ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ Vs ದೆಹಲಿ ಸರ್ಕಾರ: ಸು‍ಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್‌ ಸರ್ಕಾರಕ್ಕೆ ಜಯ

Published 11 ಮೇ 2023, 6:59 IST
Last Updated 11 ಮೇ 2023, 6:59 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ಭದ್ರತೆ, ಪೊಲೀಸ್‌ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಭೂಮಿಯ ವಿಷಯಗಳನ್ನು ಹೊರತುಪಡಿಸಿ ದೆಹಲಿ ಸರ್ಕಾರವು ಇತರೆಲ್ಲ ಸೇವೆಗಳಿಗೆ ಸಂಬಂಧಿಸಿದ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಗುರುವಾರ ಸರ್ವಾನುಮತದ ತೀರ್ಪು ನೀಡಿದೆ. ಈ ಮಹತ್ವದ ತೀರ್ಪಿನಿಂದಾಗಿ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವಿನ ಅಧಿಕಾರ ವ್ಯಾಪ್ತಿಯ ಸಂಘರ್ಷದಲ್ಲಿ ಎಎಪಿ ಸರ್ಕಾರದ ಕೈಮೇಲಾಗಿದೆ. 

ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರವು ಆಡಳಿತಾತ್ಮಕ ವಿಷಯಗಳ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ (ಸಿ.ಜೆ.) ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ, ದೆಹಲಿ ಕೇಂದ್ರಾಡಳಿತ ಪ್ರದೇಶ ವಿಶೇಷ ಅಗತ್ಯತೆಗಳನ್ನು ಒಳಗೊಂಡಿದೆ ಎಂದೂ ಹೇಳಿದೆ. ಜತೆಗೆ, ದೆಹಲಿ ಸರ್ಕಾರಕ್ಕೆ ಸೇವೆಗಳ ವಿಷಯದಲ್ಲಿ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್‌ ಅವರು 2019ರಲ್ಲಿ ನೀಡಿದ್ದ ತೀರ್ಪನ್ನು ಒಪ್ಪಲು ಸಾಂವಿಧಾನಿಕ ಪೀಠ ನಿರಾಕರಿಸಿದೆ. 

ಕೇಂದ್ರ ಸರ್ಕಾರದ ಅಧಿಕಾರವನ್ನು ಇನ್ನಷ್ಟು ವಿಸ್ತರಿಸುವುದು ಸಾಂವಿಧಾನಿಕ ಯೋಜನೆಗಳಿಗೆ ವಿರುದ್ಧವಾಗಲಿದೆ. ದೆಹಲಿ ಕೂಡ ಇತರ ರಾಜ್ಯಗಳಿಗೆ ಸಮಾನವಾಗಿದೆ ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸರ್ಕಾರ ಹೊಂದಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ತಮ್ಮ ಇಚ್ಛೆಯನ್ನು ಪ್ರತಿನಿಧಿಸಲು ಹಾಗೂ ಕಾನೂನು ರೂಪಿಸಲು ದೆಹಲಿ ವಿಧಾನಸಭೆಗೆ ಜನರು ಅಧಿಕಾರ ನೀಡಿದ್ದಾರೆ ಎಂದೂ ಪೀಠ ಹೇಳಿದೆ. 

ದೆಹಲಿಯ ಸೇವಾ ವಿಷಯಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರ ನಡುವಿನ ವಿವಾದದ ವಿಚಾರಣೆ ನಡೆಸಿದ್ದ ನ್ಯಾಯಪೀಠ ಜನವರಿ 18ರಂದು ತೀರ್ಪನ್ನು ಕಾಯ್ದಿರಿಸಿತ್ತು. ’ಆಡಳಿತಾತ್ಮಕ ವಿಷಯಗಳಲ್ಲಿ ಕೇಂದ್ರದ ಪ್ರಾಮುಖ್ಯತೆಯು ಒಕ್ಕೂಟ ವ್ಯವಸ್ಥೆ ಮತ್ತು ಪ್ರಾತಿನಿಧಿಕ ಪ್ರಜಾಪ್ರಭುತ್ವ ತತ್ವಕ್ಕೆ ಧಕ್ಕೆ ತರುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗದ ವಲಯದಿಂದ ಸೇವೆಗಳನ್ನು (ಅಧಿಕಾರಶಾಹಿ) ಹೊರಗಿಟ್ಟರೆ, ಸಚಿವರು ನಾಗರಿಕ ಸೇವಾ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ಕಳೆದುಕೊಳ್ಳುತ್ತಾರೆ. ಅಲ್ಲದೆ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂವಿಧಾನದ ಮೂಲರಚನೆಯ ಭಾಗಗಳಾಗಿವೆ’ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.  

’ಅಧಿಕಾರಿಗಳು ಸಚಿವರಿಗೆ ಕೆಲಸದ ವರದಿ ಮಾಡುವುದನ್ನು ಸ್ಥಗಿತಗೊಳಿಸಿದರೆ ಸಾಮೂಹಿಕ ಜವಾಬ್ದಾರಿ ಸಿದ್ಧಾಂತಕ್ಕೆ ಧಕ್ಕೆ ಆಗುತ್ತದೆ. ಪ್ರಜಾಪ್ರಭುತ್ವ ಆಡಳಿತದ ನಿಜವಾದ ಅಧಿಕಾರ ಚುನಾಯಿತ ಸರ್ಕಾರದ ಕೈಯಲ್ಲಿ ಇರಬೇಕು’ ಎಂದು ಸಿ.ಜೆ. ಅವರಲ್ಲದೆ ನ್ಯಾಯಮೂರ್ತಿಗಳಾದ ಎಂ.ಆರ್.ಷಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ.ಎಸ್‌.ನರಸಿಂಹ ಅವರನ್ನು ಒಳಗೊಂಡ ಪೀಠ ಹೇಳಿದೆ. 

2022ರ ಮೇ 6ರಂದು ಈ ‍ಪ್ರಕರಣ ಐದು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಿತ್ತು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಹಾಗೂ ದೆಹಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರು ನಾಲ್ಕೂವರೆ ದಿನಗಳವರೆಗೆ ವಾದ ಮಂಡಿಸಿದ್ದರು. 

ದೆಹಲಿಯ ಸೇವೆಗಳ ವಿಷಯದಲ್ಲಿ (ಅಧಿಕಾರಶಾಹಿ ಮೇಲೆ) ಕೇಂದ್ರಕ್ಕೆ ಮಾತ್ರ ನಿಯಂತ್ರಣ ಇರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ 2015ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಎಎಪಿ ಸರ್ಕಾರವು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. 

ದೆಹಲಿಯಲ್ಲಿ ಯಾರಿಗೆ ಹೆಚ್ಚು ಅಧಿಕಾರ ಸಿಗಬೇಕು ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು 2019ರಲ್ಲಿ ಭಿನ್ನ ತೀರ್ಪು ನೀಡಿತ್ತು. ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಸೇರಿದಂತೆ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರದ್ದೇ ಕೊನೆಯ ತೀರ್ಮಾನ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಎ.ಕೆ. ಸಿಕ್ರಿ ಭಿನ್ನ ತೀರ್ಪು ನೀಡಿದ್ದರು. ಬಳಿಕ, ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದ್ದರು.  

ಕೇಂದ್ರ ಸರ್ಕಾರ ಮತ್ತು ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ನಡುವೆ ಕಲಹಕ್ಕೆ ಕಾರಣವಾಗಿದ್ದ 6 ವಿಷಯಗಳ ಪೈಕಿ ಐದು ವಿಷಯಗಳಲ್ಲಿ ಪೀಠ ಒಮ್ಮತದ ತೀರ್ಮಾನಕ್ಕೆ ಬಂದಿತ್ತು. ಉಳಿದ ಒಂದು ವಿಷಯವನ್ನು ವಿಸ್ತೃತ ಪೀಠದ ವಿವೇಚನೆಗೆ ಒಪ್ಪಿಸಿತ್ತು.  

‘ಪ್ರಜಾಪ್ರಭುತ್ವದ ಗೆಲುವು’

‘ದೆಹಲಿ ಜನತೆಗೆ ನ್ಯಾಯ ಒದಗಿಸಿದ ಸುಪ್ರೀಂ ಕೋರ್ಟ್‌ಗೆ ಹೃತ್ಪೂರ್ವಕ ಧನ್ಯವಾದಗಳು. ಈ ನಿರ್ಧಾರದಿಂದ ದೆಹಲಿ ಅಭಿವೃದ್ಧಿಯ ವೇಗ ಹಲವು ಪಟ್ಟು ಹೆಚ್ಚಲಿದೆ. ಈ ತೀರ್ಪು
ಪ್ರಜಾಪ್ರಭುತ್ವಕ್ಕೆ ಸಂದ ಜಯ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. 

‘ಆಡಳಿತ ಎಂದರೆ ಜನಸೇವೆಯೇ ಹೊರತು ರಾಜಕೀಯವಲ್ಲ. ದೆಹಲಿಯ ಆಡಳಿತವನ್ನು ಹೈಜಾಕ್‌ ಮಾಡುವ ಮೂಲಕ ಆಡಳಿತವನ್ನು ಸ್ಥಗಿತಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆ. ದೆಹಲಿ ಗೆದ್ದಿದೆ. ಪ್ರಜಾಪ್ರಭುತ್ವವೂ ಗೆದ್ದಿದೆ’ ಎಂದು ಎಎಪಿಯ ರಾಜ್ಯಸಭಾ ಸದಸ್ಯ ರಾಘವ ಛಡ್ಡಾ ಪ್ರತಿಕ್ರಿಯಿಸಿದ್ದಾರೆ. 

ದೆಹಲಿ ಪ್ರಕರಣ

1 ದೆಹಲಿ ಸರ್ಕಾರಕ್ಕೆ ನಾಗರಿಕ ಸೇವಾ ಅಧಿಕಾರಿಗಳ ಮೇಲೆ ಸಂಪೂರ್ಣ ನಿಯಂತ್ರಣವಿರಲಿದೆ. ಅದು ಆ ಸರ್ಕಾರಕ್ಕೆ ದತ್ತವಾದ ಸಂವಿಧಾನಾತ್ಮಕ ಹಕ್ಕು

2 ಪ್ರಜಾಪ್ರಭುತ್ವದ ಮಾರ್ಗದಲ್ಲಿ ಚುನಾಯಿತಗೊಂಡಿರುವ ಸರ್ಕಾರ ತನ್ನ ಆಡಳಿತದ ಮೇಲೆ ನಿಯಂತ್ರಣ ಹೊಂದಿರಬೇಕು ಮತ್ತು ಈ ಆಡಳಿತ ಸರ್ಕಾರದ ಸೇವೆಗಾಗಿ ನಿಯುಕ್ತಿಗೊಂಡಿರುವ ಹಲವಾರು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರುತ್ತದೆ

3 ದೆಹಲಿ ಸರ್ಕಾರ ಅಧಿಕಾರಿಗಳ ನೇಮಕಾತಿಯಲ್ಲಿ ಸಕ್ರಿಯವಾಗಿರದೆ ಇದ್ದರೂ ಅವರ ಮೇಲೆ ಅದಕ್ಕೆ ನಿಯಂತ್ರಣ ಇರುತ್ತದೆ. ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಅವರ ವ್ಯಾಪ್ತಿಯಲ್ಲಿನ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ನೀಡದಿದ್ದರೆ ಸಾಮೂಹಿಕ ಹೊಣೆಗಾರಿಕೆ ಸಿದ್ಧಾಂತಅರ್ಥ ಕಳೆದುಕೊಳ್ಳಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT