ಚೆನ್ನೈ: ನೀಟ್ ಪರೀಕ್ಷೆಯು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಬಡತನದ ವಿರುದ್ಧವೂ ಆಗಿರುವುದರಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ(ಎನ್‌ಟಿಎ) ರಕ್ಷಣೆಗೆ ನಿಲ್ಲುವುದನ್ನು ಬಿಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದರು.
ನೀಟ್ ಪರೀಕ್ಷೆಯ ಕುರಿತು ಅಸಮಧಾನ ವ್ಯಕ್ತಪಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ಟಾಲಿನ್, ‘ನೀಟ್ ಸುತ್ತ ನಡೆಯುತ್ತಿರುವ ವಿವಾದಗಳು ಮೂಲಭೂತವಾಗಿ ಅದರ ಅಸಮಾನತೆಯ ಸ್ವರೂಪವನ್ನು ಎತ್ತಿ ತೋರಿಸುತ್ತಿದೆ. ಸಾವಿರಾರು ವರ್ಷಗಳಿಂದ ಶಿಕ್ಷಣವನ್ನು ನಿರಾಕರಿಸಿದ ಸಮಾಜದಲ್ಲಿ ತುಳಿತಕ್ಕೊಳಗಾದವರ ಏಳಿಗೆಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕಿದೆ. ಆದರೆ ನೀಟ್ ಪರೀಕ್ಷೆ ಅಂತಹ ವಿದ್ಯಾರ್ಥಿಗಳ ಅವಕಾಶಗಳಿಗೆ ಅಡ್ಡಿಯಾಗುತ್ತಿದೆ’ ಎಂದರು.
‘ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನು ಕೇಂದ್ರ ಶಿಕ್ಷಣ ಸಚಿವರು ಸಮರ್ಥಿಸಿಕೊಂಡಿದ್ದರೂ, ಇತ್ತೀಚಿನ ಘಟನೆಗಳು ವಿಭಿನ್ನ ಚಿತ್ರಣವನ್ನು ನೀಡುತ್ತಿವೆ. ಹಣಕ್ಕಾಗಿ ಓಎಂಆರ್ ಶೀಟ್‌ಗಳನ್ನು ಪರೀಕ್ಷಾ ಮೇಲ್ವಿಚಾರಕರೇ ತಿದ್ದಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ಈ ಪರೀಕ್ಷೆ ವಿಚಾರವಾಗಿ ತಮಿಳುನಾಡಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಅನಿತಾಳಿಂದ ಹಿಡಿದು ಅಸಂಖ್ಯಾತ ವಿದ್ಯಾರ್ಥಿಗಳು ದುರಂತಮಯವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಕೇಂದ್ರ ಸರ್ಕಾರವು ವಿದ್ಯಾರ್ಥಿ ವಿರೋಧಿ, ಸಾಮಾಜಿಕ ನ್ಯಾಯ ವಿರೋಧಿ ಮತ್ತು ಬಡವರ ವಿರೋಧಿ ನೀಟ್ ಪರ ನಿಲ್ಲುವುದನ್ನು ಬಿಡಬೇಕು’ ಎಂದರು.