ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರ್ಬಿ ತೂಗು ಸೇತುವೆ ದುರಂತ: 35 ಮಂದಿ ಸಾವು, ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ

Last Updated 30 ಅಕ್ಟೋಬರ್ 2022, 16:34 IST
ಅಕ್ಷರ ಗಾತ್ರ

ಮೊರ್ಬಿ, ಗುಜರಾತ್‌ (ಪಿಟಿಐ/ರಾಯಿಟರ್ಸ್‌/ಎಎಫ್‌ಪಿ): ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗು ಸೇತುವೆ ಭಾನುವಾರ ಸಂಜೆ ಮುರಿದು ಬಿದ್ದು 32 ಮಂದಿ ಮೃತಪಟ್ಟಿದ್ದಾರೆ. ಸುಮಾರು 100 ಮಂದಿ ನದಿ ನೀರಿನಲ್ಲಿ ಸಿಲುಕಿದ್ದಾರೆ.

230 ಮೀಟರ್‌ ಉದ್ದದ ಈ ಸೇತುವೆಯನ್ನು 19ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿತ್ತು. ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದರಿಂದಾಗಿ ಆರು ತಿಂಗಳು ನಾಗರಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ (ಅಕ್ಟೋಬರ್‌ 26) ಇದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿತ್ತು.

‘ಭಾನುವಾರ ರಜೆ ಇದ್ದ ಕಾರಣ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಸೇತುವೆ ಮೇಲೆ ಸೇರಿದ್ದರು. ಭಾರ ತಾಳಲಾರದೆ ಸಂಜೆ 6.30ರ ಸುಮಾರಿಗೆ ಅದು ಮುರಿದು ಬಿದ್ದಿದೆ. ಸೇತುವೆ ಮೇಲಿದ್ದವರ ಪೈಕಿ ಬಹುಪಾಲು ಮಂದಿ ನದಿಗೆ ಉರುಳಿ ಬಿದ್ದರೆ, ಕೆಲವರು ಹಗ್ಗ ಹಿಡಿದು ನೇತಾಡುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸೇತುವೆ ಮೇಲೆ ಮಹಿಳೆಯರು ಮತ್ತು ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಕ್ಕಾಗಿ ರಾಜ್‌ಕೋಟ್‌ ಹಾಗೂ ಕಚ್‌ನಿಂದ ಎಸ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಲಾಗಿದೆ ಎಂದೂ ಹೇಳಿದ್ದಾರೆ.

‘ಕಳೆದ ವಾರವಷ್ಟೇ ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಈ ದುರಂತದಿಂದ ನಮಗೂ ಆಘಾತವಾಗಿದೆ. ಈ ದುರ್ಘಟನೆಯ ಹೊಣೆಯನ್ನು ಸರ್ಕಾರವೇ ಹೊರಲಿದೆ’ ಎಂದು ಗುಜರಾತ್‌ನ ಕಾರ್ಮಿಕ ಸಚಿವ ಬ್ರಿಜೇಶ್‌ ಮೆರ್ಜಾ ಹೇಳಿದ್ದಾರೆ.

ರಕ್ಷಣಾ ತಂಡಗಳ ನಿಯೋಜನೆ: ಸಿಎಂಗೆ ಮೋದಿ ಸೂಚನೆ

‘ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸೇತುವೆ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ಹೆಚ್ಚಿನ ತಂಡಗಳನ್ನು ನಿಯೋಜಿಸುವಂತೆ ಸೂಚಿಸಿದ್ದಾರೆ’ ಎಂದು ಪ್ರಧಾನಿಯವರ ಕಾರ್ಯಾಲಯ (ಪಿಎಂಒ) ತಿಳಿಸಿದೆ.

‘ಪ್ರಧಾನಿಯವರು ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಹಾಗೂ ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಗೆ ತಲಾ ₹50 ಸಾವಿರ ನೆರವು ಘೋಷಿಸಿದ್ದಾರೆ’ ಎಂದು ಪಿಎಂಒ ಟ್ವೀಟ್‌ ಮಾಡಿದೆ.

ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ನೆರವು ಪ್ರಕಟಿಸಿದೆ.

‘ಗಾಂಧಿನಗರ ಹಾಗೂ ವಡೋದರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ಮೂರು ತಂಡಗಳನ್ನು ರಕ್ಷಣಾ ಕಾರ್ಯಕ್ಕಾಗಿ ಮೊರ್ಬಿಗೆ ಕಳುಹಿಸಲಾಗಿದೆ. ಮತ್ತೊಂದು ತಂಡವು ರಾಜ್‌ಕೋಟ್‌ ಮಾರ್ಗವಾಗಿ ಘಟನಾ ಸ್ಥಳಕ್ಕೆ ತೆರಳಲಿದೆ’ ಎಂದು ಎನ್‌ಡಿಆರ್‌ಎಫ್‌ನ ಮಹಾ ನಿರ್ದೇಶಕ (ಡಿಜಿ) ಅತುಲ್‌ ಕರ್ವಾಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT