ಶುಕ್ರವಾರ, ಸೆಪ್ಟೆಂಬರ್ 17, 2021
21 °C

ತೆಲಂಗಾಣ, ಆಂಧ್ರದಲ್ಲಿ ಭಾರಿ ಮಳೆ: 47 ಸಾವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌/ ಅಮರಾವತಿ: ತೆಲಂಗಾಣ ರಾಜಧಾನಿ ಹೈದರಾಬಾದ್‌ ಸೇರಿ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ವಿವಿಧ ಭಾಗಗಳಲ್ಲಿ ಬುಧವಾರ ಸುರಿದ ಭಾರಿ ಮಳೆಗೆ 47 ಜನರು ಮೃತಪಟ್ಟಿದ್ದಾರೆ.

ತೆಲಂಗಾಣದಲ್ಲಿ ರಾಜ್ಯದಲ್ಲಿ 32 ಜನರು ಮಳೆ ಸಂಬಂಧಿ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ಹೈದಾರಬಾದ್‌ನಲ್ಲೇ 15 ಜನರು ಸಾವನ್ನಪ್ಪಿದ್ದಾರೆ. ಇನ್ನು ಆಂಧ್ರದ ವಿವಿಧ ಭಾಗಗಳಲ್ಲಿ 15 ಜನರು ಮೃತಪಟ್ಟಿದ್ದಾರೆ ಎಂದು ಉಭಯ ರಾಜ್ಯಗಳ ಸರ್ಕಾರಗಳು ತಿಳಿಸಿವೆ.

ಹೈದರಾಬಾದ್‌ನ ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು ನೂರಾರು ಮನೆಗಳು ಕುಸಿದು ಬಿದ್ದಿವೆ. ನೀರಿನಲ್ಲಿ ವ್ಯಕ್ತಿ ಸೇರಿದಂತೆ, ಕಾರು, ಆಟೊಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಈಗಾಗಲೇ ರಾಜಧಾನಿಯಲ್ಲಿ ಗುರುವಾರದ ವರೆಗೆ ರಜೆ ಘೋಷಣೆ ಮಾಡಲಾಗಿದ್ದು ಮುಂದಿನ ಎರಡು ದಿನ ಇನ್ನಷ್ಟು ಮಳೆ ಸುರಿಯುವ ಮುನ್ಸೂಚನೆ ಇದೆ. ಹಾಗಾಗಿ, ಜನರು ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ. 

ಹೈದರಾಬಾದ್‌ ಹೊರ ವಲಯ, ಬಂಜಾರ ಹಿಲ್ಸ್‌, ಬೇಗಂಪೇಟೆ, ಅಮೀರ್‌ಪೇಟೆ, ಪಂಜಾಗುಟ್ಟ, ಬಂಗಾರಗುಡ್ಡ, ಮಲ್ಲಪುರ ಸೇರಿದಂತೆ ಹಲವು ಭಾಗಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಶಂಷಾಬಾದ್‌ ಹಾಗೂ ರಂಗಾರೆಡ್ಡಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು ರಾಷ್ಟ್ರೀಯ ಹೆದ್ದಾರಿ 44 ಬಂದ್‌ ಆಗಿದೆ. 

ಬುಧವಾರ ಆಂಧ್ರಪ್ರದೇಶದ ನೂರಕ್ಕೂ ಹೆಚ್ಚು ಭಾಗಗಳಲ್ಲಿ 11ರಿಂದ 24 ಸೆಂ.ಮೀ ವರೆಗೂ ಮಳೆಯಾಗಿದೆ ಎಂದು  ಹವಾಮಾನ ಇಲಾಖೆ ತಿಳಿಸಿದೆ. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಶ್ರೀಕಾಕುಳಂ,  ವಿಶಾಖಪಟ್ಟಣಂ ಮತ್ತು ಕೃಷ್ಣ ಈ ಜಿಲ್ಲೆಗಳು ಮಹಾ ಮಳೆಗೆ ನಲುಗಿವೆ. 

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು