ಗುರುವಾರ , ಮೇ 13, 2021
16 °C

ವಸಂತದಲ್ಲಿ ವನವಿಹಾರ

ಜಿ. ಎಲ್. ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಯುಗಾದಿ ಬಂದಿದೆ. ವಸಂತಋತುವಿನ ಪುಣ್ಯಪ್ರಭಾವದಿಂದ ವನೋಪವನಗಳೆಲ್ಲ ನಳನಳಿಸುತ್ತಿವೆ. ಹಳೆಬೇರಿನ ಅರಳಿಯಲ್ಲಿ ಹೊಸ ಎಲೆಗಳು ಚಿಗುರಿವೆ. ಹೊಂಗೆಮರದ ಹೂಗುಚ್ಛ ತನ್ನ ಸುತ್ತೆಲ್ಲಾ ನವಿರಾದ ಕಂಪನ್ನು ತುಂಬಿದೆ. ಮಧುರವಾಣಿಯ ಕೋಗಿಲೆ ಫಲಭರಿತ ಮಾವಿನ ಮರದ ಸೊಗಸಿನಲ್ಲಿ ಸಂಭ್ರಮಿಸಿದೆ. ಕುಸುಮಾಕರನು ಅನುಗ್ರಹಿಸಿರುವ ಪ್ರಕೃತಿಯ ಸೊಬಗು ಭಗವದ್ವಿಭೂತಿಯೇ ಹೌದೆಂಬ ಭಾವ ಮನವನ್ನು ತುಂಬಿದೆ. ಪ್ರಕೃತಿಯ ಈ ಚೆಲುವಿನಲ್ಲಿ ಸನ್ಮಿತ್ರರೊಂದಿಗೆ ಹರಟುತ್ತ ಮಾಡುವ ವನವಿಹಾರ ಒಂದು ಹಬ್ಬವೇ ಸರಿ. ಇಂತಹ ವಿಹಾರವನ್ನು ಅವಶ್ಯ ಕರ್ತವ್ಯವೆಂದು ಆಯುರ್ವೇದ ಉಪದೇಶಿಸಿದೆ:

ವಿಚಿತ್ರಪುಷ್ಪವೃಕ್ಷೇಷು ಕಾನನೇಷು ಸುಗಂಧಿಷು ಗೋಷ್ಠೀಕಥಾಭಿಶ್ಚಿತ್ರಾಭಿಃ ಮಧ್ಯಾಹ್ನಂ ಗಮಯೇತ್ ಸುಖೀ

ವನವಿಹಾರದಂತಹ ಕಾಲಕ್ಷೇಪಕ್ಕೆ ಆರೋಗ್ಯಶಾಸ್ತ್ರ ಏಕಿಷ್ಟು ಪ್ರಾಶಸ್ತ್ಯ ನೀಡಿದೆಯೆಂಬುದನ್ನು ಕೊಂಚ ವಿಚಾರ ಮಾಡೋಣ.

ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಜಪಾನ್ ದೇಶದವರು ತಂತ್ರಜ್ಞಾನದಲ್ಲಿ, ವಾಣಿಜ್ಯದಲ್ಲಿ ಸಾಧಿಸಿದ್ದ ಹೆಚ್ಚುಗಾರಿಕೆ ಎಂಥವರನ್ನೂ ಬೆರಗುಗೊಳಿಸುವಂಥದ್ದಾಗಿತ್ತು. ಸತತ ಪರಿಶ್ರಮದಿಂದ ಸಮೃದ್ಧಿಯ ನಾಡೊಂದನ್ನು ಕಟ್ಟಿಕೊಂಡಿದ್ದರು ಅವರು. ಆದರೆ ಈ ಸಮೃದ್ಧಿಯ ಬೆನ್ನಲ್ಲೇ ಹೊಸದೊಂದು ಪಿಡುಗು ಆ ಜನರನ್ನು ಬಾಧಿಸಲಾರಂಭಿಸಿತು. ನಿರುತ್ಸಾಹ, ವಿಷಾದ, ಅನಿದ್ರೆ, ಮೈಕೈನೋವುಗಳು ನಗರವಾಸಿಗಳ ನಿತ್ಯದ ಬೇನೆಗಳಾಗಿಬಿಟ್ಟವು. ಎದೆಗುಂದದ ಜಪಾನಿಯರು ತಮ್ಮದೇ ವಿಶಿಷ್ಟರೀತಿಯಲ್ಲಿ ಈ ಬೇನೆಗಳಿಗೆ ಪರಿಹಾರವನ್ನೂ ಕಂಡುಕೊಂಡರು. ಆ ಪರಿಹಾರವೇ ಜಪಾನ್ ಸರ್ಕಾರದ ಅರಣ್ಯ ಇಲಾಖೆಯವರು ಜಾರಿಗೆ ತಂದ ‘ಶಿನ್ರಿನ್-ಯೋಕು’.

ಶಿನ್ರಿನ್ ಎಂದರೆ ವನ; ಯೋಕು ಎಂದರೆ ಸ್ನಾನ. ವನೋಪವನಗಳಲ್ಲಿ ತಿರುಗಾಡಿ ವಿಶ್ರಮಿಸಿ, ಸೂರ್ಯನ ಬೆಳಕಿನಲ್ಲಿ ಮೈಯೊಡ್ಡಿ ಮಿಂದು, ಶುದ್ಧ ವಾಯುಸೇವನೆಯಿಂದ ಹೊಸಹುರುಪು ಪಡೆದು, ಪ್ರಕೃತಿಸೌಂದರ್ಯದಲ್ಲಿ ಕಣ್ಮನಗಳನ್ನು ತಣಿಸಿಕೊಳ್ಳುವುದೇ ಈ ವನಸ್ನಾನದ ಉದ್ದೇಶ. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ನಡೆದಿರುವ ವೈಜ್ಞಾನಿಕ ಅಧ್ಯಯನಗಳು ಇಂತಹ ವನಸ್ನಾನದಿಂದ ಆಗಬಹುದಾದ ಬಹುಬಗೆಯ ಆರೋಗ್ಯಲಾಭದ ಬಗ್ಗೆ ಬೆಳಕು ಚೆಲ್ಲಿವೆ.

ಶರೀರದ ಸ್ವಾಯತ್ತ ನರಮಂಡಲದಲ್ಲಿ ಎರಡು ಭಿನ್ನ ರೀತಿಯ ಉಪಮಂಡಲಗಳಿವೆ. ಒಂದು ಬಗೆಯದ್ದು ಶರೀರದ ಕಾರ್ಯಗಳಿಗೆಲ್ಲ ಉತ್ತೇಜನ ಕೊಡುವಂತಹದ್ದಾದರೆ, ಇನ್ನೊಂದು ಬಗೆಯದ್ದು ಉಪಶಮನವನ್ನೊದಗಿಸುವಂತಹದ್ದಾಗಿದೆ. ಉತ್ತೇಜನ ಕೊಡುವ ಭಾಗದ ಪ್ರಭಾವದಿಂದಾಗಿ ಹೃದಯಬಡಿತ ಏರುತ್ತದೆ, ಮಾಂಸಪೇಶಿಗಳ ರಕ್ತಸಂಚಾರ ಹೆಚ್ಚುತ್ತದೆ, ಉಸಿರಾಟ ರಭಸವಾಗುತ್ತದೆ ಮತ್ತು ಮನಸ್ಸು ಉದ್ವೇಗಗೊಳ್ಳುತ್ತದೆ. ನಿತ್ಯಜೀವನದಲ್ಲಿ ಎದುರಾಗಬಹುದಾದ ಹೊರಗಣ ವಿಪತ್ತುಗಳನ್ನು ಎದುರಿಸಲು ಅಥವಾ ಅವುಗಳಿಂದ ತಪ್ಪಿಸಿಕೊಳ್ಳಲು ಈ ಮಾರ್ಪಾಡುಗಳು ನೆರವಾಗುತ್ತವೆ.

ಆದರೆ, ಕೆಲವೊಮ್ಮೆ ನರಮಂಡಲದ ಈ ಕಾರ್ಯಸಂಯೋಜನೆ ಬಿಗಡಾಯಿಸಿಬಿಡುತ್ತದೆ. ದೀರ್ಘಕಾಲದ ಉದ್ವೇಗ, ಬಿಡುವಿಲ್ಲದ ಕಾರ್ಯಭಾರ, ಅತಿಯಾದ ಕಾಫಿ-ಟೀ ಸೇವನೆಯಂತಹ ಆಧುನಿಕ ಜೀವನಶೈಲಿಯ ಒತ್ತಡಗಳಿಂದಾಗಿ ಉತ್ತೇಜಕ ನರಮಂಡಲದ ಕಾರ್ಯಗಳು ಸಮಾಧಾನಕ್ಕೆ ಬರದೇ, ತ್ರಿಶಂಕುಸ್ಥಿತಿಯಲ್ಲಿಯೇ ಉಳಿದುಬಿಡುತ್ತವೆ. ಉತ್ತೇಜಕ ನರಮಂಡಲದ ಈ ತ್ರಿಶಂಕುಸ್ಥಿತಿಯನ್ನೇ ‘ಸ್ಟ್ರೆಸ್’ ಎಂದು ಕರೆಯುವುದು. ‘ಸ್ಟ್ರೆಸ್‌’ನ ಪರಿಣಾಮವಾಗಿ ಜೀರ್ಣಾಂಗಗಳ ಸಮಸ್ಯೆಗಳು, ಅಧಿಕ ರಕ್ತದ ಒತ್ತಡ, ಮಧುಮೇಹ, ಮೈಕೈನೋವು, ನಿರುತ್ಸಾಹ ಮುಂತಾದ ಬೇನೆಗಳು ಕಾಣಿಸಿಕೊಳ್ಳುತ್ತವೆ.

ನಿಸರ್ಗದ ಮಡಿಲಿನಲ್ಲಿ ಮಾಡುವ ವನಸ್ನಾನ ಇಂತಹ ಬೇನೆಗಳಿಗಿರುವ ರಾಮಬಾಣ. ವನವಿಹಾರ ಉತ್ತೇಜಕಮಂಡಲದ ಚಟುವಟಿಕೆಗಳನ್ನು ಕಡಿಮೆ ಮಾಡಿ, ಉಪಶಾಮಕಮಂಡಲದ ಚಟುವಟಿಕೆಗಳನ್ನು ಹೆಚ್ಚುಮಾಡಿ, ಶರೀರ-ಮನಸ್ಸುಗಳನ್ನು ಸಮಸ್ಥಿತಿಗೆ ತರುತ್ತದೆ. ‘ನೇಚರ್ ಸೈಂಟಿಫಿಕ್ ರಿಪೋರ್ಟ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಶೋಧನೆಯೊಂದರ ಪ್ರಕಾರ ವಾರದಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲವನ್ನಾದರೂ ಉದ್ಯಾನಗಳಲ್ಲಿ, ಉಪವನಗಳಲ್ಲಿ ಕಳೆಯುವುದರಿಂದ ಸ್ವಾಸ್ಥ್ಯವರ್ಧನೆಗೆ ಅಮಿತವಾದ ಲಾಭವಿದೆ. ಈ ಅರ್ಥದಲ್ಲಿ ಬೆಂಗಳೂರಿನ ಲಾಲ್‌ಬಾಗ್, ಮೈಸೂರಿನ ಕುಕ್ಕರಹಳ್ಳಿ ಕೆರೆ, ತುಮಕೂರಿನ ಅಮಾನಿಕೆರೆ ಉದ್ಯಾನ ಮುಂತಾದ ಸ್ಥಳಗಳು ನಗರವಾಸಿಗಳಿಗೆ ನಿಜವಾದ ಸ್ವಾಸ್ಥ್ಯಾಲಯಗಳು, ದೇವಾಲಯಗಳು. ಇಂತಹ ದೇವಾಲಯಗಳ ನಿರ್ಮಾಣ ನಮ್ಮ ಸರ್ಕಾರಗಳಿಗೆ ಮುಖ್ಯ ಆದ್ಯತೆಯಾಗಬೇಕು.

ಸೃಜನಶೀಲತೆಯನ್ನು ಅರಳಿಸುವುದರಲ್ಲಿಯೂ ವನವಿಹಾರದ ಪಾತ್ರ ಮಹತ್ತ್ವದ್ದು. ಪ್ರಸಿದ್ಢ ವಿಜ್ಞಾನಿಯಾದ ಚಾರ್ಲ್ಸ್ ಡಾರ್ವಿನ್ ತನ್ನ ಶಾಸ್ತ್ರಚಿಂತನವನ್ನು ನಡೆಸುತ್ತಿದ್ದದ್ದು ನಿತ್ಯದ ಉಪವನವಿಹಾರದಲ್ಲೇ. ದೀರ್ಘಾಯುಷಿಗಳೂ, ಕನ್ನಡದ ಮೇರುಸಾಹಿತಿಗಳೂ ಆದ ಕುವೆಂಪು, ಮಾಸ್ತಿ, ಡಿವಿಜಿ ಮೊದಲಾದವರು ತಮ್ಮ ನಿತ್ಯದ ವಾಯುವಿಹಾರಕ್ಕೆ ಅತಿಹೆಚ್ಚಿನ ಬೆಲೆಯನ್ನು ಕೊಟ್ಟಿದ್ದರು. ಮಾಸ್ತಿಯವರು ಈ ಬಗ್ಗೆ ತಮ್ಮ ‘ಭಾವ’ದಲ್ಲಿ ಹೀಗೆ ಬರೆದಿದ್ದಾರೆ: ‘ಒಂದು ಗುಡ್ಡವನ್ನು ಹತ್ತಿ ಇಳಿದು, ಮರಗಳ ಸಾಲಿನ ಅಡಿಯಲ್ಲಿ ನಡೆದು, ಇಲ್ಲಿ ಬಾವಿ ಮಂಟಪ, ಅಲ್ಲಿ ನೀರಿನ ಕಾಲುವೆ, ಇನ್ನೊಂದರಲ್ಲಿ ತೋಪು, ಅಲ್ಲಿ ದೂರದಲ್ಲಿ ಹೊಸಕೆರೆಹಳ್ಳಿಯ ಕೆರೆ, ಇಲ್ಲಿ ಬೆಟ್ಟದ ಮೇಲೆ ಒಂದು ದೇವಾಲಯ, ಈ ಆವರಣದಲ್ಲಿ ಒಂದು ಸುತ್ತು ಹಾಕಿ ಬರುವ ಹೊತ್ತಿಗೆ ಜೀವ ಅಮೃತಪಾನ ಮಾಡಿ ಬಂದಂತೆ ಉಲ್ಲಾಸಗೊಂಡಿರುವುದು. ಎರಡು ವರ್ಷ ನಾನು ಈ ಸುಖವನ್ನು ಸತತವಾಗಿ ಅನುಭವಿಸಿದೆನು. ಅದರ ನೆನಪೂ ಈಗ ಚೇತನಕ್ಕೆ ಉಲ್ಲಾಸವನ್ನು ತರಬಲ್ಲದು.’

ಚೇತನಕ್ಕೆ ಉಲ್ಲಸವೀಯುವ ವನವಿಹಾರವನ್ನು ನೀವೂ ರೂಢಿಸಿಕೊಳ್ಳುವಿರಲ್ಲವೇ? ಯುಗಾದಿಯ ಸಂಕಲ್ಪ ಇದಾಗಬಹುದಲ್ಲವೇ

(ಲೇಖಕರು ಆಯುರ್ವೇದ ವೈದ್ಯರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು