ಮಂಗಳವಾರ, ಮೇ 18, 2021
30 °C

ಮಧ್ಯರಾತ್ರಿಯಲ್ಲೇಕೆ ತಿನ್ನುವ ದುರಭ್ಯಾಸ?

ಎಸ್‌.ಜಿ. ಹುತ್ತಗಾರ Updated:

ಅಕ್ಷರ ಗಾತ್ರ : | |

Prajavani

ಹೊಟ್ಟೆಯಲ್ಲಿ ಗುಡುಗುಡು ಶಬ್ದವಾಗಿ ರಾತ್ರಿ ನಿದ್ರೆಯಿಂದ ಎಚ್ಚರವಾಗುತ್ತಿದೆಯೆ? ಹಾಗಾದರೆ ಇದಕ್ಕೆ ಕಾರಣ ಮಧ್ಯ ರಾತ್ರಿಯ ನಂತರ ಕಾಣಿಸಿಕೊಳ್ಳುವ ಹಸಿವಿನ ತೊಂದರೆ. ಸಾಮಾನ್ಯವಾಗಿ 1–3 ಗಂಟೆಯ ಸಮಯದಲ್ಲಿ ಭಯಂಕರ ಹಸಿವು ಕಾಣಿಸಿಕೊಂಡು ಎಚ್ಚರವಾಗುವುದು ಕೆಲವರಲ್ಲಿ ಮಾಮೂಲು.

ತಜ್ಞರ ಪ್ರಕಾರ ಹಸಿವಿನ ಮಟ್ಟ ದಿನವಿಡೀ ಹೆಚ್ಚು ಕಡಿಮೆಯಾಗುತ್ತಲೇ ಇರುತ್ತದೆ. ಹಗಲು ಈ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ. ಸಂಜೆ ಅತ್ಯಂತ ಹೆಚ್ಚಿನ ಮಟ್ಟದಲ್ಲಿದ್ದು, ರಾತ್ರಿ ಮತ್ತು ಬೆಳಗಿನ ಜಾವ ಕಡಿಮೆಯಿರುತ್ತದೆ. ಹೀಗಾಗಿ ಮಧ್ಯರಾತ್ರಿ ಹಸಿವಿನಿಂದ ಎಚ್ಚರವಾಗುತ್ತದೆ ಎಂದರೆ ಇದು ಕಡೆಗಣಿಸುವ ವಿಷಯವಲ್ಲ.

‘ನಿದ್ರೆಯ ಆಳ ಎಷ್ಟು ಜಾಸ್ತಿ ಇರುತ್ತದೆಂದರೆ ಬೇರೆನೂ ಸಮಸ್ಯೆಯಿಲ್ಲದಿದ್ದರೆ ಎಚ್ಚರವಾಗುವುದು ಕಡಿಮೆ. ಆದರೆ ಹಸಿವಿನಿಂದ ನಿದ್ರೆಯ ಮಧ್ಯೆ ಎಚ್ಚರವಾಗುತ್ತದೆ ಎಂದರೆ ಏನೋ ಸಮಸ್ಯೆಯಿದೆ ಎಂದರ್ಥ’ ಎನ್ನುತ್ತಾರೆ ಲೈಫ್‌ಸ್ಟೈಲ್‌ ಕಾಯಿಲೆ ತಜ್ಞ
ಡಾ. ಟಿ.ಎಸ್‌.ತೇಜಸ್‌. ಏಕೆಂದರೆ ನಮ್ಮೊಳಗಿರುವ ಜೈವಿಕ ಗಡಿಯಾರ ಇಂತಹ ರಾತ್ರಿ ಸಮಯದಲ್ಲಿ ತಿನ್ನುವಂತೆ ಪ್ರೇರೇಪಿಸುವುದು ಕಡಿಮೆ.

ಅಪರೂಪಕ್ಕೊಮ್ಮೆ ಮಧ್ಯರಾತ್ರಿ ಹಸಿವಿನಿಂದ ಎಚ್ಚರವಾಗಿ ತಿಂದರೆ ಅದೇನೂ ಆತಂಕಪಡುವಂತಹ ವಿಷಯವಲ್ಲ. ಆದರೆ ಇದು ನಿಯಮಿತವಾಗಿ ಕಂಡು ಬಂದರೆ ಹಾಗೂ ತೊಂದರೆ ಕೊಡುತ್ತಿದ್ದರೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.

ಕಾರಣಗಳು
ಇದಕ್ಕೆ ಕಾರಣಗಳು ಹಲವಾರು. ಹಗಲಿನ ವೇಳೆ ಅಗತ್ಯವಿರುವಷ್ಟು ತಿನ್ನದಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಂದರೆ ನಿಮ್ಮ ದೇಹಕ್ಕೆ ಬೇಕಾಗುವಷ್ಟು ಕ್ಯಾಲರಿ ಸಿಕ್ಕಿರುವುದಿಲ್ಲ. ಹೀಗಾಗಿ ಹೊಟ್ಟೆಯೊಳಗೆ ಕೋಲಾಹಲ ಎದ್ದು ನಿಮ್ಮನ್ನು ಎಬ್ಬಿಸಿಬಿಡುತ್ತದೆ. ತೀರಾ ಡಯೆಟ್‌ ಮಾಡಿದರೆ, ಊಟವನ್ನು ಬಿಟ್ಟರೆ ಅಥವಾ ಮಿತಿಮೀರಿ ವ್ಯಾಯಾಮ ಮಾಡಿದರೆ ಕ್ಯಾಲರಿಯ ಕೊರತೆ ಉಂಟಾಗಬಹುದು.

ನಿಮ್ಮ ದೈಹಿಕ ಚಟುವಟಿಕೆಯ ಮೇಲೂ ಗಮನ ಇಡಬೇಕು. ಹೊಸ ರೀತಿಯ ವ್ಯಾಯಾಮ ಶುರು ಮಾಡಿದರೆ ಅಥವಾ ವ್ಯಾಯಾಮದ ಸಮಯವನ್ನು ಹೆಚ್ಚಿಸಿದರೆ ರಾತ್ರಿ ಹಸಿವಾಗಿ ಎಚ್ಚರವಾಗಬಹುದು. ಹೀಗಾಗಿ ದೈಹಿಕ ಚಟುವಟಿಕೆಗಳಿಗೆ ತಕ್ಕಂತೆ ತಿನ್ನುವ ಪ್ರಮಾಣವನ್ನೂ ಹೆಚ್ಚಿಸಬೇಕು.

ನಿದ್ರೆಯ ಕೊರತೆಯೂ ಇದಕ್ಕೆ ಕಾರಣ. ನಿದ್ರೆಯ ಕೊರತೆಯಾದರೆ ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ ಪ್ರಮಾಣದಲ್ಲಿ ಏರುಪೇರಾಗುತ್ತದೆ ಎನ್ನುತ್ತಾರೆ ತಜ್ಞರು. ಇದರಿಂದ ಹೆಚ್ಚು ಹಸಿವಾಗಿ ಮಧ್ಯರಾತ್ರಿಯಲ್ಲಿ ಕೂಡ ಕಾರ್ಬೊಹೈಡ್ರೇಟ್‌ ಹೆಚ್ಚಿರುವ ಆಹಾರ ತಿನ್ನಬೇಕೆಂಬ ಬಯಕೆಯಾಗುತ್ತದೆ. ರಾತ್ರಿ ನಿದ್ರೆಯಿಲ್ಲದಿದ್ದರೆ ಹಗಲಿನಲ್ಲಿ ಕೂಡ ಹೆಚ್ಚು ಹಸಿವಾಗುವುದನ್ನು ನೀವು ಗಮನಿಸಿರಬಹುದು.

ಕೆಲವೊಮ್ಮೆ ಹೊಟ್ಟೆಯಲ್ಲಿ ಹಸಿವಿನ ಅನುಭವದಿಂದ ಎಚ್ಚರಾಗದಿದ್ದರೂ ಒತ್ತಡದಿಂದ ಎಚ್ಚರಾಗಬಹುದು. ಆಗ ತಿನ್ನುವುದರ ಮೂಲಕ ಒತ್ತಡವನ್ನು ಶಮನ ಮಾಡಿಕೊಳ್ಳಲು ಯತ್ನಿಸುವುದು ಸಹಜ. ಇದಕ್ಕೆ ‘ಎಮೋಷನಲ್‌ ಆಹಾರ ಸೇವನೆ’ ಎನ್ನುತ್ತಾರೆ ಡಾ. ತೇಜಸ್‌. ಆಲೋಚನೆಗಳಿಗೆ ಕಡಿವಾಣ ಹಾಕಲು ತಿನಿಸಿನ ಮೇಲೆ ಗಮನಹರಿಸುವುದು ನೈಸರ್ಗಿಕ ಪ್ರತಿಕ್ರಿಯೆ.

ಒತ್ತಡ, ಆತಂಕವಾದಾಗ ತಿನ್ನುವುದರಲ್ಲಿ ತಪ್ಪೇನಿಲ್ಲ. ಆದರೆ ಕಾರಣ ಕಂಡುಕೊಂಡು ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಸೂಕ್ತ.

ಪದೇ ಪದೇ ಮಧ್ಯರಾತ್ರಿ ಎಚ್ಚರವಾಗಿ ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ಇದು ಗೀಳೆಂದು ಕರೆಸಿಕೊಳ್ಳುತ್ತದೆ. ರಾತ್ರಿ ತಿಂದರೆ ಮಾತ್ರ ನಿದ್ರೆ ಬರುತ್ತದೆ ಎಂಬ ನಂಬಿಕೆಗೆ ಅಂಟಿಕೊಂಡು ಸಂಜೆ ತಿನ್ನದೇ ಮಧ್ಯರಾತ್ರಿ ಆಹಾರ ಸೇವಿಸುವುದು ಇದರ ಲಕ್ಷಣ.

ಪರಿಹಾರ
ಮೊದಲು ಹಗಲು ಸಮಯಕ್ಕೆ ಸರಿಯಾಗಿ, ಅಗತ್ಯವಿರುವಷ್ಟು ಪ್ರಮಾಣದ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಿ. ಇದರಿಂದ ಮಧ್ಯರಾತ್ರಿ ಎಚ್ಚರವಾಗುವುದು ತಪ್ಪುತ್ತದೆ. ರಾತ್ರಿ ಮಲಗುವ ಮುನ್ನ ಹಾಲು ಅಥವಾ ಮೊಸರು ಅಥವಾ ಒಂದೆರಡು ಕ್ರ್ಯಾಕರ್‌ ಸೇವಿಸಿ.

ಹಗಲು ಎಷ್ಟು ಹೊತ್ತಿಗೆ, ಏನು ತಿಂದಿರಿ ಎಂಬುದರ ವಿವರವನ್ನು ಬರೆದಿಟ್ಟುಕೊಳ್ಳಿ. ರಾತ್ರಿ ಎಚ್ಚರವಾದರೆ ಹಗಲಿನ ಆಹಾರ ಸೇವನೆಯಲ್ಲಾದ ವ್ಯತ್ಯಾಸ ಗಮನಿಸಿ. ಅಪರೂಪಕ್ಕೊಮ್ಮೆ ಹಸಿವಿನಿಂದ ಎಚ್ಚರವಾದರೆ ಸುಲಭವಾಗಿ ಜೀರ್ಣವಾಗುವಂತಹ ಬಾಳೆಹಣ್ಣನ್ನು ತಿನ್ನಬಹುದು. ಸಮಸ್ಯೆ ಜಾಸ್ತಿಯಾದರೆ ವೈದ್ಯರನ್ನು ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು