ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tuberculosis– ವಿಶ್ವ ಕ್ಷಯರೋಗ ದಿನ 2022: ಈ ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಇದು ಟಿಬಿ ಆಗಿರಬಹುದು
Last Updated 24 ಮಾರ್ಚ್ 2022, 7:00 IST
ಅಕ್ಷರ ಗಾತ್ರ

ಕ್ಷಯರೋಗ... ಹಿಂದಿನಕಾಲದಿಂದಲೂ ಈ ರೋಗಕ್ಕೆ ಜನ ಹೆದರುತ್ತಾರೆ. ಆದರೆ, ಈ ರೋಗದಷ್ಟು ಬೇರಾವ ರೋಗವೂ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಕೆಮ್ಮು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸದೇ ಮಾಡುವ ನಿರ್ಲಕ್ಷ್ಯದಿಂದ ಜೀವವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ತಲುಪುತ್ತಾರೆ. ಜೊತೆಗೆ ತಮ್ಮ ಸುತ್ತಮುತ್ತಲಿನ ಜನರಿಗೂ ಈ ಕಾಯಿಲೆಯನ್ನು ಅಂಟಿಸುತ್ತಾರೆ. ಕ್ಷಯರೋಗದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದು ಅನಿವಾರ್ಯ. ಇಂದು ವಿಶ್ವ ಕ್ಷಯರೋಗ ದಿನ. ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕ್ಷಯರೋಗದ ಲಕ್ಷಣದ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.

ಕ್ಷಯರೋಗ ಎಂದರೇನು ಮತ್ತು ಅದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಸೋಂಕಿತ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಅಥವಾ ನಗುವಾಗ, ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾವು ಒಬ್ಬರಿಂದ ಇನ್ನೊಬ್ಬರಿಗೆ ಗಾಳಿಯ ಮೂಲಕ ಚಲಿಸುತ್ತದೆ, ಇದು ಟಿಬಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯ ಸುಲಭವಾಗಿ ಹರಡಬಹುದಾದರೂ, ಟಿಬಿ ಸೋಂಕಿಗೆ ಒಳಗಾಗುವುದು ಕಷ್ಟ. ಇದು ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ, ಆದರೆ ಇದು ದುಗ್ಧರಸ ಗ್ರಂಥಿಗಳು, ಹೊಟ್ಟೆ, ಬೆನ್ನುಮೂಳೆ, ಕೀಲುಗಳು ಮತ್ತು ದೇಹದ ಇತರ ಪ್ರದೇಶಗಳ ಮೇಲೂ ಪರಿಣಾಮ ಬೀರಬಹುದು.

ಕುಟುಂಬ ಸದಸ್ಯರು, ನಿಕಟ ಪರಿಚಯಸ್ಥರು ಮತ್ತು ಒಟ್ಟಿಗೆ ವಾಸಿಸುವ ಅಥವಾ ಒಟ್ಟಿಗೆ ಕೆಲಸ ಮಾಡುವವರು ಈ ರೋಗಕ್ಕೆ ಸುಲಭವಾಗಿ ತುತ್ತಾಗಬಹುದು. ಹೀಗಾಗಿ ನಿಮ್ಮ ಸುತ್ತಮುತ್ತಲು ೧೫ ದಿನಕ್ಕೂ ಮೀರಿ ಕೆಮ್ಮುತ್ತಿದ್ದರೆ ಅವರನ್ನು ಐಸೋಲೇಟ್‌ ಮಾಡುವುದು ಒಳ್ಳೆಯದು. ಜೊತೆಗೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆಗೆ ಒಳಗಾಗಬೇಕು. ಒಂದು ವೇಳೆ ಕ್ಷಯರೋಗ ಇರುವುದು ಗೊತ್ತಾದ ಮೇಲೂ ಅವರ ಜೊತೆ ಹೆಚ್ಚು ನಿಕಟ ಸಂಪರ್ಕ ಒಳ್ಳೆಯದಲ್ಲ. ಇದು ಇತರರಿಗೂ ಟಿಬಿ ಹರಡಲು ಅವಕಾಶ ಮಾಡಿಕೊಡುತ್ತದೆ.

ರೋಗಲಕ್ಷಣಗಳು

ಕ್ಷಯರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳು ನಿಮ್ಮ ದೇಹದಲ್ಲಿ ವಾಸಿಸಬಹುದಾದರೂ, ನಿಮ್ಮಲ್ಲಿರುವ ರೋಗನಿರೋಧಕ ಶಕ್ತಿಯಿಂದ ನಿಮ್ಮಲ್ಲಿ ಆ ಕ್ಷಣವೇ ಅದರ ರೋಗ ಲಕ್ಷಣಗಳು ಕಂಡು ಬರದೇ ಇರಬಹುದು.

ಕೆಲಮೊಮ್ಮೆ ಕ್ಷಯರೋಗ ವಾಸಿಯಾಗುವ ಸಾಧ್ಯತೆ ಇದೆ. ಆದರೆ, ಕೆಲವೊಮ್ಮೆ ಈ ರೋಗದ ಲಕ್ಷಣಗಳು ವರ್ಷಗಳ ಬಳಿಕ ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು.

ಟಿಬಿ ಬ್ಯಾಕ್ಟೀರಿಯಾವು ಮೊದಲು ಶ್ವಾಸಕೋಶದ ಮೂಲಕ ದೇಹವನ್ನು ಪ್ರವೇಶಿಸುತ್ತದೆ, ನಂತರ ದುಗ್ಧರಸ ಗ್ರಂಥಿಗಳಿಗೆ (ನಿಮ್ಮ ದೇಹವನ್ನು ಸುತ್ತುವರೆದಿರುವ ರಕ್ಷಣಾತ್ಮಕ ಗ್ರಂಥಿಗಳು) ಮತ್ತು ಇತರ ಭಾಗಗಳಿಗೆ ನಿಧಾನವಾಗಿ ಪಸರಿಸಬಹುದು.

ಆರೋಗ್ಯ ಕ್ಷೇತ್ರ ಎಷ್ಟೇ ಎತ್ತರಕ್ಕೆ ಬೆಳೆದರೂ ಕ್ಷಯರೋಗ ಈಗಲೂ ಕಡಿಮೆ ಇಲ್ಲ. ಪ್ರತಿ ವರ್ಷ ಈ ರೋಗಕ್ಕೆ ತುತ್ತಾಗುವವರ ಸಂಖ್ಯೆ ಶೇಕಡವಾರು ಹೆಚ್ಚಳವಾಗುತ್ತಿದೆ.

ಕ್ಷಯರೋಗವು ಶ್ವಾಸಕೋಶದ ಮೇಲೆ ಪರಿಣಾಮ ಬೀರಿದ ಬಳಿಕ ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರಿದಾಗ ಎಕ್ಸ್‌ಟ್ರಾಪಲ್ಮನರಿ ಕ್ಷಯರೋಗವು ಸಂಭವಿಸುತ್ತದೆ ಮತ್ತು ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಂಡ ಜನರಲ್ಲಿ ಈ ರೋಗ ವೇಗವಾಗಿ ಹರಡುತ್ತದೆ. ಹೀಗಾಗಿ ಕೆಲವು ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

• ೧೫ ದಿನಕ್ಕೂ ಮೀರಿದ ಕೆಮ್ಮು
* ರಕ್ತ ಅಥವಾ ದಪ್ಪ ಲೋಳೆಯ ಕೆಮ್ಮುವಿಕೆ
• ರಾತ್ರಿ ಬೆವರುವಿಕೆ
• ಆಯಾಸ ಅಥವಾ ದುರ್ಬಲ ಭಾವನೆ
• ತೂಕ ನಷ್ಟ
• ಹಸಿವು ನಷ್ಟ
• ಜ್ವರ
• ಕುತ್ತಿಗೆಯಲ್ಲಿ ಊದಿಕೊಂಡ ದುಗ್ಧರಸ ಗ್ರಂಥಿಗಳು
* ನಿಶ್ಶಕ್ತಿ

ಕೆಲವರು ಈ ಲಕ್ಷಣಗಳನ್ನು ನಿಲರ್ಕ್ಷಿಸುತ್ತಾರೆ. ವಾತಾವರಣದಲ್ಲಿನ ಬದಲಾವಣೆಯಿಂದ ಕೆಮ್ಮು ಸಾಮಾನ್ಯವೆಂದುಕೊಂಡು ನಿರ್ಲಕ್ಷಿಸುತ್ತಾರೆ. ಇದರಿಂದ ಶ್ವಾಸಕೋಶದಲ್ಲಿನ ಸೋಂಕು ದೇಹದ ಇತರ ಭಾಗಗಳಿಗೂ ಹರಡಲು ಸಮಯ ನೀಡಿದಂತಾಗುತ್ತದೆ. ಕೆಲಮೊಮ್ಮೆ ಒಳಗೆ ಸೋಂಕು ಇದ್ದರೂ ಕೆಮ್ಮು ಕಡಿಮೆಯಾಗುವಂತೆ ಭಾಸವಾಗಬಹುದು. ಇದರಿಂದ ವೈದ್ಯರನ್ನು ಭೇಟಿ ಮಾಡುವ ಅವಶ್ಯಕತೆ ಇಲ್ಲವೆಂದು ಸುಮ್ಮನಾಗುತ್ತಾರೆ. ಈ ನಿರ್ಲಕ್ಷ್ಯ ನಿಮ್ಮ ಜೀವಕ್ಕೆ ಹೆರವಾಗಬಹುದು. ಕ್ಷಯರೋಗ ಚಿಕಿತ್ಸಿಸಬಹುದಾದ ರೋಗವಾಗಿರುವುದರಿಂದ ರೋಗಲಕ್ಷಣಗಳನ್ನು ಗುರುತಿಸಲು ಮತ್ತು ಚಿಕಿತ್ಸೆಯನ್ನು ಮುಂಚಿತವಾಗಿ ಪಡೆದುಕೊಳ್ಳುವ ಜಾಗೃತಿ ಅನಿವಾರ್ಯ.

- ಲೇಖಕರು ಡಾ ಕೆ ಎಸ್ ಸತೀಶ್, ಹಿರಿಯ ಸಲಹೆಗಾರ - ಶ್ವಾಸಕೋಶಶಾಸ್ತ್ರ, ಫೋರ್ಟಿಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT