ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತು : ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚು, ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ

Last Updated 1 ನವೆಂಬರ್ 2020, 8:29 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2019–20ನೇ ವರ್ಷದಲ್ಲಿ ಒಟ್ಟು 3,531 ಮಕ್ಕಳನ್ನು ದತ್ತು ಪಡೆಯಲಾಗಿದ್ದು, ಈ ಪೈಕಿ ಬಾಲಕಿಯರ ಸಂಖ್ಯೆ 2,061 ಆಗಿದೆ. ದತ್ತು ಪ್ರಕರಣಗಳು ದಾಖಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ.

ಕೇಂದ್ರದ ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್‌ಎ) ಅಂಕಿ ಅಂಶಗಳ ಪ್ರಕಾರ, 2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರವರೆಗೆ 1,470 ಗಂಡು, 2,061 ಹೆಣ್ಣು ಮಕ್ಕಳನ್ನು ದತ್ತು ಪಡೆಯಲಾಗಿದೆ.

ಗಂಡು ಮಕ್ಕಳನ್ನು ಹೊಂದುವ ಕುರಿತು ದೇಶದಲ್ಲಿ ಇರುವ ಒಲವು ಉಲ್ಲೇಖಿಸಿ ಅಧಿಕಾರಿಯೊಬ್ಬರು, ಜನರ ಮನಸ್ಥಿತಿ ಈ ಕುರಿತಂತೆ ನಿಧಾನಗತಿಯಲ್ಲಿ ಬದಲಾಗುತ್ತಿದೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ದತ್ತು ಪಡೆಯಲಾಗುತ್ತಿದೆ ಎಂದರು.

‘ದತ್ತು ನೀಡುವಾಗ ನಾವು ದತ್ತುಪಡೆಯುವವರಿಗೆ ಆಯ್ಕೆ ನೀಡುತ್ತೇವೆ. ಗಂಡು ಅಥವಾ ಹೆಣ್ಣು ಅಥವಾ ಪ್ರಾಶಸ್ತ್ಯ ಇಲ್ಲ ಎಂಬ ಆಯ್ಕೆಗಳಿರುತ್ತವೆ. ಹೆಚ್ಚಿನವರು ಹೆಣ್ಣು ಮಕ್ಕಳನ್ನೇ ದತ್ತು ಪಡೆಯುತ್ತಿದ್ದಾರೆ’ ಎಂದು ಹೇಳಿದರು.

ಇನ್ನೊಂದು ಕಡೆ ಸೇವಾ ಕಾರ್ಯಕರ್ತರು, ಹೆಣ್ಣು ಮಕ್ಕಳನ್ನು ದತ್ತು ಪಡೆಯುವ ಹೆಚ್ಚಿನ ಪ್ರಕರಣಗಳಿವೆ ಎಂದರೆ ಅದರರ್ಥ, ದತ್ತುನೀಡಲು ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿನದಾಗಿದೆ ಎಂಬುದೇ ಆಗಿದೆ ಎನ್ನುತ್ತಾರೆ.

ದತ್ತು ಕೇಂದ್ರಗಳಿಗೆ ಸಹಜವಾಗಿ ಭೇಟಿ ನೀಡಿದರೂ ಅಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿರುವುದು ಕಾಣಿಸುತ್ತದೆ. ಹೀಗಾಗಿ, ಜನರ ಮನಸ್ಥಿತಿ ಬದಲಾಗುತ್ತಿದೆ ಎಂಬುದು ಅತಿಶಯೋಕ್ತಿ ಆಗುತ್ತದೆ ಎನ್ನುತ್ತಾರೆ ಸೇವಾ ಸಂಸ್ಥೆ ಸೆಂಟರ್ ಫಾರ್ ಅಡ್ವೋಕಸಿ ಅಂಡ್ ರಿಸರ್ಚ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಖಿಲಾ ಶಿವದಾಸ್ ಅವರು.

ಅನೇಕ ಕುಟುಂಬಗಳ ಆದ್ಯತೆ ಈಗಲೂ ಗಂಡು ಮಕ್ಕಳೇ ಆಗಿದೆ. ಪ್ರಸವಪೂರ್ವ ಲಿಂಗಪತ್ತೆಯೂ ನಡೆಯುತ್ತಿದ್ದು, ಹೆಣ್ಣು ಭ್ರೂಣಗಳ ಹತ್ಯೆ ನಿಂತಿಲ್ಲ. ಹೆಣ್ಣು ಮಕ್ಕಳನ್ನು ಅನಾಥವಾಗಿ ಬಿಟ್ಟುಹೋಗುವ ನಿದರ್ಶನಗಳೂ ಇವೆ ಎಂದು ಅವರು ಹೇಳುತ್ತಾರೆ.

ಅಂಕಿ ಅಂಶದ ಪ್ರಕಾರ, ದತ್ತು ಪಡೆಯಲಾದ 3,120 ಮಕ್ಕಳ ಸರಾಸರಿ ವಯಸ್ಸು 0–5 ಆಗಿದೆ. ಉಳಿದಂಂತೆ 5–18 ವಯಸ್ಸಿನ ಮಕ್ಕಳ ಸಂಖ್ಯೆ 411 ಆಗಿದೆ.

ಹೆಚ್ಚಿನ ಪೋಷಕರು ಎರಡು ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳನ್ನೇದತ್ತು ಪಡೆಯಲು ಬಯಸುತ್ತಾರೆ. ಹೀಗಾಗಿ,ದೊಡ್ಡ ವಯಸ್ಸಿನ ಮಕ್ಕಳ ದತ್ತು ನೀಡುವ ಪ್ರಕ್ರಿಯೇ ಸಂಕೀರ್ಣವಾಗಿಯೇ ಇದೆ ಎಂದು ಅಧಿಕಾರಿಯೊಬ್ಬರು ವಿವರಿಸುತ್ತಾರೆ.

ರಾಜ್ಯಗಳ ಪಟ್ಟಿಯನ್ನು ಗಮನಿಸುವುದಾದರೆ, ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 615 ಮಕ್ಕಳ ದತ್ತು ಪ್ರಕರಣ ದಾಖಲಾಗಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ (272), ತಮಿಳುನಾಡು (271) ಮತ್ತು ಉತ್ತರಪ್ರದೇಶ (261), ಒಡಿಶಾ (251) ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT