ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು: ಶಾಮನೂರು ಶಿವಶಂಕರಪ್ಪ

Published 28 ಸೆಪ್ಟೆಂಬರ್ 2023, 16:07 IST
Last Updated 28 ಸೆಪ್ಟೆಂಬರ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗ ನಮ್ಮ ಸಮುದಾಯದವರು ಮೂಲೆಗುಂಪು ಆಗಿದ್ದಾರೆ. ಹೀಗಾಗಿ ವೀರಶೈವ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಆಗಿದೆ’ ಎಂದು ಕಾಂಗ್ರೆಸ್‌ ಶಾಸಕರೂ ಆಗಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಗುರುವಾರ ಹಾನಗಲ್‌ ಕುಮಾರೇಶ್ವರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಎಸ್‌. ನಿಜಲಿಂಗಪ್ಪ ಅವರಿಂದ ಹಿಡಿದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿವರೆಗೆ ನಮ್ಮ ಸಮುದಾಯದ ಮುಖ್ಯಮಂತ್ರಿಗಳು ಇದ್ದಾಗ ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಾನ ಇರುತ್ತಿತ್ತು’ ಎಂದು ಅವರು ಹೇಳಿದರು.

‘ನಾವು ಒಗ್ಗಟ್ಟಾಗಿ ಇಲ್ಲದ ಕಾರಣ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಉಪಪಂಗಡಗಳೆಲ್ಲ ಒಂದಾಗಬೇಕು. ಎಲ್ಲ ಸಮುದಾಯದವರೂ ತಮ್ಮ ತಮ್ಮ ಸಮಾಜ ಮುಂದಕ್ಕೆ ಬರಬೇಕು ಎಂದು ಬಯಸುತ್ತಾರೆ. ರಾಜ್ಯದ ದೊಡ್ಡ ಸಮುದಾಯವಾಗಿರುವ ನಾವೂ ಹಿಂದಕ್ಕೆ ಉಳಿಯಬಾರದು’ ಎಂದರು.

‘ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಕಲಿಕೆಗೆ ಉತ್ತೇಜನ ನೀಡಬಹುದು. ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿ ವೇತನ ಎಂದು ₹ 5 ಕೋಟಿ ಠೇವಣಿ ಇಟ್ಟು, ಅದರ ಬಡ್ಡಿಯನ್ನು ವಿದ್ಯಾರ್ಥಿ ವೇತನವಾಗಿ ಪ್ರತಿವರ್ಷ ನೀಡುತ್ತಿದ್ದೇನೆ. ಆದರೆ, ವಿದ್ಯಾರ್ಥಿ ವೇತನದಿಂದ ದೊಡ್ಡಮಟ್ಟದ ಉಪಯೋಗವೇನು ಆಗುವುದಿಲ್ಲ. ಉತ್ತಮವಾಗಿ ಕಲಿಯುವವರನ್ನು ಗುರುತಿಸಿ ಅವರನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸದ ಪೂರ್ಣ ವೆಚ್ಚವನ್ನು ಭರಿಸುವ ಕೆಲಸ ಮಾಡಬೇಕು. ನಮ್ಮ ಸಮುದಾಯದಲ್ಲಿ ಶ್ರೀಮಂತರಿಗೇನು ಕಡಿಮೆ ಇಲ್ಲ. ಒಂದಿಬ್ಬರ ಪೂರ್ಣ ವೆಚ್ಚ ಭರಿಸಲು ನಾನು ಸಿದ್ಧ ಇದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT