜೀವಸತ್ವವು ನಮ್ಮ ಶರೀರದ ಚರ್ಮದಲ್ಲಿಯೇ ತಯಾರಾಗುವಂತಹದ್ದು. ಆದರೆ ಅದಕ್ಕೆ ಸೂರ್ಯನ ಕಿರಣಗಳು ಅತ್ಯಗತ್ಯ. ಸೂರ್ಯನ ರಶ್ಮಿಯಲ್ಲಿರುವ ‘ಬಿ’ ಬಗೆಯ ಅತಿ ನೇರಳೆಕಿರಣಗಳು ಚರ್ಮದ ಮೇಲೆ ಬಿದ್ದಾಗ, ಚರ್ಮದ ಜೀವಕೋಶಗಳಲ್ಲಿನ 7- ಡಿ ಹೈಡ್ರೋ ಕೊಲೆಸ್ಟೆರಾಲ್ ಎಂಬ ವಸ್ತುವು ‘ಡಿ’ ಜೀವಸತ್ವವಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ರಕ್ತದ ಮೂಲಕ ಯಕೃತ್ತು ಮತ್ತು ಮೂತ್ರಪಿಂಡಗಳಲ್ಲಿ ಪುನಃ ಮಾರ್ಪಾಡಾಗಿ ತನ್ನ ಕಾರ್ಯಕ್ಷಮತೆಯನ್ನು ತೋರುತ್ತದೆ. ಆದ್ದರಿಂದಲೇ, ನಾವು ಸೂರ್ಯನ ಬಿಸಿಲಿಗೆ ತೆರಳದಿದ್ದರೆ ಡಿ ಜೀವಸತ್ವದ ತಯಾರಿಕೆಯಲ್ಲಿ ತೊಡಕುಂಟಾಗುತ್ತದೆ.

ಡಿ ಜೀವಸತ್ವವು ನಮ್ಮ ಶರೀರದ ಹಲವಾರು ಕ್ರಿಯೆಗಳಿಗೆ ಅತ್ಯಗತ್ಯ. ಅವೆಂದರೆ:

l ಶರೀರದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದ ಮಟ್ಟವನ್ನು ಸಾಮಾನ್ಯ ಮಿತಿಯಲ್ಲಿಡಲು ಮತ್ತು ಆ ಮೂಲಕ ಮೂಳೆ-ಸ್ನಾಯು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಲು.

l ಕರುಳುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ರಂಜಕದ ಹೀರಿಕೊಳ್ಳುವಿಕೆಯಲ್ಲಿ.

l ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಸದೃಢಗೊಳಿಸಲು.

l ಮೆದುಳು ಮತ್ತು ನರವ್ಯೂಹ ವ್ಯವಸ್ಥೆಯನ್ನು ರಕ್ಷಿಸಲು.

l ಶರೀರದ ಇನ್‍ಸುಲಿನ್ ಮಟ್ಟವನ್ನು ನಿಯಂತ್ರಿಸಲು.

l ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಗೆ.

l ಮಧುಮೇಹದ ಪರಿಣಾಮಕಾರಿ ನಿರ್ವಹಣೆಗೆ.

l ಕೆಲವು ಬಗೆಯ ಕ್ಯಾನ್ಸರ್ (ದೊಡ್ಡ ಕರುಳು, ಸ್ತನ, ಮೆದೋಜೀರಕ ಗ್ರಂಥಿ, ಪ್ರೋಸ್ಟೇಟ್...) ತಡೆಗಟ್ಟಲು.

ಕೊರತೆಯಾದಾಗ ಕಂಡುಬರುವ ಲಕ್ಷಣಗಳೇನು?

l ಪದೇ ಪದೇ ಸೋಂಕಿಗೆ ಪೀಡಿತರಾಗುವುದು.

l ನಿಶ್ಶಕ್ತಿ, ಆಯಾಸ, ಬಳಲಿಕೆ.

l ಮೂಳೆಗಳಲ್ಲಿ ನೋವು, ಬೆನ್ನುನೋವು

l ಗಾಯಗಳ ವಾಸಿಯಾಗುವಿಕೆಯಲ್ಲಿ ತೊಡಕು

l ಕೂದಲು ಉದುರುವಿಕೆ

l ಖಿನ್ನತೆಯ ಮನಃಸ್ಥಿತಿ

l ಶರೀರ–ಮನಸ್ಸುಗಳಲ್ಲಿ ಲವಲವಿಕೆ ಇಲ್ಲದಿರುವುದು

l ಗರ್ಭಿಣಿಯರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಅವಧಿಪೂರ್ವ ಮಗುವಿನ ಜನನ, ಯೋನಿಯ ಉರಿಯೂತ.

l ಮಕ್ಕಳಲ್ಲಿ ರಕ್ತದೊತ್ತಡ ಹೆಚ್ಚಾಗಬಹುದು. ಅಲರ್ಜಿಗೆ ತುತ್ತಾಗುವ ಅಪಾಯ ಹೆಚ್ಚಾಗಬಹುದು.

l ಸ್ನಾಯುಗಳಲ್ಲಿ ನೋವು.

ಯಾರಲ್ಲಿ ಹೆಚ್ಚು?

l ಸೂರ್ಯನ ಬಿಸಿಲಿಗೆ ದೇಹವನ್ನು ಹೆಚ್ಚಾಗಿ ಒಡ್ಡದಿರುವವರಲ್ಲಿ.

l ಮನೆಯಿಂದ ಹೊರ ಹೋಗುವಾಗ ಸನ್‍ಸ್ಕ್ರೀನ್ ಔಷಧಗಳನ್ನು ಅತಿಯಾಗಿ ಬಳಸುವವರಲ್ಲಿ.

l ಮನೆಯಿಂದ ಹೊರಹೋದಾಗ ದೇಹವನ್ನು ಪೂರ್ತಿಯಾಗಿ ಬಟ್ಟೆಯಿಂದ ಮುಚ್ಚಿಕೊಂಡಿರುವವರಲ್ಲಿ.

l ಎದೆ ಹಾಲುಣಿಸುವ ತಾಯಂದಿರಲ್ಲಿ.

l ಗಾಢ ಬಣ್ಣದ ಚರ್ಮವನ್ನು ಹೊಂದಿರುವವಲ್ಲಿ (ಮೆಲನೋಸೈಟ್ ಜೀವಕೋಶಗಳು ಡಿ ಜೀವಸತ್ವ ತಯಾರಿಕೆಯಲ್ಲಿ ತಡೆಯೊಡ್ಡುವುದರಿಂದ).

ಡಿ ಜೀವಸತ್ವದ ಕೊರತೆಯಿಂದ ಪಾರಾಗಲು ಹೀಗೆ ಮಾಡಿ:

l ಡಿ ಜೀವಸತ್ವದ ತಯಾರಿಕೆಗೆ ಬೆಳಗಿನ ಹನ್ನೊಂದು ಗಂಟೆಯಿಂದ ಮೂರು ಗಂಟೆಯವರೆಗಿನ ಬಿಸಿಲು ಸೂಕ್ತ. ಈ ಸಮಯದಲ್ಲಿ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಸೂರ್ಯನ ಬಿಸಿಲನಲ್ಲಿ ಅಡ್ಡಾಡಿ. ವಾರದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಬಾರಿಯಾದರೂ ಹೀಗೆ ಮಾಡಿ.

l ಡಿ ಜೀವಸತ್ವವನ್ನು ಹೊಂದಿರುವ ಆಹಾರ ಪದಾರ್ಥಗಳಾದ ಮೊಟ್ಟೆ, ಹಾಲು, ಮೊಸರು ಮತ್ತು ಇತರ ಹಾಲಿನ ಉತ್ಪನ್ನಗಳು, ಮೀನು, ಕೆಲವು ಬಗೆಯ ಅಣಬೆಗಳನ್ನು ಆಹಾರದಲ್ಲಿ ಯಥೇಚ್ಛವಾಗಿ ಬಳಸಿ.

ನೆನಪಿಡಿ

ಡಿ ಜೀವಸತ್ವದ ಕೊರತೆಯು ಮಕ್ಕಳಲ್ಲಿ ರಿಕೆಟ್ಸ್ ಮತ್ತು ದೊಡ್ಡವರಲ್ಲಿ ಮೂಳೆಗಳು ಮೆದುವಾಗುವ ಆಸ್ಟಿಯೋಮಲೆಸಿಯಾ ಎಂಬ ಕಾಯಿಲೆಗೆ ಕಾರಣವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT