ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಯುವಿಯಲ್ಲಿ ₹49 ಲಕ್ಷ ನಗದು ಪತ್ತೆ: ಜಾರ್ಖಂಡ್‌ನ ಮೂವರು ಶಾಸಕರ ಬಂಧನ

Last Updated 31 ಜುಲೈ 2022, 20:00 IST
ಅಕ್ಷರ ಗಾತ್ರ

ಹೌರಾ: ಜಾರ್ಖಂಡ್‌ನ ಮೂವರು ಕಾಂಗ್ರೆಸ್‌ ಶಾಸಕರು ಸಂಚರಿಸುತ್ತಿದ್ದ ಎಸ್‌ಯುವಿಯಲ್ಲಿ ₹49 ಲಕ್ಷ ನಗದು ಪತ್ತೆಯಾಗಿದ್ದು, ಈ ಶಾಸಕರನ್ನು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅವರು ಸಂಚರಿಸುತ್ತಿದ್ದ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 16ರ ರಾಣಿಹತಿ ಎಂಬಲ್ಲಿ ಶನಿವಾರ ರಾತ್ರಿ ತಡೆದು ಶೋಧ ನಡೆಸಲಾಗಿತ್ತು.

ಶಾಸಕರಾದ ಇರ್ಫಾನ್‌ ಅನ್ಸಾರಿ, ರಾಜೇಶ್‌ ಕಚ್ಚಪ್‌ ಮತ್ತು ನಮನ್‌ ಬಿಕ್ಸಲ್‌ ಕೊಂಗರಿ, ಚಾಲಕ ಮತ್ತು ಇನ್ನೊಬ್ಬರನ್ನು ಬಂಧಿಸಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಏಕೆ ಒಯ್ಯಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡಲು ಅವರು ವಿಫಲರಾದ ಕಾರಣ, ಅವರನ್ನು ಬಂಧಿಸಲಾಯಿತು.

‘ನಗದು ಒಯ್ದಿರುವುದಕ್ಕೆ ಅವರು ನೀಡಿದ ಕಾರಣ ನಮಗೆ ಸರಿ ಎಂದು ಕಂಡಿಲ್ಲ. ಆದಿವಾಸಿ ಮಹಿಳೆಯರಿಗೆ ಹಂಚಲು ಸೀರೆ ಖರೀದಿಗೆ ಈ ಹಣ ಒಯ್ಯುತ್ತಿರುವುದಾಗಿ ಅವರು ಹೇಳಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.

ಶಾಸಕರನ್ನು ಶನಿವಾರ ರಾತ್ರಿಯಿಡೀ ತನಿಖೆಗೆ ಒಳಪಡಿಸಲಾಗಿತ್ತು. ಬಳಿಕ ಬಂಧಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಅಮಾನತು: ಈ ಮೂವರು ಶಾಸಕರನ್ನು ಕಾಂಗ್ರೆಸ್ ಪಕ್ಷವು ಅಮಾನತು ಮಾಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ಮೂವರು ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಸರ್ಕಾರ ಉರುಳಿಸಲು ಬಿಜೆಪಿ ಯತ್ನ;ಆಲಂಗೀರ್‌ ಆಲಂ

ರಾಂಚಿ (ಪಿಟಿಐ): ಜಾರ್ಖಂಡ್‌ನಲ್ಲಿರುವ ಜೆಎಂಎಂ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಶಾಸಕರಿಗೆ ತಲಾ ₹10 ಕೋಟಿ ಮತ್ತು ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಆಮಿಷ ಒಡ್ಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಜಾರ್ಖಂಡ್ ಸಚಿವ ಆಲಂಗೀರ್‌ ಆಲಂ ಮಾಧ್ಯಮಗೋಷ್ಠಿಯಲ್ಲಿ ಆಪಾದಿಸಿದ್ದಾರೆ.

₹10 ಕೋಟಿ ಮತ್ತು ಬಿಜೆಪಿ ನೇತೃತ್ವದಲ್ಲಿ ರಚನೆಯಾಗುವ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಆಮಿಷ ಒಡ್ಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಕುಮಾರ್ ಜೈಮಂಗಲ್‌ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ, ಹೌರಾದಲ್ಲಿ ಬಂಧಿತರಾಗಿರುವ ಮೂವರು ಶಾಸಕರ ಮೇಲೆ ದೂರನ್ನೂ ನೀಡಲಾಗಿದೆ.

‘ಕೋಲ್ಕತ್ತಕ್ಕೆ ಹೋಗಿ ಹಣ ಪಡೆದುಕೊಳ್ಳುವಂತೆ ರಾಜೇಶ್‌ ಕಚ್ಚಪ್‌ ಮತ್ತು ನಮನ್‌ ಬಿಕ್ಸಲ್‌ ಅವರು ನನಗೆ ಹೇಳಿದ್ದರು. ಕೋಲ್ಕತ್ತದಿಂದ ನನ್ನನ್ನು ಗುವಾಹಟಿಗೆ ಕರೆದೊಯ್ಯುವ ಯೋಜನೆಯನ್ನು ಇರ್ಫಾನ್‌ ಅನ್ಸಾರಿ ಮತ್ತು ರಾಜೇಶ್‌ ಕಚ್ಚಪ್‌ ಹೊಂದಿದ್ದರು. ಅಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಭೇಟಿ ಮಾಡಿಸುವುದಾಗಿ ಹೇಳಿದ್ದರು’ ಎಂದು ಜೈಮಂಗಲ್‌ ಆರೋಪಿಸಿದ್ದಾರೆ.

ಜಾರ್ಖಂಡ್ ಭ್ರಷ್ಟಾಚಾರದ ಕೇಂದ್ರ: ಬಿಜೆಪಿ

ಜಾರ್ಖಂಡ್ ರಾಜ್ಯವು ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.

ಕಾಂಗ್ರೆಸ್‌ ಪಕ್ಷದ ಸಣ್ಣ ಮತ್ತು ದೊಡ್ಡ ಮುಖಂಡರೆಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ವಕ್ತಾರ ಸಯ್ಯದ್‌ ಝಫರ್‌ ಇಸ್ಲಾಂ ಆರೋಪಿಸಿದ್ದಾರೆ. ಶಾಸಕರ ಭ್ರಷ್ಟಾಚಾರವನ್ನು ತಮ್ಮ ಪಕ್ಷದ ಮೇಲೆ ಹೊರಿಸಲು ಕಾಂಗ್ರೆಸ್ ಯತ್ನಿಸುತ್ತಿದೆ.ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಜತೆ ನಂಟು ಹೊಂದಿದ್ದ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಬಂಧಿಸಿದೆ. ಕಾಂಗ್ರೆಸ್‌ನ ಮೂವರು ಶಾಸಕರು ಭಾರಿ ನಗದಿನೊಂದಿಗೆ ಸಿಕ್ಕಿಬಿದ್ದಿರುವುದನ್ನು ಇಡೀ ದೇಶವೇ ನೋಡಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT