ಸೋಮವಾರ, ಏಪ್ರಿಲ್ 19, 2021
28 °C

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 2 ಸಾವಿರ ವರ್ಷಗಳ ಪುರಾತನ ರಹಸ್ಯ ಗುಹೆಗಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಛೋಪ್ಡಾ ತೆಹಸಿಲ್‌ ಪ್ರದೇಶದ ಚೌಗಾವ್ ಗ್ರಾಮದ ಸಮೀಪ ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ರಹಸ್ಯ ಗುಹೆಗಳನ್ನು ಪತ್ತೆ ಹಚ್ಚಲಾಗಿದೆ.

‘ದಕ್ಷಿಣ ಭಾರತವನ್ನು ಬಹುಕಾಲ ಆಳಿದ ಶಾತವಾಹನ ರಾಜವಂಶಸ್ಥರ ಕಾಲದಲ್ಲಿ ಈ ರಹಸ್ಯ ಗುಹೆಗಳು ನಿರ್ಮಾಣವಾಗಿದ್ದಿರಬಹುದು’ ಎಂದು ಜಲಗಾಂವ್‌ನ ಪುರಾತತ್ತ್ವ ಶಾಸ್ತ್ರಜ್ಞ ಹಾಗೂ ಇತಿಹಾಸ ತಜ್ಞ ಭುಜಂಗ್ ರಾಮ್‌ರಾವ್ ಬೊಬಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಬೊಬಡೆ ಅವರ ನೇತೃತ್ವದಲ್ಲಿ ಅಶೋಕ್ ಪಾಟೀಲ್, ಅಥರ್ವ ಬೊಬಡೆ, ವಿಶ್ರಾಮ್ ಟೆಲಿ ಹಾಗೂ ಡಾ.ಗೋಪಾಲ್ ಪಾಟೀಲ್ ಅವರನ್ನೊಳಗೊಂಡ ತಂಡವು ಈ ಗುಹೆಗಳನ್ನು ಪತ್ತೆ ಹಚ್ಚಿದೆ.

‘ಹೊರಗಿನಿಂದ ನೋಡಿದರೆ ಇಲ್ಲಿ ಗುಹೆಗಳು ಇವೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಈ ಗುಹೆಗಳ ಬಗ್ಗೆ ಚೌಗಾವ್ ಗ್ರಾಮಸ್ಥರಿಗೆ ಕೇಳಿದಾಗ ಈ ಗುಹೆಗಳನ್ನು ನೋಡಿಲ್ಲ ಎಂಬುದಾಗಿ ಅವರೂ ತಿಳಿಸಿದ್ದಾರೆ’ ಎಂದು ಹೈದರಾಬಾದ್ ಮೂಲದ ಡೆಕ್ಕನ್ ಪುರಾತತ್ವ ಮತ್ತು ಸಾಂಸ್ಕೃತಿಕ ಸಂಶೋಧನಾ ಸಂಸ್ಥೆಯ ಆರ್ಕೈವ್ಸ್ ಮತ್ತು ಮ್ಯೂಸಿಯಂ ವಿಭಾಗದ (ಡಿಎಸಿಆರ್‌ಐ) ನಿರ್ದೇಶಕರೂ ಆಗಿರುವ ಭುಜಂಗ್ ರಾಮ್‌ರಾವ್ ಬೊಬಡೆ ಮಾಹಿತಿ ನೀಡಿದ್ದಾರೆ.

‘ಭಿರಮ್ ಘಾಟ್ ರಸ್ತೆಯ ಪ್ರಾಚೀನ ಮಾರ್ಗದಲ್ಲಿ ಈ ಗುಹೆಗಳನ್ನು ಪತ್ತೆ ಹಚ್ಚಲಾಗಿದೆ. ಗುಹೆಗೆ ತಲುಪುವ ಮಾರ್ಗವು ಸರಿಯಾಗಿಲ್ಲ. ಚೌಗಾವ್‌ನಿಂದ 3 ಕಿ.ಮೀ. ದೂರದವರೆಗಿರುವ ಹಳೆಯ ಶಿವ ದೇವಾಲಯದ ತನಕ ವಾಹನದಲ್ಲಿ ತೆರಳಬಹುದು. ಅಲ್ಲಿಂದ ಗುಹೆ ಇರುವ ಬೆಟ್ಟಕ್ಕೆ ಸುಮಾರು  2 ಕಿ.ಮೀ. ನಡಿಗೆಯಲ್ಲಿ ಸಾಗಬೇಕು. ನಂತರ ಬೆಟ್ಟದ ಮೇಲೆ 3 ಕಿ.ಮೀ. ಏರುಹಾದಿಯಲ್ಲಿ ಸಾಗಿದಾಗ ಶಾತವಾಹನ ರಾಜರು ನಿರ್ಮಿಸಿರುವ ಕೋಟೆಯ ಬಾಗಿಲು ತಲುಪಬಹುದು. ಅಲ್ಲಿಯೇ ಈ ಗುಹೆಗಳನ್ನು ಪತ್ತೆ ಹಚ್ಚಲಾಗಿದೆ. ಈ ಗುಹೆಗಳಿಗೆ ಪ್ರವೇಶ ಮತ್ತು ನಿರ್ಗಮನ ಎರಡೂ ದ್ವಾರಗಳಿವೆ’ ಎಂದು ಬೊಬಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದುವರೆಗೆ ಎಲ್ಲೂ ಈ ಗುಹೆಗಳು ಇರುವ ಬಗ್ಗೆ ದಾಖಲೆಗಳು ದೊರೆತಿಲ್ಲ. ಗುಹೆಗಳ ಒಳಗೆ ಪ್ರವೇಶ ಮಾರ್ಗದಲ್ಲಿಯೇ ನೀರಿನ ಟ್ಯಾಂಕುಗಳು, ಕಲ್ಲಿನ ಕಂಬಗಳು ಗೋಚರಿಸುತ್ತವೆ. ಹೊರಗಿನ ಜಗತ್ತಿಗೆ ಗೋಚರಿಸದ ಈ ಗುಹೆಗಳು ಹಲವು ರಹಸ್ಯ ಮಾಹಿತಿಯ ಆಗರವಾಗಿರಬಹುದು. ವಿಶೇಷವೆಂದರೆ ಈ ಗುಹೆಗಳಲ್ಲಿ ಯಾವ ದೇವರ ಅಥವಾ ದೇವತೆಯ ಚಿತ್ರಗಳಿಲ್ಲ, ಕೆತ್ತನೆಯ ಚಿನ್ಹೆಗಳೂ ಇಲ್ಲ. ವಿಗ್ರಹಗಳೂ ಇಲ್ಲದಿರುವುದು ಆಶ್ಚರ್ಯಕರ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ. ಈ ಕುರಿತು ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಪುರಾತತ್ವ ವಿಭಾಗ ಮತ್ತು ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ. ತೇಜಸ್ ಗಾರ್ಗ್ ಅವರೊಂದಿಗೆ ಮಾಹಿತಿ ಹಂಚಿಕೊಂಡಿರುವೆ’ ಎಂದೂ ಬೊಬಡೆ ತಿಳಿಸಿದ್ದಾರೆ.

‘ಜಲ್‌ಗಾಂವ್ ವ್ಯಾಪಾರ ಮಾರ್ಗದಲ್ಲಿರುವುದರಿಂದ ಬಹುಶಃ ವ್ಯಾಪಾರಿಗಳು ತಮ್ಮ ಸಾಮಗ್ರಿಗಳೊಂದಿಗೆ ಈ ಗುಹೆಗಳಲ್ಲಿಯೇ ತಂಗುತ್ತಿದ್ದಿರಬಹುದು. ಗುಹೆಯ ಪ್ರವೇಶದ್ವಾರವು ನೀರಿನಿಂದ ತುಂಬಿದ್ದು, ಈ ಮಾರ್ಗದಲ್ಲಿ ನಡೆಯುವುದು ಕಷ್ಟಕರವಾಗಿದೆ. ಹಾಗಾಗಿ, ಈ ರಹಸ್ಯ ಗುಹೆಗಳು ರಾಜರು, ಸೇನಾಪತಿಗಳು ಅಡಗಿಕೊಳ್ಳುತ್ತಿದ್ದ ಸ್ಥಳವೂ ಆಗಿದ್ದಿರಬಹುದು’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು