ಉದ್ಯೋಗಸ್ಥ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸಚಿವ ಸಂಪುಟದ ಮಹತ್ವದ ನಿರ್ಣಯ, ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಹಾಗೂ ಅವರನ್ನು ಘನತೆಯಿಂದ ನಡೆಸಿಕೊಳ್ಳುವ ಮಹತ್ವದ ನಡೆಯಾಗಿದೆ. ಬಿಹಾರ, ಒಡಿಶಾ, ಕೇರಳ ರಾಜ್ಯಗಳಲ್ಲಿ ಮುಟ್ಟಿನ ರಜೆ ಈಗಾಗಲೇ ಜಾರಿಯಲ್ಲಿದೆ. ಆದರೆ, ಆ ರಜೆ ಸರ್ಕಾರಿ ನೌಕರರಿಗೆ ಇಲ್ಲವೇ ಸೀಮಿತ ವರ್ಗಕ್ಕೆ ಅನ್ವಯಗೊಳ್ಳುವಂತಹದ್ದು. ಸರ್ಕಾರಿ ಕಚೇರಿಗಳು, ಬಹುರಾಷ್ಟ್ರೀಯ ಕಂಪನಿಗಳು, ಐ.ಟಿ ಕಂಪನಿಗಳು, ಗಾರ್ಮೆಂಟ್ಸ್ ಹಾಗೂ ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕರ್ನಾಟಕದ ‘ಋತುಚಕ್ರ ನೀತಿ– 2025’ ಅನ್ವಯವಾಗುವಂತಿದೆ. ಇದರೊಂದಿಗೆ, ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಕರ್ನಾಟಕ ಮಾದರಿಯೊಂದನ್ನು ಕಲ್ಪಿಸಿದೆ. ಋತುಚಕ್ರದ ದಿನಗಳ ಆರೋಗ್ಯವನ್ನು ಮಹಿಳೆಯ ಹಕ್ಕುಗಳು ಮತ್ತು ಉದ್ಯೋಗ ಮಾಡುವ ಸ್ಥಳದ ಮೂಲಭೂತ ಅಂಶವೆಂದು ಪರಿಗಣಿಸಿ, ಅದರ ಮಹತ್ವವನ್ನು ಗುರ್ತಿಸಿರುವ ರೂಪದಲ್ಲಿ ಋತುಚಕ್ರದ ರಜೆ ನೀಡಲು ನಿರ್ಧರಿಸಿರುವುದಾಗಿ ಸರ್ಕಾರ ಹೇಳಿರುವುದು ಸರಿಯಾಗಿದೆ. ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಈ ಕ್ರಮ, ವಿವೇಕ ಮತ್ತು ಸಂವೇದನಾಶೀಲ ನಿರ್ಧಾರವಾಗಿದೆ. ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಹಾಗೂ ಮಾಸಿಕ ₹2,000 ನೀಡುವ ‘ಗೃಹಲಕ್ಷ್ಮಿ’ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದ ರಾಜ್ಯ ಸರ್ಕಾರ, ಈಗ ಮುಟ್ಟಿನ ರಜೆಯ ಮೂಲಕ ಮತ್ತೊಂದು ಮಹಿಳಾಪರ ನಿರ್ಧಾರ ಕೈಗೊಂಡಿದೆ.

ಮಹಿಳಾ ಉದ್ಯೋಗಿಗಳನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಹಾಗೂ ಒಂದು ಸವಲತ್ತಿನ ರೂಪದಲ್ಲಿ ನೋಡಬಹುದಾದ ಮುಟ್ಟಿನ ರಜೆಗೆ ಸಾಮಾಜಿಕ ಆಯಾಮದ ಮಹತ್ವವೂ ಇದೆ. ಈ ನಿರ್ಧಾರ, ಹೆಣ್ಣಿನ ಋತುಚಕ್ರದ ಬಗ್ಗೆ ಸಾರ್ವಜನಿಕ ಸಂವೇದನೆಯನ್ನು ರೂಪಿಸಲು ಅಗತ್ಯವಾಗಿದ್ದ ಕ್ರಮವೂ ಆಗಿದೆ. ಲಿಂಗಸಂವೇದನೆಯ ಸೂಕ್ಷ್ಮಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದರೂ, ಮುಟ್ಟಿನ ಬಗೆಗಿನ ಪೂರ್ವಗ್ರಹಗಳಿಂದ ಸಮಾಜ ಇನ್ನೂ ಮುಕ್ತವಾಗಿಲ್ಲ. ಗೌರವ ಹಾಗೂ ಸಹಾನುಭೂತಿಯಿಂದ ನೋಡಬೇಕಾದ ಹೆಣ್ಣಿನ ದೈಹಿಕ ಬದಲಾವಣೆಯನ್ನು ಮೈಲಿಗೆಯಾಗಿ ನೋಡುವ ಹಾಗೂ ತಮಾಷೆ ಮಾಡುವ ಪ್ರವೃತ್ತಿ ಸಮಾಜದಲ್ಲಿದೆ. ಹೆಣ್ಣು ತನ್ನ ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡುವ ಸ್ಥಿತಿ ಮನೆಯ ಹೊರಗಿರಲಿ, ಅನೇಕ ಕುಟುಂಬಗಳಲ್ಲೂ ಇಲ್ಲ. ಮನೆಯ ಹೆಣ್ಣುಮಕ್ಕಳ ದೈಹಿಕ ಬದಲಾವಣೆಗಳ ಬಗ್ಗೆ ಕುಟುಂಬದ ಸದಸ್ಯರೇ ಸಂವೇದನಾಶೂನ್ಯರಾಗಿರುವ ಉದಾಹರಣೆಗಳೇ ಹೆಚ್ಚು. ಮುಟ್ಟಿನ ಸಂದರ್ಭದ ದೈಹಿಕ ಹಾಗೂ ಮಾನಸಿಕ ಒತ್ತಡದ ಜೊತೆಗೆ ಸಮಾಜದ ಕಟ್ಟುಪಾಡುಗಳ ಸಂಕಷ್ಟವನ್ನೂ ಮಹಿಳೆ ಎದುರಿಸಬೇಕಾಗಿದೆ. ಇಂಥ ಸಂದರ್ಭದಲ್ಲಿ, ಮುಟ್ಟಿಗೆ ಅಂಟಿಕೊಂಡಿರುವ ಪೂರ್ವಗ್ರಹಗಳನ್ನು ತೊಡೆದುಹಾಕುವ ಹಾಗೂ ಉದ್ಯೋಗಸ್ಥ ಮಹಿಳೆಯರ ಮುಟ್ಟಿನ ಸಂದರ್ಭವನ್ನು ಸ್ವಲ್ಪವಾದರೂ ಸಹನೀಯಗೊಳಿಸುವ ಸಾಧ್ಯತೆಯ ರೂಪದಲ್ಲಿ ಸರ್ಕಾರದ ನಿರ್ಧಾರವನ್ನು ನೋಡಬಹುದಾಗಿದೆ.

ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಎಲ್ಲ ವಲಯಗಳಲ್ಲಿನ ಮಹಿಳಾ ಉದ್ಯೋಗಿಗಳನ್ನೂ ಸರ್ಕಾರ ತನ್ನ ‘ಋತುಚಕ್ರ ನೀತಿ’ಯಡಿ ತಂದಿದೆ. ಆದರೆ, ರಜಾ ನೀತಿಯನ್ನು ಜಾರಿಗೆ ತರುವಷ್ಟಕ್ಕೆ ಸರ್ಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಈ ನೀತಿ ಅನುಷ್ಠಾನಗೊಳ್ಳುವುದನ್ನು ಖಾತರಿಪಡಿಸಿಕೊಳ್ಳುವ ವ್ಯವಸ್ಥೆಯನ್ನೂ ಸರ್ಕಾರ ರೂಪಿಸಬೇಕಾಗಿದೆ. ನೌಕರರನ್ನು ಯಂತ್ರಗಳಂತೆ ನಡೆಸಿಕೊಳ್ಳುವ, ಕನಿಷ್ಠ ಸೌಲಭ್ಯಗಳನ್ನೂ ನೀಡದ ಸಂಸ್ಥೆಗಳಿವೆ. ಮಹಿಳೆಯರ ಉತ್ಪಾದನಾಶಕ್ತಿ ಹಾಗೂ ಕೆಲಸದ ಬದ್ಧತೆಯನ್ನು ಅನುಮಾನದಿಂದ ನೋಡುವವರೂ ಇದ್ದಾರೆ. ಪುರುಷಪ್ರಧಾನ ಉದ್ಯೋಗ ವಲಯಗಳಲ್ಲಿ ಮಹಿಳಾ ಉದ್ಯೋಗಿ ತನ್ನ ಹಕ್ಕಿನ ರಜೆಯನ್ನು ಪಡೆದುಕೊಳ್ಳಲು ಹಿಂಜರಿಯುವ ಪರಿಸ್ಥಿತಿ ಎದುರಾದಲ್ಲಿ ಆಶ್ಚರ್ಯವೇನೂ ಇಲ್ಲ. ಮುಟ್ಟಿನ ರಜೆಯು ಉದ್ಯೋಗದ ಸ್ಥಳದಲ್ಲಿ ಮಹಿಳೆಯರನ್ನು ತಾರತಮ್ಯದಿಂದ ನಡೆಸಿಕೊಳ್ಳಲು ಕಾರಣವಾಗಬಹುದು ಹಾಗೂ ವೃತ್ತಿಪರ ಅವಕಾಶಗಳಿಗೆ ಅಡಚಣೆ ಉಂಟುಮಾಡಬಹುದೆನ್ನುವ ವಾದಗಳೂ ಇವೆ. ಇಂಥ ಸಂದರ್ಭಗಳನ್ನು ನಿಭಾಯಿಸಲು ಸರ್ಕಾರ ಸಮರ್ಪಕ ಸಿದ್ಧತೆ ಮಾಡಿಕೊಳ್ಳದೆ ಹೋದರೆ, ಮುಟ್ಟಿನ ರಜೆ ಎನ್ನುವುದು ಸಾಂಕೇತಿಕವಾಗಿಯಷ್ಟೇ ಉಳಿದು, ಕೆಲವರಿಗಷ್ಟೇ ಸೀಮಿತವಾಗುವ ಸಾಧ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.