ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಪ್ಯಾಲೆಸ್ಟೀನ್‌–ಇಸ್ರೇಲ್‌; ನೆಲೆ ಕಳೆದುಕೊಂಡವರ ನೆಲೆ ಇರದವರ ಕದನ

Published 9 ಅಕ್ಟೋಬರ್ 2023, 2:01 IST
Last Updated 9 ಅಕ್ಟೋಬರ್ 2023, 2:01 IST
ಅಕ್ಷರ ಗಾತ್ರ

ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್‌ ಮಧ್ಯೆ ಯುದ್ಧ ಆರಂಭವಾಗಿದೆ. ಎರಡೂ ದೇಶಗಳ ನಡುವಣ ಶಸ್ತ್ರಾಸ್ತ್ರ ಸಂಘರ್ಷ 75 ವರ್ಷಗಳಿಗಿಂತಲೂ ಹಳೆಯದು. 1967ರ ನಂತರ ಈಗ ಅತ್ಯಂತ ದೊಡ್ಡ ಮಟ್ಟದ ಸಂಘರ್ಷ ನಡೆದಿದೆ. ಇದು ನೆಲೆ ಕಳೆದುಕೊಂಡವರ ಮತ್ತು ನೆಲೆ ಹುಡುಕಿಕೊಂಡು ಬಂದವರ ನಡುವಣ ಸಂಘರ್ಷ ಎಂಬುದನ್ನು ಐತಿಹಾಸಿಕ ದಾಖಲೆಗಳು ಹೇಳುತ್ತವೆ.

ಒಂದೆಡೆ ಮೆಡಿಟರೇನಿಯನ್‌ ಸಮುದ್ರ ಮತ್ತೊಂದೆಡೆ ಜೋರ್ಡನ್‌ ನದಿಯ ಮಧ್ಯೆ ಹರಡಿರುವ ಒಂದು ಪುಟ್ಟ ಭೂಭಾಗವಿದೆ. ಈ ಭೂಭಾಗದ ರಾಜಕೀಯ ಇತಿಹಾಸ ಕ್ರಿಸ್ತ ಪೂರ್ವ 1,900ರವರೆಗೂ ಚಾಚಿದೆ. ಈಗ ಈ ಭೂಭಾಗದಲ್ಲಿ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ಎಂಬ ಎರಡು ‘ದೇಶ’ಗಳಿವೆ. ಆದರೆ ಎರಡು ದೇಶಗಳಿಗೂ ಅಧಿಕೃತ ದೇಶಗಳ ಮಾನ್ಯತೆ ಇಲ್ಲ. ಇಸ್ರೇಲ್‌ ಎಂಬುದು ಯಹೂದಿಗಳ ದೇಶವಾದರೆ, ಪ್ಯಾಲೆಸ್ಟೀನ್‌ ಅರಬ್‌ ಮುಸ್ಲಿಮರ ದೇಶ. ಎರಡೂ ದೇಶಗಳಲ್ಲಿ ಕ್ರೈಸ್ತ ಧರ್ಮೀಯರೂ ಇದ್ದಾರೆ. ಇಸ್ರೇಲ್‌ ಎಂಬುದು ಪುರಾತನವಾದ ಸಾಮ್ರಾಜ್ಯವಲ್ಲ ಅಥವಾ ಈ ಮೊದಲೇ ಇದ್ದ ದೇಶವಾಗಿರಲಿಲ್ಲ. ಯೂರೋಪ್‌ನಲ್ಲಿ ನಿರಾಶ್ರಿತರಾದ ಯಹೂದಿಗಳಿಗೆಂದು ಬ್ರಿಟನ್‌ ನೇತೃತ್ವದಲ್ಲಿ ಐರೋಪ್ಯ ದೇಶಗಳು ಸೃಷ್ಟಿಸಿದ ಹೊಸ ನೆಲೆಯಷ್ಟೆ. ಇಸ್ರೇಲ್‌ ಎಂಬ ನೆಲೆ ವಾಸ್ತವದಲ್ಲಿ ಅಸ್ತಿತ್ವಕ್ಕೆ ಬಂದಿದ್ದು 1948ರಲ್ಲಿ.

‘ಇಸ್ರೇಲ್‌ ಯಹೂದಿಗಳ ಮೂಲನೆಲೆ’ ಎಂಬುದು ಇಸ್ರೇಲಿಯನ್ನರ ಪ್ರತಿಪಾದನೆ. ಪುರಾತನ ಜೆರುಸಲೇಂನಲ್ಲಿರುವ ವೆಸ್ಟರ್ನ್‌ ವಾಲ್‌ನ ಜಾಗದಲ್ಲಿ, ಯಹೂದಿಗಳ ಪಿತಾಮಹ ಅಬ್ರಾಹಂ ತನ್ನ ಮಗ ಐಸಾಕ್‌ನನ್ನು ಬಲಿ ನೀಡಿದ್ದ ಎಂದು ಬೈಬಲ್‌ನಲ್ಲಿ ಹೇಳಲಾಗಿದೆ. ಹೀಗಾಗಿ ಇದು ಯಹೂದಿಗಳಿಗೆ ಪವಿತ್ರ ಸ್ಥಳ ಎಂದು ಭಾವಿಸಲಾಗುತ್ತದೆ. ಈ ಗೋಡೆಗೆ ಅಂಟಿಕೊಂಡೇ ಒಂದು ಮಸೀದಿಯಿದ್ದು, ಮೊಹಮ್ಮದ್ ಪೈಗಂಬರರು ಕೊನೆಯುಸಿರೆಳೆದ ಜಾಗವದು. ಇವೆರಡರ ಜತೆಯಲ್ಲೇ ಮತ್ತೊಂದು ಜಾಗವಿದ್ದು, ಯೇಸು ಕ್ರಿಸ್ತರ ಗೋರಿಯದು. ಹೀಗೆ ಯಹೂದಿ, ಇಸ್ಲಾಂ ಮತ್ತು ಕ್ರೈಸ್ತ ಧರ್ಮೀಯರಿಗೆ ಅತ್ಯಂತ ಮಹತ್ವದ ಸ್ಥಳ ಇದಾಗಿದೆ. ಇತಿಹಾಸದುದ್ದಕ್ಕೂ ಜೆರುಸಲೇಂ ಬೇರೆ–ಬೇರೆ ಧರ್ಮಗಳು, ಸಾಮ್ರಾಜ್ಯಗಳ ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ.

ಯಹೂದಿಗಳ ಮೂಲ ಭಾಷೆ ಹೀಬ್ರೂ. ಅಬ್ರಾಹಂ ಯಹೂದಿಗಳ ಪಿತಾಮಹ. ಹೀಬ್ರೂ ಭಾಷೆಯಲ್ಲಿ ಈತನನ್ನು ಇವ್ರಾಹಂ ಎಂದೂ ಕರೆಯಲಾಗುತ್ತದೆ. ಹೀಬ್ರೂ ಭಾಷೆಯನ್ನಾಡುತ್ತಿದ್ದ ಜನರು, ಅಂದರೆ ಯಹೂದಿಗಳ ಆರಂಭಿಕ ನೆಲೆ ಎಂದು ಗುರುತಿಸುವುದು ಮೆಸಪಟೋಮಿಯಾವನ್ನು (ಇದು ಈಗಿನ ಇರಾಕ್‌ನ ವ್ಯಾಪ್ತಿಯಲ್ಲಿದೆ). ಕ್ರಿಸ್ತ ಪೂರ್ವ 1900ರಲ್ಲಿ (ಅಂದರೆ ಸುಮಾರು 3,900 ವರ್ಷಗಳ ಹಿಂದೆ) ಬದುಕಿದ್ದ ಅಬ್ರಾಹಂ ದೇವವಾಣಿಯ ಆಧಾರದಲ್ಲಿ ಯಹೂದಿ ಧರ್ಮವನ್ನು ಸ್ಥಾಪಿಸಿದ. ಆತನದ್ದೇ ಅವಧಿಯಲ್ಲಿ ಹೀಬ್ರೂ ಭಾಷಿಕರು ಮೆಸಪಟೋಮಿಯಾದಿಂದ ಈಗಿನ ಈಜಿಪ್ಟ್‌ನತ್ತ ಹೊರಟರು. ಸಾಮ್ರಾಜ್ಯ ವಿಸ್ತರಣೆ ಮತ್ತು ಧರ್ಮ ಪ್ರಚಾರವು ಇದರ ಉದ್ದೇಶವಾಗಿತ್ತು ಎಂದು ಮಾನವಶ್ಶಾಸ್ತ್ರೀಯ ಅಧ್ಯಯನಗಳು ಗುರುತಿಸಿವೆ. ಈ ಎರಡೂ ಪ್ರದೇಶಗಳ ಮಧ್ಯೆ ಪ್ಯಾಲೆಸ್ಟೀನ್‌ ಇತ್ತು. ಪ್ರಧಾನವಾಗಿ ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿದ್ದ ಪ್ರದೇಶವದು. ಜೇನು ಉತ್ಪಾದನೆಯೂ ಈ ಪ್ರದೇಶದಲ್ಲಿ ಹೆಚ್ಚಾಗಿತ್ತು. ಹೀಗಾಗಿಯೇ ಈ ಪ್ರದೇಶವನ್ನು ಪ್ಯಾಲೆಸ್ಟೀನ್‌ (ಹಾಲು ಮತ್ತು ಜೇನು) ಎಂದು ಕರೆಯಲಾಗಿತ್ತು. ಹೀಬ್ರೂ ಭಾಷೆಯನ್ನಾಡುತ್ತಿದ್ದ ಜನರ ಅತಿಕ್ರಮಣವನ್ನು ಪ್ಯಾಲೆಸ್ಟೀನಿಯನ್ನರು ಹಿಮ್ಮೆಟ್ಟಿಸಿದ್ದರು. ಆದರೂ ಕೆಲವು ಹೀಬ್ರೂ ಜನರು ಪ್ಯಾಲೆಸ್ಟೀನ್‌ ಪ್ರದೇಶದಲ್ಲಿ ಉಳಿದರು.

ಅಬ್ರಾಹಂಗೆ 12 ಜನ ಮಕ್ಕಳು. ಅವರು ಮೆಸಪಟೋಮಿಯಾದ ಎಲ್ಲಾ ದಿಕ್ಕುಗಳಲ್ಲಿ ಇದ್ದ 12 ವಿವಿಧ ಬುಡಕಟ್ಟುಗಳ ಮುಖ್ಯಸ್ಥರಾಗಿದ್ದರು. ಅಂತಹ ಒಂದು ಬುಡಕಟ್ಟನ್ನು ಐಸಾಕ್‌ ಮುನ್ನಡೆಸುತ್ತಿದ್ದ. ಸ್ವತಃ ಅಬ್ರಾಹಂ, ಐಸಾಕ್‌ನನ್ನು ಬಲಿ ನೀಡಿದ ಪ್ರದೇಶವೇ ಈಗಿನ ಜೆರುಸಲೇಂನಲ್ಲಿನ ವೆಸ್ಟರ್ನ್‌ ವಾಲ್‌. ‘ಈ 12 ಜನರ ಮುಂದಿನ ಸಂತತಿಯು ಅಂದರೆ, ಯಹೂದಿಗಳು ಈಗಿನ ಯೂರೋಪ್‌, ಮಧ್ಯಪ್ರಾಚ್ಯ ಸೇರಿ ದಕ್ಷಿಣ ಏಷ್ಯಾದವರೆಗೂ ವಲಸೆ ಹೋದರು. ಸೌಹಾರ್ದ ಸಂಬಂಧ, ಅನ್ಯಧರ್ಮದ ಮಹಿಳೆಯರನ್ನು ವಿವಾಹವಾಗುವ ಮೂಲಕ ಯಹೂದಿಗಳು ಧರ್ಮ ವಿಸ್ತರಣೆ ಮಾಡುತ್ತಿದ್ದರು’ ಎಂದು ಯಹೂದಿಗಳ ಕುಲಶ್ಶಾಸ್ತ್ರೀಯ ಅಧ್ಯಯನ ನಡೆಸಿದ ಮ್ಯಾಥ್ಯೂ ರೋಪರ್‌ ತಮ್ಮ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

ಹಲವು ಸಹ್ರಸಮಾನಗಳವರೆಗೆ ಈ ಜನರಿಗೆ ವಿರೋಧ ವ್ಯಕ್ತವಾಗಲಿಲ್ಲ ಅಥವಾ ಅಂತಹ ವಿರೋಧಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಆದರೆ ಕ್ರಿಸ್ತ ಶಕ 18ನೇ ಶತಮಾನದ ವೇಳೆಗೆ ಯೂರೋಪ್‌ನಲ್ಲಿ ಯಹೂದಿಗಳ ವಿರುದ್ಧ ಅಸಹನೆ ಆರಂಭವಾಯಿತು. ಜರ್ಮನಿಯಲ್ಲಿ ಈ ಅಸಹನೆ ತೀವ್ರವಾಗಿತ್ತು. ಇದರಿಂದಾಗಿ ಯಹೂದಿಗಳು ಯೂರೋಪ್‌ನಲ್ಲಿ ನಿರಾಶ್ರಿತರಾಗತೊಡಗಿದರು. ಅವರಿಗೆ ನೆಲೆ ಕಲ್ಪಿಸಲು ಬ್ರಿಟನ್‌ ಹೊಸ ಜಾಗವನ್ನು ಹುಡುಕಾಡತೊಡಗಿತು. ಆಗ ಬ್ರಿಟನ್‌ ನೇತೃತ್ವದಲ್ಲಿ ಐರೋಪ್ಯ ದೇಶಗಳು, ಪ್ಯಾಲೆಸ್ಟೀನ್‌ನಲ್ಲಿ ಯಹೂದಿಗಳಿಗೆ ಹೊಸ ನೆಲೆ ಕಲ್ಪಿಸಲು ನಿರ್ಧರಿಸಿದವು. ಅದರ ಭಾಗವಾಗಿಯೇ 20,000ಕ್ಕೂ ಹೆಚ್ಚು ಯಹೂದಿಗಳನ್ನು 1897ರಲ್ಲಿ ಪ್ಯಾಲೆಸ್ಟೀನ್‌ಗೆ ಕಳುಹಿಸಲಾಯಿತು. ಆಗ ಪ್ಯಾಲೆಸ್ಟೀನ್‌, ಬ್ರಿಟನ್‌ನ ವಸಾಹತುವಾಗಿತ್ತು. ನಂತರದ ವರ್ಷಗಳಲ್ಲಿ ಬ್ರಿಟನ್‌ ಸರ್ಕಾರವು ಹಲವು ಹಂತಗಳಲ್ಲಿ ಲಕ್ಷಾಂತರ ಯಹೂದಿಗಳಿಗೆ ಪ್ಯಾಲೆಸ್ಟೀನ್‌ನಲ್ಲಿ ನೆಲೆ ಕಲ್ಪಿಸಿತು.

ಐರೋಪ್ಯ ದೇಶಗಳು ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಿದ ಕಾರಣಕ್ಕೆ, ಯಹೂದಿಗಳು ಪ್ಯಾಲೆಸ್ಟೀನ್‌ನಲ್ಲಿ ನೆಲೆ ಸ್ಥಾಪಿಸಿಕೊಂಡರು. ಸ್ಥಳೀಯ ಪ್ಯಾಲೆಸ್ಟೀನಿಯನ್ನರಿಂದ ರಕ್ಷಣೆ ಪಡೆಯಲು ಯಹೂದಿಗಳು ಅರೆಸೇನಾ ಪಡೆಯೊಂದನ್ನು ಸ್ಥಾಪಿಸಿಕೊಂಡಿದ್ದರು. 1948ರಲ್ಲಿ ಪ್ಯಾಲೆಸ್ಟೀನ್‌ ಅನ್ನು ಬ್ರಿಟನ್‌ ತೊರೆಯಿತು. ತಕ್ಷಣವೇ ಯಹೂದಿಗಳು ತಮ್ಮ ಸೇನೆಯನ್ನು ಬಳಸಿಕೊಂಡು ಸ್ಥಳೀಯ ಪ್ಯಾಲೆಸ್ಟೀನಿಯನ್ನರ ಮೇಲೆ ದಾಳಿ ನಡೆಸಿದರು. ಪ್ಯಾಲೆಸ್ಟೀನ್‌ನ ಬಹುತೇಕ ಭಾಗಗಳನ್ನು ವಶಕ್ಕೆ ಪಡೆದುಕೊಂಡರು. ಇಸ್ರೇಲ್‌, ಯಹೂದಿಗಳ ಹೊಸನೆಲೆ ಎಂದು ಘೋಷಿಸಿಕೊಂಡರು. 

ಇಸ್ರೇಲ್‌ನ ಅತಿಕ್ರಮಣವನ್ನು ಎದುರಿಸಲಾಗದೆ ಕೆಲವು ಪ್ಯಾಲೆಸ್ಟೇನಿಯನ್ನರು ಜೋರ್ಡನ್‌ ನದಿಯ ಪಶ್ಚಿಮ ದಂಡೆಯತ್ತ ಹೋದರು. ಕೆಲವು ಪ್ಯಾಲೆಸ್ಟೀನಿಯನ್ನರು ಮೆಡಿಟರೇನಿಯನ್‌ ಸಮುದ್ರದ ಕರಾವಳಿಯಾಗಿದ್ದ ಗಾಜಾದಲ್ಲಿ ನೆಲೆ ಕಂಡುಕೊಂಡರು. ಗಾಜಾದಲ್ಲಿ ನೆಲೆ ನಿಂತ ಪ್ಯಾಲೆಸ್ಟೀನಿಯನ್ನರು, ಯಹೂದಿಗಳ ಅತಿಕ್ರಮಣಕ್ಕೆ ಪ್ರತೀಕಾರವಾಗಿ ಇಸ್ರೇಲ್‌ನ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಇಸ್ರೇಲ್‌ ಸಹ ಪ್ರತಿ ದಾಳಿ ನಡೆಸುತ್ತಿದೆ. ಎರಡೂ ದೇಶಗಳು ಕದನ ವಿರಾಮ ಘೋಷಿಸಿಕೊಂಡರೂ ಗಾಜಾಪಟ್ಟಿಯಲ್ಲಿದ್ದ ಹಮಾಸ್‌ ಹೋರಾಟಗಾರರು ದಾಳಿ ಮುಂದುವರಿಸಿದ್ದರು. ಹೀಗಾಗಿ ಅವರನ್ನು ಬಂಡುಕೋರರು ಎಂದು ಪ್ಯಾಲೆಸ್ಟೀನ್‌ ಸರ್ಕಾರ ಘೋಷಿಸಿತು. ಇಸ್ರೇಲ್‌, ಅದರ ಬೆಂಬಲಕ್ಕಿದ್ದ ಬ್ರಿಟನ್‌ ಮತ್ತು ಅಮೆರಿಕ ಸೇರಿ ಹಲವು ದೇಶಗಳು ಹಮಾಸ್‌ ಹೋರಾಟಗಾರರನ್ನು ಉಗ್ರರು ಎಂದು ಘೋಷಿಸಿದವು. ಈಗ ಇಸ್ರೇಲ್‌ನ ಮೇಲೆ ವ್ಯವಸ್ಥಿತ ದಾಳಿ ನಡೆಸಿರುವುದು ಇದೇ ಹಮಾಸ್‌. ಅವರ ವಿರುದ್ಧ ಇಸ್ರೇಲ್‌ ಸಹ ಯುದ್ಧ ಘೋಷಿಸಿದೆ.

ಆಧಾರ: ವಿಶ್ವ ಸಂಸ್ಥೆಯ ‘ದಿ ಸ್ಟೇಟಸ್ ಆಫ್ ಜೆರುಸಲೇಂ’ ವರದಿ, ಮ್ಯಾಥ್ಯು ರೋಪೆರ್ ಅವರ ‘ಸ್ವಿಮ್ಮಿಂಗ್ ಇನ್‌ ದಿ ಜೀನ್‌ ಪೂಲ್‌: ಇಸ್ರೇಲಿಯೆಟ್‌ ಕಿನ್‌ಶಿಪ್‌’ ಕುಲಶ್ಯಾಸ್ತ್ರೀಯ ಅಧ್ಯಯನ ವರದಿ, ಭಾರತ ಹಾಗೂ ಇಸ್ರೇಲ್‌ ರಾಯಭಾರ ಕಚೇರಿಗಳ ಟಿಪ್ಪಣಿ, ಅಲ್‌ಜರೀರಾ ವರದಿಗಳು, ‘ಜೂಯಿಷ್‌ ವರ್ಚುವಲ್‌ ಲೈಬ್ರರಿ’ಯ ಟಿಪ್ಪಣಿ

1948ಕ್ಕೂ ಮೊದಲಿನ ಪ್ಯಾಲೆಸ್ಟೀನ್‌ ಮತ್ತು ನಂತರದ ಇಸ್ರೇಲ್‌ನಲ್ಲಿ ಯಹೂದಿಗಳ ಸಂಖ್ಯೆಯ ಏರಿಕೆಯನ್ನು ವಿವರಿಸುವ ಗ್ರಾಫಿಕ್ಸ್‌  :ಪ್ರಜಾವಾಣಿ ಗ್ರಾಫಿಕ್ಸ್‌

1948ಕ್ಕೂ ಮೊದಲಿನ ಪ್ಯಾಲೆಸ್ಟೀನ್‌ ಮತ್ತು ನಂತರದ ಇಸ್ರೇಲ್‌ನಲ್ಲಿ ಯಹೂದಿಗಳ ಸಂಖ್ಯೆಯ ಏರಿಕೆಯನ್ನು ವಿವರಿಸುವ ಗ್ರಾಫಿಕ್ಸ್‌  :ಪ್ರಜಾವಾಣಿ ಗ್ರಾಫಿಕ್ಸ್‌

ವಿಸ್ತರಿಸುತ್ತಲೇ ಹೋದ ಇಸ್ರೇಲ್‌

ಯಹೂದಿಗಳಿಗೆ ಪ್ಯಾಲೆಸ್ಟೀನ್‌ನಲ್ಲಿ ನೆಲೆ ಕಲ್ಪಿಸಲು ಸ್ಥಳೀಯ ಅರಬ್‌ ಮುಸ್ಲಿಮರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಅವರ ವಿರೋಧದ ಮಧ್ಯೆಯೂ ಯಹೂದಿಗಳಿಗೆ ನೆಲೆ ಕಲ್ಪಿಸಲಾಯಿತು.

* 1880ರ ನಂತರ ಪ್ಯಾಲೆಸ್ಟೀನ್‌ನಲ್ಲಿ ಯಹೂದಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಫ್ರಾನ್ಸ್‌ನ ನೇತೃತ್ವದಲ್ಲಿ ಐರೋಪ್ಯ ರಾಷ್ಟ್ರಗಳು ಒಂದಾದವು. ಯಹೂದಿಗಳಿಗೆ ಆಶ್ರಯ ಕಲ್ಪಿಸಲು ದೇಣಿಗೆ ಒದಗಿಸಿದವು. 1897ರಲ್ಲಿ ಗಣನೀಯ ಸಂಖ್ಯೆಯ ಯಹೂದಿಗಳು ಪ್ಯಾಲೆಸ್ಟೀನ್‌ಗೆ ಬಂದರು. ಪ್ಯಾಲೆಸ್ಟೀನ್ ಅರಬರ ವಿರೋಧ ನಡೆಯುತ್ತಲೇ ಇತ್ತು. 1907ರಲ್ಲಿ ಬ್ರಿಟಿಷ್ ಕಂಪನಿಯು ಯಹೂದಿಗಳಿಗಾಗಿ ಪ್ಯಾಲೆಸ್ಟೀನ್‌ನಲ್ಲಿ ಭೂಮಿ ಖರೀದಿಸಿತು. ಇದರ ಪರಿಣಾಮವಾಗಿ ಅಲ್ಲಿಂದ 60 ಸಾವಿರಕ್ಕೂ ಹೆಚ್ಚು ಅರಬರನ್ನು ಹೊರಗಟ್ಟಲಾಯಿತು

* ಎರಡನೇ ವಿಶ್ವಯುದ್ಧದ ನಂತರ 1948ರಲ್ಲಿ ಬ್ರಿಟಿಷರು ಪ್ಯಾಲೆಸ್ಟೀನ್‌ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಟ್ಟರು. ಆಗ ಯಹೂದಿಗಳು ತಮ್ಮ ನಿಯಂತ್ರಣದಲ್ಲಿ ಇದ್ದ ಜಾಗವನ್ನು ಇಸ್ರೇಲ್ ಎಂದು ಘೋಷಿಸಿದರು. ಪ್ಯಾಲೆಸ್ಟೀನ್‌ನ ಬಹುಭಾಗವನ್ನು ಯಹೂದಿಗಳು ನಿಯಂತ್ರಣಕ್ಕೆ ತೆಗೆದುಕೊಂಡರು. ಜೋರ್ಡನ್ ಸಾಮ್ರಾಜ್ಯವು ಜೋರ್ಡನ್ ನದಿಯ ಪಶ್ಚಿಮ ದಂಡೆಯ ಪ್ರದೇಶವನ್ನು (ವೆಸ್ಟ್‌ ಬ್ಯಾಂಕ್) ವಶಪಡಿಸಿ ಕೊಂಡಿತು. ಇಸ್ರೇಲ್ ಮತ್ತು ಜೋರ್ಡನ್ ಮಧ್ಯೆ ಜೆರುಸಲೇಂ ಹಂಚಿಹೋಯಿತು

* ಪ್ಯಾಲೆಸ್ಟೀನ್‌ ಅನ್ನು ಯಹೂದಿಗಳ ಇಸ್ರೇಲ್‌ ಮತ್ತು ಅರಬರ ಪ್ಯಾಲೆಸ್ಟೀನ್‌ ಎಂದು ವಿಭಜಿಸುವ ಪ್ರಸ್ತಾವವನ್ನು 1950ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಆದರೆ ಜೋರ್ಡನ್‌ನ ವಿರೋಧದಿಂದಾಗಿ ಇದು ಕಾರ್ಯರೂಪಕ್ಕೆ ಬರಲಿಲ್ಲ

* ಜೋರ್ಡನ್‌ನ ವಶದಲ್ಲಿದ್ದ ಜೆರುಸಲೇಂನ ಭಾಗವನ್ನು 1967ರಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಇಸ್ರೇಲ್ ವಶಪಡಿಸಿಕೊಂಡಿತು. ಆದರೆ ವೆಸ್ಟ್‌ ಬ್ಯಾಂಕ್‌ನಲ್ಲಿ ಪ್ಯಾಲೆಸ್ಟೀನ್ ಅರಬರ ಪ್ರಾಬಲ್ಯವಿದ್ದ ಕಾರಣ ಸಂಪೂರ್ಣ ನಿಯಂತ್ರಣ ಸಾಧ್ಯವಾಗಲಿಲ್ಲ. ಇಲ್ಲಿನ ಅರಬರು ಇದನ್ನು ಪ್ಯಾಲೆಸ್ಟೀನ್ ಎಂದು ಘೋಷಿಸಿಕೊಂಡಿದ್ದಾರೆ. ಆದರೆ 1991ರಲ್ಲಿ 1997ರಲ್ಲಿ ಪ್ಯಾಲೆಸ್ಟೀನಿಯನ್ನರ ಹಲವು ಪ್ರದೇಶಗಳನ್ನು ಇಸ್ರೇಲ್‌ ವಶಪಡಿಸಿಕೊಂಡಿತು l

*1948ರಲ್ಲಿ ಇಸ್ರೇಲ್‌ನ ಅತಿಕ್ರಮಣದಿಂದ ಪ್ಯಾಲೆಸ್ಟೀನಿಯನ್ನರಿಗೆ ಆದ ಆಸ್ತಿ ನಷ್ಟವನ್ನು ತುಂಬಿಕೊಡಲು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಸಮಿತಿಯೊಂದನ್ನು 1950ಲ್ಲಿ ರಚಿಸಿತು. ಈ ಸಮಿತಿಯು ಪ್ಯಾಲೆಸ್ಟೀನ್‌ ಮುಸ್ಲಿಮರಿಂದ ಇಸ್ರೇಲ್‌ ವಶಪಡಿಸಿಕೊಂಡ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿ ಅದಕ್ಕೆ ಪರಿಹಾರವನ್ನು ಒದಗಿಸುತ್ತದೆ. ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಸಮಿತಿ ಈಗಲೂ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಭದ್ರತಾ ಮಂಡಳಿಗೆ ಈ ಸಂಬಂಧ ವರದಿ ಸಲ್ಲಿಸುತ್ತಲೇ ಇದೆ

ಭಾರತದ ಬದಲಾದ ನಿಲುವು

ಪ್ಯಾಲೆಸ್ಟೀನ್‌ ಅರಬರಿಗೆ ಸೇರಿದ್ದು ಎಂಬುದು ಭಾರತದ ನಿಲುವಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಈ ನಿಲುವು ಬದಲಾಗುತ್ತಲೇ ಬಂದಿದೆ. ಈಗ ಭಾರತವು ಸಂಪೂರ್ಣವಾಗಿ ಇಸ್ರೇಲ್‌ ಪರವಾಗಿ ನಿಂತಿದೆ. ‘ಇಂಗ್ಲೆಂಡ್‌ ಇಂಗ್ಲಿಷರಿಗೆ ಸೇರಿದ್ದು ಫ್ರಾನ್ಸ್ ಫ್ರೆಂಚರಿಗೆ ಸೇರಿದ್ದು ಎನ್ನುವುದು ಎಷ್ಟು ಸತ್ಯವೊ ಪ್ಯಾಲೆಸ್ಟೀನ್‌ ಅರಬರಿಗೆ ಸೇರಿದ್ದು ಎನ್ನುವುದೂ ಅಷ್ಟೇ ಸತ್ಯ. ಅರಬರ ಮೇಲೆ ಯಹೂದಿಗಳನ್ನು ಹೇರುವುದು ತಪ್ಪು ಮತ್ತು ಅಮಾನುಷವಾದುದು. ಕ್ರೈಸ್ತರಲ್ಲಿ ಯಹೂದಿಗಳು ಅಸ್ಪೃಶ್ಯರು. ಧರ್ಮವನ್ನು ಮುಂದಿಟ್ಟುಕೊಂಡು ಜರ್ಮನಿಯಲ್ಲಿ ಯಹೂದಿಗಳಿಗೆ ಕಿರುಕುಳ ನೀಡಲಾಗಿದೆ. ಆದರೆ ಅನುಕಂಪವೇ ಬೇರೆ ನ್ಯಾಯವೇ ಬೇರೆ’. 1938ರ ನ.26 ರಂದು ‘ಹರಿಜನ’ ಪತ್ರಿಕೆಯ ಸಂಚಿಕೆಯೊಂದರಲ್ಲಿ ಮಹಾತ್ಮ ಗಾಂಧಿ ಅವರು ಈ ರೀತಿಯಲ್ಲಿ ಅಭಿಪ್ರಾಯಪಡುತ್ತಾರೆ. ಜವಾಹರಲಾಲ್‌ ನೆಹರೂ ಅವರದೂ  ಇದೇ ಅಭಿಪ್ರಾಯವಾಗಿತ್ತು. ಕೆಲವು ತಿಂಗಳ ಅಂತರದಲ್ಲೇ ಭಾರತ ಹಾಗೂ ಪ್ಯಾಲೆಸ್ಟೀನ್‌ಗೆ ಬ್ರಿಟಿಷರಿಂದ ಸ್ವಾತಂತ್ರ್ಯ ದಕ್ಕಿತು. ನೆಹರೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಹಲವು ದೇಶಗಳ ನಾಯಕರು ಸೇರಿ ಮಾಡಿಕೊಂಡ ‘ಅಲಿಪ್ತ ನೀತಿ’ಗೆ ಭಾರತವು ಬದ್ಧವಾಗಿತ್ತು. ಹಾಗಿದ್ದರೂ ಭಾರತವು ಪ್ಯಾಲೆಸ್ಟೀನ್‌ ಪರ ತನ್ನ ಸೈದ್ಧಾಂತಿಕ ಬೆಂಬಲವನ್ನು ಮುಂದುವರಿಸಿತ್ತು. 1950ರಲ್ಲಿ ಭಾರತವು ಇಸ್ರೇಲ್‌ಗೆ ದೇಶದ ಮಾನ್ಯತೆ ನೀಡಿದೆ. ಕೆಲವೇ ವರ್ಷಗಳಲ್ಲಿ ಮುಂಬೈನಲ್ಲಿ ಯಹೂದಿ ಸಂಸ್ಥೆಯು ವಲಸೆ ಕಚೇರಿಯನ್ನು ಆರಂಭಿಸಿತು. ರಕ್ಷಣೆ ಅಂತರಿಕ್ಷ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಂಬಂಧ ಕಾಲ ಕಾಲಕ್ಕೆ ಗಟ್ಟಿಯಾಗುತ್ತಲೇ ಬಂದಿದೆ. ಆದರೆ 1992ರಲ್ಲಿ ಈ ಸಂಬಂಧವು ದ್ವಿಪಕ್ಷೀಯ ಸಂಬಂಧವಾಯಿತು. ಆದರೆ ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ಬಳಿಕ ಎರಡೂ ದೇಶಗಳ ಸಂಬಂಧ ಕೇವಲ ವ್ಯಾವಹಾರಿಕವಾಗಿ ಉಳಿಯದೇ ಸೈದ್ಧಾಂತಿಕವಾಗಿ ಹೆಚ್ಚು ಹತ್ತಿರವಾಯಿತು. ಮುಸ್ಲಿಂ ಮೂಲಭೂತವಾದದ ವಿರುದ್ಧ ಒಗ್ಗೂಡಿ ಹೋರಾಡಲು ಗುಪ್ತಚರ ಮಾಹಿತಿ ಹಂಚಿಕೆ ಒಪ್ಪಂದವನ್ನು 2014ರ ಜುಲೈನಲ್ಲಿ ಎರಡೂ ದೇಶಗಳು ಮಾಡಿಕೊಂಡವು. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ 2015ರ ಗಾಜಾ ತನಿಖಾ ವರದಿಯನ್ನು ಒಪ್ಪಿಕೊಳ್ಳಬೇಕು ಎಂದು 41 ದೇಶಗಳು ಮತಚಲಾಯಿಸಿದವು. ಆದರೆ ಭಾರತವು ಇಸ್ರೇಲ್‌ ಪರವಾಗಿ ನಿಂತಿತು. ನಂತರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿ ಮಾಡಲು ಮುಂದಾಯಿತು. ಇದಕ್ಕೆ ಜಗತ್ತಿನೆಲ್ಲೆಡೆಯಿಂದ ವಿರೋಧ ವ್ಯಕ್ತವಾಯಿತು. ಆದರೆ ಇಸ್ರೇಲ್‌ ಮಾತ್ರ ಭಾರತದ ಪರ ನಿಂತಿತು. ಭಾರತದ ಪ್ರಧಾನಿಯು ಇತಿಹಾಸದಲ್ಲಿಯೇ ಮೊದಲ ಬಾರಿಗೆ 2017ರಲ್ಲಿ ಇಸ್ರೇಲ್‌ ಪ್ರವಾಸ ಕೈಗೊಂಡರು. ‘ನನ್ನ ಸೇಹಿತನಿಗೆ ಸ್ವಾಗತ’ ಎಂದು ಅಂದಿನ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಮೋದಿ ಅವರನ್ನು ಸ್ವಾಗತಿಸಿದರು. ಇದೇ ವೇಳೆಯಲ್ಲಿಯೇ ರಕ್ಷಣಾ ಕ್ಷೇತ್ರದ ಸಂಬಂಧ ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ವ್ಯವಹಾರ ನಡೆಯಿತು. ಈ ಹಂತದಲ್ಲಿಯೇ ಭಾರತವು ಇಸ್ರೇಲ್‌ನಿಂದ ‘ಪೆಗಾಸಿಸ್‌’ ತಂತ್ರಾಂಶವನ್ನು ಖರೀದಿಸಿದೆ ಎಂದು ನ್ಯೂರ್ಯಾಕ್‌ ಟೈಮ್ಸ್‌ ವರದಿ ಮಾಡಿತ್ತು. ಈ ತಂತ್ರಾಂಶವು ಭಾರತದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT