ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾದಲ್ಲಿ ಕ್ಷಿಪಣಿ ಪರೀಕ್ಷೆ: ತಾತ್ಕಾಲಿಕ ಶಿಬಿರಕ್ಕೆ 10 ಸಾವಿರ ಜನರ ಸ್ಥಳಾಂತರ

Published : 24 ಜುಲೈ 2024, 15:30 IST
Last Updated : 24 ಜುಲೈ 2024, 15:30 IST
ಫಾಲೋ ಮಾಡಿ
Comments

ಬಾಲೇಶ್ವರ: ಒಡಿಶಾದ ಕರಾವಳಿ ತೀರದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡ್ಡಯನಕ್ಕಾಗಿ ಈ ಪ್ರದೇಶ ಸುತ್ತಮುತ್ತಲಿನ ಹತ್ತು ಗ್ರಾಮಗಳ 10 ಸಾವಿರ ಜನರನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಯೋಜಿತ ಪರೀಕ್ಷಾ ಶ್ರೇಣಿಯ (ಐಟಿಆರ್) ಕ್ಷಿಪಣಿಯು ಚಾಂದಿಪುರ್‌ನಲ್ಲಿ ಪರೀಕ್ಷೆಗೆ ಒಳಗೊಳ್ಳಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಡಿಆರ್‌ಡಿಒ ತಜ್ಞರು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಐಟಿಆರ್‌ನ 3ನೇ ಉಡ್ಡಯನ ಕೇಂದ್ರದಿಂದ ಈ ಕ್ಷಿಪಣಿ ಪ್ರಯೋಗ ನಡೆಯಲಿದೆ.

ಹೀಗಾಗಿ ಬಾಲೇಶ್ವರ ಜಿಲ್ಲೆಗೆ ಸೇರಿದ ಈ ಗ್ರಾಮದ ಸುತ್ತಮುತ್ತಲಿನ 3.5 ಕಿ.ಮೀ. ಸುತ್ತಳತೆಯಲ್ಲಿರುವ 10 ಗ್ರಾಮಗಳ 10,581 ಜನರನ್ನು ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ ಬರ್ದಾನ್‌ಪುರ್‌ದ 2,725, ಜಯದೇವಕಾಸೇಬಾದಿಂದ 2,725, ಭೀಮ್‌ಪುರದಿಂದ 1,823, ಕುಸುಮಲಿಯಿಂದ 1,307 ಸೇರಿ ಹಲವು ಗ್ರಾಮಗಳ ಜನರನ್ನು ವಿವಿಧ ಸ್ಥಳಗಳಲ್ಲಿರುವ ಸುರಕ್ಷಿತ ತಾತ್ಕಾಲಿಕ ಪುನರ್‌ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

‘ಈ ತಾತ್ಕಾಲಿಕ ಶಿಬಿರಗಳಲ್ಲಿ ಸಾಕಷ್ಟು ಸೌಕರ್ಯಗಳನ್ನು ನೀಡಲಾಗುತ್ತಿದೆ. ಮೂವರು ಪೊಲೀಸ್‌ ಅಧಿಕಾರಿಗಳ ಪ್ರತ್ಯೇಕ ತಂಡ ಸಾರ್ವಜನಿಕರ ರಕ್ಷಣೆಯ ಉಸ್ತುವಾರಿ ವಹಿಸಿಕೊಂಡಿದೆ. ವೈದ್ಯಕೀಯ ತಂಡ, ಪಶು ವೈದ್ಯಕೀಯ ತಂಡ ಸ್ಥಳದಲ್ಲಿ ಇರಲಿದ್ದಾರೆ. ಇಲ್ಲಿ ಉಳಿಯುವ ಪ್ರತಿಯೊಬ್ಬರ ಆಹಾರ ವೆಚ್ಚವಾಗಿ ₹400 ನೀಡಲಾಗುತ್ತಿದೆ. ಜಾನುವಾರು ಹೊಂದಿರುವವರಿಗೆ ಹೆಚ್ಚುವರಿಯಾಗಿ ₹100 ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ 4ಕ್ಕೆ ತಮ್ಮ ಮನೆಗಳನ್ನು ತೊರೆಯುವಂತೆ ಹಾಗೂ ಶಿಬಿರದತ್ತ ತೆರಳುವಂತೆ ಜಿಲ್ಲಾಡಳಿತ ಈ ಹತ್ತು ಗ್ರಾಮಗಳ ಜನರಿಗೆ ತಿಳಿಸಿತ್ತು. ಮುಂದಿನ ನಿರ್ದೇಶನದವರೆಗೂ ಶಿಬಿರದಲ್ಲೇ ಇರುವಂತೆಯೂ ತಿಳಿಸಿದೆ. ಪರಿಹಾರ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT