ಚೆನ್ನೈ: ದುಷ್ಕರ್ಮಿಗಳ ದಾಳಿಗೆ ಹತ್ಯೆಗೀಡಾಗಿರುವ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್ಮ್‌ಸ್ಟ್ರಾಂಗ್ ಅವರ ಮನೆಗೆ ತೆರಳಿ ಪತ್ನಿ ಹಾಗೂ ಕುಟುಂಬದವರನ್ನು ಭೇಟಿ ಮಾಡಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ತಪ್ಪಿತ್ತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಾಗ್ದಾನ ನೀಡಿದ್ದಾರೆ.
ಆಮ್‌ಸ್ಟ್ರಾಂಗ್ ಅವರ ಪತ್ನಿ ಹಾಗೂ ಕುಟುಂಬದವರನ್ನು ಭೇಟಿ ಮಾಡಿರುವ ಸ್ಟಾಲಿನ್, ಸಂತಾಪ ಸೂಚಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 11 ಶಂಕಿತರನ್ನು ಬಂಧಿಸಲಾಗಿದೆ.
ಜುಲೈ 5ರಂದು ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ಗುಂಪು, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದರು. ಪೆರಂಬೂರ್‌ನಲ್ಲಿರುವ ಅವರ ಮನೆಯ ಬಳಿಯೇ ಕೃತ್ಯ ನಡೆದಿತ್ತು.
ಆರ್ಮ್‌ಸ್ಟ್ರಾಂಗ್ ಅಂತ್ಯಕ್ರಿಯೆಯನ್ನು ಚೆನ್ನೈಯಲ್ಲಿರುವ ಪಕ್ಷದ ಕಚೇರಿಯ ಆವರಣದಲ್ಲಿ ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು. ಇದರ ಬದಲಾಗಿ ತಿರುವಳ್ಳೂರು ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ನೀಡಿತ್ತು.
ಆರ್ಮ್‌ಸ್ಟ್ರಾಂಗ್ ಹತ್ಯೆ ಖಂಡಿಸಿರುವ ವಿಪಕ್ಷಗಳು ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.