ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ಗಗನಯಾನದ ಪ್ರಾಯೋಗಿಕ ಪರೀಕ್ಷೆ: ಯಾನಿಗಳ ರಕ್ಷಣೆಗೆ ಪರಮೋಚ್ಚ ಆದ್ಯತೆ

Published 26 ಅಕ್ಟೋಬರ್ 2023, 0:21 IST
Last Updated 26 ಅಕ್ಟೋಬರ್ 2023, 0:21 IST
ಅಕ್ಷರ ಗಾತ್ರ

ಭಾರತದ ಗಗನಯಾತ್ರಿಗಳನ್ನು ಭಾರತದ್ದೇ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಕಳಿಸಬೇಕೆಂಬ ನಮ್ಮೆಲ್ಲರ ಮಹತ್ವಾಕಾಂಕ್ಷೆಯ ಕನಸು ನನಸಾಗುವ ದಿಸೆಯಲ್ಲಿ ಮೊದಲ ಪ್ರಾರಂಭಿಕ ಪರೀಕ್ಷೆಯನ್ನು ಕಳೆದ ಶನಿವಾರ ಇಸ್ರೊ ಸಂಸ್ಥೆ ಯಶಸ್ವಿಯಾಗಿ ಪೂರೈಸಿದೆ. ಇತ್ತೀಚೆಗಷ್ಟೇ ‘ಚಂದ್ರಯಾನ್‌–3ರ’ ಮೂಲಕ ‘ವಿಕ್ರಮ್‌’ ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಹೂವಿನಂತೆ ಹಗುರವಾಗಿ ಇಳಿಸಿ ಭೇಷ್‌ ಎನ್ನಿಸಿಕೊಂಡ ಇಸ್ರೊ ಸಂಸ್ಥೆಗೆ ಈಗಿನ ಪ್ರಯೋಗ ಇನ್ನೂ ಗುರುತರವಾಗಿತ್ತು; ಏಕೆಂದರೆ ಮನುಷ್ಯರಿರುವ ನೌಕೆಯನ್ನು ಬಾಹ್ಯಾಕಾಶಕ್ಕೆ ಏರಿಸಬೇಕಾದರೆ ಯಾನಿಗಳ ಸುರಕ್ಷೆಗೆ ಇನ್ನಿಲ್ಲದ ಕಾಳಜಿ ವಹಿಸಬೇಕಾಗುತ್ತದೆ. ಯುದ್ಧ ವಿಮಾನಗಳು ಸಂಕಷ್ಟಕ್ಕೆ ಸಿಲುಕಿದಾಗ ಪೈಲಟ್‌ಗಳು ಬಟನ್‌ ಒತ್ತಿ ತಾವು ಕೂತ ಆಸನದ ಸಮೇತ ಹೊರಕ್ಕೆ ಜಿಗಿದು ನೆಲಕ್ಕಿಳಿಯುವ ವ್ಯವಸ್ಥೆ ಇರುತ್ತದೆ. ಜಾಗ್ವಾರ್‌, ಮಿರಾಜ್‌, ರಫೇಲ್‌ ಅಷ್ಟೇಕೆ ನಮ್ಮ ಸ್ವದೇಶಿ ನಿರ್ಮಿತ ತೇಜಸ್‌ ವಿಮಾನದಲ್ಲೂ ಅಂಥ ವ್ಯವಸ್ಥೆ ಇದೆ. ಆದರೆ ಆಕಾಶದ ಹಾರಾಟಕ್ಕಿಂತ ತುಂಬ ಎತ್ತರದಲ್ಲಿ ಅದೆಷ್ಟೋ ಪಟ್ಟು ಹೆಚ್ಚಿನ ವೇಗದ ರಾಕೆಟ್‌ಗಳಲ್ಲಿ ಸವಾರಿ ಮಾಡುವಾಗಿನ ಸವಾಲುಗಳೇ ಬೇರೆ ಇರುತ್ತವೆ. ಗಗನಯಾನಿಗಳು ಅಪಾರ ಒತ್ತಡದಲ್ಲಿರುವಾಗ ತುರ್ತು ಜಿಗಿತದ ಬಟನ್‌ ಒತ್ತುವ ವ್ಯವಸ್ಥೆ ಕೂಡ ಸ್ವಯಂಚಾಲಿತವೇ ಆಗಿರಬೇಕಾಗುತ್ತದೆ. ಉಪಗ್ರಹ ನಿಯಂತ್ರಣ ಕೇಂದ್ರದಲ್ಲಿನ ವ್ಯವಸ್ಥೆಯೇ ಅದಕ್ಕೆ ಚಾಲನೆ ನೀಡಬೇಕಾಗುತ್ತದೆ. ಯಾನಿಗಳು ನೇರವಾಗಿ ಸಮುದ್ರಕ್ಕೇ ಜಿಗಿಯಬೇಕಿರುವುದರಿಂದ ಅವರ ಆಸನವಷ್ಟೇ ಅಲ್ಲ, ಅವರು ಕೂತಿರುವ ‘ಗೂಡು’ (ಮಾಡ್ಯೂಲ್‌) ಕೂಡ ಜಲನಿರೋಧಕ ಕವಚವನ್ನೇ ಹೊದ್ದಿರಬೇಕಾಗುತ್ತದೆ. ಅದಕ್ಕೇ ಮೊದಲ ಬಾರಿಗೆ ನಡೆಸಿದ ಈ ಪ್ರಯೋಗದಲ್ಲಿ ಯಾನಿಗಳು ಕೂರುವ ಮಾಡ್ಯೂಲನ್ನು ಜಿಎಸ್‌ಎಲ್‌ವಿಎಂ–3 ರಾಕೆಟ್‌ ಮೂಲಕ ಹಾರಿಸಲಾಗಿತ್ತು. ಆ ರಾಕೆಟ್‌ ಶ್ರೀಹರಿಕೋಟ ಉಡ್ಡಯನದ ನೆಲೆಯಿಂದ ಸುರಕ್ಷಿತವಾಗಿ 12 ಕಿಲೊಮೀಟರ್‌ ಎತ್ತರಕ್ಕೇರಿ ತಾನು ಉರಿದು ಬೀಳುವ ಮೊದಲು ತನ್ನೊಳಗಿನ ಗೂಡನ್ನು ಇನ್ನೂ ಐದು ಕಿಲೊಮೀಟರ್‌ ಎತ್ತರಕ್ಕೆ ಚಿಮ್ಮಿಸಿತು. ಯಾನಿಗಳು ಕೂತಿರಬೇಕಿದ್ದ ಮಾಡ್ಯೂಲ್ ಪ್ರತ್ಯೇಕಗೊಂಡು ಸಮುದ್ರಕ್ಕೆ ಧುಮುಕಿತು. ಅದನ್ನು ಸುರಕ್ಷಿತವಾಗಿ ಧುಮುಕಿಸಲೆಂದೇ ಎರಡು ಹಂತಗಳ ಪ್ಯಾರಾಚೂಟ್‌ಗಳನ್ನು ಬಳಸಲಾಗಿದ್ದು ಅವನ್ನೂ ಈ ಮೊದಲು ಹದಿನಾರು ಬಾರಿ ಪರೀಕ್ಷಿಸಲಾಗಿತ್ತು ಎಂದರೆ ಅದೆಷ್ಟೊಂದು ಮುನ್ನೆಚ್ಚರಿಕೆಯ ಉಡ್ಡಯನ ಪ್ರಯೋಗ ಇದಾಗಿತ್ತೆಂದು ನಾವು ಮನಗಾಣಬಹುದು. ನೆಗೆತಕ್ಕೆ ಕೇವಲ ನಾಲ್ಕು ಸೆಕೆಂಡ್‌ ಮೊದಲು ಸುರಕ್ಷಾ ಕಣ್ಗಾವಲಿನ ವ್ಯವಸ್ಥೆಯಲ್ಲಿ ಕೆಂಪು ದೀಪ ಮೊಳಗಿದರೂ ಅಷ್ಟೇ ತ್ವರಿತವಾಗಿ ಅದು ತನ್ನಲ್ಲಿನ ದೋಷವನ್ನು ಕ್ಷಣಾರ್ಧದಲ್ಲಿ ತಾನೇ ಸರಿಪಡಿಸಿ ಕೊಂಡಿದ್ದೂ ಇಸ್ರೊ ವಿಜ್ಞಾನಿಗಳ ಸಂತಸಕ್ಕೆ ಕಾರಣವಾಗಿದೆ. ಬಂಗಾಳ ಕೊಲ್ಲಿಯಲ್ಲಿ ನೀರಿಗೆ ಜಿಗಿದ ತಾಣವೂ ಪೂರ್ವನಿಗದಿತವೇ ಆಗಿದ್ದು, ನೌಕಾ ಸಿಬ್ಬಂದಿ ಆ ಮಾಡ್ಯೂಲನ್ನು ವಶಕ್ಕೆ ಪಡೆದು ಚೆನ್ನೈ ಬಂದರಿಗೆ ತಂದಿದ್ದಾರೆ. ಸುರಕ್ಷಾ ಹೊಣೆಗಾರಿಕೆಯಲ್ಲಿ- ಅದು ಯಂತ್ರದ್ದೇ ಆಗಿರಲಿ, ಮನುಷ್ಯನದೇ ಆಗಿರಲಿ, ಅತ್ಯಂತ ಚಿಕ್ಕ ಲೋಪವೂ ಆಗದಂತೆ ಇಡೀ ಕಾರ್ಯಾಚರಣೆ ಯಶಸ್ವಿಯಾಗಿದೆ.

ಮನುಷ್ಯನಿರ್ಮಿತ ಯಂತ್ರಗಳು ಮನುಷ್ಯನಿಗಿಂತ ದಕ್ಷತೆಯಿಂದ ಕೆಲಸ ಮಾಡಬಹುದಾದರೆ ನಾವು ಅಪಾರ ವೆಚ್ಚದಲ್ಲಿ ಇಷ್ಟೊಂದು ಕಷ್ಟಪಟ್ಟು ಸಶರೀರವಾಗಿ ಬಾಹ್ಯಾಕಾಶಕ್ಕೆ, ಚಂದ್ರಲೋಕಕ್ಕೆ ಅಥವಾ ಅದರಾಚೆಗೆ ಹೋಗಿ ಬರಬೇಕಾದ ಅನಿವಾರ್ಯ ಏನಿದೆ ಎಂಬ ಪ್ರಶ್ನೆ ಏಳುತ್ತದೆ. ಅಮೆರಿಕದ ಅಪೊಲೊ ಮಿಷನ್‌ ಮೂಲಕ 1969ರಿಂದ ನೀಲ್‌ ಆರ್ಮ್‌ಸ್ಟ್ರಾಂಗ್‌ನಿಂದ ಮೊದಲ್ಗೊಂಡು ಮೂರು ವರ್ಷಗಳ ಅವಧಿಯಲ್ಲಿ ಹನ್ನೆರಡು ಗಗನಯಾತ್ರಿಗಳು ಚಂದ್ರಯಾನವನ್ನು ಪೂರೈಸಿ ಬಂದ ನಂತರ ಈ ಪ್ರಶ್ನೆಯೇ ಮುಖ್ಯಭೂಮಿಕೆಗೆ ಬಂದಿತ್ತು. ಸಾಧನೆಯ ಉತ್ತುಂಗಕ್ಕೇರಿದ ನಂತರ, ಅಪಾರ ವೆಚ್ಚದಲ್ಲಿ ಮತ್ತೆ ಮತ್ತೆ ಮನುಷ್ಯನನ್ನು ಅನ್ಯಲೋಕಕ್ಕೆ ಕಳಿಸುವ ಬದಲು ಪೃಥ್ವಿಯ ಸಮೀಪ ಕಕ್ಷೆಯಲ್ಲೇ ಅಟ್ಟಣಿಗೆಯನ್ನು ನಿರ್ಮಿಸಿ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲು ನಾಸಾ ನಿರ್ಧರಿಸಿತ್ತು. ಆದರೆ ತಾನು ಸಮರ್ಥ, ತಾನು ಇತರರಷ್ಟೇ ಅಲ್ಲ, ಇತರರಿಗಿಂತ ಬಲಾಢ್ಯ ಎಂದು ತೋರಿಸಬೇಕೆಂಬ ಸಾಮೂಹಿಕ ತುಡಿತವೊಂದಿದೆಯಲ್ಲ? ಅದು ಯಾವುದೇ ದೇಶಕ್ಕೆ ಸೀಮಿತವಾಗಿರುವುದಿಲ್ಲ. ಚೀನಾ ತಾನು ಬಾಹ್ಯಾಕಾಶ ಅಟ್ಟಣಿಗೆ ನಿರ್ಮಿಸಿ, ಚಂದ್ರನಲ್ಲಿಗೆ 2030ರ ವೇಳೆಗೆ ಕಾಲಿಡುವ ತಯಾರಿಯಲ್ಲಿರುವಾಗ ಈಗ ನಾಸಾ ತಾನು ಅದಕ್ಕಿಂತ ಐದು ವರ್ಷ ಮೊದಲೇ ಅಲ್ಲಿಗೆ ಮತ್ತೆ ಹೋಗಲು ಸಿದ್ಧತೆ ನಡೆಸಿದೆ. ಚಂದ್ರನ ಮೇಲೆ ಯಂತ್ರಗಳನ್ನಿಳಿಸಿದ ನಾಲ್ಕು ದೇಶಗಳ ಸಾಲಿಗೆ ಸೇರಿದ ಭಾರತ ಸಹಜವಾಗಿಯೇ ಈ ಪೈಪೋಟಿಯಲ್ಲಿ ಭಾಗವಹಿಸಲು ತಾನೂ ಸಮರ್ಥ ಎಂಬುದನ್ನು ತೋರಿಸಿದೆ. ಇದು ಕೇವಲ ಛಲದ, ಅಥವಾ ಆತ್ಮನಿರ್ಭರತೆಯ ಪ್ರಶ್ನೆಯಷ್ಟೇ ಅಲ್ಲ, ಆ ಸಾಹಸದಲ್ಲಿ ಅಪಾರ ಉಪಲಾಭಗಳೂ ಇವೆ. ಎಪ್ಪತ್ತರ ದಶಕದಲ್ಲಿಟ್ಟ ಅಂಬೆಗಾಲು ಇಂದು ಗಟ್ಟಿ ಹೆಜ್ಜೆಗಳಾಗಿದ್ದು, ನಾಳಿನ ಹನುಮಲಂಘನವಾಗಲೆಂದು ನಾವೆಲ್ಲ ಹಾರೈಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT