ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ಹಣ್ಣಿನಲ್ಲಿ ಏನಿದೆ?

Last Updated 1 ಏಪ್ರಿಲ್ 2011, 19:35 IST
ಅಕ್ಷರ ಗಾತ್ರ

ಹೊರಗೆ ಹಸಿರು ಕೋಟೆ, ಒಳಗೆ ಕೆಂಪು ಕೋಟೆ, ಸುತ್ತಲೂ ಕರಿಯ ಸೈನಿಕರು ಎಂದೊಡನೇ ಬಾಯಲ್ಲಿ ನೀರೂರಿಸುತ್ತಲೇ ನೆನಪಾಗುವುದು ಕಲ್ಲಂಗಡಿಹಣ್ಣು! ಸುಡು ಬಿಸಿಲಿಗೆ ತೃಷೆ ನೀಗಿಸುವುದಷ್ಟೇ ಅಲ್ಲದೆ ಅನೇಕ ಔಷಧೀಯ ಗುಣಗಳನ್ನೂ ಇದು  ಮೈಗೂಡಿಸಿಕೊಂಡಿದೆ. ಇದರ ಮೂಲ ಆಫ್ರಿಕವಾದರೂ ಹೆಚ್ಚು ಬೆಳೆಯುವುದು ಚೀನಾ ದೇಶದಲ್ಲಿ. ತುಳುವಿನಲ್ಲಿ ಬಚ್ಚಂಗಾಯಿ ಎಂಬ ಹೆಸರಿನಿಂದ ಕರೆಯಲ್ಪಡುವ ಇದು ಕ್ಯಾಲ್ಸಿಯಂ, ಮ್ಯಾಂಗನೀಸ್, ಸಸಾರಜನಕ, ಕಬ್ಬಿಣ,ಮೇದಸ್ಸು ಹಾಗೂ ವಿಟಮಿನ್ ‘ಸಿ’ ಮೊದಲಾದ ಜೀವಸತ್ವಗಳಿಂದ ಸಮೃದ್ಧವಾಗಿದೆ.

ಬೀಟಾ ಕೆರೋಟಿನ್ ಎಂಬ ಅಂಶವು ಕಲ್ಲಂಗಡಿ ಹಣ್ಣಿನಲ್ಲಿ ಹೇರಳವಾಗಿರುವುದರಿಂದ ಅದು ಕ್ಯಾನ್ಸರ್ ಕಣಗಳನ್ನು ನಾಶಗೊಳಿಸುತ್ತದೆ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಇದರಲ್ಲಿನ ವಿಟಮಿನ್  ‘ಎ’   ಜೀವಸತ್ವವು ಅಂಧತ್ವವನ್ನು ದೂರವಿಟ್ಟರೆ, ಹೆಚ್ಚಿನ ಪ್ರಮಾಣದಲ್ಲಿರುವ ಸೋಡಿಯಂ, ಪೊಟಾಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜತೆಗೆ ಹೃದಯವು ಸುಗಮವಾಗಿ ಕಾರ್ಯವನ್ನು ನಿರ್ವಹಿಸುವಂತೆ ಮಾಡುತ್ತದೆ ಎಂಬುದನ್ನು ಫ್ಲೋರಿಡಾ ಯೂನಿವರ್ಸಿಟಿಯ ಅಧ್ಯಯನವು ಹೇಳುತ್ತದೆ. ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಶಕ್ತಿವರ್ಧಕ ಆಹಾರವಾಗಿರುವುದರಿಂದ ಇದು ಡಯಟ್ ಪ್ರಿಯರ ಹಣ್ಣು ಎನಿಸಿಕೊಂಡಿದೆ. ಜಾಸ್ತಿ ನಾರಿನಂಶವಿರುವುದರಿಂದ ಮಧುಮೇಹಿಗಳೂ ಇದನ್ನು ಸೇವಿಸಬಹುದಾಗಿದೆ.

ಮನೆಮದ್ದು ಹೀಗಿದೆ
 *ಉರಿಮೂತ್ರದಿಂದ ಬಳಲುತ್ತಿರುವವರು ಕಲ್ಲಂಗಡಿ ರಸಕ್ಕೆ ಮಜ್ಜಿಗೆ, ಎಳನೀರು, ಜೀರಿಗೆ, ಉಪ್ಪು ಹಾಕಿ ಕುಡಿದಲ್ಲಿ ಶೀಘ್ರವಾಗಿ ಬಾಧೆಯಿಂದ ಗುಣಮುಖರಾಗಬಹುದು.

 *ಸೂರ್ಯನ ಝಳದಿಂದಾಗಿ  ತಲೆನೋವು ಬಂದಿದ್ದರೆ  ಈ ಹಣ್ಣಿನ ರಸಕ್ಕೆ  ಸ್ವಲ್ಪ ಹಾಲು ಮತ್ತು ಸಕ್ಕರೆ ಬೆರೆಸಿ ಸೇವಿಸಿದರೆ  ಉಪಶಮನವಾಗುತ್ತದೆ.

 *ಸಿಪ್ಪೆಯನ್ನು ಅಂಗಾಲಿಗೆ ಉಜ್ಜಿದಲ್ಲಿ ಅಂಗಾಲಿನ ಉರಿಯು ಕಡಿಮೆಯಾಗಿ ದೇಹವು ತಂಪಾಗುತ್ತದೆ.

*ಕಲ್ಲಂಗಡಿ ರಸವನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಅರಶಿನ ಕಾಮಾಲೆಯು ವಾಸಿಯಾಗುತ್ತದೆ.

*ಮೂತ್ರ ಸಂಬಂಧೀ ಕಾುಲೆಗಳು, ಮಲಬದ್ಧತೆ, ಜಲಾಂಶದ ಕೊರತೆ ಇರುವವರಿಗೆ ಈ ಹಣ್ಣು ಬಹಳ ಉಪಯುಕ್ತವಾಗಿದೆ.

ಸೌಂದರ್ಯವರ್ಧಕವಾಗಿ:
*ಮುಖದಲ್ಲಿ ಕಪ್ಪನೆಯ ಕಲೆಗಳಿದ್ದರೆ -  ಹಣ್ಣನ್ನು ತೂತು ಮಾಡಿ ಸ್ವಲ್ಪ ತಿರುಳನ್ನು ಹೊರತೆಗೆದು ಬಟಾಣಿ ಮತ್ತು ಅಕ್ಕಿಯನ್ನು 1;2ರ ಅನುಪಾತದಲ್ಲಿ ಒಳಗೆ ತುಂಬಿ ವಾರದವರೆಗೆ ಹಾಗೇ ಇಟ್ಟು ಬಳಿಕ ಹೊರ ತೆಗೆದು ಕಾಳುಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ. ಬಂದ ಹಿಟ್ಟನ್ನು ಹಾಲಿನೊಂದಿಗೆ ಕಲಸಿ ಕಲೆ ಇರುವ ಜಾಗದಲ್ಲಿ ಕೆಲವು ದಿನಗಳವರೆಗೆ ಹಚ್ಚುತ್ತಾ ಬಂದಲ್ಲಿ ಮೊಡವೆ ಕಲೆಗಳು ಇಲ್ಲವಾಗಿ ಚರ್ಮವು ಕಾಂತಿಯುತವಾಗುತ್ತದೆ ಎನ್ನುವುದು ಬ್ಯೂಟೀಶಿಯನ್  ವೀಣಾ ಅವರ ಅಭಿಪ್ರಾಯವಾಗಿದೆ. ಅಲ್ಲದೆ ಒಣ ಚರ್ಮದಿಂದಾಗಿ ಬೇಸತ್ತಿರುವವರು ಇದರ ರಸವನ್ನು ಸ್ವಲ್ಪ ಹೊತ್ತು ಹಚ್ಚಿ ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಬೇಕು ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.

ಷಹಜಹಾನ್ಪುರಿ, ಜಾನ್‌ಪುರಿರೆ, ಫರೂಕಬಾದಿ, ಅಲಹಾಬಾದಿ, ಹಾಗೂ ಹೊರದೇಶದ ತಳಿಗಳಾದ ಅಷಿಯೋಮೆಟಿ, ಶುಗರ್‌ಬೇಬಿ, ಮಿಡ್‌ಗಟ್ ಹೀಗೆ ಕಲ್ಲಂಗಡಿಯಲ್ಲಿ ಬಗೆಬಗೆಯ ತಳಿಗಳಿರುವುದಾದರೂ ಪೌಷ್ಟಿಕತೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ.

ಒಟ್ಟಿನಲ್ಲಿ ‘ಬೇಸಿಗೆ ರಾಜ’ ಕಲ್ಲಂಗಡಿ ಹಣ್ಣು ಕಡಿಮೆ ಖರ್ಚಿಗೆ ಹೆಚ್ಚಿನ ಶಕ್ತಿ  ಹಾಗೂ ಆರೋಗ್ಯವನ್ನು ನೀಡುವಂತಹ ಫಲ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೂ ಪೋಷಕಾಂಶಗಳ ಆಗರವಾಗಿರುವ ಈ ಹಣ್ಣು  ಈಗೀಗ ವರ್ಷವಿಡೀ ದೊರಕುವುದಾದರೂ ಬೇಸಿಗೆಯಲ್ಲಷ್ಟೇ ಇದನ್ನು ಸೇವಿಸಬೇಕು   ಎಂದು ಹೇಳುವ ಆಯುರ್ವೇದ ವೈದ್ಯ ಡಾ.ಎ.ಎ.ಭಾಸ್ಕರ್‌ರವರ   ಎಚ್ಚರಿಕೆಯನ್ನು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT