ದೇಶದಲ್ಲಿ ಜನಪ್ರಿಯವಾಗಿರುವ ಏಕೀಕೃತ ಪಾವತಿ ವ್ಯವಸ್ಥೆಯು (ಯುಪಿಐ) ಈ ತಿಂಗಳಲ್ಲಿ ಮೂರು ಬಾರಿ ಕೈಕೊಟ್ಟಿತ್ತು. ಇದರ ಪರಿಣಾಮವಾಗಿ, ಹಣ ಪಾವತಿ ಮಾಡುವ ಸಂದರ್ಭದಲ್ಲಿ ಜನಸಾಮಾನ್ಯರು, ವರ್ತಕರು ಫಜೀತಿಗೆ ಒಳಗಾಗಿದ್ದರು. ಸಣ್ಣ ವ್ಯಾಪಾರ ಮಳಿಗೆಗಳಲ್ಲಿ ಗೊಂದಲವು ಹೆಚ್ಚು ತೀವ್ರವಾಗಿತ್ತು. ಹಣ ಪಾವತಿ ಸಾಧ್ಯವಾಗದೆ ವರ್ತಕರು ಮತ್ತು ಗ್ರಾಹಕರು ಕೆಲವು ತಾಸುಗಳವರೆಗೆ ಸಮಸ್ಯೆಗೆ ಸಿಲುಕಿದ್ದರು. ಹಿಂದಿನ ವರ್ಷದಲ್ಲಿ ಯುಪಿಐ ವ್ಯವಸ್ಥೆಯಲ್ಲಿ ಆರು ಬಾರಿ, ಕಳೆದ ಐದು ವರ್ಷಗಳಲ್ಲಿ 21 ಬಾರಿ ಸಮಸ್ಯೆ ಎದುರಾಗಿತ್ತು. ಯುಪಿಐ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ರಾಷ್ಟ್ರೀಯ ಪಾವತಿ ನಿಗಮವು (ಎನ್ಪಿಸಿಐ) ಕೆಲವೇ ತಾಸುಗಳಲ್ಲಿ ಸಮಸ್ಯೆಯನ್ನು ಪರಿಹರಿಸಿತಾದರೂ ಲಕ್ಷಾಂತರ ಮಂದಿ ಬಳಕೆದಾರರಿಗೆ ತೊಂದರೆ ಆಗಿತ್ತು. ಯುಪಿಐ ವ್ಯವಸ್ಥೆಯನ್ನು ಬಳಸಿ ಪ್ರತಿದಿನ 60 ಕೋಟಿ ವಹಿವಾಟುಗಳು ನಡೆಯುತ್ತಿವೆ ಎಂಬ ಅಂದಾಜು ಇದೆ. ವಹಿವಾಟುಗಳ ಸಂಖ್ಯೆಯು ಸ್ಥಿರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ, ಈ ವ್ಯವಸ್ಥೆಯಲ್ಲಿ ತೊಡಕುಗಳು ಎದುರಾದಾಗ ಉಂಟಾಗುವ ಸಮಸ್ಯೆಯ ಪ್ರಮಾಣವೂ ದೊಡ್ಡದಾಗಿಯೇ ಇರುತ್ತದೆ. ದೇಶದ ಆನ್ಲೈನ್ ಪಾವತಿ ವಹಿವಾಟುಗಳ ಬೆನ್ನೆಲುಬಿನಂತೆ ಯುಪಿಐ ಬೆಳೆದು ನಿಂತಿದೆ. ಆನ್ಲೈನ್ ವಹಿವಾಟಿನಲ್ಲಿ ಶೇ 65ರಷ್ಟು ಈ ವ್ಯವಸ್ಥೆಯ ಮೂಲಕವೇ ಆಗುತ್ತಿದೆ. ಮಾರ್ಚ್ ತಿಂಗಳಲ್ಲಿ ಈ ವ್ಯವಸ್ಥೆಯ ಮೂಲಕ 1,800 ಕೋಟಿಗೂ ಹೆಚ್ಚು ವಹಿವಾಟುಗಳು ನಡೆದಿವೆ. ಇದು ಹಿಂದಿನ ತಿಂಗಳಲ್ಲಿ ಆಗಿದ್ದ ವಹಿವಾಟಿನ ಸಂಖ್ಯೆಗೆ ಹೋಲಿಸಿದರೆ ಶೇಕಡ 14ರಷ್ಟು ಹೆಚ್ಚು.

2016ರಲ್ಲಿ ಆರಂಭವಾದ ಯುಪಿಐ, ಭಾರತವು ಹೆಮ್ಮೆಯಿಂದ ಹೇಳಿಕೊಳ್ಳುವ ವ್ಯವಸ್ಥೆಗಳಲ್ಲಿ ಒಂದು. ನೋಟು ರದ್ದತಿಯ ಸಂದರ್ಭದ ಸವಾಲುಗಳು, ಕೋವಿಡ್ ಸಾಂಕ್ರಾಮಿಕ ತೀವ್ರವಾಗಿದ್ದ ಅವಧಿಯ ಸಮಸ್ಯೆಗಳು ಈ ವ್ಯವಸ್ಥೆಯು ಜನಪ್ರಿಯವಾಗಲು ಕಾರಣವಾಗಿ ಒದಗಿಬಂದವು. ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಾಗಿದ್ದು ಹಾಗೂ ಡಿಜಿಟಲ್ ಅರಿವು ಹೆಚ್ಚಾಗಿದ್ದು ಈ ವ್ಯವಸ್ಥೆಯ ಬೆಳವಣಿಗೆಗೆ ಪೂರಕ ವಾದವು. ಈ ವ್ಯವಸ್ಥೆಯಲ್ಲಿ ಲೋಪಗಳು ಇಲ್ಲದಂತೆ ಎನ್ಪಿಸಿಐ ನಿಗಾ ವಹಿಸಬೇಕು. ಸಮಸ್ಯೆಯ ಬೇರು ಎಲ್ಲಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ ಎಂದು ಎನ್ಪಿಸಿಐ ಹೇಳಿದೆ. ವಹಿವಾಟುಗಳು ಇದ್ದಕ್ಕಿದ್ದಂತೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದ್ದುದು ಸಮಸ್ಯೆಗೆ ಕಾರಣವಾಯಿತು ಎಂದು ಭಾವಿಸಲಾಗಿದೆ. ಆದರೆ ವಹಿವಾಟುಗಳ ಸಂಖ್ಯೆಯು ಹೆಚ್ಚಳವಾಗುವ ಸೂಚನೆ ಇದ್ದಾಗ ಪರಿಸ್ಥಿತಿಯನ್ನು ನಿಭಾಯಿಸಲು ಎನ್ಪಿಸಿಐ ಸಿದ್ಧತೆ ಮಾಡಿಕೊಂಡಿರಬೇಕಿತ್ತು. ಸಮಸ್ಯೆಗಳನ್ನು ಕಡಿಮೆ ಮಾಡುವ ಯತ್ನದ ಭಾಗವಾಗಿ, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಹೊಸತನಕ್ಕೆ ಉತ್ತೇಜನ ನೀಡಲು ಡಿಜಿಟಲ್ ಪಾವತಿ ವಲಯದಲ್ಲಿ ಹೊಸ ಸಂಸ್ಥೆಯೊಂದನ್ನು ಕಟ್ಟಬೇಕು ಎಂಬ ಸಲಹೆಗಳಿವೆ. ಸಮಸ್ಯೆಗಳು ಮತ್ತೆ ಮತ್ತೆ ಎದುರಾಗದಿದ್ದರೂ ಅವು ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಪೆಟ್ಟು ಕೊಡುತ್ತವೆ.

ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಇನ್ನೊಂದು ಸಮಸ್ಯೆ. 2022–23ರಲ್ಲಿ ಯುಪಿಐ ವ್ಯವಸ್ಥೆಯಲ್ಲಿ ದಾಖಲಾದ ವಂಚನೆ ಪ್ರಕರಣಗಳಲ್ಲಿನ ಹಣದ ಮೊತ್ತವು ₹573 ಕೋಟಿ ಇತ್ತು. ಆದರೆ ಅದು 2023–24ರಲ್ಲಿ ₹1,087 ಕೋಟಿಗೆ ಹೆಚ್ಚಳವಾಗಿದೆ. ಇದು ಕಳವಳಕಾರಿ ಸಂಗತಿ. ಬಳಕೆದಾರರ ಗುರುತನ್ನು ತಾಳೆ ಮಾಡುವ, ದೃಢೀಕರಿಸುವ ಬಲವಾದ ಪ್ರಕ್ರಿಯೆಗಳನ್ನು ಎನ್ಪಿಸಿಐ ಜಾರಿಯಲ್ಲಿ ತಂದಿದೆ. ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್ ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವ್ಯವಸ್ಥೆಯನ್ನು ದೃಢವಾಗಿಸಲು ಅದು ಶ್ರಮಿಸಿದೆ. ತಂತ್ರಜ್ಞಾನವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಿ ಮತ್ತು ಮೇಲ್ವಿಚಾರಣೆಯನ್ನು ಬಿಗಿಗೊಳಿಸಿ ಅದು ವಂಚನೆಯ ಸಾಧ್ಯತೆಯನ್ನು ಕಡಿಮೆ ಮಾಡಬೇಕು. ವಿಶ್ವದರ್ಜೆಯ ಪಾವತಿ ವ್ಯವಸ್ಥೆ ಎಂದು ಯುಪಿಐ ಗಳಿಸಿಕೊಂಡಿರುವ ಖ್ಯಾತಿಯು ಉಳಿಯಬೇಕು, ಬಳಕೆಯು ಸುಲಭವಾಗಿರಬೇಕು, ವ್ಯವಸ್ಥೆಯಲ್ಲಿ ಲೋಪಗಳು ಇರಬಾರದು. ಆಗ ಇದು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.