ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು ಗೊತ್ತೆ?

Last Updated 16 ನವೆಂಬರ್ 2021, 7:37 IST
ಅಕ್ಷರ ಗಾತ್ರ

ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಕ್ಕರೆ ಸೇವನೆಅತಿ ಕೆಟ್ಟ ಅಭ್ಯಾಸ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳುತ್ತದೆ. ಸಕ್ಕರೆ ಸೇವನೆ ಒಂದು ರೀತಿಯ ಸ್ಲೋ ಪಾಯಿಸನ್. ಇದರ ಸೇವನೆಯಿಂದ ಅತಿ ಹೆಚ್ಚು ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಎಲ್ಲಾ ಬಗೆಯ ಆರೋಗ್ಯ ಸಮಸ್ಯೆಗೆ ಸಕ್ಕರೆಯೇ ಮುಖ್ಯ ಕಾರಣ ಎಂದು ಎಲ್ಲಾ ತಜ್ಞರು ಅಭಿಪ್ರಾಯ ಪಡುತ್ತಾರೆ. ಹಾಗಿದ್ದರೆ ಸಕ್ಕರೆ ಸೇವನೆಯೇ ಮಾಡಬಾರದೇ.. ಖಂಡಿತ ಮಾಡಬಹುದು, ಎಷ್ಟು ಪ್ರಮಾಣದಲ್ಲಿ ಮಾಡಬೇಕು, ಯಾವ ಸಮಯದಲ್ಲಿ ಸಕ್ಕರೆಯುಕ್ತ ಪದಾರ್ಥಗಳ ಸೇವನೆ ಒಳ್ಳೆಯದು ಎಂಬುದರ ಬಗ್ಗೆ ಫೊರ್ಟಿಸ್ ಆಸ್ಪತ್ರೆಯಎಂಡೋಕ್ರೈನಾಲಜಿ ಕನ್ಸಲ್ಟೆಂಟ್ ಡಾ. ಶ್ರೀನಿವಾಸ್ ಪಿ. ಮುನಿಗೋಟಿ ಮಾಹಿತಿ ನೀಡಿದ್ದಾರೆ.

ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಒಳ್ಳೆಯದು:

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ದಿನಕ್ಕೆ 2 ಚಮಚದಷ್ಟು ಸರಿದೂಗುವ ಸಕ್ಕರೆಯುಕ್ತ ಆಹಾರವನ್ನು ಮಾತ್ರ ನಾವು ಸೇವಿಸಬೇಕು. ಅಂದ್ರೆ 10 ಗ್ರಾಂನಷ್ಟು. ಅತಿಯಾದ ಸಕ್ಕರೆ ಸೇವನೆ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಸಕ್ಕರೆ ಎಂದಾಕ್ಷಣ ಜೇನುತುಪ್ಪ, ಬೆಲ್ಲ, ಸಿಹಿ ಇರುವ ಹಣ್ಣು, ಸಿಹಿಯನ್ನು ಒಳಗೊಂಡ ಆಹಾರ ಪದಾರ್ಥಗಳು ಎಲ್ಲವೂ ಸಿಹಿಯುಕ್ತ ಅಂದರೆ ಸಕ್ಕರೆಯುಕ್ತ ಪದಾರ್ಥಗಳು ಎಂದೇ ಪರಿಗಣಿಸಲಾಗುತ್ತದೆ. ಇದು ನಾವು ದೈನಂದಿನ ಸೇವಿಸುವ ಕ್ಯಾಲೋರಿಗಳಲ್ಲಿ ಶೇ.5ರಷ್ಟು ಮೀರಿರಬಾರದು. ವಯಸ್ಕರು ಪ್ರತಿದಿನ 30-35 ಗ್ರಾಂಗಿಂತ ಹೆಚ್ಚು ಸಕ್ಕರೆಯುಕ್ತ ಆಹಾರ ಸೇವಿಸಬಾರದು. 4 ರಿಂದ 6 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ 19 ಗ್ರಾಂಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು. 7 ರಿಂದ 10 ವರ್ಷ ವಯಸ್ಸಿನ ಮಕ್ಕಳು 24 ಗ್ರಾಂಗಿಂತ ಸಕ್ಕರೆ ಪ್ರಮಾಣ ಹೆಚ್ಚಾಗಿ ತೆಗೆದುಕೊಳ್ಳಬಾರದು. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (ಎಚ್‌ಎ) ಪ್ರಕಾರ ಪುರುಷರು ದಿನಕ್ಕೆ 9 ಟೀ ಚಮಚದಷ್ಟು (36 ಗ್ರಾಂ ಅಥವಾ 150 ಕ್ಯಾಲೋರೀಸ್) ಮಾತ್ರ ಸಕ್ಕರೆ ಪ್ರಮಾಣದ ಆಹಾರ ಸೇವಿಸಬೇಕು. ಮಹಿಳೆಯರು 6 ಟೀ ಚಮಚ ಅಂದರೆ 25 ಗ್ರಾಂ ಅಥವಾ 100 ಕ್ಯಾಲೋರಿಗಳಷ್ಟು ಮಾತ್ರ ಸಕ್ಕರೆಯುಕ್ತ ಆಹಾರ ಸೇವಿಸಬಹುದು ಎಂದು ಶಿಫಾರಸು ಮಾಡುತ್ತದೆ.

ಸಂಸ್ಕರಿಸಿದ ಆಹಾರದಲ್ಲಿ ಸಕ್ಕರೆ ಪ್ರಮಾಣ ಇರಲಿದೆಯೇ?

ಪ್ರಿಸರ್ವೇಟಿವ್ ಆಹಾರಗಳಲ್ಲಿ ಹೆಚ್ಚು ಸಕ್ಕರೆ ಪ್ರಮಾಣ ಇರಲಿದೆ. ಹೀಗಾಗಿ ಇಂಥ ಆಹಾರಗಳನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು. ಮೊದಲು ನಿಮ್ಮ ದೇಹದ ತೂಕ ಹಾಗೂ ಎತ್ತರಕ್ಕೆ ಅನುಗುಣವಾಗಿ ಎಷ್ಟು ಕ್ಯಾಲೊರಿಸ್ ಸೇವಿಸಬೇಕು ಎಂದು ತಿಳಿದುಕೊಳ್ಳಿ. ನಂತರ ನೀವು ಖರೀದಿಸುವ ಪ್ರಿಸರ್ವೇಟಿವ್ ಆಹಾರದ ಪ್ಯಾಕೇಟ್ ಮೇಲೆ ಜೇನುತುಪ್ಪ, ಸಾವಯವ ಕಬ್ಬಿನ ಸಕ್ಕರೆ, ಹಾಗೂ ತೆಂಗಿನ ಸಕ್ಕರೆ ಕಾಣಿಸಿಕೊಂಡರೆ ಎಷ್ಟು ಪ್ರಮಾಣದಲ್ಲಿ ಹಾಕಲಾಗಿದೆ ಎಂದು ತಿಳಿದುಕೊಳ್ಳಿ.

ಸಕ್ಕರೆ ಯಾಕೆ ಆರೋಗ್ಯಕ್ಕೆ ಹಾನಿ:

ಸಕ್ಕರೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
* ಹಲ್ಲು ಹುಳುಕಾಗುವುದು
* ಯಕೃತ್ ಹೆಚ್ಚು ಕೆಲಸ ಮಾಡಲು ಒತ್ತಡ ಹಾಕುವುದು
* ಯಕೃತ್‌ನಲ್ಲಿ ಫ್ರಕ್ಟೋಸ್ ಓವರ್‌ಲೋಡ್ ಆಗುವುದರಿಂದ ಪಿತ್ತಜನಕಾಂಗದ ಕಾಯಿಲೆ ಬರಬಹುದು.
* ಸಕ್ಕರೆ ಇನ್ಸುಲಿನ್ ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು.
* ಸಂಭಾವ್ಯ ಕ್ಯಾನ್ಸರ್‌ಗೆ ತುತ್ತಾಗಬಹುದು
* ಮೆದುಳಿನ ಮೇಲೆ ಭಾರಿ ಪ್ರಮಾಣದ ಡೋಪಮೈನ್ ಬಿಡುಗಡೆಗೆ ಕಾರಣವಾಗಿ, ಸಕ್ಕರೆ ಸೇವನೆಗೆ ವ್ಯಸನಿಗಳಾಗಬಹುದು
* ಕೊಲೆಸ್ಟ್ರಾಲ್ ಹಾಗೂ ಮಕ್ಕಳಲ್ಲಿ, ವಯಸ್ಕರಲ್ಲಿ ಓಬೆಸಿಟಿಗೆ ಕಾರಣವಾಗಬಹುದು
* ಹೃದಯ ಕಾಯಿಲೆಗೆ ಕಾರಣವಾಗಬಹುದು

ಸಕ್ಕರೆ ಮತ್ತು ತೂಕ:

ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವೇ ಸಕ್ಕರೆ. ಹೆಚ್ಚು ಕ್ಯಾಲೊರಿಗಳನ್ನು ನೀಡುವುದರಿಂದ ಎಲ್ಲಾ ವಯಸ್ಕರು ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅಧಿಕ ತೂಕ ಹೊಂದಿರುವವರು ಹೃದ್ರೋಗ, ಕ್ಯಾನ್ಸರ್ ಮತ್ತು ಟೈಪ್-2 ನಂಥ ಆರೋಗ್ಯ ಸಮಸ್ಯೆಗೆ ಬೇಗ ತುತ್ತಾಗುತ್ತಾರೆ. ಹೀಗಾಗಿ ಹೆಚ್ಚು ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸೇವಿಸಿ, ಕಡಿಮೆ ಸಕ್ಕರೆ ಪ್ರಮಾಣ ಇರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಆದಷ್ಟು ಸಕ್ಕರೆ ಮಿಶ್ರಣವಿಲ್ಲದ ಆಹಾರಗಳನ್ನು ಸೇವಿಸಲು ಆದ್ಯತೆ ನೀಡಿ.

- ಡಾ. ಶ್ರೀನಿವಾಸ್ ಪಿ. ಮುನಿಗೋಟಿ,ಫೊರ್ಟಿಸ್ ಆಸ್ಪತ್ರೆಯಎಂಡೋಕ್ರೈನಾಲಜಿ ಕನ್ಸಲ್ಟೆಂಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT