ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಅರಣ್ಯ ವಿಜ್ಞಾನ ಪದವೀಧರರು– ವಿದ್ಯಾರ್ಥಿಗಳ ಪ್ರತಿಭಟನೆ

Published 27 ಫೆಬ್ರುವರಿ 2024, 16:08 IST
Last Updated 27 ಫೆಬ್ರುವರಿ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ವಿಜ್ಞಾನ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ನಿಗದಿಪಡಿಸಬೇಕು’ ಎಂದು ಆಗ್ರಹಿಸಿ ಕರ್ನಾಟಕ ಅರಣ್ಯ ವಿಜ್ಞಾನ ಪದವೀಧರರು ಹಾಗೂ ವಿದ್ಯಾರ್ಥಿಗಳ ಒಕ್ಕೂಟದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಿದ್ದ ಪ್ರತಿಭಟನಕಾರರು, ‘ಕಾಡಿನ ಮಕ್ಕಳು ನಾವು, ತಿಳಿಯುತ್ತಿಲ್ಲವೆ ನಮ್ಮ ನೋವು?’, ‘ಕಾಡಿನ ಮಕ್ಕಳು ಬೀದಿಗೆ ಬಿದ್ದರು’, ‘ಅರಣ್ಯ ಪದವೀಧರರ ರಕ್ಷಣೆ, ಅರಣ್ಯದ ಅಭಿವೃದ್ಧಿಗೆ ಮನ್ನಣೆ’ ಹಾಗೂ ‘ಆದೇಶ ಬೇಕು, ಆಶ್ವಾಸನೆ ಅಲ್ಲ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಶಿರಸಿ, ಪೊನ್ನಂಪೇಟೆ ಹಾಗೂ ಶಿವಮೊಗ್ಗದ ಇರುವಕ್ಕಿ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಅರಣ್ಯ ಇಲಾಖೆಯ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರಣ್ಯ ವಿಜ್ಞಾನದಲ್ಲಿ ವ್ಯಾಸಂಗ ಮಾಡಿರುವ ಪದವೀಧರರನ್ನು ಕಡೆಗಣಿಸಲಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ಪದವೀಧರರಿಗೆ ಆಯಾ ಇಲಾಖೆಯಲ್ಲಿ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಈ ವ್ಯವಸ್ಥೆಯನ್ನು ಅರಣ್ಯ ಇಲಾಖೆಯಲ್ಲೂ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು. 

‘ಅರಣ್ಯ ರಕ್ಷಣೆ ಹಾಗೂ ಪಾಲನೆ ವಿಷಯದಲ್ಲಿ ನಾಲ್ಕು ವರ್ಷ ಅಧ್ಯಯನ ಮಾಡಿ ಪದವಿ ಪಡೆದಿದ್ದೇವೆ. ಹಲವರು ಚಿನ್ನದ ಪದಕ ಸಹಿತ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಅರಣ್ಯ ವಿಜ್ಞಾನದ ಪದವೀಧರರಿಗೆ ಅನ್ಯಾಯವಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಅರಣ್ಯ ರಕ್ಷಕರಿಗೆ ಬಡ್ತಿ ನೀಡಿ ಉಪ ವಲಯ ಅರಣ್ಯಾಧಿಕಾರಿ ಹುದ್ದೆ ನೀಡಲಾಗುತ್ತಿದೆ. ಈ ಹುದ್ದೆಗೆ ಅರಣ್ಯ ವಿಜ್ಞಾನ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ನಿಗದಿಪಡಿಸಬೇಕು. ಇಲಾಖೆ ನೇಮಕಾತಿಯಲ್ಲಿ ಅರಣ್ಯ ವಿಜ್ಞಾನ ಪದವೀಧರರ ಮೀಸಲಾತಿಯನ್ನು ಶೇ 50ಕ್ಕೆ ಕಡಿತಗೊಳಿಸಲಾಗಿದೆ. ಈ ಕ್ರಮ ಸರಿಯಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು’ ಎಂದು ಕೋರಿದರು.

ಬೇಡಿಕೆ: ಪರಿಶೀಲನೆಗೆ ಸಮಿತಿ:

ಅರಣ್ಯ ವಿಜ್ಞಾನ ಪದವೀಧರರು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ಪರಿಶೀಲಿಸಲು ಸಮಿತಿ ರಚಿಸುವುದಾಗಿ ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ‘ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದಂತೆ ಕೆಲವು ಬೇಡಿಕೆ ಮುಂದಿಟ್ಟುಕೊಂಡು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ಧಾರೆ. ಫೆ.15ರಂದೇ ಅರಣ್ಯ ವಿಜ್ಞಾನ ವಿದ್ಯಾರ್ಥಿಗಳ ಜತೆಗೆ ಸಮಾಲೋಚನೆ ನಡೆಸಿ ಅವರ ಬೇಡಿಕೆಗಳ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದೇನೆ. ಈ ಹಿಂದೆ ವಿಜಯಭಾಸ್ಕರ್ ನೇತೃತ್ವದ ಸಮಿತಿ ಬಡ್ತಿಗೆ ಸಂಬಂಧಿಸಿದಂತೆ ಮಾಡಿರುವ ಶಿಫಾರಸಿನ ಬಗ್ಗೆ ಮರು ಪರಿಶೀಲನೆ ನಡೆಸಬೇಕಿದೆ. ಇತರೆ ವಿಜ್ಞಾನ ಪದವೀಧರರಿಗೂ ಅನ್ಯಾಯ ಆಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ರಚಿಸಿ ವರದಿ ಬಂದ ಬಳಿಕ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಸಚಿವರು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT