ಮುಜಫ್ಫರ್‌ನಗರ: ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಭಾನುವಾರ(ಸೆ.5) ಇಲ್ಲಿ ಆಯೋಜಿಸಲಾಗಿರುವ ‘ರೈತರ ಮಹಾಪಂಚಾಯತ್‘ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.
ಭದ್ರತೆಗಾಗಿ ಆರು ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆಗಳ (ಪಿಎಸಿ) ತಂಡಗಳು ಮತ್ತು ಎರಡು ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಹಾರನ್‌ಪುರ ವಲಯದ ಡಿಐಜಿ ಪ್ರೀತಿಂದರ್ ಸಿಂಗ್, ‘ರೈತ ಮಹಾಪಂಚಾಯತ್ ಹಿನ್ನೆಲೆಯಲ್ಲಿ ಐದು ಎಸ್‌ಎಸ್‌ಪಿ, ಏಳು ಎಎಸ್‌ಪಿ ಮತ್ತು 40 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗುವುದು. ಇಡೀ ಕಾರ್ಯಕ್ರಮವನ್ನು ವಿಡಿಯೊ ಚಿತ್ರೀಕರಣ ಮಾಡಿಸಲಾಗುವುದು‘ ಎಂದು ಹೇಳಿದ್ದಾರೆ.
ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ ಯದುವೀರ್ ಸಿಂಗ್, ‘ಈ ರೈತ ಮಹಾಪಂಚಾಯತ್‌ನಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ಚರ್ಚಿಸಲಾಗುತ್ತದೆ. ಜೊತೆಗೆ, ಕಬ್ಬಿಗೆ ಬೆಂಬಲ ಬೆಲೆ ಮತ್ತು ವಿದ್ಯುತ್ ಪೂರೈಕೆಯಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ‘ ಎಂದು ಹೇಳಿದರು.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ರೈತರು ಈ ಮಹಾಪಂಚಾಯತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.