ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್‌ ಮನೆಗೆ ನುಗ್ಗಿದ ಪೊಲೀಸರು

ಫಾಲೋ ಮಾಡಿ
Comments

ಲಾಹೋರ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ, ಇಮ್ರಾನ್ ಖಾನ್ ಅವರು ತಮ್ಮ ವಿರುದ್ಧದ ತೋಶಖಾನ ಪ್ರಕರಣದ ವಿಚಾರಣೆಗೆಂದು ಶನಿವಾರ ಇಸ್ಲಾಮಾಬಾದ್‌ಗೆ ತೆರಳಿದರು. ಇದರ ಬೆನ್ನಿಗೇ ಪೊಲೀಸರು ಲಾಹೋರ್‌ನಲ್ಲಿರುವ ಜಮಾನ್ ಪಾರ್ಕ್‌ನ ಖಾನ್‌ ನಿವಾಸಕ್ಕೆ ನುಗ್ಗಿದ್ದು, 20 ಕ್ಕೂ ಹೆಚ್ಚು ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್‌ ಎ ಇನ್ಸಾಫ್‌) ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ತೋಶಖಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಲಾಹೋರ್‌ನಲ್ಲಿರುವ ಅವರ ನಿವಾಸದ ಬಳಿ ಪೊಲೀಸರು ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರಾದರೂ, ಪಿಟಿಐ ಕಾರ್ಯಕರ್ತರ ಪ್ರತಿರೋಧದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಅಲ್ಲದೆ, ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ ಹಲವರು ಗಾಯಗೊಂಡಿದ್ದರು.

ಶನಿವಾರ ಖಾನ್‌ ಮನೆಗೆ ನುಗ್ಗುವುದಕ್ಕೂ ಮೊದಲು ಪೊಲೀಸರು ಧ್ವನಿವರ್ದಕಗಳ ಮೂಲಕ ಪಿಟಿಐ ಕಾರ್ಯಕರ್ತರಿಗೆ ಎಚ್ಚರಿಕೆಯನ್ನೂ ನೀಡಿದ್ದರು. ‘ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸ್ಥಳದಿಂದ ಎಲ್ಲರೂ ದೂರು ಹೋಗಬೇಕು’ ಎಂದು ತಿಳಿಸಿದ್ದರು.

ಈ ಪ್ರಕಟಣೆ ನಂತರ ಇಮ್ರಾನ್‌ ಖಾನ್‌ ಮನೆ ಗೇಟ್‌ ಧ್ವಂಸಗೊಳಿಸಿ ಒಳನುಗ್ಗಿದ ಪೊಲೀಸರು ಪಿಟಿಐನ ಹಲವು ಕಾರ್ಯಕರ್ತರನ್ನು ಬಂಧಿಸಿ ಹೊರತಂದರು. ಈ ಬಗ್ಗೆ ಅಲ್ಲಿನ ಸುದ್ದಿ ಮಾಧ್ಯಮಗಳು ದೃಶ್ಯಸಹಿತ ವರದಿ ಪ್ರಕಟಿಸಿವೆ.

ಕಾರ್ಯಾಚರಣೆ ವೇಳೆ ನಾವು ಪ್ರತಿರೋಧವನ್ನೂ ಎದುರಿಸಬೇಕಾಯಿತು. ಇಮ್ರಾನ್ ಖಾನ್ ಅವರ ನಿವಾಸದ ಒಳಗಿನಿಂದ ಗುಂಡಿನ ದಾಳಿ ಮತ್ತು ಪೆಟ್ರೋಲ್ ಬಾಂಬ್‌ಗಳು ತೂರಿಬಂದವು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ಇಮ್ರಾನ್‌ ಖಾನ್‌, ‘ನನ್ನ ಪತ್ನಿ ಒಬ್ಬರೇ ಇದ್ದ ನಿವಾಸಕ್ಕೆ ಪೊಲೀಸರು ನುಗ್ಗಿದ್ದಾರೆ. ಇದು ಕಾನೂನಾತ್ಮಕ ಕ್ರಮವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇಮ್ರಾನ್ ಖಾನ್ ನಿವಾಸದಲ್ಲಿ ಶೋಧ ನಡೆಸಲು ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿದೆ.

ಏನಿದು ಪ್ರಕರಣ?

ತೋಶಖಾನ ಎಂದು ಕರೆಯಲಾಗುವ ಸರ್ಕಾರದ ಖಜಾನೆಯಿಂದ ಇಮ್ರಾನ್‌ ಖಾನ್‌ ಅವರು ರಿಯಾಯಿತಿ ದರದಲ್ಲಿ ದುಬಾರಿ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.

1974ರಲ್ಲಿ ಸ್ಥಾಪಿತವಾದ ತೋಶಖಾನ ಸರ್ಕಾರದ ಒಂದು ಇಲಾಖೆಯೂ ಹೌದು. ಕೇಂದ್ರ, ರಾಜ್ಯ ಸರ್ಕಾರದ ಪ್ರಮುಖರಿಗೆ ಆಡಳಿತಗಾರರಿಗೆ, ಸಂಸದರು, ಅಧಿಕಾರಿಗಳಿಗೆ ವಿದೇಶಿ ಗಣ್ಯರು ನೀಡುವ ಉಡುಗೊರೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗುತ್ತದೆ.

ಇಲ್ಲಿಂದ ಪಡೆದುಕೊಂಡ ವಸ್ತುಗಳ ವಿವರವನ್ನು ಹಂಚಿಕೊಳ್ಳದ ಕಾರಣಕ್ಕಾಗಿ ಖಾನ್ ಅವರನ್ನು ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಅನರ್ಹಗೊಳಿಸಿದೆ. ಅವರು ದೇಶದ ಪ್ರಧಾನಿಯಾಗಿ ಸ್ವೀಕರಿಸಿದ ಉಡುಗೊರೆಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ್ದಕ್ಕಾಗಿ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಅವರನ್ನು ಶಿಕ್ಷಿಸುವಂತೆ ಚುನಾವಣಾ ಆಯೋಗವು ಜಿಲ್ಲಾ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.

ಪ್ರಕರಣದ ವಿಚಾರಣೆಗಳಿಗೆ ಹಲವು ಬಾರಿ ಗೈರಾಗಿದ್ದ ಅವರು, ಇಂದು ಲಾಹೋರ್‌ ನ್ಯಾಯಾಲಯಕ್ಕೆ ತೆರಳಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಇದನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT