ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಿರೋದೇ ಹೀಗೆ!

Last Updated 9 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನಾನಿರೋದೇ ಹೀಗೆ! ಹೀಗೆಂದು ಯಾರಾದರೂ ಒಮ್ಮೆಯಾದರೂ ನಿಮ್ಮ ಬಳಿ ಖಂಡಿತವಾಗಿಯೂ ಹೇಳಿರುತ್ತಾರೆ ಅಥವಾ ನೀವೇ ಯಾರಿಗಾದರೂ ಹೀಗೆ ಹೇಳಿರುತ್ತೀರಿ.

ಹೆಚ್ಚಾಗಿ ಮನೆಯವರ ಹತ್ತಿರ ಅಥವಾ ಮನಸ್ಸಿಗೆ ಹತ್ತಿರ ಇರುವವರ ಹತ್ತಿರವೇ ಹೀಗೆ ಹೇಳುತ್ತಾರೆ. ದೂರದವರ ಬಳಿ ಹೀಗೆಲ್ಲ ಹೇಳುವ ಸಂದರ್ಭ ಬರುವುದಿಲ್ಲ. ‘ನಾನಿರೋದೇ ಹೀಗೆ. ನನ್ನ ಬಳಿ ನಿಮ್ಮಿಷ್ಟದಂತೆ ಬದಲಾಗೋದಕ್ಕೆ ಸಾಧ್ಯವಿಲ್ಲ. ನಾನು ಹೇಗಿದ್ದೀನೋ ಹಾಗೇ ಒಪ್ಪಿಕೊಳ್ಳಿ. ನನ್ನನ್ನು ಒಪ್ಪಿಕೊಳ್ಳುವುದಕ್ಕೆ ಆಗದಿದ್ದರೆ ನೀವೇ ಬದಲಾಗಿ!’ ಹೀಗೆಂದು ಕಡ್ಡಿ ಮುರಿದ ಹಾಗೆ ಹೇಳುತ್ತಾರೆ. ಕೇಳಿಸಿಕೊಳ್ಳುವವರಿಗೆ ಇದು ‘ಕಾದ ಸೀಸವನ್ನು ಕಿವಿಗೆ ಸುರಿದ’ ಹಾಗಾಗುತ್ತದೆ. ಅಕಸ್ಮಾತ್ ಕೇಳಿಸಿಕೊಂಡವರಿಗೆ ಕೋಪ ಬಂದರೆ ಇಬ್ಬರ ಮಧ್ಯೆ ವಾಗ್ವಾದವಾಗುತ್ತದೆ. ಜಗಳವಾಗುತ್ತದೆ. ಇಬ್ಬರ ಮನಸ್ಸು ಮಲೀನವಾಗುತ್ತದೆ.

ಮಾತು ಮಾತಿಗೂ ಜೋರಾಗಿ, ಎತ್ತರದ ಧ್ವನಿಯಲ್ಲಿ ಮಾತನಾಡುವ ಗಂಡನಿಗೆ ಹೆಂಡತಿ ಸಾವಕಾಶವಾಗಿ, ಸಮಾಧಾನದಿಂದ ಮಾತನಾಡುವಂತೆ ಹೇಳುತ್ತಾಳೆ. ಗಂಡನಿಗೆ ಮೂಗಿನ ತುದಿಯಲ್ಲಿಯೇ ಕೋಪ ಕುಣಿಯುತ್ತದೆ. ಆತ ಯಾವಾಗಲೂ ಸಿಡುಕು ಸುಬ್ಬ. ಅವನು ಮಾತನಾಡುತ್ತಿದ್ದರೇನೇ ಜಗಳವಾಡುತ್ತಿರುವವನ ಹಾಗಿರುತ್ತದೆ. ಅವನ ವರ್ತನೆಯಿಂದ ಮನೆಯವರಿಗೆಲ್ಲರಿಗೂ ಸಾಕಷ್ಟು ಇರುಸು ಮುರುಸುಗಳಾಗುತ್ತವೆ. ನೆರಮನೆಯವರಿಗೂ ಇವನ ಮಾತುಗಳದ್ದೇ ವಾರಾತ. ಹಾಗಾಗಿ ಹೆಂಡತಿ ಅವನಿಗೆ ಸಾವಕಾಶವಾಗಿ ಮಾತನಾಡಿರೆಂದರೆ, ಆತ ಸಿಡಿಮಿಡಿಗೊಳ್ಳುತ್ತಾನೆ. ನಾನಿರೋದೇ ಹೀಗೆ. ನನಗೆ ಬುದ್ಧಿ ಹೇಳೋಕೆ ಬರಬೇಡಿ. ನೀವು ಸರಿಯಾಗಿರೋದನ್ನು ರೂಢಿಸಿಕೊಳ್ಳಿ ಎನ್ನುತ್ತಾನೆ. ತಾನೇನು ಆಡಬಾರದ ಮಾತನಾಡಿಲ್ಲವೆಂದು ತನ್ನನ್ನು ಸಮರ್ಥಿಸಿಕೊಳ್ಳುತ್ತಾನೆ. ಮಾತಿಗೆ ಮಾತು ಬೆಳೆದು ಮನೆಯಲ್ಲಿ ಜಗಳವೇ ಆಗಿಹೋಗುತ್ತದೆ. ಎಲ್ಲರ ಮನಃಶಾಂತಿ, ನೆಮ್ಮದಿ ಕದಡಿಹೋಗುತ್ತದೆ.

‘ಸಾಂಬಾರಿಗೆ ಉಪ್ಪು ಕಡಿಮೆಯಾಗಿದೆಯಲ್ಲೇ..’ ಎಂದು ಗಂಡ ಉಸುರುತ್ತಿದ್ದಂತೆಯೇ, ಯಾವಾಗಲೂ ಎಲ್ಲವನ್ನೂ ಸರಿಯಾಗಿಯೇ ಹಾಕಿ ಮಾಡಲಿಕ್ಕೆ, ನಾನೇನು ಪ್ರೋಗ್ರಾಮ್ ಮಾಡಿಟ್ಟಿರುವ ರೋಬೋಟಾ? ಯಾರು ಅಡುಗೆ ಮಾಡಿದರೂ ಒಂದೊಂದು ಸಲ ಒಂದೊಂದು ಥರ ಆಗುತ್ತದೆ. ಯಾರಿಂದಲೂ ಯಾವಾಗಲೂ ಒಂದೇ ಥರ ರುಚಿಯಾಗಿ ಮಾಡಕಾಗಲ್ಲ. ಹೆಚ್ಚು ಕಡಿಮೆಯಾಗುತ್ತದೆ ಎಂದು ದಬಾಯಿಸುತ್ತಾಳೆ. ಅವಳ ಮಾತಿಗೇನಾದರೂ ಸಮಜಾಯಿಸಿ ಕೊಡಲಿಕ್ಕೆ ಹೋದರೆ, ‘ಮದುವೆಯಾದ ಹೊಸತರಲ್ಲಿ ನಾನೇನೇ ಮಾಡಿದ್ದರೂ ಖುಷಿ ಖುಷಿಯಿಂದ ತಿನ್ನುತ್ತಿದ್ದವರಿಗೆ ಈಗೇನಾಗಿದೆ? ಹತ್ತು ವರ್ಷವಾಗುತ್ತಿದ್ದಂತೆಯೇ, ನಾನೇನೇ ಮಾಡಿದರೂ ಅದರಲ್ಲಿ ಒಳ್ಳೆಯದು ಕಾಣುವುದಿಲ್ಲ. ಬರೀ ತಪ್ಪನ್ನಷ್ಟೇ ಕಂಡು ಹಿಡಿಯುತ್ತೀರಿ’ ಎಂದೂ ಕಣ್ಣಲ್ಲಿ ಕಾವೇರಿಯನ್ನಿಳಿಸುತ್ತಾಳೆ. ಮತ್ತಿನ್ಯಾವುದೋ ಸಂದರ್ಭದಲ್ಲಿ, ‘ರೀ, ನಾನಿರೋದೇ ಹೀಗೆ. ಮದುವೆಯಾಗುವಾಗ ಗೊತ್ತಾಗಲಿಲ್ವೇನೋ, ಪಾಪ. ಆವಾಗ ನಿಮ್ಮ ಬುದ್ಧಿ ಎಲ್ಲಿಗೆ ಹೋಗಿತ್ತೋ..!’ ಎಂದು ಮೂದಲಿಸುತ್ತಾಳೆ. ಅಷ್ಟಾಗುವಷ್ಟರಲ್ಲಿ ಗಂಡ ತಣ್ಣೀರೆರಚಿಸಿಕೊಂಡ ಗುಂಡನಂತಾಗಿರುತ್ತಾನೆ. ಮಾತನಾಡಿದರೆ ಉಪಯೋಗವಿಲ್ಲವೆಂದುಕೊಂಡು ಸುಮ್ಮನಾಗುತ್ತಾನೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಹೀಗೆ ಮಾತನಾಡುವವರಲ್ಲಿ ಒಂದಿಷ್ಟು ಮಾನಸಿಕ ಸಮಸ್ಯೆಗಳಿರುತ್ತವೆ. ಹಾಗಂತ ಅವು ತೀವ್ರಸ್ವರೂಪದ ಸಮಸ್ಯೆಗಳಲ್ಲ. ಆದರೂ ಇಂತಹ ಗುಣಲಕ್ಷಣಗಳು ವ್ಯಕ್ತವಾಗುತ್ತಿರುವಂತೆಯೇ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಮಾನಸಿಕವಾಗಿರಲಿ, ದೈಹಿಕವಾಗಿರಲಿ ಸಮಸ್ಯೆ ಹೆಚ್ಚಾಗುವ ಮೊದಲೇ ಅದರ ಪರಿಹಾರಕ್ಕೆ ಪ್ರಯತ್ನಿಸುವುದು ಒಳ್ಳೆಯದು. ‘Prevention is better than cure’ ಎನ್ನುತ್ತಾರಲ್ಲ. ಅದು ಯಾವಾಗಲೂ ಒಳ್ಳೆಯದು.

ಇಂಥ ವ್ಯಕ್ತಿಗಳು ಶೀಘ್ರ ಕೋಪಿಗಳಾಗಿರುತ್ತಾರೆ. ಅವರ ಕೋಪಕ್ಕೆ ಇಂಥದ್ದೇ ಮುಖ್ಯವಾದ ಕಾರಣ ಬೇಕೆಂದಿರುವುದಿಲ್ಲ. ಅವರು ಯಾವಾಗಲೂ ಎತ್ತರದ ಧ್ವನಿಯಲ್ಲಿ ಮಾತನಾಡುತ್ತಾರೆ. ಕೇಳಿದರೆ, ತಾನು ಮನಸ್ಸಿಗನ್ನಿಸಿದ್ದನ್ನ ಹೇಳುತ್ತೇನೆ. ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಒಳಗೊಂದು ಹೊರಗೊಂದು ಮಾಡುವುದಿಲ್ಲ ಎಂದೆಲ್ಲ ತಮ್ಮ ಮಾತಿನ ಅಥವಾ ಅಭಿವ್ಯಕ್ತಿಯ ವೈಖರಿಯನ್ನು ವಿವರಿಸುತ್ತಾರೆ. ಅವರ ಕೋಪದ ಹಿಂದೆ ಅವರಿಗೆ ಅರಿವಿಲ್ಲದೇನೇ, ಅವರಲ್ಲಿ ಕೀಳರಿಮೆ ಇರುತ್ತದೆ. ಎದುರಿನವರು ತನ್ನನ್ನು ಮುಖ್ಯವಾದ ವ್ಯಕ್ತಿ ಎಂದು ಗಮನಿಸುವುದಿಲ್ಲ ಎಂದು ನೊಂದುಕೊಳ್ಳುತ್ತಾರೆ. ತನ್ನನ್ನು ಮತ್ತು ತನ್ನ ಅಭಿಪ್ರಾಯವನ್ನು ಎಲ್ಲರೂ ಉಡಾಫೆ ಮಾಡುತ್ತಾರೆ ಎಂದೂ ಅಂದುಕೊಂಡಿರುತ್ತಾರೆ. ಅವರು ಅಹಂಕಾರಿಗಳಾಗಿರುತ್ತಾರೆ. ಮತ್ತೆ ಅಂಜುಬುರುಕು ಸ್ವಭಾವದವರಾಗಿರುತ್ತಾರೆ. ತನಗೇನಾದರೂ ತೀವ್ರವಾದ ಅಪಾಯ ಅಥವಾ ಅವಮಾನವಾಗುವ ಸಂದರ್ಭಗಳಲ್ಲಿ ಅವರು ಬಾಲಮುದುರಿಕೊಂಡು ಓಡುವ ನರಿಯಂತೆ ವರ್ತಿಸುತ್ತಾರೆ. ಇವರು ‘ಮನೆಯಲ್ಲಿ ಹುಲಿ, ಬೀದಿಯಲ್ಲಿ ಇಲಿ’ ಎನ್ನುವಂತಿರುತ್ತಾರೆ. ತನ್ನನ್ನು ತಾನು ಪ್ರತಿಭಾವಂತ ಎಂದುಕೊಂಡಿರುತ್ತಾರೆ. ತನ್ನಲ್ಲಿರುವ ಪ್ರತಿಭೆಯನ್ನು ಯಾರೂ ಸರಿಯಾಗಿ ಗುರುತಿಸಿ, ಗೌರವಿಸುವುದಿಲ್ಲ ಎಂದೂ ಕೊರಗುತ್ತಿರುತ್ತಾರೆ. ಅವರು ಮಾಡುವ ಸಣ್ಣ ಪುಟ್ಟ ಕೆಲಸವನ್ನೇ ಇತರರು ಹೊಗಳಬೇಕು ಎಂದೂ ಅಪೇಕ್ಷಿಸುತ್ತಾರೆ. ಅವಕಾಶ ಸಿಕ್ಕಿದ್ದಿದ್ದರೆ ತಾನೂ ಎಷ್ಟೋ ಉನ್ನತವಾದ ಸ್ಥಾನದಲ್ಲಿರುತ್ತಿದ್ದೆ ಎಂದು ಹಲುಬುತ್ತಾರೆ. ನಿಜಕ್ಕೂ, ಅವರು ಯಾವುದೊಂದೂ ಅವಕಾಶವನ್ನು ಕೂಡ ಜವಾಬ್ದಾರಿಯಿಂದ ನಿರ್ವಹಿಸಿರುವುದೇ ಇಲ್ಲ!

ಇಂತಹ ಗುಣಲಕ್ಷಣಗಳ ವ್ಯಕ್ತಿಗಳು ತಮ್ಮನ್ನು ತಾವೇ ಸುಧಾರಿಸಿಕೊಳ್ಳಲಿಕ್ಕೆ ಸಾಧ್ಯವಾಗದೇ ಇದ್ದಾಗ, ಅವರ ಆಪ್ತರು ಗಮನಿಸಿ ಹೇಳಿದಾಗ, ಅವರು ಸೂಕ್ತ ಆಪ್ತಸಮಾಲೋಚಕರ, ಮನೋವೈದ್ಯರ ಸಹಾಯವನ್ನು ಪಡೆದುಕೊಳ್ಳಬೇಕು.

ಮತ್ತೆ, ಇವರು ಯಾರನ್ನೂ ಹೊಗಳುವುದಿಲ್ಲ. ಉಳಿದವರ ಪ್ರತಿಭೆಯನ್ನು ಗುರುತಿಸುವುದಿಲ್ಲ. ಎಲ್ಲರಲ್ಲೂ ಒಂದಿಷ್ಟಾದರೂ ಐಬನ್ನೇ ಕಾಣುತ್ತಾರೆ. ಅದನ್ನೇ ಎತ್ತಿ ಆಡುತ್ತಾರೆ. ಎಲ್ಲರ ಬಗ್ಗೆಯೂ ಒಂದಿಷ್ಟು ವ್ಯಂಗ್ಯವಾಗಿ, ಲಘುವಾಗಿ ಮಾತನಾಡುತ್ತಾರೆ. ‘ನಾನಿರೋದೇ ಹೀಗೆ’ ಎನ್ನುವ ಸ್ವಭಾವದ ವ್ಯಕ್ತಿಗಳಿಗೆ ಸ್ನೇಹಿತರು ಕಡಿಮೆ. ಅವರು ಯಾವುದೇ ಕೆಲಸವನ್ನಾದರೂ ಸಹನೆಯಿಂದ ಮಾಡುವುದಿಲ್ಲ. ಎಲ್ಲವನ್ನೂ ಬೇಗ ಬೇಗನೆ ಮುಗಿಸಿಬಿಡಬೇಕೆನ್ನುವ ಧಾವಂತದಲ್ಲಿರುತ್ತಾರೆ. ಅವರು ನಿತ್ಯ ಅಸಂತೋಷಿಯಾಗಿರುತ್ತಾರೆ. ಆಗಾಗ ಅವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಹಾಗಾಗಿ ಅವರಿಂದ ಉಳಿದವರಿಗೆ ಸಿಗುವ ಸಂತೋಷವೂ ಅಷ್ಟಕ್ಕಷ್ಟೇ! ‘ನಾನಿರೋದೇ ಹೀಗೆ, ನಾನು ಇರುವಂತೆಯೇ ನೀನು ಒಪ್ಪಿಕೋ’ ಎನ್ನುವ ಮನೋಭಾವದವರು ತಮ್ಮ ಸುತ್ತಲಿನ ಬದಲಾವಣೆಗಳನ್ನು ಗಮನಿಸುವುದಿಲ್ಲ. ಜಗತ್ತು ಬದಲಾಗುತ್ತಿರುತ್ತದೆ. ಯಾವುದೂ ಕೂಡ ಜಗತ್ತಿನಲ್ಲಿ ಬದಲಾಗದೇ ಇರುವುದಿಲ್ಲ. ಎಲ್ಲವೂ ಯಾವಾಗಲೂ ಬದಲಾಗುತ್ತಲೇ ಇರುತ್ತದೆ. ಬದಲಾವಣೆಯೇ ಜಗದ ನಿಯಮ. ಇವನ್ನೆಲ್ಲ ಅವರು ಅರಿಯಲಾರರು. ಹಾಗಾಗಿ ಕಾಲಾಂತರದಲ್ಲಿ ಅವರು ನಿಂತ ನೀರಿನಂತಾಗುತ್ತಾರೆ.

ಸಂಸಾರದಲ್ಲಿ ಸುಖದಿಂದ ಬದುಕಬೇಕಾದರೆ ಎಲ್ಲರೂ ಪರಸ್ಪರರರಿಗಾಗಿ ಬದಲಾಗುತ್ತ ಇರಬೇಕಾಗುತ್ತದೆ. ನಮ್ಮದೇ ಮಕ್ಕಳಾದರೂ, ಅವರು ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಅವರದ್ದೇ ಒಂದು ವ್ಯಕ್ತಿತ್ವನ್ನು ಪಡೆದುಕೊಳ್ಳುತ್ತಾರೆ. ಆಗ ಪಾಲಕರು ತಮ್ಮ ಮಕ್ಕಳ ಜೊತೆಗೆ ಹೊಂದಿಕೊಳ್ಳುವುದನ್ನು, ಕಾಲದ ಬದಲಾವಣೆಯನ್ನೂ ಒಪ್ಪಿಕೊಳ್ಳಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT