ಲಂಡನ್: ಬ್ರಿಟನ್‌ನ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಭಾರತ ಮೂಲದ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಕನ್ಸರ್ವೇಟಿವ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ.
ಸಂಸತ್ತಿನ 650 ಕ್ಷೇತ್ರಗಳ ಪೈಕಿ ಸರಳ ಬಹುಮತಕ್ಕೆ ಬೇಕಾದ 326 ಸ್ಥಾನಗಳನ್ನು ಲೇಬರ್ ಪಕ್ಷ ದಾಟಿದೆ.
ಮುಂದಿನ ಪ್ರಧಾನಿ ಎಂದೇ ಕರೆಯಲಾಗುತ್ತಿರುವ ಲೇಬರ್ ಪಕ್ಷದ 61 ವರ್ಷದ ಸ್ಟಾರ್ಮರ್ ಪಕ್ಷದ ಗೆಲುವನ್ನು ಅಧಿಕೃತವಾಗಿ ಘೋಷಿಸುವ ಮುನ್ನವೇ ಲಂಡನ್‌ನಲ್ಲಿ ವಿಜಯೋತ್ಸವದ ಭಾಷಣ ಮಾಡಿದ್ದಾರೆ.
'ನಾವು ಸಾಧಿಸಿದ್ದೇವೆ, ನಾವು ಇದಕ್ಕಾಗಿ ಪ್ರಚಾರ ಮಾಡಿದ್ದೆವು, ನಾವು ಇದಕ್ಕಾಗಿ ಹೋರಾಟ ನಡೆಸಿದ್ದೆವು, ನೀವು ಇದಕ್ಕಾಗಿ ಮತ ಹಾಕಿದ್ದು, ಈಗ ಗೆಲುವು ನಮ್ಮದಾಗಿದೆ. ಬದಲಾವಣೆ ಈಗಿನಿಂದಲೇ ಆರಂಭವಾಗಿದೆ. ಈಗಿನಿಂದಲೇ ಕೆಲಸ ಆರಂಭಿಸುತ್ತೇವೆ’ಎಂದು ಸ್ಟಾರ್ಮರ್ ಹೇಳಿದರು.
14 ವರ್ಷಗಳ ಕನ್ಸರ್ವೇಟಿವ್ ಪಕ್ಷದ ಆಡಳಿತದ ಬಳಿಕ ಜನ ನಮಗೆ ಅಧಿಕಾರ ನೀಡಿದ್ದಾರೆ. ಇಂತಹ ಅಭೂತಪೂರ್ವ ಜನಾದೇಶದ ಜೊತೆ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದಿದ್ದಾರೆ.
ಈ ನಡುವೆ ಪ್ರಧಾನಿ ರಿಷಿ ಸುನಕ್ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ.
‘ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಗೆಲುವು ದಾಖಲಿಸಿದೆ. ಸ್ಟಾರ್ಮರ್ ಕೀರ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದೇನೆ. ಅವರ ಪಕ್ಷಕ್ಕೆ ಗೆಲುವಾಗಿದೆ. ನನ್ನ ಪಕ್ಷದ ಸೋಲಿನ ಹೊಣೆಯನ್ನು ಹೊತ್ತುಕೊಳ್ಳುತ್ತೇನೆ’ ಎಂದಿದ್ದಾರೆ.
ಅಧಿಕಾರ ಇಲ್ಲದಿದ್ದರೂ ತಮ್ಮ ಸೇವೆ ಮುಂದುವರಿಸುವುದಾಗಿ ಅವರು ಹೇಳಿದರು.
ಗ್ರ್ಯಾಂಟ್ ಶಾಪ್ಸ್, ಪೆನ್ನಿ ಮೊರ್‌ಡೌಂಟ್, ಜೇಕಪ್ ರೀಸ್ ಸೇರಿದಂತೆ ರಿಷಿ ಸುನಕ್ ಸಂಪುಟದಲ್ಲಿ ಅತ್ಯಂತ ಖ್ಯಾತನಾಮರಾಗಿದ್ದ ಸಚಿವರು ಮತ್ತು ಸಂಸದರು ಸೋಲಿಗೆ ಶರಣಾಗಿದ್ದಾರೆ.
ಲೇಬರ್ ಪಕ್ಷದ ಕೆಲವರು ಈ ಸೋಲು ಕನ್ಸರ್ವೇಟಿವ್ ಪಕ್ಷಕ್ಕಾದ ‘ರಕ್ತ ಮಜ್ಜನ’ಎಂದು ಕುಟುಕಿದ್ದಾರೆ.
ಭಾರತ ಮೂಲದ ಶಿವಾನಿ ರಾಜಾ, ಲೇಬರ್ ಪಕ್ಷದ ಸಂಸದ, ಲಂಡನ್‌ನ ಮಾಜಿ ಉಪ ಮೇಯರ್ ಅವರನ್ನು ಲೀಸೆಸ್ಟರ್ ಈಸ್ಟ್ ಕ್ಷೇತ್ರದಲ್ಲಿ ಸೋಲುಣಿಸಿದ್ದಾರೆ.