ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ ಅಧಿಕಾರಿಗಳ ಮೇಲೆ ದಾಳಿ ಪ್ರಕರಣ: ಪ. ಬಂಗಾಳ ಸರ್ಕಾರದಿಂದ ವರದಿ ಕೇಳಿದ ಕೇಂದ್ರ

Published 9 ಜನವರಿ 2024, 15:51 IST
Last Updated 9 ಜನವರಿ 2024, 15:51 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡಲು ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಹೇಳಿದೆ. 

ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿ ಆಡಳಿತಾರೂಢ ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಜನವರಿ 5ರಂದು ಶೋಧ ಕೈಗೊಂಡಿದ್ದರು. ಆ ವೇಳೆ ಶೇಖ್‌ ಬೆಂಬಲಿಗರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕೇಂದ್ರ ಸಚಿವಾಲಯ, ಎಂತಹ ಸನ್ನಿವೇಶದಲ್ಲಿ ಇ.ಡಿ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ ಮತ್ತು ದಾಳಿ ಬಳಿಕ ರಾಜ್ಯ ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂಬ ಕುರಿತು ವಿವರವಾದ ವರದಿ ನೀಡಿ ಎಂದು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಜಾರಿ ನಿರ್ದೇಶನಾಲಯದ (ಇ.ಡಿ) ಉಸ್ತುವಾರಿ ನಿರ್ದೇಶಕ ರಾಹುಲ್‌ ನವೀನ್  ಸೋಮವಾರ ರಾತ್ರಿ ಕೋಲ್ಕತ್ತಕ್ಕೆ ಆಗಮಿಸಿದ್ದಾರೆ. ಮಂಗಳವಾರ ಇ.ಡಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಪಡಿತರ ವಿತರಣೆ ಮತ್ತು ಭತ್ತ ಸಂಗ್ರಹಣೆ ಹಗರಣಗಳ ತನಿಖೆಗಳ ಪ್ರಗತಿಯನ್ನು ಅವರು ಪರಿಶೀಲಿಸಲಿದ್ದಾರೆ. ಅಧಿಕಾರಿಗಳ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ, ರಾಜ್ಯದ ಇ.ಡಿ ಅಧಿಕಾರಿಗಳ ಭದ್ರತೆ ಕುರಿತೂ ನವೀನ್‌ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

ಶೇಖ್‌ ಪತ್ತೆ ಇಲ್ಲ: ಪಡಿತರ ವಿತರಣೆ ಹಗರಣದ ಪ್ರಮುಖ ಆರೋಪಿ ಶಹಜಹಾನ್‌ ಶೇಖ್‌ ಇನ್ನೂ ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿರುವ ಇ.ಡಿ, ಶೇಖ್‌ ಅವರು ರಸ್ತೆ, ವಾಯು ಅಥವಾ ಜಲಮಾರ್ಗದ ಮೂಲಕ ದೇಶ ತೊರೆದು ಹೋಗದಂತೆ ಎಚ್ಚರ ವಹಿಸಲು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT