ಶುಕ್ರವಾರ, ಡಿಸೆಂಬರ್ 3, 2021
24 °C

ಬೇಸರ ಬೇಡ ನೇಸರ ನೋಡ: ಬೇಸರಕ್ಕೆ ಮೂಲ ಕಾರಣ ಏನು?

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಬೇಸರಕ್ಕೆ ಮದ್ದು ಕ್ರಿಯಾಶೀಲತೆ, ಕಾಯಕನಿಷ್ಠೆ. ಅದು ನಮ್ಮದಾಗಲಿ. ಬೇಸರವಾದಾಗ ಕತ್ತೆತ್ತಿ ನೇಸರ ನೋಡೋಣ, ಬದುಕಿಗೆ ಭರವಸೆಗಳನ್ನು, ಉತ್ಸಾಹವನ್ನು ತುಂಬಿಕೊಳ್ಳೋಣ.

ಬದುಕಿನಲ್ಲಿ ಬೇಸರವೂ ಒಂದು ಪ್ರಮುಖ ವಿಷಯ. ಪುಟ್ಟ ಮಗುವಿನಿಂದ ಹಿಡಿದು ವಯೋವೃದ್ಧರಾದಿಯಾಗಿ ಎಲ್ಲರಲ್ಲೂ ಒಂದೊಂದು ಬಗೆಯ ಬೇಸರ. ಶಾಲೆಯಿದ್ದರೆ, ಹೋಗಬೇಕು ಪಾಠ ಕಲಿಯಬೇಕೆಂಬ ಬೇಸರ. ಇರದಿದ್ದರೆ, ಮಿತ್ರರನ್ನು ಭೇಟಿಯಾಗದ, ಜೊತೆಯಾಗಿ ಆಡಿ ಕುಣಿಯದ ಬೇಸರ. ಕಚೇರಿಯಿದ್ದರೆ ಹೋಗಬೇಕು, ಕೆಲಸ ಮಾಡಬೇಕು ಎಂಬ ಬೇಸರ. ರಜೆಯಿದ್ದರೆ ಕೆಲಸವಿರದ ಬೇಸರ.

ಬೇಸರಕ್ಕೆ ಮೂಲ ಕಾರಣ ಏನು? ಅದು ಹೊರಗಿನ ಪ್ರಪಂಚದ ಆಗುಹೋಗುವಿಕೆಗಿಂತ, ಅದರ ಬಗೆಗಿನ ನಮ್ಮ ಪ್ರತಿಕ್ರಿಯೆಯ ಕಾರಣದಿಂದ ಉಂಟಾಗುವ ಮನಃಸ್ಥಿತಿ ಎಂದು ತಿಳಿಯುವವರೆಗೆ ಬೇಸರದ ದೂರು ನಿಲ್ಲದು. ಹಾಗೆಂದ ಮಾತ್ರಕ್ಕೆ ಹೊರಗಿನ ಪರಿಸ್ಥಿತಿಯ ಪರಿಣಾಮ ನಮ್ಮ ಮೇಲೆ ಆಗದಿರಲು ನಾವೇನು ಕಲ್ಲುಬಂಡೆಗಳಲ್ಲ. ಆದರೆ ವಿವೇಚನೆ ಇರದಿದ್ದರೆ ಈ ಬೇಸರ ನಮ್ಮನ್ನು ನುಂಗಿ ನೊಣೆಯುವುದು ಸತ್ಯ.

ರೂಮಿ ಹೇಳುತ್ತಾನೆ: ‘ನಿನ್ನೆದೆಯೊಳಗೊಂದು ಮೇಣದ ಬತ್ತಿಯಿದೆ, ಹೊತ್ತಿಕೊಳ್ಳಲು ಕಾಯುತ್ತಿದೆ, ನಿನ್ನ ಅಂತರಂಗದೊಳಗೊಂದು ಶೂನ್ಯವಿದೆ, ತುಂಬಿಕೊಳ್ಳಲು ಕಾಯುತ್ತಿದೆ. ನಿನಗೆ ಹಾಗೆನಿಸುತ್ತಿದೆ, ಅಲ್ಲವೆ?’ ( There is a candle in your heart, ready to be kindled. There is a void in your soul, ready to be filled. You feel it, don’t you?)

ಇದು ಒಟ್ಟಾರೆ ಬದುಕಿನ ಬೇಸರದ ಮೂಲ. ಅಪೂರ್ಣವಾದಂತೆ ಕಾಣಿಸಿಕೊಳ್ಳುವ ಬದುಕಿನ ಪೂರ್ಣತೆಯತ್ತ ಚಿತ್ತ ಧಾವಿಸುವುದೇ ಬೇಸರದ ಬೀಜ. ತುಂಬಿಕೊಳ್ಳುವ ಹಂಬಲವೇ ನಮ್ಮ ಎಲ್ಲ ಪ್ರಯತ್ನಗಳ ಮೂಲ. ಆದರೆ ಈ ಪೂರ್ಣತೆಯೂ ಕೂಡ ಒಂದು ಪರಿಕಲ್ಪನೆಯಾದ್ದರಿಂದ ಅಧ್ಯಾತ್ಮ ‘ಯಾವುದನ್ನು ಅರಿತರೆ ಎಲ್ಲವನ್ನು ಅರಿತಂತಾಗುತ್ತದೊ, ಅದನ್ನು ಅರಸುವುದೇ ನಿಜವಾದ ವಿದ್ಯೆ’ ಎಂದು ಇದನ್ನು ಮತ್ತಷ್ಟು ವಿಸ್ತರಿಸಿಬಿಡುತ್ತದೆ.

ಯೋಗದ ಪ್ರಕಾರ ಬೇಸರ ಮನಸ್ಸಿನ ಒಂದು ವ್ಯಾಧಿ! ಇರಲಿ, ಅಧ್ಯಾತ್ಮದ ವಿಚಾರಗಳನ್ನು ಬದಿಗಿಟ್ಟು ಪ್ರಸ್ತುತ ಬೇಸರದ ಕಾರಣ-ಪರಿಣಾಮ-ಪರಿಹಾರಗಳನ್ನು ಕುರಿತು ವಿಶ್ಲೇಷಿಸುವಾಗ ವೀರಾಧಿವೀರನಾದ ಅರ್ಜುನನೂ ಯುದ್ಧದ ಆರಂಭದ ಮುನ್ನ ವಿಷಾದದಿಂದ ಕುಸಿದ ಎಂಬುದನ್ನು ನೆನಪು ಮಾಡಿಕೊಳ್ಳೋಣ. ಕೃಷ್ಣನ ಸ್ಥಾನದಲ್ಲಿ ಸಾಮಾನ್ಯ ಸಾರಥಿಯಿದ್ದಿದ್ದರೆ ಅರ್ಜುನನಿಗೆ ಸಮಾಧಾನ ಮಾಡಿ ‘ಹೌದು, ಯುದ್ಧ ಬೇಡ. ಏಕೀ ರಕ್ತಪಾತ? ಪಾಲಿಗೆ ಬಂದದ್ದೇ ಪಂಚಾಮೃತ’ ಎಂದು ಹಿಂದಿರುಗಿ ಕರೆತರುತ್ತಿದ್ದನೋ ಏನೋ? ಆದರೆ ಕೃಷ್ಣ ನುರಿತ ಆಪ್ತಸಲಹೆಗಾರನಂತೆ ಅರ್ಜುನನನ್ನು ಕರ್ಮದ ಫಲ ಮರೆತು ಕ್ರಿಯೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಾನೆ. ಹೌದು, ಇಂದಿಗೂ ಆಧುನಿಕ ಮನಶ್ಶಾಸ್ತ್ರವೂ ಬೇಸರ–ಖಿನ್ನತೆಗಳಿಗೆ ಚಟುವಟಿಕೆಯೇ ಪರಿಹಾರ ಎಂದು ಸಲಹೆ ನೀಡುತ್ತವೆ. ಮನಸ್ಸು ಮತ್ತು ದೇಹ ಸದಾ ಚಟುವಟಿಕೆಗಳಲ್ಲಿ  ಇರಬೇಕು. ಆಗ ಬೇಸರ ಹತ್ತಿರ ಸುಳಿಯದು. ಜೊತೆಗೆ ಬೇಸರವೂ ಸಾಂಕ್ರಾಮಿಕ ಎಂಬುದನ್ನು ಗಮನಿಸಬೇಕು.

ಬೇರೆಯವರ ಅಭಿಪ್ರಾಯಗಳು, ಬೇಸರದ ಆಲೋಚನೆಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಹಾಗೇ ಕರ್ಮವು ಹೇಗೆ ಯೋಗವಾಗುತ್ತದೆ ಎಂಬುದನ್ನು ಗಿಬ್ರಾನ್‌ ಕೂಡ ಸೊಗಸಾಗಿ ತಿಳಿಸುತ್ತಾನೆ: ‘ನಿಮಗೆ ಬದುಕು ಕತ್ತಲೆ ಎಂದೂ ಹೇಳಲಾಗಿದೆ; ನಿಮ್ಮ ದಣಿದ ಮನದಲ್ಲಿ ದಣಿದವರ ಆ ನುಡಿ ಪ್ರತಿಧ್ವನಿಯಾಗಿದೆ. ಹೌದು, ಬದುಕು ಕತ್ತಲೆನಿಸುತ್ತದೆ, ಪ್ರೇರಣೆಯಿಲ್ಲದಾಗ. ಜ್ಞಾನದ ನೆಲೆಯಿಂದ ಹೊಮ್ಮದ ಪ್ರೇರಣೆ ಅಂಧ, ಮತ್ತು ಕಾಯಕದ ಎದುರು ಎಲ್ಲ ಜ್ಞಾನವೂ ವ್ಯರ್ಥ. ಮತ್ತು ಪ್ರೇಮವಿಲ್ಲದ ಎಲ್ಲ ಕಾಯಕವೂ ಶೂನ್ಯ, ನೀನು ನಿಜವಾದ ಪ್ರೇಮದಿಂದ ಕೆಲಸ ಕೈಗೊಂಡಾಗ ಅದು ನಿನ್ನನ್ನು ನಿನ್ನೊಂದಿಗೆ ಜೋಡಿಸುತ್ತದೆ, ಪರಸ್ಪರರನ್ನು ಒಗ್ಗೂಡಿಸುತ್ತದೆ, ಹಾಗೂ ದೇವರೊಂದಿಗೆ ಒಂದಾಗಿಸುತ್ತದೆ… ಕಾಯಕವು ಪ್ರೇಮದ ವ್ಯಕ್ತರೂಪ.’

ಕಗ್ಗದ ಎರಡು ಸೂತ್ರಗಳಲ್ಲಿ ಬೇಸರವನ್ನು ಕುರಿತಂತೆ ತಿಮ್ಮಗುರುವಿನ ಅಭಿಪ್ರಾಯವನ್ನು ಕಾಣಬಹುದು. ಬೇಸರಕ್ಕೆ ಕಾರಣ ಭಿನ್ನತೆ. ತಾನು ಬೇರೆ ಎಂಬ ಭಾವವೇ ಎಲ್ಲ ಒಳತೋಟಿಗಳಿಗೆ ಕಾರಣ. ಆದುದರಿಂದ ತಿಮ್ಮಗುರು ಹೇಳುತ್ತಾರೆ: ‘ಭ್ರಾಮಕದ ಸೃಷ್ಟಿಯಾ ವಿಷಮಲಕ್ಷಣಗಳಲಿ ಸಾಮರಸ್ಯವನರಸೋ’. ಭ್ರಮೆಯ ಈ ಸೃಷ್ಟಿಯ ವಿಪರ್ಯಾಸಗಳಲ್ಲಿ, ಸವಾಲಿನ ಸಂದರ್ಭಗಳಲ್ಲಿ ಸಾಮರಸ್ಯವನ್ನು ಕಾಣು (ಭಿನ್ನತೆಯನ್ನು ಕಾಣಬೇಡ). ಮತ್ತೊಂದು ಸೂತ್ರ: ‘ದುಮ್ಮಾನಪಡುವುದೇಂ ಚಿಮ್ಮುಲ್ಲಸವ ಧರೆಗೆ’. ಬದುಕಿನ ಕಷ್ಟಕೋಟಲೆಗಳಿಂದ ವಿಮುಖನಾಗುವ ಪ್ರಯತ್ನದಲ್ಲಿ ಜನ್ಮ ಸಾಕೆಂದು ಒದ್ದಾಡದೆ, ‘ದುಮ್ಮಾನ(ದುಃಖ)ಪಡದೆ ಉಲ್ಲಾಸವನ್ನು ಹರಡು’ ಎಂಬುದು ಎರಡನೇ ಸೂತ್ರ. ಇವೆರಡಕ್ಕೂ ನಮಗೆ ಶ್ರೇಷ್ಠ ಉದಾಹರಣೆ ಆಕಾಶದ ಸೂರ್ಯ. ಅವನು ಯಾವ ಭಿನ್ನತೆಯನ್ನೂ ತೋರದೆ ಚರಾಚರ ವಸ್ತುಗಳ ಮೇಲೆ ತನ್ನ ಬೆಳಕು ಚೆಲ್ಲುತ್ತಾನೆ. ದಿನವೂ ಉದಯ-ಅಸ್ತಂಗತೆಗಳಲ್ಲಿ ಸಿಲುಕಿದರೂ ಅದು ಏಕತಾನತೆಯ ಕೆಲಸವೆಂದು ಕೊರಗದೆ ತಾನು ನೀಡಬೇಕಾದುದನ್ನು ನೀಡಿ ಸಂಜೆ ಮರೆಯಾಗುತ್ತಾನೆ. ಬೇಸರಕ್ಕೆ ಮದ್ದು ಕ್ರಿಯಾಶೀಲತೆ, ಕಾಯಕನಿಷ್ಠೆ. ಅದು ನಮ್ಮದಾಗಲಿ. ಬೇಸರವಾದಾಗ ಕತ್ತೆತ್ತಿ ನೇಸರ ನೋಡೋಣ, ಬದುಕಿಗೆ ಭರವಸೆಗಳನ್ನು, ಉತ್ಸಾಹವನ್ನು ತುಂಬಿಕೊಳ್ಳೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು