ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳಜಿ | ಮಳೆಗಾಲದ ತರಕಾರಿಗಳು

Published : 3 ಸೆಪ್ಟೆಂಬರ್ 2022, 2:26 IST
ಫಾಲೋ ಮಾಡಿ
Comments

ಮಳೆಗಾಲದಲ್ಲಿ ಶೀತ, ಕೆಮ್ಮು, ವೈರಲ್‌ ಜ್ವರದ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಪದ್ಧತಿಯೂ ಮಳೆಗಾಲಕ್ಕೆ ಪೂರಕವಾಗಿದ್ದರೆ, ಆದಷ್ಟು ಇಂಥ ಬಾಧೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ. ನಾವು ನಿತ್ಯ ಸೇವಿಸುವ ತರಕಾರಿಗಳಲ್ಲಿ ವೈರಾಣುಗಳನ್ನು ನಿಗ್ರಹಿಸುವ ಶಕ್ತಿ ಇದೆ. ಇವುಗಳ ಬಳಕೆ ಹೆಚ್ಚಾದರೆ ವೈರಾಣುಗಳ ದಾಳಿಗೆ ತುತ್ತಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಅಂಥ ಕೆಲವು ತರಕಾರಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದೇ ತರಕಾರಿ ಇರಲಿ; ಅದನ್ನು ಬಳಸುವ ಮುನ್ನ ಚೆನ್ನಾಗಿ ತೊಳೆಯುವುದು ಅಗತ್ಯ. ಎಷ್ಟೋ ಬಾರಿ ಬಳಸುವ ತರಕಾರಿ, ಹಣ್ಣಿನ ಮೂಲಕವೂ ವೈರಾಣುಗಳು ದಾಳಿ ಮಾಡಬಹುದು.

ಬೆಂಡೆಕಾಯಿ: ವಿಟಮಿನ್‌ ಎ ಮತ್ತು ಸಿ, ಕಬ್ಬಿಣ ಹಾಗೂ ಕ್ಯಾಲ್ಶಿಯಂ, ಮ್ಯಾಗ್ನಿಷಿಯಂ ಅಂಶ ಹೇರಳವಾಗಿರುವ ಬೆಂಡೆಕಾಯಿ ವೈರಾಣುವನ್ನು ಹತ್ತಿಕ್ಕುವಲ್ಲಿ ಸಹಕರಿಸುತ್ತದೆ. ಜತೆಗೆ ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಹಾಗಾಗಿ ತಾಜಾ ಬೆಂಡೆಕಾಯಿಯಿಂದ ಗೊಜ್ಜು, ಪಲ್ಯ ಮಾಡಿ ಸವಿಯಬಹುದು.

ಆಲೂಗೆಡ್ಡೆ: ಎಲ್ಲ ಕಡೆಗಳಲ್ಲಿ ಹೇರಳವಾಗಿ ಲಭ್ಯವಿರುವ ತರಕಾರಿ ಇದು. ಭೂಮಿ ಅಡಿಯಲ್ಲಿ ಬೆಳೆಯುವುದರಿಂದ ಇದು ಹೆಚ್ಚು ಸುರಕ್ಷಿತ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿರುತ್ತದೆ. ಇದನ್ನು ಯಾವುದೇ ತರಕಾರಿ ಜತೆ ಬೆರೆಸಿ ಸಾಂಬಾರ್ ಮಾಡಿ ಸವಿಯಬಹುದು.

ಹಾಗಲಕಾಯಿ: ಹಾಗಲ ಹೆಸರು ಕೇಳಿದಾಕ್ಷಣ ಮುಖ ಸಿಂಡರಿಸಿಕೊಳ್ಳಬೇಡಿ. ಬ್ಯಾಕ್ಟೀರಿಯಾ ಹಾಗೂ ವೈರಾಣುಗಳ ಜತೆ ಹೋರಾಡಲು ದೇಹಕ್ಕೆ ಅತ್ಯುತ್ತಮ ರೀತಿಯಲ್ಲಿ ಶಕ್ತಿ ಒದಗಿಸುವ ತರಕಾರಿ ಇದು. ಇದರಲ್ಲಿ ಜಿಂಕ್, ಕಬ್ಬಿಣ, ಪೊಟ್ಯಾಶಿಯಂ ಹಾಗೂ ವಿಟಮಿನ್ ಸಿ ಅಂಶ ಹೇರಳವಾಗಿದೆ. ದೇಹದಲ್ಲಿ ವಿಟಮಿನ್‌ ಸಿ ಪ್ರಮಾಣದ ಸರಿಯಾಗಿದ್ದರೆ ರೋಗದಿಂದ ದೂರ ಉಳಿಯಬಹುದು. ಹಾಗಲಕಾಯಿಯ ಜ್ಯೂಸ್‌ ಆಗಲಿ, ಪಲ್ಯವಾಗಲಿ ರುಚಿಕಟ್ಟಾಗಿ ಮಾಡಿ, ಇದರ ಪ್ರಯೋಜನ ಪಡೆಯಬಹುದು.

ಮೂಲಂಗಿ: ಮೂಲಂಗಿಯ ವಾಸನೆ ಕಂಡರೆ ಹಲವರಿಗೆ ಆಗದು. ಆದರೆ, ಇದರಲ್ಲಿರುವ ಔಷಧೀಯ ಗುಣ ಮಳೆಗಾಲದಲ್ಲಿ ಬರಬಹುದಾದ ಬೇನೆಯನ್ನು ಕಡಿಮೆ ಮಾಡಬಲ್ಲದು. ಮೂಲಂಗಿಯನ್ನು ಮೊಸರು ಜೊತೆ, ಕ್ಯಾರೆಟ್‌ನಂತಹ ತರಕಾರಿ ತುರಿಯೊಂದಿಗೆ ಬೆರೆಸಿ, ಸಲಾಡ್‌ ಮಾಡಿಕೊಂಡು ಸೇವಿಸಬಹುದು. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಹೊಟ್ಟೆನೋವಿಗೆ ಉತ್ತಮ ಮದ್ದು ಇದರಲ್ಲಿದೆ. ವಿಟಮಿನ್ ಸಿ ಅಧಿಕವಾಗಿರುವ ತರಕಾರಿ ಇದು. ಮಲಬದ್ಧತೆ, ಮೂಲವ್ಯಾಧಿಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ತರಕಾರಿ.

ಪಡವಲಕಾಯಿ: ಇದು ನಿಮ್ಮ ಆಹಾರ ಪಟ್ಟಿಯಲ್ಲಿ ಇರಬೇಕಾದ ಮಳೆಗಾಲಕ್ಕೆ ಹೇಳಿ ಮಾಡಿಸಿದ ತರಕಾರಿ. ಹೊಟ್ಟೆ ಕೆಡುವುದು, ಜೀರ್ಣಕ್ರಿಯೆ ಸರಿಯಾಗಿ ಆಗದೇ ಇರುವುದು ಮಳೆಗಾಲದಲ್ಲಿ ಸಾಮಾನ್ಯ. ಇದರಲ್ಲಿ ಅತ್ಯಧಿಕ ನಾರಿನಾಂಶ ಇರುವುದರಿಂದ ಹೊಟ್ಟೆಯ ಕಾರ್ಯವನ್ನು ಸಮಸ್ಥಿತಿಯಲ್ಲಿಡುತ್ತದೆ.

ಸೌತೆಕಾಯಿ: ಸೌತೆಕಾಯಿ ಯಕೃತ್ತಿನ ಆರೋಗ್ಯ ಕಾಪಾಡುವ ತರಕಾರಿ. ಶೀತ, ಕೆಮ್ಮುವಿನಿಂದ ಬಳಲುತ್ತಿದ್ದರೆ ಬಿಸಿ ಬಿಸಿ ಅನ್ನಕ್ಕೆ ಸೌತೆಕಾಯಿ ಹುಳಿ ಬೆರೆಸಿ ತಿನ್ನಿ. ಉರಿಶೀತದಿಂದಾಗುವ ತೊಂದರೆಗಳಿಗೂ ಇದು ಉತ್ತಮ ಪರಿಹಾರ ನೀಡಬಲ್ಲದು.

ಇದರ ಜತೆಗೆ ಶುಂಠಿ, ಬೆಳ್ಳುಳ್ಳಿ, ಪುದೀನಾ ಸೊಪ್ಪು, ಸಂಬಾರು, ಬೇಳೆ ಸೊಪ್ಪು, ಅಮೃತಬಳ್ಳಿಯ ಕಷಾಯ ಸೇವನೆ ಹೆಚ್ಚಿರಲಿ. ಇದು ಶೀತ ಬಾಧೆಯನ್ನು ಉಪಶಮನ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT