ಬಿಹಾರದಲ್ಲಿ ಭಾರೀ ಸ್ಪೋಟ: 11 ಜನ ಸಾವು

ಪಟ್ನಾ: ಮನೆಯೊಂದರಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸಲು ಇಟ್ಟಿದ್ದ ಪ್ರಬಲ ಸ್ಪೋಟಕ ಸಿಡಿದು 11 ಜನ ಮೃತಪಟ್ಟಿರುವ ಘಟನೆ ಬಿಹಾರದ ಬಾಗಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ತಾತಾರ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಜ್‌ವಾಲಿ ಚಾಕ್ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಸ್ಪೋಟ ಎಷ್ಟು ಪ್ರಬಲವಾಗಿತ್ತೆಂದರೆ ಘಟನೆ ನಡೆದ ಸ್ಥಳದಿಂದ 15 ಕಿಮೀ ದೂರದಲ್ಲಿರುವ ನಾಲ್ಕು ಮನೆಗಳು ಕುಸಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲ್‌ಪುರ್ ವಲಯದ ಡಿಜಿಪಿ ಹಾಗೂ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಅಕ್ರಮವಾಗಿ ನಾಡ ಬಾಂಬ್ ತಯಾರಿಸಲು ಇಟ್ಟಿದ್ದ ಸಲಕರಣೆಗಳು ಸ್ಫೋಟಿಸಿವೆ. ಇದೊಂದು ಭಾರೀ ಪ್ರಮಾಣದ ಸ್ಪೋಟ’ ಎಂದು ಡಿಜಿಪಿ ಸುಜಿತ್ ಕುಮಾರ್ ಹೇಳಿದ್ದಾರೆ.
‘ಗಾಯಾಳುಗಳನ್ನು ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟ ನಡೆದ ಸ್ಥಳದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು’ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.
ಝಪೋರಿಝ್ಯಾ ಅಣುಸ್ಥಾವರ ಸುರಕ್ಷಿತ: ಚರ್ನೋಬಿಲ್ ಮಾದರಿಯ ದುರಂತದ ಆತಂಕ ದೂರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.