ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಟಿಕೆಟ್ ಕೈತಪ್ಪುವ ಭೀತಿ– ಯದುವೀರ್‌ ವಿರುದ್ಧ ಪ್ರತಾಪ ಸಿಂಹ ಚುಚ್ಚು ಮಾತು

ಲೋಕಸಭೆ ಚುನಾವಣೆ: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವ ಭೀತಿಯಿಂದ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ
Published 12 ಮಾರ್ಚ್ 2024, 12:33 IST
Last Updated 12 ಮಾರ್ಚ್ 2024, 12:33 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿ ಟಿಕೆಟ್‌ ಕೈತಪ್ಪುವುದು ಬಹುತೇಕ ಖಾತ್ರಿಯಾಗುತ್ತಲೇ ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದಿದ್ದು, ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪರೋಕ್ಷವಾಗಿ ಯದುವೀರ್ ಸ್ಪರ್ಧೆಯನ್ನು ವಿರೋಧಿಸಿದರು. ‘ಸುಖದ ಸುಪ್ಪತ್ತಿಗೆಯಲ್ಲಿ ಇರುವವರು ಜನರ ಭಾವನೆಯನ್ನು ಹಂಚಿಕೊಳ್ಳುತ್ತೇವೆ ಎಂದು ಬಂದಾಗ ಖಂಡಿತ ಅದನ್ನು ಸ್ವಾಗತ ಮಾಡಲೇಬೇಕು. ಇಂತಹ ಉದಾರ ಮನಸ್ಸನ್ನು ಇಟ್ಟುಕೊಂಡಿರುವ ಯದುವೀರ್ ಸ್ಪರ್ಧೆಯನ್ನು ನಾನು ಸ್ವಾಗತಿಸುತ್ತೇನೆ. ಇದಕ್ಕಾಗಿ ನಮ್ಮ ಪಕ್ಷದ ರಾಜ್ಯ ನಾಯಕರನ್ನು ಅಭಿನಂದಿಸುತ್ತೇನೆ’ ಎಂದು ಲೇವಡಿ ಮಾಡಿದರು.

‘ಅರಮನೆಯಲ್ಲಿ ಆರಾಮವಾಗಿ ಇರುವಂತಹ ವ್ಯಕ್ತಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಸಿದ್ದರಾಮಯ್ಯ ಸರ್ಕಾರದ ರೈತ ವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಕರಪತ್ರ ಹಿಡಿದು ಪ್ರತಿಭಟನೆ ಮಾಡುತ್ತ, ನಗರದ ದೊಡ್ಡ ಗಡಿಯಾರ ವೃತ್ತದಲ್ಲಿ ಸಾಮಾನ್ಯ ಕಾರ್ಯಕರ್ತರ ಜೊತೆ ಕುಳಿತು ಘೋಷಣೆ ಕೂಗಲು ಸಿದ್ಧರಾಗಿದ್ದಾರೆ ಎನ್ನುವುದಾದರೆ ಅದನ್ನು ನಾವು ಶ್ಲಾಘಿಸಲೇ ಬೇಕಾಗುತ್ತದೆ’ ಎಂದು ಮೂದಲಿಸಿದರು.

‘ಬಾಹುಬಲಿ ಸಿನಿಮಾದಲ್ಲಿ ರಾಜಮಾತೆ ಅರಮನೆಯಿಂದ ಹೊರಹಾಕಿದ ಬಳಿಕ ಅಮರೇಂದ್ರ ಬಾಹುಬಲಿ ಜನಸಾಮಾನ್ಯರ ಜೊತೆ ಬಂದು ಸೇರಿಕೊಂಡ. ಆದರೆ ಇವರು ಸ್ವ ಇಚ್ಛೆಯಿಂದ ಬರುತ್ತಿದ್ದಾರೆ ಎಂದರೆ ನಾವು ಖುಷಿ ಪಡಬೇಕು’ ಎಂದರು.

‘ ಪಕ್ಷದ ಕಾರ್ಯಕ್ರಮಗಳು ಎಂದ ಮೇಲೆ ಒಂದು ಶಿಷ್ಟಾಚಾರ ಇರುತ್ತದೆ. ಅಧ್ಯಕ್ಷರು–ಉಪಾಧ್ಯಕ್ಷರು ವೇದಿಕೆ ಮೇಲೆ ಕುಳಿತರೆ ಇವರು ಕೆಳಗೆ ಕೂರಬೇಕಾಗುತ್ತದೆ. ರಾಜರು ಕೆಳಗೆ ಕೂರಲಿಕ್ಕೂ ಸಿದ್ಧರಿದ್ದಾರೆ. ಪಕ್ಷದ ನಾಯಕರು ಮೈಸೂರಿಗೆ ಬಂದಾಗ ಹೋಟೆಲ್‌ಗಳ ಮುಂದೆ ನಿಂತು ಹೂಗುಚ್ಛ ಹಿಡಿದು ಕಾಯಲು ಸಿದ್ಧರಾಗಿದ್ದಾರೆ. ಇದು ನಿಜಕ್ಕೂ ಖುಷಿ ಕೊಡುವ ಸಂಗತಿ’ ಎಂದು ಲೇವಡಿ ಮಾಡಿದರು.

‘ ಮೈಸೂರು ರಾಜರು ಮೈಸೂರು ಅರಮನೆ, ವಸ್ತುಪ್ರದರ್ಶನ ಪ್ರಾಧಿಕಾರ ಮೈದಾನ, ಇಲ್ಲಿನ ವಿವಿಧ ಬಡಾವಣೆ ಸೇರಿದಂತೆ ಅನೇಕ ಸಾರ್ವಜನಿಕ ಆಸ್ತಿಗಳ ಮೇಲೆ ದಾವೆ ಹೂಡಿ ತಮ್ಮ ಆಸ್ತಿ ಎಂದು ಆದೇಶ ತಂದಿದ್ದಾರೆ. ಈಗ ಪ್ರಜೆಗಳ ಪ್ರತಿನಿಧಿ ಎಂದಾದ ಮೇಲೆ ಜನರ ನೋವಿಗೆ ಸ್ಪಂದಿಸಬೇಕಾಗುತ್ತದೆ. ಯದುವೀರ್ ಅವರು ಈ ಎಲ್ಲ ಆಸ್ತಿಯನ್ನು ಜನರಿಗೆ ಬಿಟ್ಟುಕೊಡುತ್ತಾರೆ. ಇದರಿಂದ ಮೈಸೂರಿಗೆ ಅನುಕೂಲ ಆಗುತ್ತದೆ.

‘ ಮನೆ ಮುಂದೆ ಕಸ ಬಿದ್ದಾಗ, ರೈತರ ಹಸು ಕಳುವಾದಾಗ ಜನ ನನಗೆ ಕರೆ ಮಾಡುತ್ತಿದ್ದರು. ಈಗ ಈ ಎಲ್ಲವನ್ನೂ ಬಗೆಹರಿಸಲು ಸ್ವತಃ ಮಹಾರಾಜರೇ ಬರುತ್ತಿದ್ದಾರೆ. ಇದರಿಂದ ಜನಸಾಮಾನ್ಯರ ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT