ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ₹70 ಸಾವಿರಕ್ಕೆ ತಲುಪಲಿದೆ ಚಿನ್ನದ ಬೆಲೆ!

ಜಾಗತಿಕ ರಾಜಕೀಯ ಅನಿಶ್ಚಿತತೆ ದರ ಹೆಚ್ಚಳಕ್ಕೆ ಕಾರಣ
Published 31 ಡಿಸೆಂಬರ್ 2023, 15:08 IST
Last Updated 31 ಡಿಸೆಂಬರ್ 2023, 15:08 IST
ಅಕ್ಷರ ಗಾತ್ರ

ಮುಂಬೈ: ರೂಪಾಯಿ ಸ್ಥಿರತೆ, ಜಾಗತಿಕ ರಾಜಕೀಯ ಅನಿಶ್ಚಿತ ಸ್ಥಿತಿ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಯ ನಿಧಾನಗತಿಯ ಕಾರಣದಿಂದಾಗಿ 2024ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹70 ಸಾವಿರಕ್ಕೆ ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ 10 ಗ್ರಾಂ ಚಿನ್ನದ ದರ ₹63,060 ಇದೆ. ಡಿಸೆಂಬರ್ ಆರಂಭದಲ್ಲಿ, ಮಧ್ಯಪ್ರಾಚ್ಯದಲ್ಲಿ ಜಾಗತಿಕ ಉದ್ವಿಗ್ನತೆಗಳಿಂದ ಬೆಲೆಗಳು ಮತ್ತೆ ಗಗನಕ್ಕೇರಿದವು ಎಂದು ಹೇಳಿದ್ದಾರೆ.

2023ರಲ್ಲಿ ಚಿನ್ನದ ದರ ಅಸ್ಥಿರವಾಗಿಯೇ ಇತ್ತು. ದೇಶೀಯ ಮಾರುಕಟ್ಟೆಯಲ್ಲಿ ಮೇ 4ರಂದು ಪ್ರತಿ 10 ಗ್ರಾಂಗೆ ₹61,845 ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಔನ್ಸ್‌ಗೆ (28.34 ಗ್ರಾಂ) 2,083 ಡಾಲರ್‌ಗೆ ತಲುಪಿತ್ತು. ನವೆಂಬರ್ 16ರಂದು ₹61,914ಕ್ಕೆ ಏರಿತು  ಎಂದು ಕಾಮ್‌ಟ್ರೆಂಡ್ಸ್‌ ಸಂಸ್ಥೆಯ ಸಂಶೋಧನಾ ನಿರ್ದೇಶಕ ಜ್ಞಾನಶೇಖರ್ ತ್ಯಾಗರಾಜನ್ ಪಿಟಿಐಗೆ ತಿಳಿಸಿದರು.

ಡಿಸೆಂಬರ್‌ 4ರಂದು ಚಿನ್ನದ ಬೆಲೆಯು 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದರೆ ₹64,063ಕ್ಕೆ ತಲುಪಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2024ರಲ್ಲಿ ಪ್ರತಿ ಔನ್ಸ್‌ಗೆ 2,400 ಡಾಲರ್‌ಗೆ ಏರಿಕೆ ಆಗುವ ನಿರೀಕ್ಷೆಯಿದೆ. ಭಾರತದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ (ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಬಂಡವಾಳವನ್ನು ಕಡಿಮೆ ಮಾಡುವುದರಿಂದ ರೂಪಾಯಿ ದುರ್ಬಲಗೊಳ್ಳಬಹುದು). ಇದು ದೇಶದಲ್ಲಿ ಚಿನ್ನದ ದರವನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಅವರು ಹೇಳಿದರು.

ಅಖಿಲ ಭಾರತ ಹರಳುಗಳು ಮತ್ತು ಆಭರಣ ಮಂಡಳಿ (ಜಿಜೆಸಿ) ಅಧ್ಯಕ್ಷ ಸಾಯಂ ಮೆಹ್ರಾ ಮಾತನಾಡಿ, ಚಿನ್ನದ ದರದಲ್ಲಿನ ಏರಿಳಿತವು ಮಾರಾಟದ ಮೇಲೆ ಪರಿಣಾಮ ಬೀರಿದೆ. ಅಮೆರಿಕದಲ್ಲಿ ದರ ಕಡಿತ, ಜಾಗತಿಕ ರಾಜಕೀಯ ಬಿಕ್ಕಟ್ಟು ಮುಂದುವರಿಕೆ, ದುರ್ಬಲ ರೂಪಾಯಿಯಿಂದಾಗಿ ಚಿನ್ನದ ದರ ಮತ್ತಷ್ಟು ಏರುತ್ತದೆ. ಹೀಗಾಗಿ, ಚಿನ್ನದ ದರವು 2024ರಲ್ಲಿ 10 ಗ್ರಾಂಗೆ ₹68 ಸಾವಿರದಿಂದ ₹70 ಸಾವಿರ ಮುಟ್ಟುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT