ಕಿನ್ನೌರ್: ಹಿಮಾಚಲ ಪ್ರದೇಶದ ಕಿನ್ನೌರ್‌ನ ರೆಕಾಂಗ್ ಪಿಯೋ-ಶಿಮ್ಲಾ ಹೆದ್ದಾರಿಯಛಾವುರಾ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಭೂಕುಸಿತದ ವೇಳೆ ಹೆದ್ದಾರಿಯಲ್ಲಿದ್ದ ಬಸ್, ಟ್ರಕ್ ಮತ್ತು ಹಲವು ಕಾರುಗಳು ಕಲ್ಲು-ಮಣ್ಣಿನಡಿಯಲ್ಲಿ ಸಿಲುಕಿವೆ. ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂಕುಸಿತದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್, ಟ್ರಕ್ ಮತ್ತು ಕಾರುಗಳು ಅವಶೇಷಗಳ ಅಡಿ ಸಿಲುಕುವ ದೃಶ್ಯ ವಿಡಿಯೊದಲ್ಲಿದೆ. ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಇಂಡೊ-ಟಿಬೆಟಿಯನ್ ಗಡಿ ಭದ್ರತಾ ಪಡೆ ಪೊಲೀಸರು (ಐಟಿಬಿಪಿ) ಭೇಟಿ ನೀಡಿ, ರಕ್ಷಣಾ ಕಾರ್ಯ ನಡೆಸಿದ್ದಾರೆ.
ರಾತ್ರಿ 8ರ ವೇಳೆಗೆ 10 ಜನರ ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರಗೆ ತೆಗೆಯಲಾಗಿತ್ತು. 13 ಜನರನ್ನು ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣ್ಣಿನಡಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಐಟಿಬಿಪಿ ಮಾಹಿತಿ ನೀಡಿದೆ.
ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯನ್ನು ಕರೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ರಾತ್ರಿಯಿಡೀ ನಡೆಯುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ ಜೈ ರಾಮ್ ಅವರ ಜತೆ ಮಾತುಕತೆ ನಡೆಸಿದ್ದಾರೆ. ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.
ಕಿನ್ನೌರ್ ಜಿಲ್ಲೆಯ ಮತ್ತೊಂದೆಡೆ ಬೆಟ್ಟದಿಂದ ಉರುಳಿಬಂದ ಭಾರಿ ಗಾತ್ರದ ಬಂಡೆಗಳಿಗೆ ಸಿಲುಕಿ ಒಂಬತ್ತು ಪ್ರವಾಸಿಗರು ಇತ್ತೀಚೆಗೆ ಮೃತಪಟ್ಟಿದ್ದರು. ಹಲವು ಕಟ್ಟಡಗಳು ಮತ್ತು ಒಂದು ಸೇತುವೆ ಧ್ವಂಸವಾಗಿತ್ತು. ಈ ಮಳೆಗಾಲದಲ್ಲಿ ಕಿನ್ನೌರ್‌ನ ಹಲವೆಡೆ ಭೂಕುಸಿತ ಸಂಭವಿಸುತ್ತಲೇ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.