ಗುರುವಾರ , ಜೂನ್ 24, 2021
25 °C
ಉತ್ತರ ಪ್ರದೇಶ

ಕೋವಿಡ್‌ ಸಾವಿನ ಸಂಖ್ಯೆ ಹೆಚ್ಚಳ; ಶವಗಳ ಬಟ್ಟೆ ಕದಿಯುತ್ತಿದ್ದ 7 ಜನರ ಬಂಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬಾಗ್‌ಪತ್‌: ಶವಾಗಾರಗಳು ಮತ್ತು ಸ್ಮಶಾನದ ಬಳಿ ಶವಗಳ ಬಟ್ಟೆಗಳನ್ನು ಕದಿಯುತ್ತಿದ್ದ ಏಳು ಜನರನ್ನು ಪಶ್ಚಿಮ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ದೇಶದಾದ್ಯಂತ ಕೋವಿಡ್-‌19ನಿಂದಾಗಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಶವಗಳ ಬಟ್ಟೆ ಕದಿಯುವ ಪ್ರಕರಣ ಬೆಳಕಿಗೆ ಬಂದಿರುವುದು ಆತಂಕ ಮೂಡಿಸಿದೆ.

ಈ ಸಂಬಂಧ ಮಾಧ್ಯಮದವರಿಗೆ ಮಾಹಿತಿ ನೀಡಿರುವ ವೃತ್ತಾಧಿಕಾರಿ ಅಲೋಕ್‌ ಸಿಂಗ್‌, ʼಏಳು ಜನರನ್ನು ಬಂಧಿಸಲಾಗಿದೆ. ಅವರು ಸತ್ತವರ ಮೈಮೇಲಿನ ಉಡುಪು, ಬೆಡ್‌ಶೀಟ್‌ಗಳು, ಶವಕ್ಕೆ ಹೊದಿಸಿದ್ದ ಬಟ್ಟೆಗಳನ್ನು ಕದಿಯಲೆತ್ನಿಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸುಮಾರು 520 ಬೆಡ್‌ಶೀಟ್‌ಗಳು, 127 ಕುರ್ತಾಗಳು, 52 ಬಿಳಿ ಸೀರೆಗಳು ಮತ್ತು ಇತರ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆʼ ಎಂದಿದ್ದಾರೆ.

ಬಟ್ಟೆಗಳನ್ನು ಚೆನ್ನಾಗಿ ತೊಳೆದು, ಇಸ್ತ್ರಿ ಮಾಡಿದ ನಂತರ ಗ್ವಾಲಿಯರ್‌ ಕಂಪನಿಯ ಲೇಬಲ್‌ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. ಕದೀಮರು ಶವಗಳ ಬಟ್ಟೆ ಲೂಟಿ ಮಾಡುವುದಕ್ಕಾಗಿ ಈ ಪ್ರದೇಶದ ಕೆಲವು ಬಟ್ಟೆ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಪ್ರತಿದಿನ ₹ 300 ರೂ ಪಡೆಯುತ್ತಿದ್ದರು ಎಂದೂ ತಿಳಿಸಿದ್ದಾರೆ.

ʼಬಂಧಿತ ಏಳು ಜನರಲ್ಲಿ ಮೂವರು ಒಂದೇ ಕುಟುಂಬದವರು. ಇವರೆಲ್ಲ ಕಳೆದ 10 ವರ್ಷಗಳಿಂದಲೂ ಕಳ್ಳತನ ಮಾಡುತ್ತಿದ್ದಾರೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಬಂಧನಕ್ಕೊಳಗಾಗಿರುವ ಏಳೂ ಮಂದಿ ವಿರುದ್ಧ ಕಳ್ಳತನ ಪ್ರಕರಣ ಮಾತ್ರವಲ್ಲದೆ, ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆʼ ಎಂದು ಸಿಂಗ್‌ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅನ್ನು ಮೇ 17ರ ವರೆಗೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಇದುವರೆಗೆ ಒಟ್ಟು 12,54,045 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 15,464 ಮಂದಿ ಮೃತಪಟ್ಟಿದ್ದಾರೆ. ಇನ್ನೂ 2,33,981 ಸಕ್ರಿಯ ಪ್ರಕರಣಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು