ಮಂಗಳವಾರ, ಮೇ 17, 2022
29 °C

ಮನೆಯೇ ಮಂತ್ರಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೌದಲ್ವ, ಮನೆಯೊಂದು ದೇವಾಲಯವಿದ್ದಂತೆ, ಜೀವಂತಿಕೆ ತುಂಬಿದ ಮನೆಯದು ದಾಂಪತ್ಯದ ಸೊಗಸಿಗೊಂದು ಗರಿ ಸೇರಿಸಿದಂತೆ. ಗಂಡ-ಹೆಂಡತಿ, ಅಪ್ಪ-ಅಮ್ಮ, ಮಕ್ಕಳು, ಸೋದರ-ಸೋದರಿಯರು, ಭಾವ-ನಾದಿನಿ, ಅಣ್ಣ-ಅತ್ತಿಗೆ ಸಂಬಂಧಗಳನ್ನೆಲ್ಲಾ ಬೆಸೆದ ಕೊಂಡಿಯದು. ಇಂತಹ ಮನೆ ಭಾವಿಸಲಷ್ಟೇ ಅಲ್ಲದೇ ನೋಡಲೂ ಸೊಗಸಾಗಿದ್ದರೆ ಮತ್ತಷ್ಟು ಚಂದವಲ್ಲವೇ?

ನಾನೊಬ್ಬಳು ಉದ್ಯೋಗಸ್ಥ ಮಹಿಳೆ ಅಂದ ಮೇಲೆ ಮನೆಗೆಲಸ ಕೆಲವೊಮ್ಮೆ ಹೊರೆ ಎನಿಸುವುದು ಸಹಜ. ಆದರೆ ನನ್ನ ಪತಿರಾಯರು ನೀಡುವ ನೆರವದು ನನಗೆ ಸಾವಿರ ಆನೆಯ ಬಲವಿದ್ದಂತೆ. ಇಪ್ಪತ್ತು ವರ್ಷಗಳ ದಾಂಪತ್ಯದ ಬದುಕಿನಲ್ಲಿ ಮನೆಗೆಲಸಗಳಲ್ಲಿ ನನ್ನೊಂದಿಗೆ ನನ್ನವರು ಕೈಜೋಡಿಸದ ದಿನಗಳು ಬಹು ಅಪರೂಪ. ಅವರಿಗೆ ಆ ಕುರಿತಾಗಿ ಯಾವ ಕೀಳರಿಮೆಯೂ ಇಲ್ಲ. ಪ್ರತಿದಿನ ಬೆಳಗ್ಗೆ 5 ಗಂಟೆಗೆ ಶುರುವಾಗುವ ನಮ್ಮಿಬ್ಬರ ದಿನಚರಿ ರಾತ್ರಿ 11ಕ್ಕೆ ಮುಗಿಯುವಷ್ಟರಲ್ಲಿ ಸಾಕೇ ಸಾಕಾಗಿರುತ್ತದೆ. ಬಹುಶಃ ನನ್ನವರ ಸಹಕಾರವಿರದಿದ್ದರೆ ವರ್ಗಾವಣೆಯ ಶಿಕ್ಷೆ, ಓಡಾಟದ ಬವಣೆಯ ನಡುವೆ ನಾನೆಂದೋ ನನ್ನ ನೌಕರಿಗೆ ವಿದಾಯ ಹೇಳಬೇಕಾಗಿತ್ತೇನೋ. ಮನೆಗೆ ಬಂದವರೆಲ್ಲ ಮನೆ ತುಂಬಾ ಚೊಕ್ಕವಾಗಿದೆ ಎಂದಾಗ ಮನಸು ಮೊದಲು ಕೃತಜ್ಞತೆ ಸಲ್ಲಿಸುವುದು ನನ್ನವರಿಗೇನೇ.

ತಮ್ಮ ವೃತ್ತಿ ಬದುಕಿನಲ್ಲಿ ಅದೆಷ್ಟೇ ಒತ್ತಡಗಳಿದ್ದರೂ ಅವರ ದಿನಚರಿಯೆಂದೂ ಬದಲಾಗಿಲ್ಲ. ಬೆಳಗೆದ್ದು ಮನೆ ಸ್ವಚ್ಚಗೊಳಿಸುವುದರಿಂದ ಹಿಡಿದು ನನ್ನೆಲ್ಲಾ ಕೆಲಸಗಳಲ್ಲೂ ಕೈಜೋಡಿಸುವ ನನ್ನವರು ಸದಾ ಚಟುವಟಿಕೆಯಿಂದ ಇರಬಯಸುವವರು. ಮಗಳ ಕೆಲಸವೆಂದರಂತೂ ಒಂದು ಹೆಜ್ಜೆ ಮುಂದೆಯೇ. ಹೆಣ್ಣಿನ ಸಹಜ ದೈಹಿಕ ತಾಪತ್ರಯಗಳು ನನ್ನನ್ನೂ ಕಾಡುವಾಗ ಎಷ್ಟೋ ಬಾರಿ ಅವರೇ ಎಲ್ಲಾ ಕೆಲಸಗಳನ್ನೂ ನಿಭಾಯಿಸಿರುವುದುಂಟು, ಅಪ್ಪ-ಅಮ್ಮನ ಅನಾರೋಗ್ಯವೆಂದು ನಾನು ಆಸ್ಪತ್ರೆಯಲ್ಲೇ ಉಳಿಯಬೇಕಾದ ದಿನಗಳಲ್ಲೂ ಮಗಳ ಕಾಲೇಜಿಗೆ ತೊಂದರೆಯಾಗದಂತೆ ತಿಂಡಿ-ಊಟ, ಮನೆಗೆಲಸ ಎಲ್ಲವನ್ನೂ ನಿಭಾಯಿಸಿದವರು ನನ್ನವರು.

ಅನಿವಾರ್ಯವಾಗಿ ಚಿಕ್ಕಂದಿನಿಂದಲೂ ಬೇರೆಯವರ ಮನೆಯಲ್ಲಿ ಬೆಳೆದ ನನ್ನವರಿಗೆ ಅಲ್ಲಿಂದ ಶುರುವಾದ ಮನೆಗೆಲಸದ ಶಿಕ್ಷೆ ನನ್ನೊಂದಿಗಿನ ದಾಂಪತ್ಯದಿಂದಾಗಿ ಶಾಪವಾಗಿಬಿಟ್ಟಿತಾ ಎಂದು ಒಮ್ಮೊಮ್ಮೆ ಅನಿಸುವುದುಂಟು. ಎಷ್ಟೋ ಬಾರಿ ಇರುವ ನೌಕರಿಗೆ ವಿದಾಯ ಹೇಳಿ ಇನ್ನು ಮುಂದೆಯಾದರೂ ಅವರಿಗೆ ಮನೆಗೆಲಸದ ಹೊರೆ ತಪ್ಪಿಸುವ ಮನಸ್ಸಿದೆ. ಆ ದಿನಗಳಿಗಾಗಿ ಕಾತುರದಿಂದ ಕಾಯ್ತಾ ಇದೀನಿ.

ಎಂ.ಭಾರತಿ, ತುಮಕೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.