ಶನಿವಾರ, ಮೇ 30, 2020
27 °C

ವರ್ಕ್‌ ಫ್ರಂ ಹೋಮ್‌ | ಒತ್ತಡಕ್ಕೆ ಇಲ್ಲ ಅವಕಾಶ!

ರೇಷ್ಮಾ Updated:

ಅಕ್ಷರ ಗಾತ್ರ : | |

‘ಈ ವರ್ಕ್‌ ಫ್ರಂ ಹೋಮ್‌ (ಮನೆಯಿಂದಲೇ ಕೆಲಸ) ಸಾಕಾಗಿದೆ. ಲಾಕ್‌ಡೌನ್‌ ಯಾವತ್ತಿಗೆ ಮುಗಿಯುತ್ತದೋ ಎನ್ನಿಸುತ್ತಿದೆ. ಮೊದಲೆಲ್ಲಾ ತಿಂಡಿ ತಿಂದು ಕಚೇರಿಗೆ ಹೋದರೆ ಮತ್ತೆ ಸಂಜೆ ಬಂದು ರಾತ್ರಿ ಊಟಕ್ಕೆ ತಯಾರಿ ಮಾಡಿದರೆ ಸಾಕಿತ್ತು. ಆದರೆ ಈಗ ಹಾಗಿಲ್ಲ, ಮನೆಗೆಲಸದ ಜೊತೆಗೆ ಕಚೇರಿ ಕೆಲಸವೂ ತಳಕು ಹಾಕಿಕೊಂಡಿದೆ. ಇದರಿಂದ ಸಂಪೂರ್ಣವಾಗಿ ಕಚೇರಿ ಕೆಲಸದಲ್ಲಿ ತೊಡಗಿಕೊಳ್ಳಲೂ ಸಾಧ್ಯವಾಗುತ್ತಿಲ್ಲ; ಈಚೆ ಮನೆಗೆಲಸ ಹಾಗೂ ಗಂಡ–ಮಕ್ಕಳ ಬಗ್ಗೆ ಗಮನ ಹರಿಸಲೂ ಸಾಧ್ಯವಾಗುತ್ತಿಲ್ಲ’ ಎನ್ನುವ ಗೆಳತಿ, ಸಾಫ್ಟ್‌ವೇರ್‌ ಎಂಜಿನಿಯರ್‌ ಸುಪ್ರಭಾ, ‘ಕಚೇರಿ ಕರ್ತವ್ಯ, ಮನೆಗೆಲಸದ ನಡುವೆ ಯಾವುದರಲ್ಲಿ ಸೋಲುತ್ತೇನೊ’ ಎಂಬ ಆತಂಕ ವ್ಯಕ್ತಪಡಿಸುತ್ತಾಳೆ.

ಈ ರೀತಿ ಆತಂಕ, ಭಯ ಎದುರಿಸುತ್ತಿರುವುದು ಕೇವಲ ಸುಪ್ರಭಾ ಮಾತ್ರವಲ್ಲ, ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿರುವ ಬಹಳಷ್ಟು ಹೆಣ್ಣುಮಕ್ಕಳ ಅನುಭವವಿದು. ಮನೆಗೆಲಸ ಮಾಡಿಕೊಂಡು ಆರಾಮವಾಗಿ ಕಚೇರಿಗೆ ಹೋಗಿಬಂದು ಮಾಡುತ್ತಿದ್ದ ಹೆಣ್ಣುಮಕ್ಕಳಿಗೆ ಲಾಕ್‌ಡೌನ್ ಎಂಬುದು ಇನ್ನಿಲ್ಲದ ಒತ್ತಡ ಸೃಷ್ಟಿಸಿದೆ. ಗಂಡ, ಮಕ್ಕಳು ಮನೆಯಲ್ಲೇ ಇರುವುದರಿಂದ ಸಹಜವಾಗಿಯೇ ಅಡುಗೆ ಮತ್ತಿತರ ಮನೆಗೆಲಸ ಹೆಚ್ಚಾಗಿದೆ.

ಭವಿಷ್ಯದ ಚಿಂತೆ
‘ಕಚೇರಿಗೆ ಹೋಗಿ ಬರುವಾಗ ಸಂಚಾರ ದಟ್ಟಣೆ ಅನುಭವಿಸುವಾಗ ಮನೆಯಿಂದಲೇ ಕಚೇರಿ ಕೆಲಸ ಕೊಟ್ಟರೆ ಸುಲಭ ಎನಿಸಿದ್ದು ನಿಜ. ಆದರೆ ಈಗ ಅದರಲ್ಲೂ ಸಮಸ್ಯೆ ಇದೆ ಎಂದು ಅರಿವಾಗಿದೆ. ಸುಲಭವಾಗಿ ಸ್ಕೈಪ್ ಕರೆಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಕಾಲ್‌ ಕಾನ್ಫ್‌ರೆನ್ಸ್ ನಡೆಯುವಾಗ ಮಧ್ಯದಲ್ಲೇ ಕರೆ ಕಟ್ ಆಗುತ್ತದೆ. ಕಚೇರಿ ಕೆಲಸದ ನಡುವೆ ಅಡುಗೆ ಮಾಡು, ಮನೆ ಕ್ಲೀನ್ ಮಾಡು, ಮಗುವನ್ನು ನೋಡಿಕೊ.. ಹೀಗೆ ಮನೆಗೆಲಸಕ್ಕೂ ಒತ್ತು ನೀಡಬೇಕು’ ಎನ್ನುವ ಕಂಪನಿಯೊಂದರ ಹಿರಿಯ ಅಧಿಕಾರಿ ಮೃದುಲಾ ನಾಡಿಗ್‌, ‘ಇದು ನಮ್ಮ ವೃತ್ತಿ ಬದುಕಿನ ಮೇಲೂ ಪರಿಣಾಮ ಬೀರುತ್ತಿದೆ. ವೃತ್ತಿ ಕುರಿತ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇನೊ ಎನಿಸಿಬಿಟ್ಟಿದೆ. ಭವಿಷ್ಯದ ಕುರಿತು ಚಿಂತೆ ಹುಟ್ಟುಹಾಕುವಂತೆ ಮಾಡುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ. ‌

ಇಷ್ಟೇ ಅಲ್ಲದೇ ಉದ್ಯೋಗ ಭದ್ರತೆ, ಹಣಕಾಸು ನಿರ್ವಹಣೆ, ಕುಟುಂಬದ ಸದಸ್ಯರ ಆರೋಗ್ಯ ಸುರಕ್ಷತೆಯ ಕುರಿತ ಚಿಂತೆಯೂ ಹೆಣ್ಣುಮಕ್ಕಳಲ್ಲಿ ಆತಂಕ, ಭಯ ಹೆಚ್ಚುವಂತೆ ಮಾಡಿದೆ.

ಲಾಕ್‌ಡೌನ್‌ ತಂದ ಮಾನಸಿಕ ಕ್ಷೋಭೆ
ಇತ್ತೀಚಿನ ವರದಿಯೊಂದರ ಪ್ರಕಾರ ಲಾಕ್‌ಡೌನ್ ಆರಂಭವಾದಾಗಿನಿಂದ ಮಾನಸಿಕ ಕ್ಷೋಭೆಗೆ ಸಂಬಂಧಿಸಿದಂತಹ ಪ್ರಕರಣಗಳು ಶೇ 20ರಷ್ಟು ಹೆಚ್ಚಾಗಿವೆಯಂತೆ. ಅದರಲ್ಲೂ 21 ರಿಂದ 30 ವರ್ಷದ ಒಳಗಿನ ಹೆಣ್ಣುಮಕ್ಕಳು ಹೆಚ್ಚಾಗಿ ಒಂಟಿತನ, ಆತಂಕ, ಒತ್ತಡ ಹಾಗೂ ದಿಗಿಲಿನಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 

‘ಈ ಲಾಕ್‌ಡೌನ್‌ ಎಂಬುದು ಎಲ್ಲರಲ್ಲೂ ಆತಂಕ ಹೆಚ್ಚಿಸಿದೆ. ಆದರೆ ಮನೆಗೆಲಸ ಮಾಡಿಕೊಂಡು, ಚಿಕ್ಕ ಮಗುವನ್ನು ಡೇ ಕೇರ್‌ನಲ್ಲಿ ಬಿಟ್ಟು ಉದ್ಯೋಗವನ್ನೂ ನಿಭಾಯಿಸುತ್ತಿದ್ದ ಹೆಣ್ಣುಮಕ್ಕಳು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುವಾಗ ಕೆಲವೊಂದು ಸವಾಲುಗಳು ಎದುರಾಗುವುದು ಸಹಜ. ಪತಿಯೂ ಇದೇ ರೀತಿ ವರ್ಕ್‌ ಫ್ರಮ್‌ ಹೋಂ ಮಾಡುತ್ತಿದ್ದರೆ, ಚಿಕ್ಕ ಮಗುವಿದ್ದರೆ ಒತ್ತಡ ಆಕೆಯ ಮೇಲೇ ಹೆಚ್ಚುತ್ತದೆ’ ಎನ್ನುವ ಆಪ್ತ ಸಮಾಲೋಚಕಿ ಎಸ್‌.ಪ್ರಮೀಳಾ, ಈ ಮಾನಸಿಕ ಒತ್ತಡದಿಂದ ಹೊರಬರಲು ಕೆಲವೊಂದು ಸಲಹೆಗಳನ್ನು ಸೂಚಿಸುತ್ತಾರೆ. 

* ನಿಮ್ಮನ್ನು ಕಾಡುತ್ತಿರುವ ಭಯ ಹಾಗೂ ಆತಂಕವನ್ನು ಒಪ್ಪಿಕೊಳ್ಳಿ. ಈ ಸಂದರ್ಭದಲ್ಲಿ ನಿಮ್ಮಂತೆ ಎಲ್ಲರಲ್ಲೂ ಈ ರೀತಿಯ ಭಾವನೆ ಬಂದಿರುತ್ತದೆ ಎಂಬುದನ್ನು ಮರೆಯದಿರಿ. ಇದನ್ನು ಅರ್ಥ ಮಾಡಿಕೊಂಡರೆ ನಿಮ್ಮಲ್ಲಿ ಭಯ, ಆತಂಕ ಕಾಡುವುದು ಸಹಜವಾಗಿ ಕಡಿಮೆಯಾಗುತ್ತದೆ.

* ಇಂದಿನ ದಿನದ ಬಗ್ಗೆಯಷ್ಟೇ ಯೋಚಿಸಿ. ಮುಂದೆ ಏನಾಗಬಹುದು ಎಂಬ ಚಿಂತೆ ನಿಮ್ಮನ್ನು ಆವರಿಸಿದರೆ ಆ ಯೋಚನೆಯನ್ನು ಅಲ್ಲಿಗೇ ನಿಲ್ಲಿಸಿ, ಇಂದು ಮಾಡುತ್ತಿರುವ ಕೆಲಸಗಳ ಮೇಲೆ ಗಮನ ಹರಿಸಿ.

* ಅಗತ್ಯವಿರುವ ಬೇರೆ ಬೇರೆ ಕೆಲಸಗಳನ್ನು ಮಾಡುವತ್ತ ಗಮನ ಹರಿಸಿ. ಅದಕ್ಕೆಂದೇ ಸಮಯ ಹೊಂದಿಸಿಕೊಳ್ಳಿ. ಇದರಿಂದ ಕೆಟ್ಟ ಯೋಚನೆಗಳು ಮನಸ್ಸಿನಲ್ಲಿ ಸುಳಿಯಲು ಜಾಗವಿರುವುದಿಲ್ಲ. ಜೊತೆಗೆ ಇದರಿಂದ ಸಮಸ್ಯೆ ನಿರ್ವಹಣಾ ತಂತ್ರವನ್ನು ಕೂಡ ಕಲಿಯಬಹುದು.

* ಪದೇ ಪದೇ ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಬರುವ ಮಾಹಿತಿಗಳನ್ನು ಕಲೆ ಹಾಕುವುದನ್ನು ಕಡಿಮೆ ಮಾಡಿ. ಇದರಿಂದ ಶಾಂತಿ, ಸಮಾಧಾನಕ್ಕಿಂತ ದುಗುಡವೇ ಹೆಚ್ಚುತ್ತದೆ.

* ಕುಟುಂಬದ ಸದಸ್ಯರಿಂದ ದೂರವಿದ್ದರೆ ಅವರ ಜೊತೆ ಸಂವಹನ ಇಟ್ಟುಕೊಳ್ಳಿ. ಸಾಮಾಜಿಕ ಜಾಲತಾಣಗಳು ಹಾಗೂ ವಿಡಿಯೊ ಕರೆಗಳ ಮೂಲಕ ದಿನಕ್ಕೊಮ್ಮೆ ಮನೆಯವರ ಬಳಿ ಮಾತನಾಡಿ.

* ಹೊಸತನ್ನು ಕಲಿಯಲು ಇದೊಂದು ಅವಕಾಶ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಷಯಗಳನ್ನು ಕಲಿಯಿರಿ. ಆನ್‌ಲೈನ್ ಮೂಲಕ ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ಮಾಡಿ.

* ನಿಮ್ಮನ್ನು ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರ ಜೊತೆ ಹೋಲಿಸಿಕೊಳ್ಳಬೇಡಿ. ನಿಮ್ಮ ಜೀವನವೇ ಬೇರೆ, ಅವರು ಬದುಕುವ ರೀತಿಯೇ ಬೇರೆ. ನಿಮ್ಮ ಮನೆಗೆಲಸ, ಕಚೇರಿ‌ ಕೆಲಸ, ನಿಮ್ಮ ಸಂಸಾರ ಇಷ್ಟರ ಬಗ್ಗೆಯೇ ಯೋಚಿಸಿ.

ಆನ್‌ಲೈನ್ ಯೋಗ ತರಗತಿ
ಆನ್‌ಲೈನ್‌ ಯೋಗ ತರಗತಿಗೆ ಸೇರಿಕೊಳ್ಳಿ. ದಿನದ ಕೆಲಸದ ಆರಂಭಕ್ಕೂ ಮೊದಲ ಅರ್ಧಗಂಟೆ ಯೋಗ ಮತ್ತು ಧ್ಯಾನ ಮಾಡಿ. ಭಯ, ಆತಂಕ ನಿವಾರಣೆಗೆ ಯೋಗ, ಧ್ಯಾನವೇ ಮದ್ದು.

ಕಾಫಿ ಕುಡಿಯಲು ಸಮಯ ಮೀಸಲಿಡಿ
ಕಚೇರಿಯಲ್ಲಿ ಸಿಗುವ ಕಾಫಿ ವಿರಾಮವನ್ನು ಮನೆಯಲ್ಲೂ ತೆಗೆದುಕೊಳ್ಳಿ. ಆ ವೇಳೆ ಕಚೇರಿಯಲ್ಲಿನ ಆಪ್ತರ ಜೊತೆ ವಿಡಿಯೊ ಕರೆ ಮಾಡಿ ಮಾತನಾಡಿ. ಜೊತೆಗೆ ಮನೆಯಲ್ಲಿ ನೀವು ಬಿಡುವಿನ ವೇಳೆ ಮಾಡಿದ ಪೇಂಟಿಂಗ್, ಡ್ರಾಯಿಂಗ್, ಹೂದೋಟವನ್ನು ತೋರಿಸಿ. ಅವರ ಹವ್ಯಾಸವನ್ನು ಕೇಳಿ ತಿಳಿದುಕೊಳ್ಳಿ. ಕಚೇರಿ ಕೆಲಸದ ಬಗ್ಗೆಯೂ ಚರ್ಚಿಸಿ. ಅವರ ಅನುಭವಗಳನ್ನು ಕೇಳಿ. 

ಕಚೇರಿಯ ವೇಳಾಪಟ್ಟಿಯನ್ನೇ ಮುಂದುವರಿಸಿ
ಕಚೇರಿ ಕೆಲಸ ಮಾಡುವ ನಿರ್ದಿಷ್ಟ ಸಮಯದಲ್ಲಿ ಮನೆಯಲ್ಲೂ ಕೆಲಸ ಮಾಡಿ. ಕಚೇರಿಯಲ್ಲಿ ಕೆಲಸಕ್ಕೆ ಹೋಗುವಾಗ ತಯಾರಾಗುವಂತೆ ತಯಾರಾಗಿ. ಆಗ ನಿಮಗೆ ಕಚೇರಿಗೆ ಹೋಗುತ್ತಿಲ್ಲ ಎಂಬ ಭಾವನೆ ದೂರಾಗುತ್ತದೆ. ಜೊತೆಗೆ ಕೆಲಸದ ಸಂಪೂರ್ಣ ತೃಪ್ತಿ ಸಿಗುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಆಪ್ತಸಮಾಲೋಚಕರ ಸಹಾಯ ಪಡೆಯಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು