ನವದೆಹಲಿ: ನೆಲಮಾಳಿಗೆಯ ಕೋಚಿಂಗ್ ಸೆಂಟರ್‌ಗೆ ಮಳೆಯ ನೀರು ತುಂಬಿಕೊಂಡು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಮೂವರು ಅಭ್ಯರ್ಥಿಗಳು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕೇಂದ್ರ ದೆಹಲಿಯ ಹಳೆಯ ರಾಜಿಂದರ್ ನಗರ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ದೆಹಲಿ ಅಗ್ನಿಶಾಮಕ ಇಲಾಖೆಯ(ಡಿಎಫ್‌ಎಸ್) ಪ್ರಕಾರ, ಭಾರಿ ಮಳೆ ಹಿನ್ನೆಲೆಯಲ್ಲಿ ‘ರಾಜೂಸ್ ಐಎಎಸ್ ಸ್ಟಡಿ ಸರ್ಕಲ್’ನ ನೆಲಮಾಳಿಗೆಯು ಮಳೆ ನೀರಿನಿಂದ ಆವೃತ್ತವಾಗಿರುವ ಬಗ್ಗೆ ರಾತ್ರಿ 7 ಗಂಟೆ ಸುಮಾರಿಗೆ ಕರೆ ಬಂದಿತು. ಕೆಲ ವ್ಯಕ್ತಿಗಳು ನೆಲಮಾಳಿಗೆಯಲ್ಲಿ ಸಿಲುಕಿರುವ ಬಗ್ಗೆ ಕರೆ ಮಾಡಿದಾತ ಅನುಮಾನ ವ್ಯಕ್ತಪಡಿಸಿದ್ದರು. ಸಂಪೂರ್ಣ ನೆಲಮಾಳಿಗೆ ಮಳೆನೀರಿನಿಂದ ಆವೃತ್ತವಾಗಿದ್ದೇಗೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅದು ತಿಳಿಸಿದೆ.
5 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ನೆಲಮಾಳಿಗೆ ಸಂಪೂರ್ಣ ಜಲಾವೃತಗೊಂಡಿತ್ತು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಬಹು ಬೇಗನೆ ನೆಲಮಾಳಿಗೆಗೆ ಮಳೆಯ ನೀರು ತುಂಬಿಕೊಂಡಿದ್ದರಿಂದ ಅದರಲ್ಲಿದ್ದವರು ಹೊರಬರಲಾಗದೆ ಸಿಲುಕಿಕೊಂಡಿರಬಹುದು ಎಂದು ಕೇಂದ್ರ ದೆಹಲಿಯ ಡಿಸಿಪಿ ಎಂ. ಹರ್ಷವರ್ಧನ್ ವರದಿಗಾರರಿಗೆ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸರ ನೆರವಿನೊಂದಿಗೆ ಇಬ್ಬರು ಮಹಿಳಾ ಅಭ್ಯರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತರ ಗುರುತುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಮಧ್ಯರಾತ್ರಿವರೆಗೆ ನಡೆದ ಕಾರ್ಯಾಚರಣೆಯಲ್ಲಿ ಮಳೆಯ ನೀರನ್ನು ಪಂಪ್ ಮಾಡಿ ಹೊರಗೆ ತೆಗೆಯಲಾಗಿದೆ.