ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ

ಹೆಚ್ಚಿದ ಮಧ್ಯವರ್ತಿಗಳ ಹಾವಳಿ; ಮುಂದುವರಿದ ತಪಾಸಣೆ
Published 23 ಫೆಬ್ರುವರಿ 2024, 14:07 IST
Last Updated 23 ಫೆಬ್ರುವರಿ 2024, 14:07 IST
ಅಕ್ಷರ ಗಾತ್ರ

ತುಮಕೂರು: ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿದ್ದು, ಕಡತಗಳನ್ನು ಪರಿಶೀಲಿಸಿದರು. ತಪಾಸಣೆ ಮುಂದುವರಿದಿದ್ದು, ಸೋಮವಾರವೂ ನಡೆಯಲಿದೆ.

‘ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು, ಎಂಜಿನಿಯರ್, ಕೆಳ ಹಂತದ ನೌಕರರು ಹಣವಿಲ್ಲದೆ ಕೆಲಸ ಮಾಡಿಕೊಡುತ್ತಿಲ್ಲ. ಹಣಕ್ಕಾಗಿ ಪೀಡಿಸುತ್ತಾರೆ. ಮಧ್ಯವರ್ತಿಗಳ ಮೂಲಕ ಹೋದರೆ ಹಣ ಪಡೆದು ಕೆಲಸ ಮಾಡಿಕೊಡಲಾಗುತ್ತದೆ. ಪಾಲಿಕೆ ಭ್ರಷ್ಟಾಚಾರದ ಕೂಪವಾಗಿದೆ’ ಎಂಬ ಬಗ್ಗೆ ವ್ಯಾಪಕ ಪ್ರಮಾಣದಲ್ಲಿ ಲೋಕಾಯುಕ್ತಕ್ಕೆ ದೂರುಗಳು ಬಂದಿದ್ದವು.

ಈ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಲಿಭಾಷಾ ನೇತೃತ್ವದ 25ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ತಂಡ ಕಚೇರಿ ಮೇಲೆ ದಾಳಿ ನಡೆಸಿತು. ಕಂದಾಯ ಶಾಖೆ, ಎಂಜಿನಿಯರಿಂಗ್ ವಿಭಾಗ, ಆರೋಗ್ಯ, ಯುಜಿಡಿ ಸೇರಿದಂತೆ ಪ್ರತಿ ವಿಭಾಗದಲ್ಲೂ ಪ್ರತಿ ಕಡತ, ದಾಖಲೆಗಳ ತಪಾಸಣೆ ಮಾಡಲಾಯಿತು. ಕಡತಗಳನ್ನು ಬಾಕಿ ಉಳಿಸಿಕೊಂಡಿರುವುದಕ್ಕೆ ಕಾರಣಗಳನ್ನು ಕೇಳಿದರು. ಪ್ರತಿ ವಿಭಾಗದ ಪ್ರತಿ ಕಡತವನ್ನೂ ಪರಿಶೀಲನೆ ನಡೆಸುತ್ತಿರುವುದರಿಂದ ಸಾಕಷ್ಟು ಸಮಯ ತೆಗೆದುಕೊಂಡಿದೆ. ಎಲ್ಲಾ ವಿಭಾಗಗಳ ಕಚೇರಿಯ ಬಾಗಿಲುಗಳನ್ನು ಮುಚ್ಚಿ ಪರಿಶೀಲನೆ ನಡೆಸಿದರು.

ಪಾಲಿಕೆ ಕಚೇರಿಯಲ್ಲಿ ಐದಾರು ಮಂದಿ ಮಧ್ಯವರ್ತಿಗಳು ಸಿಕ್ಕಿಬಿದ್ದಿದ್ದು, ಅವರ ವಿಚಾರಣೆ ಸಹ ನಡೆಸಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಕಡತಗಳ ಪರಿಶೀಲನೆ ನಡೆಯಿತು. ಪರಿಶೀಲನೆ ಕಾರ್ಯ ಪೂರ್ಣಗೊಳ್ಳದ ಕಾರಣ ಸೋಮವಾರ ಸಹ ಮುಂದುವರಿಯಲಿದೆ ಎಂದು ವಲಿಭಾಷಾ ತಿಳಿಸಿದರು.

ಡಿವೈಎಸ್‌ಪಿ ಉಮಾಶಂಕರ್, ಇನ್‌ಸ್ಪೆಕ್ಟರ್ ರಾಮಕೃಷ್ಣ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ತಪಾಸಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT