ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ ಹಿಂಸಾಚಾರ | ತಕ್ಷಣವೇ ಗಮನಿಸಿ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್

Published : 10 ಜೂನ್ 2024, 20:16 IST
Last Updated : 10 ಜೂನ್ 2024, 20:16 IST
ಫಾಲೋ ಮಾಡಿ
Comments

ನವದೆಹಲಿ:  ಕಳೆದ ಒಂದು ವರ್ಷದಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಈ ಕುರಿತು ತಕ್ಷಣವೇ ಗಮನಹರಿಸಬೇಕಾಗಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಹೇಳಿದ್ದಾರೆ.  

ಸೋಮವಾರ ಮಾತನಾಡಿದ ಅವರು, ‘ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪರಸ್ಪರ ಆರೋಪಗಳು, ತಂತ್ರಜ್ಞಾನಗಳನ್ನು ದುರ್ಬಳಕೆ ಮಾಡಿಕೊಂಡು ಸುಳ್ಳುಗಳನ್ನು ಹಬ್ಬಿಸುವ ಪ್ರವೃತ್ತಿಯು ತಪ್ಪಬೇಕು. ವಿರೋಧಪಕ್ಷಗಳನ್ನು ‘ಪ್ರತಿಪಕ್ಷ’ ಎಂದೇ ಉಲ್ಲೇಖಿಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.  

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಬಿಜೆಪಿ ನಡುವಣ ಸಂಬಂಧ ಹಳಸಿದೆ ಎಂಬ ಅಭಿಪ್ರಾಯ ದಟ್ಟವಾಗುತ್ತಿರುವ ಹೊತ್ತಿನಲ್ಲಿಯೇ ಆರ್‌ಎಸ್‌ಎಸ್‌ ಮುಖ್ಯಸ್ಥರಿಂದ ಈ ಮಾತು ಬಂದಿದೆ. ಸದ್ಯ ನಡೆಯುತ್ತಿರುವ ಕಾರ್ಯಕರ್ತ ವಿಕಾಸ ವರ್ಗದ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಎಂಬುದು ಸಮಾನ ಮನಸ್ಸುಗಳ ನಡುವೆ ಸಹಮತ ಮೂಡಿಸುವ ಒಂದು ಪ್ರಕ್ರಿಯೆ. ಯಾವುದೇ ಪ್ರಶ್ನೆಗೆ ಸಂಬಂಧಿಸಿದ ಎರಡೂ ಆಯಾಮಗಳನ್ನು ಸಂಸತ್ತಿನಲ್ಲಿಯೇ ಮಂಡಿಸುವ ವ್ಯವಸ್ಥೆಯು ನಿರ್ಮಾಣವಾಗಬೇಕು’ ಎಂದು ಭಾಗವತ್ ಅವರು ಪ್ರತಿಪಾದಿಸಿದರು.

‘ಚುನಾವಣೆ ಪ್ರಚಾರದ ವೇಳೆ ಜನರು ಪರಸ್ಪರ ಟೀಕಿಸುವುದು, ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಸುಳ್ಳು ಹಬ್ಬಿಸುತ್ತಿರುವುದು ಸರಿಯಲ್ಲ. ಚುನಾವಣೆಯ ಉದ್ವೇಗದಿಂದ ನಮ್ಮನ್ನು ನಾವು ಬಿಡುಗಡೆ ಮಾಡಿಕೊಳ್ಳಬೇಕಾಗಿದೆ. ದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಬಾರಿಯ ಚುನಾವಣೆಯಲ್ಲಿಯೂ ಎಲ್ಲ ಚುನಾವಣೆಗಳಂತೆ ಆರ್‌ಎಸ್‌ಎಸ್‌, ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವ ‘ಕರ್ತವ್ಯ’ವನ್ನು ನಿಭಾಯಿಸಿದೆ. ನಾವು ಪ್ರತಿ ವರ್ಷವೂ ಇದನ್ನು ಮಾಡುತ್ತೇವೆ. ಈ ವರ್ಷವೂ ಮಾಡಿದ್ದೇವೆ’ ಎಂದು ಅವರು ಪುನರುಚ್ಚರಿಸಿದರು.

ಬಲ ಉಳ್ಳವರು ‘ವಿನಯಶೀಲ’ರಾಗಿರಬೇಕು. ನಮ್ರತೆ ಎಂಬುದು ಎಂದಿಗೂ ಒಬ್ಬರಿಗೆ ಧರ್ಮ ಮತ್ತು ಸಂಸ್ಕೃತಿಯಿಂದ ಬರಲಿದೆ ಎಂದು ಅವರು ಹೇಳಿದರು.

ಸದ್ಯ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಣ ಬಾಂಧವ್ಯ ಹಳಸಿದೆ. ವಿರೋಧಪಕ್ಷಗಳಿಂದ ಹಲವು ನಾಯಕರನ್ನು ಸೇರಿಸಿಕೊಳ್ಳುವ ಬಿಜೆಪಿಯ ನಡೆ ಕುರಿತು ಆರ್‌ಎಸ್‌ಎಸ್‌ ಅಸಮಾಧಾನಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT