ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.13ರೊಳಗೆ ಸಂಸತ್ತಿನ ಬುನಾದಿ ಅಲುಗಾಡಿಸುವೆ: ಆತಂಕ ಸೃಷ್ಟಿಸಿದ ಪನ್ನೂ ವಿಡಿಯೊ

Published 6 ಡಿಸೆಂಬರ್ 2023, 5:58 IST
Last Updated 6 ಡಿಸೆಂಬರ್ 2023, 5:58 IST
ಅಕ್ಷರ ಗಾತ್ರ

ನವದೆಹಲಿ: 2001ರ ಸಂಸತ್ ದಾಳಿಯನ್ನು ಗುರುತಿಸುವ ದಿನವಾದ ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಬುನಾದಿಯನ್ನು ಅಲುಗಾಡಿಸುವುದಾಗಿ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನೂ ಬೆದರಿಕೆ ಹಾಕಿದ್ದಾನೆ. ಇದು ತನ್ನ ಮೇಲಿನ ಭಾರತದ ಹತ್ಯೆ ಯತ್ನಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಪನ್ನೂ ವಿಡಿಯೊ ಸಂದೇಶದಲ್ಲಿ ಹೇಳಿರುವುದಾಗಿ ಹಲವು ಸುದ್ದಿವಾಹಿನಿಗಳು ವರದಿ ಮಾಡಿವೆ.

ಡಿಸೆಂಬರ್ 5ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಖಾಲಿಸ್ತಾನಿ ಭಯೋತ್ಪಾದಕನ ಬೆದರಿಕೆ ಆತಂಕಕ್ಕೀಡುಮಾಡಿದೆ.

ಅಮೆರಿಕ ಮತ್ತು ಕೆನಡಾ ಪ್ರಜೆಯಾಗಿರುವ ಪನ್ನೂ, 2001ರ ದಾಳಿಯ ರೂವಾರಿ ಅಫ್ಜಲ್ ಗುರು ಚಿತ್ರದ ಪಕ್ಕದಲ್ಲಿ ನಿಂತು ವಿಡಿಯೊ ಮಾಡಿದ್ದಾನೆ. ‘ಡೆಲ್ಲಿ ಬನೇಗಾ ಖಾಲಿಸ್ತಾನ್’ ಎಂದು ಇದಕ್ಕೆ ಶೀರ್ಷಿಕೆ ಕೊಟ್ಟಿದ್ದಾನೆ. ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಅಫ್ಜಲ್ ಗುರುವನ್ನು 2013ರಲ್ಲಿ ಗಲ್ಲಿಗೇರಿಸಲಾಗಿತ್ತು.

ಸಿಖ್ಸ್ ಫಾರ್ ಜಸ್ಟೀಸ್(ಎಸ್‌ಎಫ್‌ಜೆ) ಸಂಘಟನೆಯಿಂದ ಯಾವುದೇ ಸಂಭವನೀಯ ದಾಳಿ ತಡೆಯಲು ಭಾರತೀಯ ಭದ್ರತಾ ಸಂಸ್ಥೆಗಳು ಮತ್ತು ದೆಹಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜೂನ್ ತಿಂಗಳಲ್ಲಿ ಅಮೆರಿಕ ನೆಲದಲ್ಲಿ ಪನ್ನೂ ಹತ್ಯೆಗೆ ಸಂಚು ರೂಪಿಸಿದ್ಧ ಸಂಚನ್ನು ವಿಫಲಗೊಳಿಸಲಾಗಿದ್ದು, ಅದರಲ್ಲಿ ಭಾರತದ ಕೈವಾಡವಿದೆ ಎಂದು ಅಮೆರಿಕ ಹೇಳಿತ್ತು.

ಅಮೆರಿಕ ಸರ್ಕಾರದ ಮನವಿ ಮೇರೆಗೆ ಭಾರತ ಮೂಲದ ಮಾದಕ ದ್ರವ್ಯ ಸಾಗಣೆದಾರ ನಿಖಿಲ್ ಗುಪ್ತಾನನ್ನು ಜೂನ್ 30ರಂದು ಜೆಕ್ ಗಣರಾಜ್ಯದ ಪೊಲೀಸರು ರಾಜಧಾನಿ ಪ್ರಾಗ್‌ನಲ್ಲಿ ಬಂಧಿಸಿದ್ದರು. ಈತ ಪನ್ನೂ ಅವರನ್ನು ಕೊಲ್ಲಲು ಒಬ್ಬ ರಹಸ್ಯ ಭಾರತೀಯ ಪೋಲೀಸ್‌ ಅಧಿಕಾರಿಯೊಂದಿಗೆ ಕೆಲಸ ಮಾಡಿದ ಮತ್ತು ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಯ (ಡಿಇಎ) ಮಾಹಿತಿದಾರನನ್ನು ನೇಮಿಸಿದ ಆರೋಪ ಎದುರಿಸುತ್ತಿದ್ದಾನೆ.

ಈ ಸುದ್ದಿ ಹೊರಬೀಳುತ್ತಿದ್ದಂತೆ, ಅಮೆರಿಕದ ಖಾಲಿಸ್ತಾನಿ ಹೋರಾಟಗಾರರು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪನ್ನೂ ಅವರು ಕಳೆದ ಎರಡು ವರ್ಷಗಳಿಂದ ಭಾರತದ ವಿರುದ್ಧ ಆಕ್ರಮಣಕಾರಿಯಾಗಿದ್ದಾರೆ. ಒಟ್ಟಾವಾ ಮತ್ತು ಇತರ ಸ್ಥಳಗಳಲ್ಲಿ ಭಾರತೀಯ ರಾಜತಾಂತ್ರಿಕರನ್ನು ಕೊಲ್ಲುವ ಪೋಸ್ಟರ್‌ ಹಾಕಿದ್ದರು. ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಒಂದು ತಿಂಗಳ ಹಿಂದೆ ಬೆದರಿಕೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT