ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ, ಪುಸ್ತಕದ ಗ್ಯಾರಂಟಿ ನೀಡಿ: ಕವಿ ಬಿ.ಆರ್. ಲಕ್ಷ್ಮಣರಾವ್

ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಕವಿ ಬಿ.ಆರ್. ಲಕ್ಷ್ಮಣರಾವ್ ಮನವಿ
Published 17 ಡಿಸೆಂಬರ್ 2023, 15:49 IST
Last Updated 17 ಡಿಸೆಂಬರ್ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರವು ಶಿಕ್ಷಣ ಮತ್ತು ಪುಸ್ತಕಗಳಿಗೆ ಆದ್ಯತೆ ನೀಡಿ, ಅವುಗಳ ಬಗ್ಗೆ ‘ಗ್ಯಾರಂಟಿ’ ಯೋಜನೆಗಳನ್ನು ರೂಪಿಸಬೇಕು’ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಹೇಳಿದರು. 

ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘ಸರ್ಕಾರಗಳು ಶಿಕ್ಷಣ ಮತ್ತು ಪುಸ್ತಕಗಳಿಗೆ ಆದ್ಯತೆ ನೀಡುತ್ತಿಲ್ಲ. ಇವು ಕಡೆಯ ಆದ್ಯತೆಯಾಗಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಾದ ಗ್ರಂಥಾಲಯ ಕರದಲ್ಲಿ ಬಿಬಿಎಂಪಿ ₹ 638.18 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು ಬಿಬಿಎಂಪಿ ನೀಡಿದಲ್ಲಿ ಪುಸ್ತಕೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಲಾಖೆಯ ಏಕಗವಾಕ್ಷಿ ಯೋಜನೆಯಡಿ 2020ನೇ ಸಾಲಿಗೆ ಆಯ್ಕೆಯಾದ ಪುಸ್ತಕಗಳ ಖರೀದಿ ಪ್ರಕ್ರಿಯೆ ಈಗ ನಡೆಯುತ್ತಿದೆ. ಇಷ್ಟಾಗಿಯೂ ಪ್ರಕಾಶಕರು ಪುಸ್ತಕಗಳನ್ನು ಹೊರತರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. 

ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ’ ಹಾಗೂ ಸಂತೆಕಸಲಗೆರೆ ಪ್ರಕಾಶ್ ಅವರ ‘ಪ್ರತಿಮೆ ಇಲ್ಲದ ಊರು’ ಕೃತಿಯ ಬಗ್ಗೆ ಮಾತನಾಡಿದ ಕವಿ ಎಚ್. ಡುಂಡಿರಾಜ್, ‘ಹಾಸ್ಯದ ಮೂಲಕ ಗಂಭೀರವಾದ ಸಮಸ್ಯೆಗಳಿಗೆ ಹೇಗೆ ಪರಿಹಾರವನ್ನು ಕೊಡಬಹುದು ಎಂಬುವುದನ್ನು ‘ಬೆಗ್ ಬಾರೋ ಅಳಿಯ’ ಕೃತಿ ತಿಳಿಸಲಿದೆ. ಇದರಲ್ಲಿನ ಮೂರು ನಾಟಕಗಳು ವಿಭಿನ್ನ ಶೈಲಿಯಲ್ಲಿ ರೂಪುಗೊಂಡಿವೆ. ‘ಪ್ರತಿಮೆ ಇಲ್ಲದ ಊರು’ ಕೃತಿಯು ಗಾಂಧಿಯನ್ನು ಕಥಾವಸ್ತುವಾಗಿ ಹಿಡಿದಿಟ್ಟುಕೊಂಡಿದೆ. ಒಂದೇ ವಸ್ತುವಿನ ಬಗ್ಗೆ 12 ಕಥೆಗಳನ್ನು ಬರೆಯುವುದು ಸವಾಲಿನ ಕೆಲಸ. ಆದರೆ ಈ ಕೃತಿಯು ಅಂತಹ ಸವಾಲಿನ ಕೆಲಸವನ್ನು ನಿರ್ವಹಿಸಿದೆ’ ಎಂದು ತಿಳಿಸಿದರು.

‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ್ ಚ.ಹ. ಅವರು ಮೌನೇಶ ಬಡಿಗೇರ ಅವರ ‘ಶ್ರೀಗಳ ಅರಣ್ಯಕಾಂಡ’ ಹಾಗೂ ವಿವೇಕಾನಂದ ಕಾಮತ್ ಅವರ ‘ಪದರುಗಳು’ ಕೃತಿಯ ಬಗ್ಗೆ ಮಾತನಾಡಿದರು. 

ಪುಸ್ತಕ ಪರಿಚಯ ಪುಸ್ತಕ: ‘ಬೆಗ್‌ ಬಾರೋ ಅಳಿಯ’ ಲೇಖಕ: ಎಂ.ಎಸ್. ನರಸಿಂಹಮೂರ್ತಿ ಪುಟಗಳು: 160 ಬೆಲೆ: ₹ 150 ಪುಸ್ತಕ: ‘ಶ್ರೀಗಳ ಅರಣ್ಯಕಾಂಡ’ ಲೇಖಕ: ಮೌನೇಶ ಬಡಿಗೇರ ಪುಟಗಳು: 176 ಬೆಲೆ: ₹ 195 ಪುಸ್ತಕ: ‘ಪ್ರತಿಮೆ ಇಲ್ಲದ ಊರು’ ಲೇಖಕ: ಸಂತೆಕಸಲಗೆರೆ ಪ್ರಕಾಶ್ ಪುಟಗಳು: 144 ಬೆಲೆ: ₹ 150 ಪುಸ್ತಕ: ‘ಪದರುಗಳು’ ಲೇಖಕ: ವಿವೇಕಾನಂದ ಕಾಮತ್ ಪುಟಗಳು: 144 ಬೆಲೆ: ₹ 150 * ನಾಲ್ಕೂ ಪುಸ್ತಕಗಳನ್ನು ಅಂಕಿತ ಪುಸ್ತಕ ಪ್ರಕಾಶಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT