ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ–ಕುಶಲ: ವೈರಾಣು ಜ್ವರ, ಹೈರಾಣಾದ ಜನ

–ಡಾ. ಶ್ರೀನಿವಾಸ ಹರಪನಹಳ್ಳಿ
Published : 5 ಆಗಸ್ಟ್ 2024, 21:56 IST
Last Updated : 5 ಆಗಸ್ಟ್ 2024, 21:56 IST
ಫಾಲೋ ಮಾಡಿ
Comments

ಈ ವರ್ಷ ಮುಂಗಾರು ಕಳೆಗಟ್ಟಿದೆ. ಎಲ್ಲಿ ನೋಡಿದರೂ ನದಿ-ತೊರೆಗಳು ಉಕ್ಕೇರಿ ಹರಿಯುತ್ತಿವೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಭೂಮಿ ಈಗ ಹಸಿರಿನಿಂದ ಮೈದುಂಬಿ ಕಂಗೊಳಿಸುತ್ತಿದೆ. ವಾತಾವರಣದಲ್ಲಿನ ಈ ಬದಲಾವಣೆ ಬರಿ ಸಹಜವಷ್ಟೇ ಅಲ್ಲ, ಅನಿವಾರ್ಯ ಕೂಡ. ವರುಣನಾಗಮನ ಕೃಷಿವರ್ಗಕ್ಕೆ ಹುಮ್ಮಸ್ಸನ್ನು ತಂದರೆ ನಗರವಾಸಿಗಳಿಗೆ ರೇಜಿಗೆಯನ್ನುಂಟುಮಾಡುತ್ತಿದೆ. ಬಡಾವಣೆಗಳ ಸಂದಿ-ಗೊಂದಿಗಳಲ್ಲಿ ನೀರು ನಿಂತು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಇರಿಸು-ಮುರಿಸು ಉಂಟುಮಾಡುತ್ತಿದೆ. ಇದರೊಂದಿಗೆ ಮೋಡ ಕವಿದ ವಾತಾವರಣ, ಕುಳಿರ್ಗಾಳಿ ಮತ್ತು ಮನೆಯ ಅಕ್ಕಪಕ್ಕದ ಪ್ರದೇಶಗಳಲ್ಲಿ ನಿಂತ ನೀರು ಜನರಲ್ಲಿ ಅನಾರೋಗ್ಯದ ಭೀತಿಯನ್ನು ತಂದಿದೆ.  

ಈ ಸಂದರ್ಭದಲ್ಲಕಿ ಎಲ್ಲೆಡೆ ಹರಡುತ್ತಿರುವ ವೈರಾಣುಜ್ವರದ ಬಗ್ಗೆ ನಾವು ಜಾಗರೂಕರಾಗಿರುವುದು ಒಳ್ಳೆಯದು. ಪ್ರತಿ ಮಳೆಗಾಲದಲ್ಲೂ ‘ಫ್ಲೂ’ ಎಂಬ ಥಂಡಿ-ಜ್ವರ ಹೆಚ್ಚು ಕಡಿಮೆ ಎಲ್ಲರಲ್ಲೂ ಕಂಡುಬರುವುದು ಸಾಮಾನ್ಯ. ಕೆಮ್ಮು-ನೆಗಡಿ, ಜ್ವರ, ಮೈ-ಕೈ ನೋವುಗಳಂಥ ಲಕ್ಷಣಗಳನ್ನು ಹೊಂದಿರುವ ಈ ಕಾಯಿಲೆ ನಾಲ್ಕಾರು ದಿನಗಳ ನಂತರ ವಾಸಿಯಾಗಿಬಿಡುವ ಅನುಭವ ನಮಗೆಲ್ಲರಿಗೂ ಆಗೇ ಆಗಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ‘ಪ್ಯಾರಾಸಿಟಮೋಲ್’ ಮಾತ್ರೆಗಳಿಂದಲೇ ಈ ಜ್ವರ ಕಡಿಮೆಯಾಗಿಬಿಡುತ್ತದೆ.

ಆದರೆ ಈ ಬಾರಿ ಗಮನಿಸಬೇಕಾದ ಅಂಶವೇನೆಂದರೆ ಬರಿ ಫ್ಲೂ–ಜ್ವರ ಮಾತ್ರವಲ್ಲದೇ ಇನ್ನೂ ಕೆಲವು ರೀತಿಯ ಜ್ವರಗಳು ಜನರನ್ನು ಬಾಧಿಸುತ್ತಿವೆ; ಇವೂ ವೈರಾಣುಗಳಿಂದಲೇ ಹರಡುತ್ತಿವೆ. ಈ  ವೈರಾಣುಜ್ವರಗಳ ರೋಗ-ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿದ್ದು ಫ್ಲೂ–ಜ್ವರವನ್ನೇ ಹೋಲುತ್ತವೆ. ಆದರೆ ಕೆಲವು ಲಕ್ಷಣಗಳು ಫ್ಲೂ–ಜ್ವರಕ್ಕಿಂತ ಭಿನ್ನವಾಗಿದ್ದು ಹೆಚ್ಚು ಅಪಾಯಕಾರಿಯೂ ಆಗಿಬಲ್ಲ ಸಾಧ್ಯತೆಗಳಿವೆ. ಆದ್ದರಿಂದ ಈ ಬೇರೆ ರೀತಿಯ ವೈರಾಣು ಜ್ವರಗಳ ಬಗ್ಗೆ ಕೊಂಚ ತಿಳಿದುಕೊಳ್ಳೋಣ.

ಈಗ ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಹಬ್ಬುತ್ತಿರುವ ಜ್ವರವೆಂದರೆ ಡೆಂಗಿ. ‘ಫ್ಲೇವಿವೈರಸ್’ ಪ್ರಬೇಧದ ಡೆಂಗಿ ವೈರಾಣುಗಳಿಂದ ಬರುವ ಈ ಕಾಯಿಲೆ ನಮಗೆ ‘ಏಡಿಸ್’ ಸೊಳ್ಳೆಗಳ ಮೂಲಕ ಹರಡುತ್ತದೆ. ಫ್ಲೂ–ಜ್ವರದ ರೋಗಲಕ್ಷಣಗಳನ್ನೇ ಹೊಂದಿದ್ದರೂ, ಮೈ-ಕೈ ನೋವು, ಕಣ್ಣುರಿ ಕೊಂಚ ಹೆಚ್ಚೇ ಇರುತ್ತದೆ. ಅಲ್ಲದೇ ಚರ್ಮದ ಮೇಲೆ ಕೆಂಪು ಗುಳ್ಳೆಗಳು ಕಾಣಬಹುದು. ಡೆಂಗಿ ತೀವ್ರವಾದಾಗ ರಕ್ತದಲ್ಲಿನ ‘ಪ್ಲೇಟಲೆಟ್’ಗಳ ಸಂಖ್ಯೆ ಕುಸಿದು ದೇಹದ ಒಳಭಾಗಗಳಲ್ಲಿ, ಒಸಡು, ಕೀಲುಗಳಲ್ಲಿ ರಕ್ತಸ್ರಾವವಾಗಬಹುದು. ರಕ್ತಪರೀಕ್ಷೆಯಲ್ಲಿ ಕೆಲವು ‘ಇಮ್ಮ್ಯೂನೋಗ್ಲೋಬಿನ್’ ಅಂಶಗಳ ಪತ್ತೆ ಮೂಲಕ ಡೆಂಗಿ ಜ್ವರವನ್ನು ಗುರುತಿಸಬಹುದು.

‘ಜೀಕಾ’ ವೈರಾಣು ಕೂಡ ಇತ್ತೀಚಿಗೆ ನಮ್ಮಲ್ಲಿ ಪತ್ತೆಯಾಗಿದೆ. ಪಕ್ಕದ ಕೇರಳದಲ್ಲಿ ಪತ್ತೆಯಾದ ನಂತರ ನಮ್ಮಲ್ಲೂ ಈ ವೈರಾಣು ಜ್ವರ ಹರಡುತ್ತಿದೆ. ಸೌಮ್ಯ ಫ್ಲೂ ಲಕ್ಷಣಗಳನ್ನು ಹೊಂದಿರುವ ಈ ಜ್ವರ ಕೂಡ ಏಡಿಸ್ ಸೊಳ್ಳೆಗಳಿಂದಲೇ ಹರಡುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಈ ಜ್ವರ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಅಂಗನ್ಯೂನತೆ ಕಾಣಬಹುದು. ಜೊತೆಗೆ ಮಿದುಳಿನ ಬೆಳವಣಿಗೆಗೂ ಕುಂದುಂಟಾಗಬಹುದು.

‘ನಿಫಾ’ ವೈರಾಣು ಜ್ವರ ಕೂಡ ಕೇರಳದಲ್ಲಿ ಮೊದಲು ಪತ್ತೆಯಾಗಿ ನಂತರ ಇತರೆಡೆ ಹಬ್ಬುತ್ತಿದೆ. ದೇಶದಲ್ಲೇ ಅತಿಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯ ಕೇರಳ. ಅಲ್ಲದೇ ಇಲ್ಲಿನ ಅನೇಕ ಜನರು ಗಲ್ಫ್ ಮತ್ತಿತರ ದೇಶಗಳಿಗೆ ಕಾರ್ಮಿಕರಾಗಿ ಹೋಗಿ ಬರುವುದರಿಂದ ಬಹುಮಟ್ಟಿನ ರೋಗಗಳು ಕೇರಳದ ಮೂಲಕವೇ ಭಾರತಕ್ಕೆ ಲಗ್ಗೆ ಇಟ್ಟಿವೆ. ಈ ಬಾರಿ ‘ನಿಫಾ’ ಕರ್ನಾಟಕಕ್ಕೂ ಕಾಲಿಟ್ಟಿದೆ. ಮುಖ್ಯವಾಗಿ ಬಾವಲಿ, ಹಂದಿಯಂತಹ ಪ್ರಾಣಿಗಳಿಂದ (ಕೊರೊನ ವೈರಸ್ ಥರ!) ಹಣ್ಣು ಇನ್ನಿತರೇ ಆಹಾರಪದಾರ್ಥಗಳ ಮೂಲಕ ಮಾನವನ ದೇಹವನ್ನು ಪ್ರವೇಶಿಸುತ್ತದೆ. ನಂತರ ಕಫ, ಜೊಲ್ಲಿನಂತಹ ದ್ರವಗಳ ಮೂಲಕ ಇನ್ನಿತರರಿಗೆ ಹಬ್ಬುತ್ತದೆ. ಫ್ಲೂ ಲಕ್ಷಣಗಳ ಜೊತೆ ನ್ಯೂಮೋನಿಯಾ ಮತ್ತು ಮಿದುಳಿನ ಉರಿತದಿಂದ ಸಾವೂ ಉಂಟಾಗಬಹುದು.

ಕೇರಳದಲ್ಲಿ 2022ರಲ್ಲಿ ಮೊದಲು  ಪತ್ತೆಯಾದ ‘ಟೊಮೊಟೊ ಫ್ಲೂ’ ಜ್ವರ ಬಹುತೇಕ ಚಿಕ್ಕ ಮಕ್ಕಳು ಮತ್ತು ನಿಶ್ಶಕ್ತ ವೃದ್ಧರನ್ನೇ ಬಾಧಿಸುತ್ತದೆ. ಫ್ಲೂ ಲಕ್ಷಣಗಳ ಜೊತೆಗೇ ಚರ್ಮದ ಮೇಲೆ ಕೆಂಪು ಗಡ್ಡೆಗಳು ಕಾಣಿಸಿಕೊಂಡು ಕ್ರಮೇಣ ಟೊಮೊಟೊ ಸೈಜಿನಷ್ಟಾಗುವುದು ಈ ಜ್ವರದ ವಿಶೇಷ! ಈ ಜ್ವರ ಡೆಂಗಿ, ಚಿಕುನ್ ಗುನ್ಯಾ ಅಥವಾ ಕೋವಿಡ್ ಜ್ವರದಿಂದ ಗುಣಹೊಂದಿದವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಈ ಎಲ್ಲ ವೈರಾಣು ಜ್ವರಗಳಿಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಬಹುತೇಕ ಕಾಯಿಲೆಗಳು ಜ್ವರ/ನೋವುನಿವಾರಕ ಮಾತ್ರೆ, ವಿಶ್ರಾಂತಿ, ಪೌಷ್ಟಿಕ ಆಹಾರದ ಮೂಲಕ ನಿಯಂತ್ರಣಕ್ಕೆ ಬರುತ್ತವೆ. ವಿಶೇಷಸಂದರ್ಭಗಳಲ್ಲಿ ರಕ್ತಪೂರಣ ಮಾಡಬೇಕಾಗಿ ಬರಬಹುದು. ಸೂಕ್ತ ಮುಂಜಾಗೃತಾ ಕ್ರಮಗಳಿಂದ ಬಹುಮಟ್ಟಿಗೆ ಈ ಕಾಯಿಲೆಗಳನ್ನು ತಡೆಗಟ್ಟಬಹುದು. ಸೋಂಕಿತರನ್ನು ಉಳಿದವರಿಂದ ಪ್ರತ್ಯೇಕಿಸುವುದರಿಂದ, ಕೈಗಳಿಗೆ ಆಗಾಗ್ಗೆ ‘ಸ್ಯಾನಿಟೈಸರ್’ನ ಬಳಕೆ ಮಾಡುವುದರಿಂದ ಮತ್ತು ತಾಜಾ-ಶುಚಿಯಾದ ಆಹಾರಸೇವನೆಯಿಂದ ಸೋಂಕು ತಡೆಗಟ್ಟಬಹುದು. ಅಲ್ಲದೇ, ಮನೆಯ ಅಕ್ಕ-ಪಕ್ಕ, ಹೂಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆಗಳ ಕಾಟ ತಪ್ಪುತ್ತದೆ. ‘ಇನ್ ಫ್ಲ್ಯೂಎಂಜಾ’ ಜ್ವರಕ್ಕೆ ಲಸಿಕೆ ಕೂಡ ಲಭ್ಯವಿದೆ.

ಇವಲ್ಲದೆ ಚಿಕುನ್ ಗುನ್ಯಾ, ಎಬೋಲಾ, ಪಶ್ಚಿಮ ನೈಲ್ ಜ್ವರ, ಮಂಗನಜ್ವರ, ಹಕ್ಕಿ ಜ್ವರದಂತಹ ಇನ್ನೂ ಅನೇಕ ಕಾಯಿಲೆಗಳು ವೈರಾಣುಗಳಿಂದ ಹರಡುತ್ತಿವೆ. ಇವೆಲ್ಲವೂ ವಿವಿಧ ವೈರಾಣುಗಳಿಂದ ಹಬ್ಬಿದರೂ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದುವ ಮೂಲಕ ವೈದ್ಯರಿಗೆ ಸವಾಲೆಸೆಯುತ್ತವೆ. ಆದರೆ ವಿಶೇಷ ಲಕ್ಷಣಗಳು ಮತ್ತು ಸೂಕ್ತ ರಕ್ತಪರೀಕ್ಷೆಯ ಮೂಲಕ ಇವುಗಳನ್ನು ಪತ್ತೆಮಾಡಿ ಚಿಕಿತ್ಸೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT