ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್: ಸುಪ್ರೀಂ ಕೋರ್ಟ್ ಆದೇಶದಂತೆ ಆಯೋಗಕ್ಕೆ ಮಾಹಿತಿ ಸಲ್ಲಿಸಿದ SBI

Published : 12 ಮಾರ್ಚ್ 2024, 13:58 IST
Last Updated : 12 ಮಾರ್ಚ್ 2024, 13:58 IST
ಫಾಲೋ ಮಾಡಿ
Comments

ನವದೆಹಲಿ: ಸುಪ್ರೀಂ ಕೋರ್ಟ್‌ನ ಆದೇಶದಂತೆ ಚುನಾವಣಾ ಬಾಂಡ್‌ ಪಡೆದವರ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಸಲ್ಲಿಸಿದೆ.

ಈ ಮಾಹಿತಿಯನ್ನು ಮಾರ್ಚ್‌ 12 ರ ಸಂಜೆಯೊಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿತ್ತು.

ಹೀಗೆ ಪಡೆದ ಮಾಹಿತಿಯನ್ನು ತನ್ನ ಅಂತರ್ಜಾಲ ಪುಟದಲ್ಲಿ ಪ್ರಕಟಿಸಬೇಕು ಎಂದೂ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು. ಈ ಆದೇಶದ ಪ್ರಕಾರ ಬ್ಯಾಂಕ್‌ ಹಂಚಿಕೊಂಡ ಬಾಂಡ್ ಖರೀದಿಸಿದವರ ಮಾಹಿತಿಯನ್ನು ಮಾರ್ಚ್‌ 15ರ ಸಂಜೆ 5ರೊಳಗೆ ಚುನಾವಣಾ ಆಯೋಗವು ತನ್ನ ಅಂತರ್ಜಾಲ ಪುಟದಲ್ಲಿ ಪ್ರಕಟಿಸಬೇಕು ಎಂದಿದೆ ಎಂದು ವರದಿಯಾಗಿದೆ.

2018ರಿಂದ ಈವರೆಗೂ 30 ಕಂತುಗಳಲ್ಲಿ ಒಟ್ಟು ₹16,518 ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ವಿತರಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಫೆ. 15ರಂದು ಸುಪ್ರೀಂ ಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿತ್ತು. ಇದು ‘ಅಸಾಂವಿಧಾನಿಕ’ ಎಂದಿದ್ದ ಸುಪ್ರೀಂ ಕೋರ್ಟ್, ಚುನಾವಣಾ ಬಾಂಡ್ ಪಡೆದವರ ವಿವರಗಳನ್ನು ಚುನಾವಣಾ ಆಯೊಗವು ಪ್ರಕಟಿಸಬೇಕು ಎಂದೂ ಖಡಕ್ ನಿರ್ದೇಶನ ನೀಡಿತ್ತು.

ಇದಕ್ಕೆ ಮೇಲ್ಮನವಿ ಸಲ್ಲಿಸಿದ್ದ ಎಸ್‌ಬಿಐ, ವಿವರಗಳನ್ನು ಸಲ್ಲಿಸಲು ತನಗೆ ಜೂನ್ 30ರವರೆಗೂ ಕಾಲಾವಕಾಶ ನೀಡುವಂತೆ ಕೋರಿತ್ತು. ಬ್ಯಾಂಕ್‌ನ ಮನವಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್, ಮಂಗಳವಾರ ಸಂಜೆ ಕಚೇರಿ ಕೆಲಸದ ಅವಧಿ ಕೊನೆಗೊಳ್ಳುವುದರೊಳಗಾಗಿ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸುವಂತೆ ಸೂಚಿಸಿತ್ತು.

ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ದೇಣಿಗೆ ನೀಡುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್‌ ಯೋಜನೆಯನ್ನು ಜಾರಿಗೆ ತಂದಿರುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. 2018ರ ಮಾರ್ಚ್‌ನಲ್ಲಿ ಮೊದಲ ಕಂತಿನ ಚುನಾವಣಾ ಬಾಂಡ್ ಮಾರಾಟವಾಗಿತ್ತು. ಯಾವ ಪಕ್ಷದ ಹೆಸರಿನಲ್ಲಿ ಬಾಂಡ್ ಖರೀದಿ ಆಗುತ್ತದೋ, ಆ ಪಕ್ಷವು ಅಧಿಕೃತ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎಂಬುದು ನಿಯಮ. ಹೀಗಾಗಿ ಬಾಂಡ್‌ಗಳನ್ನು ವಿತರಿಸುವ ಏಕೈಕ ಹಕ್ಕನ್ನು ಎಸ್‌ಬಿಐ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT